ಕಿರುಚಿತ್ರ

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ’69 ವೀವ್ಸ್’ ಕಿರುಚಿತ್ರ ಬಿಡುಗಡೆ

ಚಿತ್ರರಂಗದ ನುರಿತ ತಂತ್ರಜ್ಞರ ತಂಡದಿದ ತಯಾರಾದ ಶಾರ್ಟ್ ಫಿಲಂಗೆ ಮೆಚ್ಚುಗೆಯ ಮಹಾಪೂರ

ಕಿರುಚಿತ್ರದಿಂದಲೇ ಖ್ಯಾತಿ ಗಳಿಸಿ ಬಳಿಕ ಸಿನಿಮಾ ಮಾಡುವ ಮುಖೇನ ಹಲವಾರು ನಿರ್ದೇಶಕರು ಗೆದ್ದಿದ್ದಾರೆ. ಇದೀಗ ಯುವ ನಿರ್ದೇಶಕ ಹರಿಪ್ರಕಾಶ್.ಡಿ ಅದೇ ಜಾಡು ಹಿಡಿದು, ಪ್ರಥಮ ಹೆಜ್ಜೆಯಲ್ಲೇ ಯಶ ಸಾಧಿಸಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ’69 ವೀವ್ಸ್’ ಎಂಬ ಕಿರುಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ದಾಖಲೆ ಬರೆದಿರುವುದು ಗಮನಾರ್ಹ.

ದೇಶ-ವಿದೇಶಗಳಲ್ಲಿ ನಡೆದ ಹಲವಾರು ಕಿರುಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ’69 ವೀವ್ಸ್’ ಈವರೆಗೂ ಇಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಂಕಲನ, ಚಿತ್ರಕಥೆ, ನಿರ್ದೇಶನ ವಿಭಾಗ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಭಾರತ ಸೇರಿದಂತೆ ಪ್ಯಾರೀಸ್ ಹಾಗೂ ಫ್ರೆಂಚ್‌ ಮೊದಲಾದ ದೇಶಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗುವುದರ ಜತೆಗೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾಗಿರುವುದು ತಂಡದ ಹೆಚ್ಚುಗಾರಿಕೆ.

ಸೆಪ್ಟೆಂಬರ್ 09ರಿಂದ ಅಮೇಜಾನ್ ಪ್ರೈಮ್, ಟಾಟಾ ಪ್ಲೇ ಬಿಂಜ್, ಏರ್ ಟೆಲ್ ಎಕ್ಸ್ ಟ್ರೀಮ್ ಹಾಗೂ ನಮ್ಮ ಫ್ಲಿಕ್ಸ್ ಓಟಿಟಿ ಆ್ಯಪ್ ಮೂಲಕ ಬಿಡುಗಡೆಯಾಗಿರುವ ಈ ಕಿರುಚಿತ್ರಕ್ಕೆ ಬಹುತೇಕ ಸಿನಿಮಾ ತಂತ್ರಜ್ಞರೇ ಕಾರ್ಯ ನಿರ್ವಹಿಸಿರುವುದು ವಿಶೇಷ. ಸ್ವಾಮಿ ಮೈಸೂರು ಛಾಯಾಗ್ರಹಣ, ಪುಷ್ಕರ್ ಗಿರಿಗೌಡ ಸಂಕಲನ, ಆನಂದ್ ರಾಜಾ ವಿಕ್ರಮ್ ಸಂಗೀತ ಸಂಯೋಜನೆ ’69 ವೀವ್ಸ್’ಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದಿರುವ ಈ ಕಿರುಚಿತ್ರ 26 ನಿಮಿಷಗಳ ಅವಧಿಯಿದ್ದು, ತಾಂತ್ರಿಕವಾಗಿ ಅದ್ಧೂರಿಯಾಗಿ ಮೂಡಿಬಂದಿದೆ. ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ಕಮಾಲ್ ಮಾಡಿರುವ ’69 ವೀವ್ಸ್’, ಸಿನಿಮಾ ರೀತಿಯ ಗುಣಮಟ್ಟದಲ್ಲಿ ಮೂಡಿಬಂದಿದೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಕಿರುಚಿತ್ರದ ಪೋಸ್ಟರ್ ಸಹ ಎಲ್ಲರ ಗಮನ ಸೆಳೆದಿದ್ದು, ಅಂಡರ್ ವಾಟರ್ ಶೂಟಿಂಗ್ ಮಾಡಿರುವುದು ಈ ಕಿರುಚಿತ್ರದ ಮತ್ತೊಂದು ಹೈಲೈಟ್.

ಪ್ರಿಯಾಂಕಾ.ಕೆ ನಿರ್ಮಿಸಿರುವ ಈ ಕಿರುಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಶಶಾಂಕ್ ಶರ್ಮಾ, ರೋವನ್ ಪೂಜಾರಿ, ನಳೀನ್ ಅರಕಲ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಇದೇ ತಂಡದೊಂದಿಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂಬುದು ನಿರ್ದೇಶಕ ಹರಿ ಪ್ರಕಾಶ್ ಅನಿಸಿಕೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.