ಕವಿತೆ-16 : ಅದೊಂದೇ ಸಾಕು

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ಅದೊಂದೇ ಮಾತು, ಕೃತಿ ತುಂಬಿ

ಅದೊಂದೇ ಮೌನ, ನಗೆ ತುಂಬಿ

ಅದೊಂದೇ ಗಾನ, ಸುಧೆ ತುಂಬಿ

ಅದೊಂದೇ ಗೊತ್ತು, ಗುರಿ ತುಂಬಿ

ಸಾಕು, ಒಲವ ಕವಿತೆ ಬರೆಯಲು

ಗೆಲುವ ಹಾಡ ಹಾಡಲು

 

ಅದೊಂದೇ ಯುಕ್ತಿ, ಭಕ್ತಿ ತುಂಬಿ

ಅದೊಂದೇ ಸೂಕ್ತಿ, ನೀತಿ ತುಂಬಿ

ಅದೊಂದೇ ಶಾಂತಿ, ಸೌಖ್ಯ ತುಂಬಿ

ಅದೊಂದೇ ಕಾಂತಿ, ಕಳೆಯ ತುಂಬಿ

ಸಾಕು, ಒಲವ ಲತೆಯ ಬಳಸಲು

ಗೆಲುವಿನೋಟ ಬೆಳೆಸಲು

 

ಅದೊಂದೇ ನೋಟ, ನಯನ ತುಂಬಿ

ಅದೊಂದೇ ಆಸೆ, ತೃಪ್ತಿ ತುಂಬಿ

ಅದೊಂದೇ ನಿಲುವು, ನಿಯತ್ತು ತುಂಬಿ

ಅದೊಂದೇ ಹೂ, ಮುತ್ತ ತುಂಬಿ

ಸಾಕು, ಒಲವಿನಾಗಸದಲಿ ಹಾರಲು

ಗೆಲುವಿನೂರ ತಲುಪಲು

 

ಅದೊಂದೇ ತ್ಯಾಗ, ಮನತುಂಬಿ

ಅದೊಂದೇ ವೇಗ, ಕನಸ ತುಂಬಿ

ಅದೊಂದೇ ಕರುಣೆ, ಕಣ್‌ತುಂಬಿ

ಅದೊಂದೇ ಆಹ್ವಾನ, ಸ್ವಾತಂತ್ರö್ಯ ತುಂಬಿ

ಸಾಕು, ಒಲವಿನೇಣಿ ಏರಲು

ಗೆಲುವ ಸರಣಿ ಸೇರಲು

 

ಅಲ್ಲೊಂದು ಸಾವು, ಜೀವ ತುಂಬಿ

ಅಲ್ಲೊಂದು ನೋವು, ನಲಿವ ತುಂಬಿ

ಅಲ್ಲೊಂದು ನಾನು, ನಾವ ತುಂಬಿ

ಅಲ್ಲೊಂದು ನೀನು, ನನ್ನಲ್ಲಿ ತುಂಬಿ

ಬಂದರೆ ಸಾಕು, ನಾ

ಒಲವ ಗೆಳೆಯನಾಗಲು

ಗೆಲುವ ಅಳೆದು ತುಂಬಲು

 

ಚಿನ್ಮಯ ಎಂ ರಾವ್

(2005)

********

Exit mobile version