ಸಂಗೀತ ಸಮಯ

ಕಲೆಗೆ ಮನುಷ್ಯನ ನೋವನ್ನು ಕಡಿಮೆ ಮಾಡುವ ಶಕ್ತಿ ಇದೆ  | ಸೃಜನ ಸಾಂಸ್ಕೃತಿಕ ಸಮೂಹದ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ಅಭಿಮತ

ಸೃಜನ ಸಾಂಸ್ಕೃತಿಕ ಸಮೂಹದ ವತಿಯಿಂದ ಜಯನಗರ ನ್ಯಾಷನಲ್ ಕಾಲೇಜಿನ, ಹೆಚ್ ಎನ್ ಕಲಾಕ್ಷೇತ್ರದಲ್ಲಿ ದಿನಾಂಕ 4 ಫೆಬ್ರವರಿ 2024ರಂದು ಸಂಜೆ 4:30 ಗಂಟೆಗೆ ಆಯೋಜಿಸಲಾಗಿದ್ದ 22ನೇ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಎಲ್ಲರ ಮನಸೂರೆಗೊಂಡಿತು.

ಈ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿಗಳು ಮತ್ತು ಗೀತ ರಚನೆಕಾರರಾದ ಶ್ರೀ ಜಯಂತ್ ಕಾಯ್ಕಿಣಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

2022-23ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 93%ಗೂ ಅಧಿಕ ಅಂಕ ಗಳಿಸಿದ ಸೃಜನದ 19 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಶ್ರೀ ಜಯಂತ್ ಕಾಯ್ಕಿಣಿರವರು ಮಾತನಾಡಿ, ಕಲೆ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಲೆಯ ಫಲ ತಕ್ಷಣದಲ್ಲಿ ಸಿಗುವಂತದ್ದಲ್ಲ. ಅದು  ಜೀವನದ ದೃಷ್ಟಿ, ಜೀವನದ ಧರ್ಮ. ಅದರ ಫಲ ಜೀವನದ ಉದ್ದಕ್ಕೂ ದೊರಕುವಂತದ್ದು. ಕಲೆಗೆ ಮನುಷ್ಯನ ನೋವನ್ನು ಅರ್ಥ ಮಾಡಿಕೊಂಡು  ಅದನ್ನು ಕಡಿಮೆ ಮಾಡುವ ಶಕ್ತಿ ಇದೆ, ಗಾಯವನ್ನು ಮಾಯಿಸುವ ಶಕ್ತಿ ಇದೆ. ಕಲೆಯೊಡನೆ ಮಕ್ಕಳು ಬೆಳೆಯಲಿ, ಬೆಳಗಲಿ, ಅರಳಲಿ ಎಂದು ಹಾರೈಸಿದರು.

ಯಾರು ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚುತ್ತಾರೋ ಅವರಿಗಿಂತ ದೊಡ್ಡ ವ್ಯಕ್ತಿ ಬೇರಿಲ್ಲ. ಈ ಕಾರ್ಯವನ್ನು ಶ್ರೀನರಹರಿ ದೀಕ್ಷಿತ್ ರವರು ಕಳೆದ 26 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಇಷ್ಟು ದೊಡ್ಡದಾಗಿರುವ  ಬೆಳೆದಿರುವ ಅವರ ಶಾಲೆ, ಒಂದು ಕುಟುಂಬದಂತಿಂದೆ ಎಂದರು. ಸೃಜನದ ವಿದ್ಯಾರ್ಥಿಗಳ ವೃಂದಗಾನವನ್ನು ಮೆಚ್ಚಿ ನುಡಿದ ಅವರು, ಎಲ್ಲರೂ ಒಟ್ಟಿಗೆ ಸಾಗುವ ಸಂದೇಶವನ್ನು ಅದು ನೀಡುತ್ತದೆ ಎಂದು ಮೆಚ್ಚಿ ನುಡಿದರು.

ಸೃಜನ‌ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ನರಹರಿ ದೀಕ್ಷಿತ್ ರವರು ಮುಖ್ಯ ಅತಿಥಿಗಳನ್ನು ಹಾಗೂ ನೆರೆದಿದ್ದ ಪ್ರೇಕ್ಷಕರನ್ನು ಸ್ವಾಗತಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 97.8% ಪಡೆದು ಸಾಧನೆ ಗೈದ ರಾಜೀವ್ ದೀಕ್ಷಿತ್ ಪ್ರತಿಭಾ ಪುರಸ್ಕೃತರ ಪರವಾಗಿ ಮತ್ತು ಶ್ರೀಮತಿ ಪಾರ್ವತಿ ದೀಕ್ಷಿತ್ ಪೋಷಕರ ಪರವಾಗಿ ಮಾತನಾಡಿದರು.

ಸೃಜನದ ವಿದ್ಯಾರ್ಥಿಗಳ ಸಮೂಹ ಗಾಯನ ಮತ್ತು ನೃತ್ಯ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶ್ರೀಮತಿ ಪಾರ್ವತಿ ನರಹರಿ ದೀಕ್ಷಿತ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು.

ಯೂಟ್ಯೂಬ್ ನಲ್ಲಿ ನೇರಪ್ರಸಾರಗೊಂಡ ಕಾರ್ಯಕ್ರಮವನ್ನು ದೇಶ ವಿದೇಶಗಳಲ್ಲಿ ನೆಲೆಸಿರುವ ಸೃಜನ ವಿದ್ಯಾರ್ಥಿಗಳು ಮತ್ತು ಪೋಷಕರಾದಿಯಾಗಿ 2ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ವೀಕ್ಷಿಸಿದರು.

ಸೃಜನ ಸಂಗೀತ ಶಾಲೆಯ ಸಮಸ್ತ ವಿದ್ಯಾರ್ಥಿ ಮತ್ತು ಪೋಷಕ ವೃಂದ ಉಪಸ್ಥಿತರಿದ್ದರು.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.