ವಿಚಾರಲಹರಿ

ವ್ಯಕ್ತಿತ್ವದ ಪ್ರಗತಿಗೆ ಆತ್ಮವಿಶ್ವಾಸದ ಬುನಾದಿ

-ಅನುಷಾ ಗೋಪಾಲಕೃಷ್ಣ

ಕ್ರಿಸ್ತಪೂರ್ವ ೪೦೦ ರ ಕಾಲದಲ್ಲಿ ಅಥೆನ್ಸ್ ರಾಜ್ಯದ ಬೀದಿಗಳಲ್ಲಿ ತನ್ನ ಊರಿನಿಂದ ಬಹಿಷ್ಕೃತಗೊಂಡು ಬಂದ ವ್ಯಕ್ತಿಯೊಬ್ಬ ಎಲ್ಲಂದರಲ್ಲಿ ಸುತ್ತಾಡುತ್ತ , ಏನಂದರದು ತಿನ್ನುತ್ತಾ , ಬೀದಿಬದಿ ಇರಿಸಿದ ದೊಡ್ಡ ಕೊಳವೆಗಳಲ್ಲಿ ಮಲಗಿ ಜೀವನ ನಡೆಸುತ್ತಿದ್ದ.

ಆಗಿನ ಕಾಲದಲ್ಲಿ ಆ ಊರಲ್ಲಿ ಮನುಷ್ಯರನ್ನು ಹಿಡಿದು ಮಾರುಕಟ್ಟೆಗಳಲ್ಲಿ ಜೀತದಾಳಾಗಿ ಮಾರಲಾಗುತ್ತಿತ್ತು. ಹೀಗೆ ಸಾಮಾನ್ಯ ಜನರನ್ನು ಗುಲಾಮರನ್ನಾಗಿ ಮಾಡುವ ವ್ಯಾಪಾರದಲ್ಲಿದ್ದ ಹಲವು ವರ್ತಕರ ಕಣ್ಣು ಇವನ ಮೇಲೆಯೂ ಬಿತ್ತು. ನಾಲ್ಕು ಜನ ವರ್ತಕರ ಗುಂಪು ಹೇಗಾದರು ಮಾಡಿ ಈ ವ್ಯಕ್ತಿಯನ್ನು ಹಿಡಿಯಬೇಕು , ದೈಹಿಕವಾಗಿ ಸದೃಢನಾದ ಈ ಆಳನ್ನು ಮಾರಿದರೆ ಒಳ್ಳೆಯ ಲಾಭ ಬರುವುದೆಂದು ನಿಶ್ಚಯಿಸಿದರು. ಆದರೆ ಅಷ್ಟೊಂದು ಧೃಢಕಾಯನಾದ ಈ ವ್ಯಕ್ತಿಯನ್ನು ತಾವು ನಾಲ್ಕೇ ಜನರಿಂದ ಹಿಡಿಯಲಾಗುವುದಿಲ್ಲವೆಂದು ಅವರಿಗೆ ಮನವರಿಕೆಯಾಗಿತ್ತು. ಅವನೊಬ್ಬನೇ ತಮ್ಮೆಲ್ಲರನ್ನು ಕೊಲ್ಲಲೂ ಬಹುದೆಂಬ ಭಯ ಪಟ್ಟರು. ಅಪಹರಿಸಲು ಅವನು ಮಲಗುವ ಕೊಳವೆಯ ಬಳಿ ಇರುವ ಪೊದೆಗಳಡಿ ಅವಿತುಕೊಂಡು ಅವನು ಮಲಗುವರೆಗೂ ಕಾಯುವುದಾಗಿ ಸಂಚು ಮಾಡಿದರು. ಇವರ ಸಂಭಾಷಣೆ ಕೇಳಿಸಿಕೊಂಡ ಆ ವ್ಯಕ್ತಿ “ಮೂರ್ಖರಂತೆ ವರ್ತಿಸಬೇಡಿ. ನಿಮಗೇನು ಬೇಕೋ ಕೇಳಿ ನಾನಂತೂ ಗುಲಾಮನಾಗಿ ಬದುಕುವ ಮನುಷ್ಯನೇ ಅಲ್ಲವಾದರು ನಿಮ್ಮನು ನೋಡಿ ನನಗೆ ಅಯ್ಯೋ ಅನಿಸುತ್ತಿದೆ. ನಡೀರಿ ಅದೆಲ್ಲಿ ಹೋಗಬೇಕೋ ನಾನೇ ಬರುವೆ” ಎಂದು ಸರಳವಾಗಿ ಒಪ್ಪಿಕೊಂಡನು. ಸಂತಸಗೊಂಡ ವರ್ತಕರ ಗುಂಪು ಅವನನ್ನು ಮಾರುಕಟ್ಟೆಯಡಿ ಕರೆದೊಯ್ದರು. ಅಪಹರಿಸಿಕೊಂಡು ಹೋಗಬೇಕಾದವರೇ ಹಿಂಬಾಲಿಸಿ ನಡೆದಂತೆ ಕಾಣಿಸುತ್ತಿತ್ತು.

ವ್ಯಾಪಾರಿಗಳು ಹರಾಜುಗಾರನ ಬಳಿ ಹೋಗಿ ವಿಷಯ ತಿಳಿಸಿದರು. ಹರಾಜು ಪ್ರ್ರಾರಂಭವಾಗುತ್ತಿದಂತೆಯೇ ಸಭಾಂಗಣದಲ್ಲಿ ನಿರ್ಮಿಸಿದ ವೇದಿಕೆಯ ಮೇಲೆ ನಿಂತು ಆ ವ್ಯಕ್ತಿ ಗಟ್ಟಿ ಧ್ವನಿಯಲ್ಲಿ “ಯಜಮಾನ ಮಾರಾಟಕ್ಕಿದ್ದಾನೆ . ನಿಮ್ಮಲ್ಲಿ ಕೊಂಡುಕೊಳ್ಳುವ ಗುಲಾಮರು ಯಾರಾದರು ಇದ್ದರೆ ಮುಂದೆ ಬನ್ನಿ” ಎಂದು ಘೋಷಿಸಿಕೊಂಡನು. ಆ ಮಾತುಗಳಿಂದ ನಿಬ್ಬೆರಗಾದ ಜನಸಮೂಹ ಮೌನದಿಂದ ಅವನನ್ನು ನೋಡುತ್ತದೆ. ಅಷ್ಟರಲ್ಲೆ ಒಬ್ಬ ರಾಜ ಮುಂದೆ ಬಂದು “ನಿನ್ನನ್ನು ಕೊಂಡುಕೊಳ್ಳುವುದಾದರೆ ನಿನ್ನ ಬೆಲೆ ಎಷ್ಟು ಹೇಳು” ಎಂದು ಕೇಳುತ್ತಾನೆ. “ನನ್ನ ಜೀವನಕ್ಕೆ ಬೆಲೆಕಟ್ಟಲಾಗುವುದಿಲ್ಲ …ಆದರೂ ನಿನಗೇನು ಕೊಡುವುದಿದೆಯೋ ನನ್ನನ್ನು ಇಲ್ಲಿ ಕರೆತಂದ ಆ ಬಡಪಾಯಿ ನಾಲ್ಕು ಜನರಿಗೆ ಕೊಡು. ಇವರ ಜೀವನ ನೋಡಿ ನನಗೆ ಕನಿಕರ ವಾಗುತ್ತದೆ” ಎಂದು ವ್ಯಂಗ್ಯವಾಗಿ ಹೇಳುತ್ತಾನೆ. ರಾಜ ಆ ನಾಲ್ಕು ಜನರಿಗೆ ಹಣ, ಸಂಪತ್ತುಗಳ ಕೊಟ್ಟು ಆ ವ್ಯಕ್ತಿಯನ್ನು ತನ್ನ ರಾಜ್ಯಕ್ಕೆ ತನ್ನ ಅರಮನೆಗೆ ಕರೆದೊಯ್ಯುತ್ತಾನೆ. ಆ ವ್ಯಕ್ತಿಯ ನಿರ್ಭಯತೆ, ನೇರನುಡಿ, ಆ ಕ್ಷಣಕ್ಕೆ ಗುಲಾಮನಾಗಿಯೇ ನಿಂತಿದ್ದರೂ, ಯಾವ ಬೇಡಿಕೆಗಳನ್ನೂ ಇಡಬಹುದಾದ ಪರಿಸ್ಥಿತಿಯಲ್ಲಿ ಸರ್ವತಹ ಇರದಿದ್ದರೂ, ತನ್ನ ಮೇಲೆ ತಾನಿಟ್ಟ ನಂಬಿಕೆ, ಗಟ್ಟಿ ವ್ಯಕ್ತಿತ್ವಕ್ಕೆ ಮೆಚ್ಚಿದ ರಾಜ, ಅವನನ್ನು ಕೊಂಡುಕೊಂಡು ಗುಲಾಮನಾಗಿ ಪರಿಗಣಿಸದೆ ತನ್ನ ಮಕ್ಕಳನ್ನ , ಜನರನ್ನು ಬೋಧನೆ ಮಾಡಿಸುವಂತಹ ಅನೇಕ ಒಳ್ಳೆಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾನೆ. ಒಬ್ಬ ಮನುಷ್ಯನಿಗೆ ಪರಿಪೂರ್ಣ ಪ್ರೇರಣೆ ಯಾಗುವುದು ಸ್ವಹಿತಾಸಕ್ತಿಯಿಂದಲೆ. ಆತ್ಮ ಸಂಯಮ , ತನ್ನ ನಡುವಳಿಕೆಗಿರಬೇಕಾದ ಸ್ವಾತಂತ್ರ , ಸ್ವಾವವಲಂಬಿಯಾಗಿರುವುದರ ಮಹತ್ವಗಳನ್ನು ನಂಬುತ್ತಿದ್ದ ಮತ್ತು ಹಾಗೆಯೇ ಬದುಕಿದ ಈ ವ್ಯಕ್ತಿ ಗ್ರೀಕ್ ನ ಶ್ರೇಷ್ಠ ತತ್ವಜ್ಞಾನಿ, ಸಿನಿಕ್ ತತ್ವಜ್ಞಾನವನ್ನು ಬದುಕಿ ಪ್ರಸಿದ್ಧಗೊಳಿಸಿದ ‘ ಡಿಯೋಜೆನಿಸ್ ‘ .

ಇತಿಹಾಸದಲ್ಲಿನ ಈ ತರಹದ ಕಥೆಗಳಿಗೆ ಅನೇಕ ಆಯಾಮಗಳಿರುತ್ತವೆ ಹಲವಾರು ಉಲ್ಲೇಖಗಳಲ್ಲಿ ಹಲವಾರು ರೀತಿಯಲ್ಲಿ ವಿವರಿಸಲಾಗಿರುತ್ತದೆ. ವಾಸ್ತವದಲ್ಲಿ ಅದರ ನೈಜ್ಯ ನಿಖರತೆ ಅರಿಯುವುದು ಒಂದು ಕಡೆ ಆದರೆ ಅನೇಕ ರೀತಿಯ ಕಥೆಗಳಲ್ಲಿನ ಸಕಾರಾತ್ಮಕತೆಯನ್ನು ಗ್ರಹಿಸುವುದು ಮುಖ್ಯವಾಗುತ್ತದೆ. ಇಲ್ಲಿ ಡಿಯೋಜೆನಿಸ್ ಗೆ ಈ ಸನ್ನಿವೇಶದಿಂದ ದಿನಬೆಳಗಾದರೆ ಹಿಂಬೀಳುವ ವರ್ತಕರಿಂದ ಮುಕ್ತಿ ಸಿಕ್ಕಂತಾದದ್ದು ಕೇವಲ ಅವನ ಬಲಶಾಲಿಯಾದ ದೈಹಿಕ ಸಾಮರ್ಥ್ಯದಿಂದಲ್ಲ ಹೊರತಾಗಿ ರಾಜಯೋಗ ವಿಲ್ಲದಿದ್ದರು ತನ್ನ ಮಟ್ಟಿಗೆ ತಾನು ರಾಜನಂತೆಯೇ ಇರಬಲ್ಲೆನೆಂಬ ಅದಮ್ಯ ಆತ್ಮವಿಶ್ವಾಸ.

ಜೀವನ ನಮ್ಮಿಂದ ಯಾವ ಉದ್ಯೋಗ ಮಾಡಿಸಿಕೊಂಡರು, ಯಾವ ಪರಿಸ್ಥಿತಿಗಳನ್ನು ಅನುಭವಿಸಲೇ ಬೇಕಾಗಿ ಮಾಡಿದರು ನಮ್ಮ ವ್ಯಕ್ತಿತ್ವಗಳಲ್ಲಿನ ರಚನಾತ್ಮಕ ಅಂಶವನ್ನು ಬಳಸಿಕೊಳ್ಳಲು ಒಂದು ಜಾಗ ಇಟ್ಟೇ ಇರುತ್ತದೆ . ನಮ್ಮಲ್ಲಿ ನಾವಿಟ್ಟ ನಂಬಿಕೆಗೆ ಇತರರ ಪ್ರೇರಣೆ ಸಿಕ್ಕರಂತೂ ಜೀವನವೇ ಹಬ್ಬ. ನಮ್ಮಲ್ಲಿದ್ದ ಸಾಮರ್ಥ್ಯ ಪ್ರದರ್ಶನವಾದಾಗಾ ಅದರಲ್ಲಿರುವ ಒಳಿತನ್ನು ಗುರುತಿಸುವ ಸಮರ್ಥ ರಾಜನೊಬ್ಬ ಇದ್ದೆ ಇರುತ್ತಾನೆ. ಅಲ್ಲಿಗೆ ನಾವು ನಮಗಾಗಿ ರೂಪಿಸಿಕೊಂಡ ಅದ್ಭುತ ವ್ಯಕ್ತಿತ್ವವು ಅಹಂಕಾರ, ಅತಿ ಆಸೆಗಳೆಡೆಗೆ ಹರಿದು ಹೋಗದಂತೆ ನಿಯಂತ್ರಿಸಿಕೊಳ್ಳುವುದೇ ಜೀವನದ ಒಂದು ಹಿತಕರ ಕೌಶಲ್ಯ. ನಮ್ಮಲ್ಲಿ ನಂಬಿಕೆ ಇಟ್ಟ ರಾಜನೀಗೂ ಮೋಸವಾಗಬಾರದಲ್ಲವೇ…

-ಅನುಷಾ ಗೋಪಾಲಕೃಷ್ಣ

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker