ಬಣ್ಣದ ಜಗತ್ತು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿ ಟ್ಯಾಲೆಂಟ್ ಇದ್ದವರು ಮುಗಿಲೆತ್ತರಕ್ಕೆ ಬೆಳೆಯುತ್ತಾರೆ. ಇನ್ನೂ ಕೆಲವರು ಸಕ್ಸಸ್ ಗಾಗಿ ಸರ್ಕಸ್ ಮಾಡುತ್ತಲೆ ಇರುತ್ತಾರೆ. ಈಗ ಸಕ್ಸಸ್ ಜಾಡು ಹಿಡಿದು ಗಾಂಧಿನಗರದಲ್ಲಿ ಗಟ್ಟಿಯಾಗಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ ಐಟಿ ಉದ್ಯೋಗಿ-ಯುಎಸ್ ರಿರ್ಟನ್ ವಿಜೇತ್ ಅರಳಗುಪ್ಪಿ. ವಿಜೇತ್ ಅಮೇರಿಕಾದಲ್ಲಿ ಫಿಲ್ಮಂ ಮೇಕಿಂಗ್ ಕೋರ್ಸ್ ಕಲಿತು ಭಾಸ ಎಂಬ ಕಿರುಚಿತ್ರ ಮಾಡಿದ್ದರು. ಈಗ ಕಲಿ ಎಂಬ ಮತ್ತೊಂದು ಕಿರುಚಿತ್ರವನ್ನು ಸಮಸ್ತ ಕನ್ನಡ ಚಿತ್ರಪ್ರೇಮಿಗಳಿಗೆ ಅರ್ಪಿಸಿದ್ದಾರೆ.
ದೇಶ-ವಿದೇಶಗಳಲ್ಲಿ ನಡೆದ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿವಿಧ ಭಾಗದಲ್ಲಿ ಕಲಿ ಕಿರುಚಿತ್ರ ಏಳಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಪ್ರೀತಿ, ತಂದೆ ಮತ್ತು ಮಗಳ ಬಾಂಧವ್ಯ ಜೊತೆಗೆ ಕ್ರೈಮ್ ಸುತ್ತ ಸಾಗುವ ಈ ಕಿರುಚಿತ್ರಕ್ಕೆ ವಿಜೇತ್ ಅರಳಗುಪ್ಪಿ ಆಕ್ಷನ್ ಕಟ್ ಹೇಳಿದ್ದಾರೆ. ತಾರಾಬಳಗದಲ್ಲಿ ರಾಕೇಶ್ ರಾಜ್, ಜ್ಞಾನ ಭಟ್, ಪ್ರಾಣ್ಯ ರಾವ್, ಸೂರ್ಯ ವಸಿಷ್ಠ ನಟಿಸಿದ್ದು, ಅದ್ವಿಕ್ ಸಂಗೀತ, ಅಭಿನ್ ರಾಜೇಶ್ ಛಾಯಾಗ್ರಾಹಣ, ಗೌತಮ್ ಪಲ್ಲಕ್ಕಿ ಸಂಕಲನ ಚಿತ್ರಕ್ಕಿದೆ. ಕಿತ್ತಾಕ್ಬುಡ್ತೀವಿ ಪ್ರೊಡಕ್ಷನ್ ನಡಿ ಕಿರುಚಿತ್ರ ನಿರ್ಮಾಣ ಮಾಡಿದ್ದು, ದಾದಾ ಸಾಹೇಬ್ ಪಾಲ್ಕೆ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡ ಜೂರಿಗಳಿಂದ ಈ ಕಿರುಚಿತ್ರ ಮೆಚ್ಚುಗೆ ಪಡೆದುಕೊಂಡಿದೆ. ಕಿತ್ತಾಕ್ಬುಡ್ತೀವಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಶಾರ್ಟ್ ಮೂವೀಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿರುಚಿತ್ರದ ಮೂಲಕ ತಮ್ಮ ನಿರ್ದೇಶನದ ಚಾಕಚಕತ್ಯೆ ತೋರಿಸುತ್ತಿರುವ ವಿಜೇತ್ ಇದೇ ತಂಡದೊಂದಿಗೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ.