ಭಾಷೆಯ ಗಡಿ ಎಂಬ ಎಲ್ಲೆಯನ್ನು ಮೀರಿದ್ದು ಸಿನಿಮಾ. ಅದರ ಉದ್ದೇಶ ಒಂದೇ ಮನರಂಜನೆ. ಇದೀಗ ಅದೇ ಮನರಂಜನೆ ಉದ್ದೇಶ ಇಟ್ಟುಕೊಂಡು ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮ ಹೊತ್ತ ‘ಬಯಲು ಸೀಮೆ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
ವರುಣ್ ಕಟ್ಟೀಮನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಯಲುಸೀಮೆ’ ಸಿನಿಮಾ ಹೆಸರೇ ಸೂಚಿಸುವಂತೆ ಪಕ್ಕಾ ಉತ್ತರ ಕರ್ನಾಟಕ ಸೊಗಡಿರುವ ಚಿತ್ರ. ರಗಡ್ ಕಥೆ ಈ ಸಿನಿಮಾದ ಜೀವಾಳ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರದ ಕಥಾವಸ್ತು. ಎಂಬತ್ತರ ದಶಕ ಹಾಗೂ ಈಗಿನ ಕಾಲಘಟ್ಟವನ್ನಿಟ್ಟುಕೊಂಡು ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ ವರುಣ್ ಕಟ್ಟೀಮನಿ. ಕಥೆಗೆ ತಕ್ಕಂತೆ ಸಾಕಷ್ಟು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು, ನೋಡುಗರನ್ನು ಥ್ರಿಲ್ ಗೊಳಿಸುವ ಕಥಾಹಂದರ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ಸೆನ್ಸಾರ್ ನಲ್ಲಿ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಸಿನಿಮಾ ಸದ್ಯದಲ್ಲೇ ತೆರೆ ಕಾಣೋದಕ್ಕೆ ರೆಡಿಯಾಗಿದೆ.
ವರುಣ್ ಕಟ್ಟೀಮನಿ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಈ ಸಿನಿಮಾ ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ. ಕಂಪ್ಲೀಟ್ ಸಿನಿಮಾ ಉತ್ತರ ಕರ್ನಾಟಕ ಸ್ಲ್ಯಾಂಗ್ ಇರುತ್ತೆ. ಎಲ್ಲಾ ಕಲಾವಿದರು ಆ ಸ್ಲ್ಯಾಂಗ್ ನಲ್ಲೇ ಡಬ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಪೊಲಿಟಿಕಲ್, ಕ್ರೈಂ,ಅಲ್ಲಿನ ಸಂಸ್ಕೃತಿ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಮರ್ಶಿಯಲ್ ಎಲಿಮೆಂಟ್ ಗಳನ್ನು ಇಟ್ಟುಕೊಂಡು ವಿಭಿನ್ನವಾಗಿ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ವರುಣ್ ಕಟ್ಟೀಮನಿ.
ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ.