ಹೊಸ ಪರಿಚಯ

ಯಕ್ಷಗಾನದಿಂದ ಗವಿಪುರದವರೆಗೆ….

JAGANNATHA HEGDE-GAVI PURA FILM PRODUCER (1)-ಚಿನ್ಮಯ.ಎಂ.ರಾವ್ ಹೊನಗೋಡು

ಮೇಲಿನ ತಲೆಬರಹವನ್ನೋದಿದರೆ ನಿಮಗೆ ತಲೆಬುಡ ಅರ್ಥವಾಗದಿರಬಹುದು. ಯಕ್ಷಗಾನಕ್ಕೂ ಗವಿಪುರಕ್ಕೂ ಎಲ್ಲಿಯ ನಂಟು ಎಂದರೆ ಅದಕ್ಕುತ್ತರ ಗವಿಪುರ ಬೆಂಗಳೂರಿನ ಒಂದು ಏರಿಯಾ. ಆ ಏರಿಯಾದಲ್ಲಿ ನಡೆಯುವ ಒಂದು ಕಥೆಯನ್ನಿಟ್ಟುಕೊಂಡು ಮೊದಲ ಬಾರಿ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ…ಈ ಅಪ್ಪಟ ಯಕ್ಷಗಾನಪ್ರೇಮಿ. ಹಾಗಾದರೆ “ಗವಿಪುರ” ಚಿತ್ರ ಯಕ್ಷಗಾನದ ಎಳೆಯನ್ನಿಟ್ಟುಕೊಂಡು ತೆಗೆದ ಚಿತ್ರವೇ? ಎಂದರೆ ಹಾಗೇನಿಲ್ಲ. ತನ್ನ ಎರಡು ಜನ ಜೀವದ ಗೆಳೆಯರಿಗೆ ಅನುಕೂಲ ಮಾಡಿಕೊಡೋಣವೆಂದು ಶಿರಸಿ ಮೂಲದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ…ಯಕ್ಷಗಾನಪ್ರೇಮಿ ಜಗನ್ನಾಥ ಹೆಗಡೆ ಗವಿಪುರ ಚಿತ್ರವನ್ನು ನಿರ್ಮಿಸಿದ್ದಾರೆ.

JAGANNATHA HEGDE-GAVI PURA FILM PRODUCER (2)ಶಿರಸಿಯ ಸಮೀಪದ ಸಿಂಗನಮನೆಯ ಜಗನ್ನಾಥ್ ಹೆಗಡೆ ಸಾಗರದ ಸಂಜಯ್ ಮೆಮೋರಿಯಲ್ ಕಾಲೇಜಿನಲ್ಲಿ ಡಿಪ್ಲಮೋ ಇನ್ ಮೆಕಾನಿಕಲ್ ಎಂಜಿನಿಯರ್ ಮಾಡಿ ೧೯೯೫ರಲ್ಲಿ ಬೆಂಗಳೂರಿಗೆ ಪಾದಾರ್ಪಣೆ ಮಾಡಿದವರು. ಹೆಚ್.ಎಮ್.ಟಿ ಯಲ್ಲಿ ತರಬೇತಿ ಪಡೆದು ಕೆಲಸಕ್ಕೆ ಸೇರಿದ ಆರಂಭದಲ್ಲೇ ರಿಯಲ್ ಎಸ್ಟೇಟ್ ದಂಧೆಗೂ ಇಳಿದ ಹೆಗಡೆ ಅವರಿಗೆ ಆ ಉದ್ಯಮದಲ್ಲಿ ಲಕ್ ತಿರುಗಿ ಲಕ್ಷ್ಮಿ ಕೈ ಹಿಡಿದಳು ! ಹಣ ಕೈಸೇರಿತು. ಆದರೆ ಯಕ್ಷಗಾನದ ತಾರೆ ಕಾಳಿಂಗ ನವಡ ಅವರಿಂದ ಸ್ಪೂರ್ತಿಗೊಂಡು ಶಾಲಾ ಕಾಲೇಜು ದಿನಗಳಲ್ಲೇ ವೇಷ ಕಟ್ಟಿಕೊಂಡು ಆವೇಶಭರಿತನಾಗಿ ಹೆಜ್ಜೆ ಹಾಕುತ್ತಿದ್ದ ಕಲಾಭಿಮಾನಿ ಹೆಗಡೆ ಹಲವಾರು ಯಕ್ಷಗಾನದ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸಿದರು. ಯಕ್ಷಗಾನದ ಕಲಾವಿದರನ್ನು ಹುರಿದುಂಬಿಸಿದರು. ಹಾಗಾಗಿ ಅವರ ಬಳಿ ಇದ್ದ ಧನಲಕ್ಷ್ಮಿ ಕಲಾಸರಸ್ವತಿಯ ಸೇವೆಗೆ ಮುಡಿಪಾಗಿ ಸಾರ್ಥಕವಾಯಿತು.

JAGANNATHA HEGDE-GAVI PURA FILM PRODUCER (5)ಈಗ ಅದರ ಮುಂದುವರೆದ ಭಾಗವಾಗಿ ಚಿತ್ರನಿರ್ಮಾಣಕ್ಕೂ ಕೈ ಹಾಕಿ ಕನ್ನಡ ಚಿತ್ರಜಗತ್ತಿಗೆ ಕಾಲಿಟ್ಟಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕೆಂಬ ಉತ್ಸಾಹದಲ್ಲಿರುವ ಹೆಗಡೆ ಚಿತ್ರೋದ್ಯಮದಿಂದ ಕೇವಲ ಹಣ ಮಾಡಬೇಕೆನ್ನುವ ಉದ್ದೇಶಕ್ಕಿಂತ ಹೊಸ ಪ್ರತಿಭೆಗಳನ್ನು ಗಾಂಧಿನಗರಕ್ಕೆ ಪರಿಚಯಿಸಿ ಅವರನ್ನೆಲ್ಲಾ ನೆಲೆ ನಿಲ್ಲಿಸಬೇಕೆಂಬ ಮಹದಾಸೆ. ಅದರ ಫಲಿತಾಂಶವಾಗಿ …ಮೊದಲ ಪ್ರಯತ್ನವಾಗಿ..”ಗವಿಪುರ” ಎಂಬ ಅದ್ಧೂರಿ ಚಿತ್ರದ ಮೂಲಕ ಸೂರಜ್ ಸಾಸನೂರ್ ಹಾಗು ಸೌಜನ್ಯ ಎಂಬ ಹೊಸ ನಾಯಕ-ನಾಯಕಿಯನ್ನು ಕನ್ನಡ ಚಿತ್ರಪ್ರೇಮಿಗಳ ಮುಂದೆ ತಂದು ನಿಲ್ಲಿಸಿದ್ದಾರೆ. ಸೆನ್ಸಾರ್ ಮಂಡಳಿಯ ಪ್ರಶಂಸೆಗೆ ಪಾತ್ರವಾದ “ಗವಿಪುರ” ಜನವರಿಯಲ್ಲಿ ಥಿಯೇಟರ್‌ಗಳಿಗೆ ಲಗ್ಗೆ ಇಡುವುದಷ್ಟೇ ಇನ್ನು ಬಾಕಿ.

JAGANNATHA HEGDE-GAVI PURA FILM PRODUCER (3)ದುರಾದೃಷ್ಟವೆಂದರೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಮೇಲೆ ಮಾತ್ರ ಹಣ ಹಾಕಿ ಸಿನಿಮಾ ಮಾಡುವವರು ವೃತ್ತಿಪರ ನಿರ್ಮಾಪಕರೆನಿಸಿಕೊಂಡಿದ್ದಾರೆ. ಅದೇ ನೆರೆ ರಾಜ್ಯಗಳಲ್ಲಿ ಹೆಸರು ಮಾಡಿದ ನಿರ್ಮಾಪಕರು ಹೆಸರು ಮಾಡದವರ ಮೇಲೂ ಹಣ ಹಾಕುವ ರಿಸ್ಕ್ ತೆಗೆದುಕೊಂಡು ಗೆಲ್ಲುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಅವರಿಗೆ ಹೆಸರು ಬರುವಂತೆ ನೋಡಿಕೊಂಡು ತಾವೂ ಹೆಸರು ಗಳಿಸುತ್ತಾರೆ. ನಮ್ಮಲ್ಲೂ ಎಕ್ಸ್ ಕ್ಯೂಸ್ ಮಿ ನಿರ್ಮಾಪಕ ಎಮ್.ಎನ್ ಸುರೇಶ್ ಅಂಥವರೂ ಬರೀ ಹೊಸಬರಿಗೆ ಅವಕಾಶ ಕೊಡುತ್ತಾ ಗೆದ್ದಿದ್ದಾರೆ..ಗೆಲ್ಲಿಸುತ್ತಿದ್ದಾರೆ. ಜಗನ್ನಾಥ ಹೆಗಡೆ ಕೂಡ ಅಂಥಹವರ ಸಾಲಿಗೆ ಸೇರುವಂತಾದರೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನಬಹುದು.

ಗವಿಪುರ ಚಿತ್ರ ಗೆಲ್ಲುವಂತಾಗಲಿ. ಜಗನ್ನಾಥ ಹೆಗಡೆ ಅವರಿಂದ ಕನ್ನಡ ನಾಡಿನಲ್ಲಿರುವ ಹಲವಾರು ಉತ್ತಮ ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ.

-ಚಿನ್ಮಯ.ಎಂ.ರಾವ್ ಹೊನಗೋಡು

14-12-2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.