ಅಭಿಮಾನಿಗಳೇ ದೇವರುಗಳು’ ಅಂತ ಡಾ.ರಾಜ್ ಕುಮಾರ್ ಹೇಳ್ತಿದ್ರು, ಈಗ ದೊಡ್ಮನೆ ಹುಡ್ಗ’ ಚಿತ್ರದ ಮೂಲಕ ಅಭಿಮಾನಿಗಳೇ ನಮ್ಮನೆ ದೇವ್ರು..’ ಎನ್ನುತ್ತಿದ್ದಾರೆ ಪುನೀತ್ ರಾಜ್ ಕುಮಾರ್. ಹಾಗಾದ್ರೆ, ತಮ್ಮ ನಿಜ ಜೀವನಕ್ಕೂ ದೊಡ್ಮನೆ ಹುಡ್ಗ’ ಚಿತ್ರಕ್ಕೂ ಏನಾದರೂ ಸಂಬಂಧ ಇದೆಯಾ ಅಂತ ಕೇಳಿದಕ್ಕೆ ದೊಡ್ಮನೆ ಹುಡ್ಗ’ ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಈ ರೀತಿಯಾಗಿ ದೊಡ್ಡ ಮಾತುಗಳನ್ನಾಡಿದರು :
ಇದು ತುಂಬಾ ದೊಡ್ಡ ಸ್ಟಾರ್ ಕಾಸ್ಟ್ ಇರುವ ಸಿನಿಮಾ. ಹೀಗಾಗಿ ಇದಕ್ಕೆ ದೊಡ್ಮನೆ ಹುಡ್ಗ’ ಅಂತ ಹೆಸರಿಡಲಾಗಿದೆ ಅಷ್ಟೆ. ನನ್ನ ನಿಜ ಜೀವನಕ್ಕೂ ಇದಕ್ಕೂ ಸಂಬಂಧ ಇಲ್ಲ. ಸಿನಿಮಾ ಶುರು ಆಗಿ ಒಂದು ವರ್ಷ ನಾಲ್ಕು ತಿಂಗಳು ಆಯ್ತು. ಅಲ್ಲಿಂದ ದೊಡ್ಮನೆ’ ನಡೆಯುತ್ತಾ ಬರ್ತಿದೆ. ನನಗೆ ತುಂಬಾ ಸಂತೋಷ ಪಡುವ ವಿಷಯ ಸಾಕಷ್ಟಿದೆ. ಏಕೆಂದರೆ, ನನ್ನ ಮೊದಲ ಸಿನಿಮಾ ಇದು ಅಂಬರೀಶ್ ಮಾಮ ಜೊತೆ. ತುಂಬಾ ತುಂಬಾ ಖುಷಿ ಆಯ್ತು, ಅವರ ಜೊತೆ ಪಾತ್ರ ಮಾಡೋಕೆ. ಯಾಕೋ ಇಷ್ಟು ವರ್ಷ ಕಾಲ ಕೂಡಿಬಂದಿರಲಿಲ್ಲ, ಅದು ದೊಡ್ಮನೆ ಮೂಲಕವೇ ಆಗಬೇಕಿತ್ತು ಎಂದೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂಬರೀಶ್ ಮಾಮ ಯಾವತ್ತು ಸೆಟ್ ನಲ್ಲಿ ಇರ್ತಿದ್ರೋ, ಅವತ್ತು ರಾಜ ಭೋಜನ. ಜೊತೆಗೆ ಸಂತೋಷದ ಮಾತುಗಳು.
ಸುಮಲತಾ ಮೇಡಂ ಅವರ ಜೊತೆ ಕೂಡ ಇದು ನನ್ನ ಮೊದಲ ಸಿನಿಮಾ. ಅವರನ್ನ ನಮ್ಮ ತಂದೆ ಜೊತೆ ಹೀರೋಯಿನ್ ಆಗಿ ನೋಡಿದ್ದೆ. ಈಗ ನನ್ನ ತಾಯಿ ಆಗಿ ನೋಡೋಕೆ ತುಂಬಾ ಖುಷಿ ಆಗುತ್ತಿದೆ. ಖುಷಿ ಕೊಡುವ ಟೀಮ್ ಇದು. ಸೂರಿ ಸರ್ ಜೊತೆ ಇದು ಮೂರನೇ ಸಿನಿಮಾ ಎಂದರು.