ಕವಿತೆ-15 : ಭಾವ ಬಾನಾಡಿ

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

– ಡಾ.ಚಿನ್ಮಯ ಎಂ.ರಾವ್

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ರೆಕ್ಕೆ ಬೀಸದೇ ಬಾನಲ್ಲಿ ಸಂಚರಿಸುವ ಹಕ್ಕಿ ನಾ

ನಿಮ್ಮಾನ್ವೇಷಣೆ ಜನನ ಮರಣಗಳಿಗೆ ನೀವೇ ಹೊಣೆ

ಸಾಕಿದಿರೆನ್ನ ನಿಮ್ಮನ್ನು ಹಾರಾಡಿಸಲಿಕ್ಕೆ

ದೀನಾರ್ಧದಲಿ ಬೇರೆ ನಾಡಿಗೆ ಸಾಗಿಸುವುದಕ್ಕೆ

ಕ್ಷಣಾರ್ಧದಲಿ ಬೇರೆ ಲೋಕಕ್ಕೂ ಸಾಗಿಸಬಲ್ಲೆ

ನನ್ನ ಜೀವ ನಿಮ್ಮ ಕೈಯ್ಯಲ್ಲಿ

ನಿಮ್ಮ ಜೀವ ನನ್ನ ಕೈಯ್ಯಲ್ಲಿ ||

 

ನಾ ನಿಮ್ಮ ಜವಾನ ಕಾಯ್ದರೆ ನನ್ನ ಜೋಪಾನ

ಬೇಡ ನನ್ನ ಕರ್ತವ್ಯದ ಮೇಲೆ ಅನುಮಾನ

ನಿಮ್ಮ ತಾತ್ಸಾರಕ್ಕೆ ನಾನನುಭವಿಸಬೇಕು ಅಪಮಾನ

ಕೆಡಿಸಿದರೆ ನನ್ನಾರೋಗ್ಯ ನಿಮ್ಮದೇ ದೌರ್ಭಾಗ್ಯ

ಎಲ್ಲೆಲ್ಲೋ ಎನ್ನ ಕೆಡಗಿ ನಾ ಬೆಂದು ಹೋಗಲು

ನೀವು ಕಾರಣರಾಗಿ ಕೊಲ್ಲಬೇಡಿ ನನ್ನಾಮೂಲ್ಯ ಜೀವನ

ನನ್ನ ಜೀವ ನಿಮ್ಮ ಕಾಳಜಿಯಲ್ಲಿ

ನಿಮ್ಮ ಜೀವ ನನ್ನ ನಿಷ್ಠೆಯಲ್ಲಿ ||

 

ಎರಡಲ್ಲ ಸುಮಾರು ಕಣ್ಣುಗಳೆನಗೆ

ನೂರಾರು ನಾಡುಗಳ ಸುತ್ತುತ್ತಾ ಇಳೆಯಂದವ

ನಿತ್ಯ ಸವಿವ ನಾನು ನಿಜಕ್ಕೂ ವಿಶ್ವಮಾನವ

ಎಲ್ಲೆಲ್ಲೂ ಇಳಿಯುವಾಗೆನಗೆ ಕಾಳಜಿಯ ಸ್ವಾಗತ

ಸಮಯ ನೋಡೆನ್ನ ಬೀಳ್ಕೊಡುವ ವರಾತ

ಸಾಗಿಸುವುದಷ್ಟೇ ಅಲ್ಲ ನನಸಾಗಿಸುವೆ

ಲಕ್ಷಾಂತರ ಕನಸುಗಳ ನಿತ್ಯ ಹೊತ್ತೊಯ್ಯುತ್ತಾ

ನನ್ನ ಗಾನ ಮೌನದಾ ಗಗನದಲ್ಲಿ

ನಿಮ್ಮಯಾನ ನಿದಿರೆಯಾಗಸದಲ್ಲಿ ||

 

ನನ್ನಲ್ಲಿ ನಿರ್ಭಾವುಕರಾದರೆ ನಾನೂ ಭಾವಶೂನ್ಯ

ನಿಮ್ಮೊಡಲ ಕುರುಹೂ ಸಿಗದಂತೆ ಸುಟ್ಟು

ಯಾವ ಕಡಲಾಳದಲ್ಲೋ ನಿಮ್ಮ ಬಿಸಾಕಿ

ಸತ್ತ ಮೇಲೂ ನೀವು ಯಾರಿಗೂ ಸಿಗದಂತೆ

ಮಾಡಿ ನಿಮ್ಮ ಜನ್ಮ ಸಾರ್ಥಕಗೊಳಿಸುತ್ತೇನೆ!

ನನ್ನ ಒಡಲು ನಿಮ್ಮ ಕೈಯ್ಯಲ್ಲಿ

ನಿಮ್ಮ ಜೀವ ನನ್ನ ಒಡಲಲ್ಲಿ!

 

ಚಿನ್ಮಯ ಎಂ ರಾವ್

(2005)

********

Exit mobile version