ನೃತ್ಯ

ಕಲಾಜಗತ್ತಿನ ಅವಿರತ ಕಲಾವಿದೆ ಪೂರ್ಣಿಮ ರಜಿನಿ

ಬೆಳೆದು ಬಂದ ದಾರಿಯ ನೋಟ
ಸಾಹಿತ್ಯ ಮತ್ತು ಸಂಗೀತದ ಹಿನ್ನೆಲೆಯುಳ್ಳ ಮಧ್ಯಮವರ್ಗದ ಅವಿಭಕ್ತ ಕುಟುಂಬದಲ್ಲಿ ಶ್ರೀಯುತ ಶೇಷಾದ್ರಿ ಮತ್ತು ಶ್ರೀಮತಿ ಪ್ರೇಮ ಶೇಷಾದ್ರಿ ಅವರಿಗೆ ಮೂರನೇ ಹೆಣ್ಣು ಮಗುವಾಗಿ ಪೂರ್ಣಿಮಾ ರಜನಿಯವರು ಬೆಂಗಳೂರಿನಲ್ಲಿ ಜನಿಸಿದರು.
ಬಾಲ್ಯದಲ್ಲಿ ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ಪೂರ್ಣಿಮಾರವರಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಅತೀ ಚಿಕ್ಕ ವಯಸ್ಸಿನಲ್ಲಿಯೇ ತಾತನ ಪ್ರಭಾವದಿಂದ ಪ್ರತಿನಿತ್ಯ ಮನೆಯಲ್ಲಿ ಸಂಸ್ಕೃತ ಶ್ಲೋಕವನ್ನು ಹೇಳುವುದು ಮತ್ತು ರಾಮಾಯಣದ ಕಥೆಗಳನ್ನು ಓದುವುದು ಪರಿಪಾಠವಾಗಿತ್ತು. ಅಂತೆಯೇ ತಾಯಿ ಮತ್ತು ಚಿಕ್ಕಮ್ಮನವರ ಒತ್ತಾಸೆಯಂತೆ ಸಂಗೀತಾಭ್ಯಾಸ ಮೈಗೂಡಿಸಿಕೊಂಡಿದ್ದರು. ಪ್ರಾಚೀನ ಪರಂಪರೆ ಮತ್ತು ಉತ್ತಮ ಸಂಸ್ಕಾರದ ಫಲವಾಗಿ ಪ್ರತಿ ಭಾನುವಾರದಂದು ರಾಮಕೃಷ್ಣ ಆಶ್ರಮದ ಶಾರದಾ ಬಾಲಿಕ ಮಂಡಳಿಯಲ್ಲಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12ರವರೆಗೆ ನಡೆಯುವ ಭಜನೆ, ಧ್ಯಾನ , ಸಂಸ್ಕೃತ ಶ್ಲೋಕ ಪಾಠ , ಸಂಗೀತ, ಯೋಗ ಮತ್ತು ನೃತ್ಯಾಭ್ಯಾಸ ಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು.
ಶೈಕ್ಷಣಿಕ ಕ್ಷೇತ್ರದ ಹೆಜ್ಜೆ
ಶಾಲಾ ದಿನಗಳಲ್ಲಿ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಪೂರ್ಣಿಮ ರವರಿಗೆ ಓದಿನ ಬಗೆಗಿನ ಶ್ರದ್ಧೆಯು ಅಪಾರವಾಗಿತ್ತು. ಅತ್ಯುತ್ತಮ ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದ ಇವರನ್ನು ಕಂಡರೆ ಶಿಕ್ಷಕರಿಗೆ ಅಚ್ಚುಮೆಚ್ಚು. ಈ ಕಾರಣದಿಂದಾಗಿಯೇ ಇವರು ಕಲಾಪ್ರದರ್ಶನದಲ್ಲಿ ಮಾಸ್ಟರ್ಸ್ ಡಿಗ್ರಿ, ಭರತನಾಟ್ಯ ಕಲೆಯಲ್ಲಿ ವಿದ್ವತ್ತನ್ನು, ಕಲ್ಕತ್ತಾದ IIM ಕಾಲೇಜಿನಿಂದ ಮಹಿಳಾ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿಯನ್ನು ಪಡೆದ ಏಕೈಕ ನೃತ್ಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮಾಸ್ಟರ್ಸ್ ಇನ್ ಮೈಕ್ರೋಬಯಾಲಜಿ ಶಿಕ್ಷಣವನ್ನು ಪಡೆದಿರುತ್ತಾರೆ.
ನೃತ್ಯದ ಬಗೆಗಿನ ಒಲವು, ಆಸಕ್ತಿ
ಓದಿನ ಕಡೆಗಿನ ಆಸಕ್ತಿಯ ಜೊತೆಜೊತೆಗೆ ಪೂರ್ಣಿಮಾರವರು ಒಂದೆಡೆ ಕುಳಿತು ಸಮಯ ಕಳೆಯುವುದಕ್ಕೆ ಹರಸಾಹಸ ಪಡಬೇಕಿತ್ತು. ಹೀಗೆ ಶಾಲಾದಿನಗಳಲ್ಲಿ ತಮ್ಮ ಏಳನೇ ವಯಸ್ಸಿಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಮ್ಮ ಸ್ನೇಹಿತೆಯ ನೃತ್ಯಭಂಗಿ ಗಳಿಗೆ ಮನಸೋತು ತಾವು ಸಹ ನೃತ್ಯದಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು. ತಾಯಿಯವರ ಪ್ರೋತ್ಸಾಹದಿಂದ ತಮ್ಮ ಮೊದಲ ಗುರು ನಾಟ್ಯ ಸರಸ್ವತಿ ಶ್ರೀಮತಿ ರಾಧಾ ಶ್ರೀಧರ್ ಅವರಲ್ಲಿ ಶಾಸ್ತ್ರೀಯ ನೃತ್ಯವನ್ನು ಅಭ್ಯಾಸಮಾಡಿದರು. ಮುಂದಿನ ದಿನಗಳಲ್ಲಿ ಪದ್ಮಶ್ರೀ ಆನಂದ್ ಶಂಕರರಿಂದ ಮತ್ತು ಶ್ರೀಮತಿ ನರ್ಮದಾ ರವರಿಂದ ನಟುವಾಂಗ ಅಭ್ಯಸಿಸಿದರು. ಜೊತೆಯಲ್ಲಿಯೇ ಪಂದನಲ್ಲೂರ್ ಮತ್ತು ಕಲಾಕ್ಷೇತ್ರ ಶೈಲಿಯಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇಷ್ಟೇ ಅಲ್ಲದೆ ಕರ್ನಾಟಕ ಸಂಗೀತವನ್ನು ಸಂಗೀತ ಗುರು ಜಾನ್ಹವಿ ಪ್ರಕಾಶ್ ರವರಲ್ಲಿ ಪಡೆದಿರುತ್ತಾರೆ.
ಇಷ್ಟೆಲ್ಲಾ ಕೆಲಸಕಾರ್ಯಗಳ ನಡುವೆ ಪೂರ್ಣಿಮ, ಭಾವಜೀವಿಯೂ ಹೌದು ಎಂದರೆ ತಪ್ಪಾಗಲಾರದು.ನಿರಂತರವಾಗಿ ತಾವು ಏನಾದರೊಂದು ಕೆಲಸ ಮಾಡುತ್ತಲೇ ಇರಬೇಕೆನ್ನುವ ಪೂರ್ಣಿಮ….ನಿಜಕ್ಕೂ ತಮ್ಮ ಸಾಮರ್ಥ್ಯ ಮೀರಿ ಎಲ್ಲಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಯುವ ಜನಾಂಗಕ್ಕೆ ಮಾದರಿ.
ಪೂರ್ಣಿಮ ಅವರ ಮುಂದಿನ ಎಲ್ಲ ಯೋಜನೆಗಳು ಸಫಲವಾಗಿ ನೆರವೇರಲಿ ಎಂಬುದು ನಮ್ಮ ಆಶಯ…ನೃತ್ಯ ಗುರುವಾಗಿ ಕಲಾ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿ ತಮ್ಮ ಸೇವೆಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ಬಡವರ ಸಾಮಾಜಿಕ, ಆರ್ಥಿಕ ಉನ್ನತೀಕರಣಕ್ಕಾಗಿ ಮಾರ್ಗದರ್ಶನವನ್ನು ನೀಡಿ ಹಗಲಿರುಳು ಶ್ರಮಿಸುತ್ತಿರುವ ಇವರ ಪರಿ ಶ್ರಮ ನಿಜಕ್ಕೂ ಶ್ಲಾಘನೀಯ.
ಇವರ ಕಲಾಸೇವೆ, ಕಲಾ ಹಸಿವನ್ನು ಬಗೆ ಹರಿಸುತ್ತಿರುವ ರೀತಿ ಒಬ್ಬ ಗುರುವಾಗಿ, ಮಾನವತೆಯ ಮೂರ್ತರೂಪವಾಗಿ ರುವ ಪೂರ್ಣಿಮಾ ರಜನಿಯವರ ಸಾಧನೆಯು ಇನ್ನಷ್ಟು ಉತ್ತುಂಗಕ್ಕೇರಲಿ. ಯಶಸ್ಸಿನ ಹಾದಿ ಅನ್ಯರಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇವೆ.
-Sandhya Ajay Kumar
July-19-2020

Back to top button

Adblock Detected

Please consider supporting us by disabling your ad blocker