ಸಂಗೀತ ಸಮಯ

ಸಂಗೀತವೇ ಬದುಕಾಗಿದ್ದವನ ಸಂಗೀತ ಸದಾ ಬದುಕಿಯೇ ಇರುತ್ತದೆ ! ದಿ.ಸುಭಾಷ್ ಹಾರೇಕೊಪ್ಪ ಸ್ಮರಣಾರ್ಥ ಅಕ್ಷರ ನಮನ…

ಮೇಲಿನ ಶೀರ್ಷಿಕೆಯಲ್ಲಿ ಬಳಸಲ್ಪಟ್ಟಿರುವ ಏಕವಚನ ಪ್ರಯೋಗವನ್ನು ಓದುಗರು ಗಂಭೀರವಾಗಿ ಪರಿಗಣಿಸಬಾರದೆಂದು ತಿಳಿಸುತ್ತಾ ಅದು ಈ ಲೇಖಕನ ಹಾಗು ಈ ಲೇಖನಕ್ಕೆ ಸಂಬಂಧಿಸಿದ ವ್ಯಕ್ತಿಯ ಜೊತೆಗಿದ್ದ ಅತ್ಮೀಯತೆಯ ಸಂಕೇತ ಮಾತ್ರವಷ್ಟೇ ಎಂದು ಭಾವಿಸಬೇಕಾಗಿ ಕೋರಿಕೆ. ಆದರೂ ಗಾಂಭೀರ್ಯಪೂರ್ಣ ಲೇಖನದ ಶಿಷ್ಟಾಚಾರಕ್ಕನುಗುಣವಾಗಿ ಅಲ್ಲಲ್ಲಿ ಬಹುವಚನವನ್ನೇ ಸಹಜವಾಗಿ ಬಳಸುವ ಪ್ರಯತ್ನ ಮಾಡಿದ್ದೇನೆ.

ಸುಭಾಷ್ ಎಂದಾಕ್ಷಣ ಹಳೆಯ ದಿನಗಳನ್ನೆಲ್ಲಾ ಒಮ್ಮೆ ಸ್ಮರಿಸಿಕೊಂಡೆ. “ಸುಭಾಷ್ ಹಾರೆಕೊಪ್ಪ ಚೆನ್ನಾಗಿ ಹಾಡುತ್ತಾನೆ…”ಎಂದು ಅಲ್ಲಿ ಇಲ್ಲಿ ಕೇಳಿದ್ದೆ. ಆದರೆ ಅದೊಂದು ದಿನ ಮುಂಜಾನೆ ಭದ್ರಾವತಿ ಆಕಾಶವಾಣಿಯಲ್ಲಿ ಕಾರ್ಯಕ್ರಮದ ಪಟ್ಟಿಯನ್ನೋದುತ್ತಾ ನಿರೂಪಕರು “ಮಧ್ಯಾಹ್ನ ೧೨-೩೦ಕ್ಕೆ ಸುಭಾಷ್ ಹಾರೇಕೊಪ್ಪ ಅವರ ಸುಗಮ ಸಂಗೀತ” ಎಂದಾಕ್ಷಣ ನನ್ನ ಮನಸ್ಸು ಪುಳಕಗೊಂಡಿತು. ಅದನ್ನಿಂದು ಕೇಳಲೇ ಬೇಕೆಂಬ ಹಪಾಹಪಿ ಹುಟ್ಟಿ ಕಾಲೇಜಿನ ಮದ್ಯಾಹ್ನದ ಕಡೆಯ ಅವಧಿಗೆ ಬಂಕ್ ಮಾಡಿ ರೂಮಿಗೆ ಬಂದು ರೇಡಿಯೊ ಹಚ್ಚಿದೆ. ಅತ್ತಲಿಂದ ಕೇಳಿ ಬಂದ ಮೊದಲ ಹಾಡು “ಒಲವ ಲತೆಗೆ ನೀರನೆರೆದ…” ಗೀತೆ ಆ ಬಿರುಬಿಸಿಲಿನಲ್ಲೂ ತಣ್ಣಗೆ ಗಾಳಿಯಲ್ಲಿ ಸುಗಂಧದಂತೆ ತೇಲಿಬಂದ ಸ್ವರಸುಮಗಳಾಗಿದ್ದವು. ಕೇವಲ ಆತ್ಮಸಂತೃಪ್ತಿಗೆಂದು ಚಟವಾಗಿರಿಸಿಕೊಂಡಿದ್ದ ನನ್ನ ಸಂಗೀತ ಕಲಿಕೆ ಒಳ್ಳೆಯ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಹಟವನ್ನೂ ನನಗೆ ಕಲಿಸಿತ್ತು. ಅಂತೆಯೇ ಮುಂದಿನ ಗೀತೆಯ ರೆಕಾರ್ಡಿಂಗ್ ಒಂದೆಡೆ ಮುಂದುವರಿಯುತ್ತಿದ್ದರೆ ಇನ್ನೊಂದೆಡೆ ನನ್ನ ಗಮನವೆಲ್ಲಾ ಮೊದಲ ಹಾಡನ್ನು ಮನನ ಮಾಡುವುದರಲ್ಲಿಯೇ ಮುಳುಗಿಹೋಗಿತ್ತು !

“ಒಲವ ಲತೆಗೆ ನೀರನೆರೆದ…” ಎಂಬ ನಾನು ಕೇಳಿಸಿಕೊಂಡ ಆತನ ಮೊದಲ ಹಾಡೇ ನನ್ನೊಲವನ್ನು ಗಳಿಸಿಕೊಂಡುಬಿಟ್ಟಿತ್ತು ! ಇಂದಿಗೂ ಆ ಹಾಡು ನನ್ನ ಸಂಗ್ರಹದಲ್ಲಿ ಹಾಗೆಯೇ ನವಿರಾಗಿದೆ. ಕೆಲವು ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಹಳಸುವುದುಂಟು…ಕೆಲವು ಚಿತ್ರಗೀತೆಗಳಂತೆ . ಆದರೆ ಆ ಹಾಡು ಮಾತ್ರ ಎಂದಿಗೂ ಹಳಸದೆ ಹಳತಾಗದೆ ಹೊಸದಾಗಿಯೇ ಇದ್ದು ಮತ್ತೆ ಮತ್ತೆ ಕೇಳುತ್ತಾ ನವನವೀನ ಭಾವನೆಗಳನ್ನು ಹೃದಯಾಂತರಾಳದಲ್ಲಿ ಸ್ಫುರಿಸುತ್ತಲೇ ಇರುತ್ತದೆ ! ಅದು ಒಂದು ರಾಗಸಂಯೋಜನೆಯ, ಗಾಯನಶೈಲಿಯ, ಹಪಾಹಪಿಯಿಂದ ಕೇಳಿದ ಆ ಕ್ಷಣದ ಭಾವನೆ ಶಾಶ್ವತವಾಗಿ ಆಜೀವಪರ್ಯಂತ ನನ್ನೊಳಗೆ ಅಳಿಯದೆ ಉಳಿದ… ಉಳಿಯುವ ಪರಿ ! ಹೀಗೆಯೇ ಒಬ್ಬ ಒಳ್ಳೆಯ ಸಂಗೀತಗಾರ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯುವ ಪರಿ ! ಸ್ವರಸಂಯೋಜನೆಯೊಳಗಣ ಅಸಾಧಾರಣ ಅನನ್ಯತೆ ಅದೇ ಹಾಡುಗಾರಿಕೆಯಲ್ಲೂ ಮುಂದುವರಿದರೆ ಅದೇ ಕಲಾವಿದನೊಬ್ಬನನ್ನು ಆಚಂದ್ರಾರ್ಕವಾಗಿ ಉಳಿಸಿಕೊಳ್ಳುವ ಪರಿ !

ಸುಭಾಷನ ಹೆಚ್ಚಿನ ಸಂಖ್ಯೆಯ ಗೀತೆಗಳು ಹಳಸಿ ಹೋಗದ ಬದಲಿಗೆ ಮತ್ತೆ ಮತ್ತೆ ಹೊಚ್ಚ ಹೊಸದಾಗಿ ಹೊಳೆಯುವ ಗುಣಗಳನ್ನು ಮೇಳೈಸಿಕೊಂಡಿದ್ದರಿಂದಲೇ ಸುಭಾಷ್ ಸದಾ ಸ್ಮರಣಾರ್ಹ ವ್ಯಕ್ತಿತ್ವ ! ಯಾವ ಸಂಗೀತಗಾರನ ಹೆಚ್ಚಿನ ಗೀತೆಗಳು ನಿರಂತರವಾಗಿ ಪ್ರಜ್ವಲಿಸುತ್ತಲೇ ಇರುತ್ತದೆಯೊ ಅಂತಹ ಕಲಾವಿದ ಮಾತ್ರ ತನ್ನ ಸಂಗೀತದಿಂದ ಅಜರಾಮರವಾಗಿ ಮಿನುಗುತ್ತಲೇ ಇರುತ್ತಾನೆ. ಸುಭಾಷ್ ಅವರನ್ನು ನಾವು ಸಲೀಸಾಗಿ ಆ ಸಾಲಿಗೆ ಸೇರಿಸಬಹುದು !

“ಒಲವ ಲತೆಗೆ…” ಹಾಡಿನ ಅಭಿಮಾನಿಯಾದ ನಾನು ಅವರ ಅಭಿಮಾನಿಯಾದೆ. ಅಭಿಮಾನ ಕ್ರಮೇಣ ಪರಿಚಯ, ಸ್ನೇಹ, ಒಡನಾಟ,ಆತ್ಮೀಯತೆ, ತೀರಾ ಸಲುಗೆ ಹೀಗೆ ಸಾಗಿತು. ಆ ಕಾರಣ ಕೆಲವು ಜನಪ್ರಿಯ ಹಿಂದುಸ್ಥಾನಿ ರಾಗಗಳ ಮೇಲ್ನೋಟದ ಪರಿಚಯವನ್ನು ನನಗೆ ಮಾಡಿಕೊಡಬೇಕೆಂದು ಅವರಲ್ಲಿ ಕೇಳಿಕೊಂಡೆ. ಅದೊಂದು ದಿನ ಬಿಡುವಿನ ಸಮಯದಲ್ಲಿ ನನ್ನನ್ನು ಕರೆಸಿಕೊಂಡು ಮೇಲ್ನೋಟ ಮಾತ್ರವಲ್ಲದೆ ಎಲ್ಲಾ ನೋಟಗಳನ್ನೂ ಸರಳ ಸುಂದರವಾಗಿ ಹಾಡಿ ತೋರಿಸಿದರು ! ಅಂದಿನ ಆ ಪಾಥವನ್ನು ಸ್ಮರಿಸಿಕೊಂಡಾಗಲೆಲ್ಲಾ ಸುಭಾಷ್ ಒಬ್ಬ ಒಳ್ಳೆಯ ಗಾಯಕ ಎಂಬುದಕ್ಕಿಂತ ಹೆಚ್ಚಾಗಿ ಅತ್ಯದ್ಭುತ ಸಂಗೀತ ಶಿಕ್ಷಕ ಎಂಬುದನ್ನು ನನ್ನ ಮನಸ್ಸು ಆಲೋಚಿಸುತ್ತಲೇ ಇರುತ್ತದೆ.

ಹೀಗೆ ಸುಭಾಷ್ ಹಾರೇಕೊಪ್ಪ ಅವರ ವಿಚಾರಗಳನ್ನು ಸ್ಮರಿಸುತ್ತಾ ಅಕ್ಷರ ರೂಪ ನೀಡುತ್ತಾ ಹೋದರೆ ಅದೊಂದು ದೊಡ್ಡ ಪುಸ್ತಕವೇ ಆದೀತು ಹೊರತು ಇಲ್ಲಿ ಸ್ಥಳಾವಕಾಶ ಸಾಕಾಗುವುದಿಲ್ಲ. ಈ ನನ್ನ ಲೇಖನ ಯಾವುದೋ ಒಂದು ಕೋನದ ದೃಷ್ಟಿಕೋನ ಅಷ್ಟೇ. ಅದೇನೇ ಇರಲಿ…ಒಂದಂತೂ ನಿಜ ಸುಭಾಷ್ ಹಾರೇಕೊಪ್ಪ ಎಂಬ ಒಬ್ಬ ಸಂಗೀತಗಾರ ನನ್ನಂತಹ ಅದೆಷ್ಟೋ ಯುವ ಸಂಗೀತ ವಿದ್ಯಾರ್ಥಿಗಳಿಗೆ ಕಾಲಘಟ್ಟವೊಂದರಲ್ಲಿ ಸ್ಪೂರ್ತಿ ನೀಡಿದ್ದು ಸತ್ಯ. ಅವರಿಗೆ ಸಂಗೀತವೇ ಬದುಕಾಗಿತ್ತು. ಸಂಗೀತವೇ ಬದುಕಾಗಿದ್ದವನ ಸಂಗೀತ ಸದಾ ಬದುಕಿಯೇ ಇರುತ್ತದೆ ಅಲ್ಲವೇ?!

ಸುಭಾಷ್ ಹಾರೆಗೊಪ್ಪ-ಕಿರುಪರಿಚಯ

ನಿಮಗೆ ನೆನಪಿರಬಹುದು ಈಗ ನಾಲ್ಕು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿದ್ದ “ಏಕೆ ಹೀಗೆ ನಮ್ಮ ನಡುವೆ ” ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಗೆ ರಾಗಸಂಯೋಜಿಸಿ ಹಾಡಿದವರು ಇದೇ ಸುಭಾಷ್. ಅದೇ ಗೀತೆಯ ಸಂಗೀತಕ್ಕೆ ಕಿರುತೆರೆಯ ಸಂಘದಿಂದ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಯ ಪಕ್ಕದ ಹಾರೆಗೊಪ್ಪ ಎಂಬ ಊರಿನ ಹೆಚ್.ಎಸ್ ಶ್ರೀಪಾದ್ ಭಟ್ ದಂಪತಿಗಳ ಮಗನಾಗಿ ಜನಿಸಿದ ಸುಭಾಷ್ ಕೇವಲ ೩೪ ವರ್ಷ ಬದುಕಿದರೂ ಆ ಊರಿಗೆ ಕೀರ್ತಿ ತಂದು ಕೊಟ್ಟ ಸಂಗೀತ ತಪಸ್ವಿ. ಸೊರಬ ನಾರಾಯಣಪ್ಪ ಹಾಗು ಹುಮಾಯುನ್ ಹರ್ಲಾಪುರ ಅವರಲ್ಲಿ ಆರಂಭಿಕವಾಗಿ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದ ಇವರು ಮುಂದೆ ಧಾರವಾಡ ವಿವಿಯಲ್ಲಿ ಸಂಗೀತ ವಿಭಾಗದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಮುಂದೆ ವೆಂಕಟೇಶ್ ಕುಮಾರ್, ಕೈವಲ್ಯ ಕುಮಾರ್ ಗುರವ್ ಹಾಗು ಪರಮೇಶ್ವರ ಭಟ್ ಅವರಲ್ಲಿಯೂ ಶಿಷ್ಯವೃತ್ತಿ ಮಾಡಿದ್ದರು. ತುಮಕೂರಿನ ಟಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಒತ್ತಡದಿಂದಾಗಿ ಅಲ್ಲಿಂದ ಬಿಟ್ಟು ಬಂದು ಮತ್ತೆ ಹಾರೆಗೊಪ್ಪದಲ್ಲಿಯೇ ನೆಲೆಯೂರಿದ್ದರು. ಭೀಮನಕೋಣೆಯ ಸ್ವರಾಂಜಲಿ ತಂಡದ ಪ್ರಮುಖ ಗಾಯಕರಾಗಿದ್ದರು. ಸುಭಾಷ್ ನೀಡಿದ್ದು ಸಾವಿರಾರು ಸಂಗೀತ ಕಾರ್ಯಕ್ರಮಗಳು ಹಾಗು ಪಡೆದದ್ದು ಸಾವಿರಾರು ಪುರಸ್ಕಾರಗಳು. ಸಂಗೀತದ ಹಲವು ಪ್ರಾಕಾರಗಳಾದ ಶಾಸ್ತ್ರೀಯ, ಸುಗಮ, ರಂಗ ಸಂಗೀತ, ಜಾನಪದ ಸಂಗೀತ ಹೀಗೆ ಎಲ್ಲದರಲ್ಲೂ ಪರಿಣಿತರಾಗಿ ಪಳಗಿದ್ದ ಸುಭಾಷ್ ದಾಸರಪದ ಹಾಗು ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡುವಾಗ ಇವೆಲ್ಲದರ ಸಮ್ಮಿಶ್ರಣವಾಗಿ ಒಂದು ವಿಶೇಷ ರಾಗಲಯವಿನ್ಯಾಸದ ಭಾವ ಹೊರಹೊಮ್ಮಿ ಅಲ್ಲೊಂದು ಅನನ್ಯತೆ ಮೂಡುತ್ತಿತ್ತು. ಹೆಗ್ಗೊಡಿನ ನೀನಾಸಂ ನಾಟಕಗಳಿಗೆ ಹಲವಾರು ಶೈಲಿಯಲ್ಲಿ ಪ್ರಯೋಗ ಮಾಡಿ ರಂಗಭೂಮಿಯ ಪಂಡಿತರಿಂದಲೂ ಸೈ ಎನಿಸಿಕೊಂಡಿದ್ದರು ! ದೂರದರ್ಶನ ಹಾಗು ಹಲವು ವಾಹಿನಿಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿ ಜನಮೆಚ್ಚುಗೆ ಪಡೆದಿದ್ದರು. “ನಮ್ಮ ರಂಗನ ಕಂಡೀರೇನೆ?” ಹಾಗು “ರಾಮ ರಾಘವ ಕೃಷ್ಣ ಮಾಧವ” ಇವರ ಎರಡು ಜನಪ್ರಿಯ ಧ್ವನಿಮುದ್ರಿಕೆಗಳಾಗಿ ಆಡಿಯೊ ಮಾರುಕಟ್ಟೆಯನ್ನು ಕೊಳ್ಳೆ ಹೊಡೆದಿದ್ದವು ! ಸುಭಾಷ್ ದಿವಂಗತರಾದ ನಂತರ ಅವರ ಮೊದಲ ಅಡಕ ಮುದ್ರಿಕೆ (ಅವರ) “ನೆನಪಿನಲ್ಲಿ” ಕಳೆದ ವರ್ಷ ಬಿಡುಗಡೆಯಾಯಿತು.

ಸಂಗೀತಾಸಕ್ತರು ಸುಭಾಷ್ ಅವರ ಅಡಕ ಮುದ್ರಿಕೆಗಳನ್ನು ಪಡೆಯಬೇಕೆಂದರೆ ಈ ದೂರವಾಣಿಗಳಿಗೆ ಸಂಪರ್ಕಿಸಬಹುದು-08183-212180 / 260092,  9686054906, 98451177310.

-ಚಿನ್ಮಯ ಎಂ.ರಾವ್ ಹೊನಗೋಡು

‎Friday, ‎May ‎9, ‎2014

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.