ನೃತ್ಯ

ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಮಯ ಸಾಂಸ್ಕೃತಿಕ ವೈಭವ

ಪ್ರೇಕ್ಷಕರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದ ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ ಭಗವತ್ ತಂಡದವರ 'ಸಪ್ತ ತಾಂಡವ' ನೃತ್ಯ ರೂಪಕ!

ಬೆಂಗಳೂರು: ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಕಲ್ಚರ್ ಪ್ರಾಯೋಜಕತ್ವದಲ್ಲಿ, ಕೈಲಾಸ ಕಲಾಧರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಜೆ.ಸಿ. ರಸ್ತೆಯ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ‘ನೃತ್ಯ ವೈಭವ’ ಹಾಗೂ ಶಿವನ ‘ಸಪ್ತ ತಾಂಡವ’ ನೃತ್ಯ ರೂಪಕವು ಕೇವಲ ಒಂದು ಯಶಸ್ವಿ ಕಲಾ ಪ್ರದರ್ಶನವಾಗಿರದೆ, ಇಡೀ ಪ್ರೇಕ್ಷಕ ವಲಯದಲ್ಲಿ ಪರಮಾತ್ಮನ ಭಕ್ತಿ ಮೂಡಿಸುವಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತು.

ನಾಟ್ಯಗುರು ಶ್ರೀಮತಿ ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ ಭಗವತ್ ಅವರ ಅದ್ಭುತ ಚೇತನ ಶಕ್ತಿ, ಕಲ್ಪನಾ ವಿಲಾಸ ಹಾಗೂ ಶಿಷ್ಯವರ್ಗದ ಕಠಿಣ ಪರಿಶ್ರಮದಿಂದಾಗಿ ಈ ಕಾರ್ಯಕ್ರಮವು ನೆರೆದಿದ್ದ ಎಲ್ಲರನ್ನು ಮಂತ್ರಮುಗ್ಧಗೊಳಿಸಿತು. ಇಡೀ ನೃತ್ಯ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಕೈಲಾಸ ಕಲಾಧರ ತಂಡದವರು ಮತ್ತು ಅವರ ಸಹವರ್ತಿಗಳು ಹೆಮ್ಮೆ ಮತ್ತು ಆನಂದ ಭಾಷ್ಪದ ಭಾವುಕ ಕ್ಷಣಗಳು ಅಲ್ಲಿ ನೆರೆದಿದ್ದವರ ಹೃದಯ ಸ್ಪರ್ಶಿಸಿದವು. ಪರಮಶಿವನ ಸೃಷ್ಟಿ, ಸ್ಥಿತಿ ಮತ್ತು ಲಯದ ಸಂಕೇತವಾದ ಏಳು ಭಿನ್ನ ರೌದ್ರ ಹಾಗೂ ಆನಂದದಾಯಕ ತಾಂಡವ ರೂಪಗಳನ್ನು ನೃತ್ಯದ ಮೂಲಕ ವೇದಿಕೆಯ ಮೇಲೆ ಅದ್ಭುತವಾಗಿ ಅನಾವರಣಗೊಳಿಸಲಾಯಿತು.

 ಸಾನ್ನಿಧ್ಯ ವಹಿಸಿದ ಪರಮಪೂಜ್ಯರು ಹಾಗೂ ಮುಖ್ಯ ಅತಿಥಿಗಳ ಶ್ಲಾಘನೆ

ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರೋತ್ಸಾಹಿಸಲು ದಿವ್ಯ ಜ್ಯೋತಿಗಳು ಹಾಗೂ ಅಪ್ರತಿಮ ಕಲಾ ಗಣ್ಯರು ಆಗಮಿಸಿ ಆಶೀರ್ವದಿಸಿದರು:

* ಶ್ರೀ ಶ್ರೀ ವಿನಯ್ ಗುರೂಜಿ : ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀಗಳು ನೃತ್ಯ ಮತ್ತು ಮುದ್ರೆಗಳನ್ನು ಅತ್ಯಂತ ಏಕಾಗ್ರತೆಯಿಂದ ವೀಕ್ಷಿಸಿ, ಇದನ್ನು “ದೈವಿಕ ನೃತ್ಯ ಪ್ರಸಾದ” ಎಂದು ಸ್ವೀಕರಿಸಿದರು. ನಂತರ ತಮ್ಮ ಅದ್ಭುತ ಪ್ರವಚನ ರೂಪದ ಭಾಷಣದ ಮೂಲಕ ನೆರೆದಿದ್ದ ಭಕ್ತಾದಿಗಳನ್ನು ಹಾಗೂ ಕಲಾವಿದರನ್ನು ಆಶೀರ್ವದಿಸಿದರು.

* ಧರ್ಮಾಧಿಕಾರಿ ಸ್ವಾಮಿ ಶ್ರೀ ರಾಕುಮ್‌ಜೀ ಮಹಾರಾಜ್: ಆಚಾರ್ಯ ರಾಕುಮ್‌ಜೀ ಆಶ್ರಮದ ಶ್ರೀಗಳು ಉಪಸ್ಥಿತರಿದ್ದು ಹರಸಿದರು.

* ಶ್ರೀ ರವಿ ಕೃಷ್ಣ ಪಟೇಲ್ : ಇಸ್ಕಾನ್ ಬೆಂಗಳೂರಿನ ಮಹಧರ್ಮಾಧಿಕಾರಿಗಳಾದ ಇವರು ಇಡೀ ಕಾರ್ಯಕ್ರಮದ ಪ್ರಸ್ತುತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಸಾಂಸ್ಕೃತಿಕ ಹಾಗೂ ಕಲಾ ಲೋಕದ ಗಣ್ಯರು:

* ಕರ್ನಾಟಕ ಕಲಾಶ್ರೀ ಶ್ರೀಮತಿ ಡಾ. ಮಾಲಾ ಶಶಿಕಾಂತ್ ಸಂಸ್ಥಾಪಕರು: ಕೈಶಿಕಿ ನಾಟ್ಯವಾಹಿನಿ.

* ಶ್ರೀಮತಿ ಡಾ. ಚೂಡಾಮಣಿ ನಂದಗೋಪಾಲ್: ಕಲಾ ಇತಿಹಾಸಕಾರರು, ಯುನೆಸ್ಕೋ ಫೆಲೋ, ನಿರ್ದೇಶಕರು: ಕರ್ನಾಟಕ ಭರತಾಗಮ ಪ್ರತಿಷ್ಠಾನ.

* ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ: ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಸುಗಮ ಸಂಗೀತ ಅಕಾಡೆಮಿ.

* ಡಾ. ಶ್ರೀ ಚಿನ್ಮಯ ಎಂ. ರಾವ್: ಸಂಸ್ಥಾಪಕರು, ಸ್ವರಮೇಧ ಇಂಟರ್ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ.

ಗೌರವಾನ್ವಿತ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಥಿಕ ಮುಖಂಡರು

ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆದ ಈ ಭವ್ಯ ಸಾಂಸ್ಕೃತಿಕ ಸಮಾವೇಶಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿ ಕಲಾವಿದರನ್ನು ಪ್ರೋತ್ಸಾಹಿಸಿದರು:

* ಶ್ರೀ ಎನ್. ಆರ್. ರಮೇಶ್: ಕರ್ನಾಟಕದ ಪ್ರಮುಖ ರಾಜಕೀಯ ಮುಖಂಡರು, ಬಿಜೆಪಿ.

* ಶ್ರೀ ಆರ್. ಗೋವಿಂದ ನಾಯ್ಡು: ಮಾಜಿ ಕಾರ್ಪೊರೇಟರ್, ಜಯನಗರ ಪೂರ್ವ, ಬಿಬಿಎಂಪಿ.

* ಶ್ರೀ ಕೆ. ಆರ್. ಕುಮಾರ್: ರಾಜ್ಯಾಧ್ಯಕ್ಷರು, ಕನ್ನಡ ಸೇನೆ.

* ಶ್ರೀ ಡಾ. ಎಂ. ಸುಬ್ರಮಣಿ ಪಲ್ಲವಿ ಮಣಿ: ನಿವೃತ್ತ ಪ್ರಾಂಶುಪಾಲರು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕೆ.ಜಿ.ಎಫ್, ಅಧ್ಯಕ್ಷರು: ಕನ್ನಡ ಸಂಘ, ಬಂಗಾರಪೇಟೆ.

* ಶ್ರೀ ಸುನಿಲ್ ಅಹುಜಾ: ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಅಹುಜಾ ಗ್ರೂಪ್ ಆಫ್ ಕಂಪನಿಸ್.

* ಶ್ರೀ ಪ್ರತೀಕ್ ಮಾಧವ್: ಸಹ-ಸಂಸ್ಥಾಪಕರು ಮತ್ತು ಸಿಇಒ, ಅಸಿಸ್ಟೆಕ್ ಫೌಂಡೇಶನ್.

* ಶ್ರೀ ಬಿ. ಎಸ್. ನೀಲಕಂಠಯ್ಯ: ಅಧ್ಯಕ್ಷರು, ಬಸವ ಸಮಾಜ ಸೌಧ ಪಟ್ಟಣ ಸಹಕಾರಿ ಬ್ಯಾಂಕ್; ಬಿಐಎ ಉಪಾಧ್ಯಕ್ಷರು.

* ಶ್ರೀಮತಿ ಮಂಜುಳಾ ನೀಲಕಂಠಯ್ಯ: ಸದಸ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ.

* ಶ್ರೀ ಮನ್ನೆ ಮೋಹನ್: ಅಧ್ಯಕ್ಷರು, ಶ್ರೀಮತಿ ಈರಮ್ಮ ನಾಗರಾಜಪ್ಪ ಫೌಂಡೇಶನ್, ಪರಿಮಳ ಪ್ರಕಾಶನ.

ತಾಂತ್ರಿಕ ಹಾಗೂ ಕಲಾತ್ಮಕ ಸೌಂದರ್ಯ

‘ಸಪ್ತ ತಾಂಡವ’ ನೃತ್ಯ ರೂಪಕವು ತನ್ನ ಅದ್ಭುತ ಚಿತ್ರಕಥೆ – ಸ್ಕ್ರಿಪ್ಟ್, ಅತ್ಯುತ್ತಮವಾದ ಸ್ಕ್ರೀನ್‌ಪ್ಲೇ ನಿರೂಪಣೆ, ತಕ್ಕುದಾದ ಸಂಗೀತ ಸಂಯೋಜನೆ ಮತ್ತು ಅಚ್ಚುಕಟ್ಟಾದ ರಂಗ ನಿರ್ದೇಶನದಿಂದಾಗಿ ವಿಭಿನ್ನ ರೀತಿಯಲ್ಲಿ ಹೆಗ್ಗಳಿಕೆ ಸಾಧಿಸಿತು. ರಂಗವಿನ್ಯಾಸ ಮತ್ತು ಬೆಳಕಿನ – ಲೈಟಿಂಗ್ ಹೊಂದಾಣಿಕೆ ಪ್ರತಿಯೊಂದು ದೃಶ್ಯಕ್ಕೂ ಅದ್ಭುತವಾಗಿ ಜೀವ ತುಂಬಿತ್ತು.

ಸಪ್ತ ತಾಂಡವ’ಗಳ ಭವ್ಯ ದೃಶ್ಯಾವಳಿ ಹಾಗೂ ರೋಮಾಂಚಕ ವಿಮರ್ಶೆ

ಪ್ರತಿಯೊಂದು ತಾಂಡವವನ್ನೂ ಅತ್ಯಂತ ವಿಶಿಷ್ಟವಾಗಿ, ಶಾಸ್ತ್ರೀಯ ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಭಾವಪೂರ್ಣವಾಗಿ ಪ್ರಸ್ತುತಪಡಿಸಲಾಯಿತು:

* ಆನಂದ ತಾಂಡವ: ಸೃಷ್ಟಿಯ ಪರಮಾನಂದವನ್ನು ಬಿಂಬಿಸುವ ಈ ಆರಂಭಿಕ ಶಾಸ್ತ್ರೀಯ ನೃತ್ಯ ಪ್ರದರ್ಶನ ಅತ್ಯಂತ ರಮಣೀಯವಾಗಿತ್ತು. ವಿಶೇಷವಾಗಿ ಮೋಹಿನಿಯಾಗಿ ಇಂದ್ರಜ ಅವರ ಪ್ರದರ್ಶನ ಕಣ್ಮನ ಸೆಳೆಯಿತು. ಈ ದೃಶ್ಯದಲ್ಲಿ ಭಗವಾನ್ ಶಿವನು ಸರ್ಪ, ವ್ಯಾಘ್ರ ಮತ್ತು ಅಪಸ್ಮಾರ ಅಸುರರ ವಿರುದ್ಧ ಹೋರಾಡುವ ಪ್ರಮುಖ ಘಟ್ಟದಲ್ಲಿ ಗುರು ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ ಭಗವತ್ ಅವರು ಸ್ವತಃ ಶಿವನ ಪಾತ್ರ ಧರಿಸಿ ಈ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ರೌದ್ರ ಮತ್ತು ಶಾಂತ ರಸಗಳನ್ನು ಅದ್ಭುತವಾಗಿ ಅಭಿನಯಿಸಿದರು. ದಿಗಂಬರನ ಪಾತ್ರ ವಹಿಸಿದ್ದ ಅನಿರುದ್ಧ್ ತಮ್ಮ ಉತ್ಕೃಷ್ಟ ನೃತ್ಯದ ಮೂಲಕ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದರು.

* ಸಂಧ್ಯಾ ತಾಂಡವ: ಸೂರ್ಯಾಸ್ತದ ಪ್ರಶಾಂತ ಹಾಗೂ ಭಕ್ತಿರಸದ ವಾತಾವರಣದಲ್ಲಿ ದೇವಾನುದೇವತೆಗಳ ಮಧ್ಯೆ ಶಿವನು ನರ್ತಿಸುವ ಈ ದೃಶ್ಯವು ಪ್ರೇಕ್ಷಕರಿಗೆ ಸಾಕ್ಷಾತ್ ಕೈಲಾಸದಲ್ಲೇ ಕುಳಿತ ಅನುಭೂತಿ ನೀಡಿತು. ಇದರಲ್ಲಿ ಲಿಖಿತ್ ಕೃಷ್ಣ ಕಿಕ್ಕೇರಿ ಅವರ ಶಿವನ ಪಾತ್ರ ಪ್ರದರ್ಶನವು ಅತ್ಯಂತ ಪ್ರಕಾಶಮಾನವಾದ ಹಾಗೂ ಆಕರ್ಷಕ ಭಾಗವಾಗಿ ಮೂಡಿಬಂದಿತು.

* ಗೌರಿ ತಾಂಡವ: ದಾಕ್ಷಾಯಣಿಯ ಭಕ್ತಿ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ ಈ ತಾಂಡವದಲ್ಲಿ, ಕುಮಾರಿ ಶೃತಿ ಅವರು ‘ಸತಿ’ ದೇವಿಯ ಪಾತ್ರದಲ್ಲಿ, ಪೂಜಾ ಮತ್ತು ವೈಷ್ಣವಿ ಸಹಾಯದಿಂದ,   ಜೀವ ತುಂಬಿ ನೀಡಿದ ‘ಅಗ್ನಿ ನೃತ್ಯ’ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು. ಪ್ರಸೂತಿಯಾಗಿ ಹೇಮಾ, ದಕ್ಷನಾಗಿ ಸಾತ್ವಿಕ್, ಮೃಗವಾಗಿ ಮೈಥಿಲಿ, ಮನ್ಮಥನಾಗಿ ಪ್ರೀತಿಕಾ ಹಾಗೂ ರತಿಯಾಗಿ ಹರ್ಷಿಣಿ ಅವರು ತಮ್ಮ ನೃತ್ಯ ಮತ್ತು ಭಾವಾಭಿನಯ ಎರಡರಲ್ಲೂ ಅತ್ಯುತ್ತಮ ಸಮನ್ವಯತೆಯನ್ನು ಪ್ರದರ್ಶಿಸಿದರು. ಶಿವನಾಗಿ ಅನಿರುದ್ಧ್ ಮತ್ತು ವೀರಭದ್ರನ ಅನುಚರರ ರೌದ್ರ ನೃತ್ಯವು ಮೈ ನವಿರೇಳಿಸುವಂತಿತ್ತು. ವೀರಭದ್ರನಾಗಿ ಪ್ರದ್ಯುಮ್ನ ಅವರ ರಂಗಪ್ರವೇಶವಂತೂ ಸಾಕ್ಷಾತ್ ವೀರಭದ್ರನೇ ಕಣ್ಣೆದುರು ನಿಂತಂತಹ ಭ್ರಮೆ ಹುಟ್ಟಿಸಿತು. ಅವರ ಕಣ್ಣಿನ ಕೆಂಡದಂತಹ ನೋಟ ಮತ್ತು ವೀರಾವೇಶದ ಭಂಗಿಗಳು ಸಭಿಕರನ್ನು ಸ್ತಬ್ದಗೊಳಿಸಿದವು.

* ಉಮಾ ತಾಂಡವ: ಶಿವ ಮತ್ತು ಪಾರ್ವತಿಯರ ದಿವ್ಯ ಪ್ರೇಮದ ಸಂಕೇತವಾದ ಪವಿತ್ರ ಕಲ್ಯಾಣ ಮಹೋತ್ಸವದ ಅದ್ಭುತ ದೃಶ್ಯಾವಳಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಪ್ರಮುಖವಾಗಿ ಪಾರ್ವತಿಯಾಗಿಧ ಮನಸ್ವಿನಿ ಅವರ ಅತ್ಯಂತ ಪ್ರೌಢ ಹಾಗೂ ಮನಮೋಹಕ ಅಭಿನಯವು ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಗಳಿಸಿತು.

* ಕಾಳಿಕಾ ತಾಂಡವ: ದುಷ್ಟ ಸಂಹಾರ ಹಾಗೂ ಆದಿಶಕ್ತಿಯ ರೌದ್ರ ರೂಪದ ಹಿನ್ನೆಲೆಯಲ್ಲಿ ಮೂಡಿಬಂದ ಭೋರ್ಗರೆಯುವ ನೃತ್ಯ ಪ್ರದರ್ಶನವಿದು. ಕಾಳಿಯ ಪಾತ್ರಧಾರಿಯಾಗಿ ಲಾಸ್ಯಪ್ರಿಯಾ ಅವರು ಅಮೋಘ ಪ್ರದರ್ಶನ ನೀಡಿದರು. ಚಿದಂಬರ ಕ್ಷೇತ್ರದಲ್ಲಿ ಕಾಳಿ ಮತ್ತು ಶಿವನ ನಡುವೆ ನಡೆಯುವ ನಾಟ್ಯ ಸ್ಪರ್ಧೆಯ ದೃಶ್ಯದಲ್ಲಿ, ಗುರು ಶ್ರೀಮತಿ ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ ಭಗವತ್ ಅವರು ಪ್ರದರ್ಶಿಸಿದ ಅತ್ಯಂತ ಕಠಿಣವಾದ “ಏಕಪಾದ ನೃತ್ಯ” (ಒಂದು ಕಾಲಿನ ನೃತ್ಯ ಭಂಗಿ) ಪ್ರೇಕ್ಷಕರ ಅಪಾರ ಮೆಚ್ಚುಗೆ ಹಾಗೂ ಚಪ್ಪಾಳೆ ಗಿಟ್ಟಿಸಿತು. ಲಾಸ್ಯಪ್ರಿಯಾ ತಮ್ಮ ತೀಕ್ಷ್ಣ ಅಭಿನಯದಿಂದ ಪಾತ್ರದ ತೂಕವನ್ನು ಹೆಚ್ಚಿಸಿದರು.

* ತ್ರಿಪುರ ತಾಂಡವ: ತ್ರಿಪುರಾಸುರ ಸಂಹಾರದ ಕಥಾನಕವನ್ನು ತೀವ್ರವಾದ ಲಯಬದ್ಧ ಹೆಜ್ಜೆಗಳೊಂದಿಗೆ ರೋಮಾಂಚನಕಾರಿಯಾಗಿ ಮೂಡಿಸಲಾಯಿತು. ರಕ್ಕಸರ ಆರ್ಬಟ ಮತ್ತು ತ್ರಿಪುರಾಸುರನ ಆಗಮನದ ದೃಶ್ಯಗಳನ್ನು ರಂಗಸಜ್ಜಿಕೆಗೆ ತಕ್ಕಂತೆ ಅತ್ಯಂತ ಅಚ್ಚುಕಟ್ಟಾಗಿ ಅಳವಡಿಸಲಾಗಿತ್ತು.

* ಸಂಹಾರ ತಾಂಡವ: ಬ್ರಹ್ಮಾಂಡದ ಲಯ ಹಾಗೂ ಕಾಲದ ಅನಿವಾರ್ಯತೆಯನ್ನು ಪ್ರತಿಪಾದಿಸುವ ರೌದ್ರ ನೃತ್ಯದ ಪರಾಕಾಷ್ಠೆ ಇದು ಹಾಗೂ ಇಡೀ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಭಾಗವಾಗಿತ್ತು. ಮಾರ್ಕಂಡೇಯನ ಪಾತ್ರಧಾರಿ ಬಾಲ ಕಲಾವಿದ ಅಧೋಕ್ಷಜಾ ಈ ಚಿಕ್ಕ ವಯಸ್ಸಿನಲ್ಲೇ ತೋರಿದ ಅತ್ಯಂತ ಭಾವುಕವಾದ ಅಭಿನಯವು ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಯಮನ ಪಾತ್ರದಲ್ಲಿ ಅದಿತಿ ಕಶ್ಯಪ್ ಶಕ್ತಿಯುತ ಅಭಿನಯ ನೀಡಿದರೆ, ಸಂಹಾರ ತಾಂಡವವನ್ನು ನರ್ತಿಸಿದ ಲಾಸ್ಯಪ್ರಿಯಾ ಅವರು ತಾವು ಎಷ್ಟು ಉತ್ತಮ ನರ್ತನ ಪಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಭಾವುಕ ಹಾಗೂ ದಿವ್ಯ ಮುಕ್ತಾಯ

ಕಾರ್ಯಕ್ರಮದ ಕೊನೆಯಲ್ಲಿ ಮೂಡಿಬಂದ ಮಂಗಳ ನಾಟ್ಯವು ಇಡೀ ಸಭೆಯನ್ನು ಲೌಕಿಕ ಪ್ರಪಂಚದಿಂದ ಮರೆಸಿ, ಬೇರೆಯದೇ ಆದ ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುವ ರೀತಿಯಲ್ಲಿ ಅದ್ಭುತವಾಗಿ ಸಂಪನ್ನಗೊಂಡಿತು. ಸಂಪೂರ್ಣ ಕಲಾ ರಸಾಯನ ಉಣಬಡಿಸಿದ ಈ ಭವ್ಯ ಕಾರ್ಯಕ್ರಮವು ಪ್ರೇಕ್ಷಕರ ಕರತಾಡನದೊಂದಿಗೆ ಹಾಗೂ ಭಾರತೀಯ ಸಾಂಪ್ರದಾಯಿಕ ಕಲೆಗಳ ಹಿರಿಮೆಯನ್ನು ಸಾರುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಗುರು ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ ಭಗವತ್ ಅವರ ಉನ್ನತ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಶಿವತಾಂಡವ ನೃತ್ಯ ರೂಪಕವು ಕಲಾಭಿಮಾನಿಗಳ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವಂತಹ ಮಹೋನ್ನತ ಪ್ರದರ್ಶನವಾಗಿದೆ.

Related Articles

Back to top button