ಕವಿತೆ-14 : ಓ ನನ್ನ ಮನಸೇ..

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಚಿತ್ರ-ಕವನ : ಡಾ.ಚಿನ್ಮಯ ಎಂ.ರಾವ್

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ತಿಳಿಯಾಗು ಮನಸೇ…

ತಿಳಿತಿಳಿದೂ ತಿಳಿಯದಂತೆ ವರ್ತಿಸುವೆಯಲ್ಲ

ಒಳಿತಿಳಿಸಿಕೊಳ್ಳುವ ಸಂಸ್ಕಾರವಿಲ್ಲವೆ?! ನಿನಗೆ…

 

ವರ್ತನೆಗಳ ಪರಿವರ್ತಿಸು ಮನಸೇ…

ಚಿಂತನೆಗಳ ಸಂವರ್ಧಿಸು ಮನಸೇ…

ಸಾಧನೆಗಳ ಮುಡಿಗೇರಿಸಿಕೊಳ್ಳುವಂತೆ

ಯಾತನೆಗಳ ಬಡಿದಟ್ಟುವಂತೆ

ನಿಂದನೆಗಳ ರೂಢಿಸಿಕೊಳ್ಳದಂತೆ

ನೀನಿರು… ತಿಳಿಯಾದ ನೀರಂತೆ

 

ಮಾತಿಗಿಂತ ಮೌನ ಸುಖವಂತೆ

ಧ್ಯಾನದಾನಂದವನ ಆಸ್ವಾದಿಸುವಂತೆ

ರಾಗದಲ್ಲಿ ಲೀನವಾದ ಅನುರಾಗದಂತೆ

ಹಂಸಧ್ವನಿರಾಗದಲಿ ಅನಾಹತಧ್ವನಿಯಾಗಿ…

ಮೌನಸುಖಕ್ಕೆ ದನಿಗೂಡಿಸು ಮನಸೇ…

 

ಓ ನನ್ನ ನಿಗೂಢ ಮನಸೇ…

ಆತ್ಮಾನಂದ ನಿಗೂಢವಲ್ಲ…

ನೀನದರ ಗೂಡಸಹಿಹದಲ್ಲೆಲ್ಲೊ ಇರುವೆ…

ಗೂಡ ಶೋಧಿಸಿ ಗುಡಿಯಾಗಿಸು ಮನಸೇ…

ನೀ ಮಂದಿರವಾಗಿ ಸುಂದರವಾಗು ಮನಸೇ..

 

ಚಿತ್ರ-ಕವನ : ಚಿನ್ಮಯ ಎಂ ರಾವ್ (2005)

 

Exit mobile version