ಮ್ಯಾಸಿವ್ ಸ್ಟಾರ್ ರಾಜವರ್ಧನ್ ನಟಿಸುತ್ತಿರುವ ಬಹು ನಿರೀಕ್ಷಿತ ‘ಗಜರಾಮ’ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ 16 ದಿನಗಳ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಹದಿನಾರು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೊದಲ ಶೆಡ್ಯೂಲ್ ಮುಗಿದ್ದಿದ್ದು ಎರಡನೆ ಶೆಡ್ಯೂಲ್ ಗಾಗಿ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ಇನ್ನು ನಲವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ನಾನು ಏನು ಅಂದುಕೊಂಡಿದ್ದೆನೋ ಹಾಗೆಯೇ ಚಿತ್ರೀಕರಣ ನಡೆಯುತ್ತಿದೆ, ಸಿನಿಮಾವೂ ಮೂಡಿ ಬರ್ತಿದೆ. ಮೊದಲ ಸಿನಿಮಾ ಎಂದು ನೋಡದೇ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ನನಗೆ ಸಹಕಾರ ನೀಡುತ್ತಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನಿರ್ದೇಶಕ ಸುನೀಲ್ ಕುಮಾರ್. ವಿ. ಎ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್. ವಿ. ಎ ನಿರ್ದೇಶನದ ಮೊದಲ ಸಿನಿಮಾವಿದು. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಗೋವಿಂದೇ ಗೌಡ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.
ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬರಲಿದೆ.