ಸ್ಯಾಂಡಲ್ ವುಡ್

‘ನಾದದ ನವನೀತ’ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ನಾದದ ನವನೀತ’ ಸಾಕ್ಷ್ಯ ಚಿತ್ರಕ್ಕೆ 68ನೇ ರಾಷ್ಟ್ರಪ್ರಶಸ್ತಿ ಬಂದ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಡಿಯಲ್ಲಿ ಇದನ್ನು ನಿರ್ಮಾಣ ಮಾಡಿದ ಆಯುಕ್ತ ಡಾ.ಪಿ. ಎಸ್. ಹರ್ಷ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನಿಸಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ. ಮ. ಹರೀಶ್, ಜೈ ಜಗದೀಶ್, ಉಮೇಶ್ ಬಣಕಾರ್, ಶಿಲ್ಪ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ ನಾನು ಮೂಲತಃ ಚಿತ್ರ ನಿರ್ದೇಶಕ ಸಾಕ್ಷ್ಯ ಚಿತ್ರ ನಿರ್ದೇಶಕನಲ್ಲ. ಆದರೂ ಅನಂತಮೂರ್ತಿ, ಗೋಪಾಲಕೃಷ್ಣರಂತಹ ಕುರಿತಾದ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ರಾಜಕೀಯ ನಂಟಿಲ್ಲದ ಹಾಗೂ ಇಂಗ್ಲೀಷ್ ಬಾರದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಸಾಕ್ಷ್ಯ ಚಿತ್ರವನ್ನು ಇಲಾಖೆಯೊಂದಿಗೆ ಜೊತೆಗೂಡಿ ನಿರ್ಮಾಣ ಮಾಡಲು ಹೊರಟಾಗ ಇದು ಕೇವಲ ಸಂದರ್ಶನವಾಗಬಾರದು ಬೇರೆ ರೀತಿಯಲ್ಲಿ ಮಾಡಬೇಕೆಂದು ಅಂದುಕೊಂಡು ಮಾಡಿದ ಡಾಕ್ಯುಮೆಂಟರಿ ‘ನಾದದ ನವನೀತ’. ಕರ್ನಾಟಕದಲ್ಲಿ ಅನೇಕ ಸಾಧಕರು ತಮ್ಮ ಸಾಧನೆಯನ್ನು ಬಿಟ್ಟು ಹೋಗಿದ್ದಾರೆ ಅವುಗಳು ಸರಿಯಾಗಿ ದಾಖಲಾಗಿಲ್ಲ. ಅಂತಹ ವ್ಯಕ್ತಿಗಳ ಪರಿಚಯ ಮುಂದಿನ ಪೀಳಿಗೆಗೆ ಆಗಬೇಕು. ಇದು ಸಾಧ್ಯವಾಗಬೇಕಾದರೆ ಸರ್ಕಾರ ಮನಸ್ಸು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿ ತಿಳಿಸಿದ್ರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ. ಎಸ್. ಹರ್ಷ ಮಾತನಾಡಿ ಸಮಾಜಕ್ಕಾಗಿ ದುಡಿದ ಅದೆಷ್ಟೋ ಮುಖಗಳು ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲ. ಆಧುನಿಕ ಭರಾಟೆಯಲ್ಲಿ ಸ್ವತಂತ್ರ ಯೋಧರು, ಸಾಮಾಜಿಕ ಹೋರಾಟಗಾರರನ್ನು ಇಂದಿನ ಯುವ ಪೀಳಿಗೆ ಮರೆತಿದೆ ಅದರ ಅರಿವನ್ನು ಮೂಡಿಸಲು ಮಾಡಿದ ಸಾಕ್ಷ್ಯ ಚಿತ್ರವೇ ‘ನಾದದ ನವನೀತ’. ಗಿರೀಶ್ ಕಾಸರವಳ್ಳಿ ಅವರು ತುಂಬಾ ಅದ್ಭುತವಾಗಿ ಅದನ್ನು ಸಾಕ್ಷೀಕರಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬರುವ ಹಾಗೆ ಮಾಡಿ ನಾಡಿಗೆ ಹೆಮ್ಮೆ ತಂದಿದ್ದಾರೆ ಎಂದು ಸಂತಸ ಹಂಚಿಕೊಂಡ್ರು.

ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ್ ರಾಜ್ ಮಾತಾಡುತ್ತಾ ನಮ್ಮ ಕವಿಗಳಿಗೆ ಎಂಟು ಜ್ಞಾನಪೀಠ ಬಂದಿದೆ ಎಂದಾಗ ಗಿರೀಶ್ ಕಾಸರವಳ್ಳಿ ಯವರು ನಮ್ಮ ಚಿತ್ರರಂಗಕ್ಕೆ ಕೂಡ ಎಂಟು ಸ್ವರ್ಣ ಕಮಲ ಬಂದಿದೆ ಎಂಬುದನ್ನು ಮರೆಯಬಾರದು ಎಂದರು.

ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ನಾಡಿನ ಸಾಧಕರು, ಪ್ರತಿಭಾವಂತರ ಕುರಿತಂತೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುತ್ತದೆ. ಈವರೆಗೂ ನೂರಾರು ಮಂದಿಯ ಜೀವನಕಥೆಗಳನ್ನು ಇಲಾಖೆ ತಯಾರಿಸಿದೆ. ಇದೇ ಮೊದಲ ಬಾರಿಗೆ ಕಥೇತರ ವಿಭಾಗದಲ್ಲಿ ಇಲಾಖೆ ನಿರ್ಮಿಸಿದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರಕ್ಕೆ ಕಥೇತರ ವಿಭಾಗದಲ್ಲಿ ‘ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ’ ಎಂಬ ಪ್ರಶಸ್ತಿ ದೊರೆತಿದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.