ಭಕ್ತಿಗೀತೆಗಳು

ನವದುರ್ಗೆಯರೆ ನಿಮಗೆ ಸುಪ್ರಭಾತ (ನವದುರ್ಗೆಯರ ಮಹತ್ವವನ್ನು ಸಾರುವ ಸುಪ್ರಭಾತ)

ರಚನೆ-ಚಿನ್ಮಯ.ಎಂ.ರಾವ್ ಹೊನಗೋಡು

(ನವದುರ್ಗೆಯರ ಗುಣಲಕ್ಷಣಗಳನ್ನು ಸೂಕ್ಷ್ಮವಾಗಿ ವಿವರಿಸುವ,ನವದುರ್ಗೆಯರ ಮಹತ್ವವನ್ನು ಸಾರುವ ಸುಪ್ರಭಾತ)

ನವದುರ್ಗೆಯರೆ ನಿಮಗೆ ಸುಪ್ರಭಾತ
ನವಶಕ್ತಿಯರೆ ನೀವು ನಿತ್ಯ ಶಾಂತ -ಪಲ್ಲವಿ
ಬೆಳಗಾಯಿತೇಳಿ ಈ ಗಾನ ಕೇಳಿ
ರವಿ ಎದ್ದ ಏಳಿ ಈ ಗಾನ ಕೇಳಿ-ಅನುಪಲ್ಲವಿ

ಆದಿಯಲಿ ಪೂಜಿಪಳೆ ಶ್ರೀ ಶೈಲಪುತ್ರಿಯೆ
ಪ್ರಥಮಸ್ವರೂಪ ನೀ ವೃಷಭವಾಹನಳೆ
ನವರಾತ್ರಿಯಾರಂಭ ನಿನ್ನಿಂದ ತಾನೆ
ಹೈಮವತಿ ಪಾರ್ವತಿ ಬೆಳಗಾಯಿತೇಳೆ-೧

ಎರಡನೆಯ ರೂಪದಲಿ ಬ್ರಹ್ಮಚಾರಿಣಿ ನೀನು
ಶಿವನ ಪಡೆಯಲು ಘೋರ ತಪವನ್ನು ಗೈದೆ
ತ್ಯಾಗ ವೈರಾಗ್ಯದ ಮತಿಯನ್ನು ಪಾಲಿಪಳೆ
ವಿಶ್ವಜನನಿಯೆ ತಾಯೆ ಬೆಳಗಾಯಿತೇಳೆ-೨

ಚಂದ್ರಘಂಟಾ ಎಂಬ ಮೂರನೆಯ ದುರ್ಗೆಯೆ
ಬಂಗಾರದೊಡಲವಳೆ ಸಿಂಹವಾಹನಳೆ
ಸುಖ ಶಾಂತಿ ಕಾರಣಳೆ ಕಾಂತಿ ಉತ್ಪನ್ನಳೆ
ಸೌಮ್ಯತೆಯ ಮೂರ್ತಿ ನೀ ಬೇಳಗಾಯಿತೇಳೆ-೩

ಜಗನ್ಮಾತೆ ದುರ್ಗೆಯ ನಾಲ್ಕನೆಯ ರೂಪಳೆ
ಕೂಷ್ಮಾಂಡ ದೇವಿಯೆ ಮಧುರ ನಗೆಯವಳೆ
ಬ್ರಹ್ಮಾಂಡ ಉತ್ಪನ್ನ ಕಾರಣಳೆ ತಾಯೆ
ಅಷ್ಟಭುಜ ಮಾತೆಯೆ ಬೆಳಗಾಯಿತೇಳೆ-೪

ಬಾಲಸ್ಕಂದನ ತಾಯೆ ಸ್ಕಂದ ಮಾತಾ ನೀನು
ನಾಲ್ಕು ಭುಜವನು ಹೊಂದಿ ಐದನೆಯ ರೂಪಳೆ
ಭವಸಾಗರವ ಕಳೆದು ಮುಕ್ತಿಯನು ಪಾಲಿಪಳೆ
ಕಮಲಾಸನಳೆ ತಾಯೆ ಬೆಳಗಾಯಿತೇಳೆ-೫

ಕಾತ್ಯಾಯನರ ಪುತ್ರಿ ಕಾತ್ಯಾಯಿನೀ ದೇವಿ
ದಿವ್ಯಭವ್ಯವು ನೀನು ಆರನೆಯ ದುರ್ಗೆಯು
ಧರ್ಮಾರ್ಥ ಕಾಮಮೋಕ್ಷಕೆ ಕಾರಣಳು ನೀನೆ
ಸಂತಾಪ ಭಯ ರೋಗ ಶೋಕನಾಶಿನಿ ತಾಯೆ
ಬೆಳಗಾಯಿತೇಳೆ ಬೆಳಗಾಯಿತೇಳೆ-೬

ಉಗ್ರಸ್ವರೂಪಳೆ ಏಳನೆಯ ಶಕ್ತಿಯೆ
ಗ್ರಹಬಾಧೆಗಳ ಕಳೆವ ಕಾಲರಾತ್ರಿಯೆ ತಾಯೆ
ದುಷ್ಟಶಕ್ತಿಗಳನ್ನು ಬಡಿದೋಡಿಸುವೆ ನೀನು
ಶುಭವನ್ನು ಪಾಲಿಪಳೆ ಬೆಳಗಾಯಿತೇಳೆ-೭

ಎಂಟು ವರುಷದ ನೀನು ಎಂಟನೆಯ ಶಕ್ತಿಯೆ
ಅಭಯ ಮುದ್ರೆಯ ಸಹಿತ ಶ್ರೀ ಮಹಾಗೌರಿಯೆ
ಪೂರ್ವಸಂಚಿತಪಾಪನಾಶಿನಿಯೆ ತಾಯೆ
ಸನ್ಮಾರ್ಗದಾಯಿನಿಯೆ ಬೆಳಗಾಯಿತೇಳೆ-೮

ಸಿದ್ಧಿದಾತ್ರಿಯೆ ದೇವಿ ವಿಜಯಕಾರಣಳೆ
ಅರ್ಧನಾರೀಶ್ವರನ ಅರ್ಧದಲಿ ವಾಸಿಪಳೆ
ಒಂಭತ್ತನೆಯ ದಿನದಿ ಪೂಜಿಪಳೆ ಭಗವತಿಯೆ
ದಿವ್ಯಲೋಕಗಳಲ್ಲಿ ಸಂಚಾರಿಣಿ ತಾಯೆ
ಬೆಳಗಾಯಿತೇಳೆ ಬೆಳಗಾಯಿತೇಳೆ-೯

ರಚನೆ-ಚಿನ್ಮಯ.ಎಂ.ರಾವ್ ಹೊನಗೋಡು

*********************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.