ನವನವೀನ ನರ್ತನ…ಹೀಗೊಂದು ನೃತ್ಯೋಪಾಸನ…!

– ಚಿನ್ಮಯ ಎಂ.ರಾವ್ ಹೊನಗೋಡು

ಇಂದಿನ ಯುವಜನಾಂಗಕ್ಕೆ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಣೆಯೇ ಹೆಚ್ಚು. ನಮ್ಮ ಸಂಸ್ಕೃತಿ ಕಲೆ ಇವೆಲ್ಲಾ ಹಿಂದಿನವರಿಗೆ ಮಾತ್ರ ಎಂಬ ಭಾವ ಅಲ್ಲಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನೊಂದೆಡೆ ಓದುವ ವಯಸ್ಸಿನಲ್ಲಿ ಓದಿನ ಕಡೆಗೆ ಮಾತ್ರ ಗಮನ ಹರಿಸಬೇಕೆಂದು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹಿನ್ನೆಡೆ ಕಾಣುವಲ್ಲಿ ಪೋಷಕರ ಪಾತ್ರವೂ ಇದೆಯೆಂದರೆ ತಪ್ಪೇನಿಲ್ಲ. ಆದರೂ ರಿಯಾಲಿಟಿ ಶೋಗಳ ದುಷ್ಪರಿಣಾಮದ ಹೊರತಾಗಿಯೂ ಅವು ಕಡೆ ಪಕ್ಷ ಸಂಗೀತ ನೃತ್ಯದಂತಹ ಕಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟುವಂತೆ ಮಾಡುತ್ತಿದೆ ಎನ್ನುವುದಂತೂ ಸತ್ಯ. ಆದರೆ ಅಲ್ಲೂ ಸಿನಿಮಾ ಪ್ರಾಕಾರಕ್ಕೇ ಹೆಚ್ಚಿನ ಆದ್ಯತೆ. ಅಲ್ಲೊಂದು ಹುಚ್ಚು ಕ್ರೇಜ಼್. ಇವೆಲ್ಲಾ ದೊಂಬರಾಟಗಳ ಆಚೆಯೂ ಶಾಸ್ತ್ರೀಯ ಕಲಾಪ್ರಾಕಾರಗಳನ್ನು ಸ್ವಯಮ್ ಆಸಕ್ತರಾಗಿ ತಪಸ್ಸಿನಂತೆ ಸಾಧನೆ ಮಾಡುವವರೂ ಇದ್ದಾರೆ ಎಂದರೆ ಅದು ಮರುಭೂಮಿಯಲ್ಲಿ ಕಾಣಸಿಗುವ ಒಂದು ಹನಿ ತಂಪಾದ ನೀರಿನಂತೆ. ಅಂತಹ ತಂಪಾದ ನೀರಿನ ಚಿಲುಮೆ ಎನ್ನಬಹುದು ಇಲ್ಲೊಬ್ಬ ನವ ಯುವಕನನ್ನು. ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯವನ್ನು ಸಾಧನೆ ಮಾಡುವವರೇ ಕಡಿಮೆ. ಅದರಲ್ಲೂ ಭರತನಾಟ್ಯ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆಯಿಂದ ಯುವಕರು ಅತ್ತ ಮುಖ ಹಾಕುವುದೇ ಕಡಿಮೆ. ಅಂತಹುದರಲ್ಲೂ ಅಲ್ಲಲ್ಲಿ ಅಪರೂಪಕ್ಕೆಂಬಂತೆ ಯುವಕರೂ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಅಂತಹ ಶ್ಲಾಘನೀಯ ಸಾಲಿನಲ್ಲಿ ನಾವು ಸೇರಿಸಬಹುದಾದಂತಹ ನವಯುವಕ ನವೀನ್ ಆರ್.ಹೆಗಡೆ.

ಹೌದು..ಇದೇನು ಅತಿಶಯೋಕ್ತಿಯಲ್ಲ…ಅತಿಯಾದ ಹೊಗಳಿಕೆಯೂ ಅಲ್ಲ. ಆದರೆ ಯುವಕನೊಬ್ಬ ಅತೀ ಚಿಕ್ಕವಯಸ್ಸಿನಲ್ಲಿ ಭರತನಾಟ್ಯದಂತಹ ಕಠಿಣ ವಿದ್ಯೆಯನ್ನು ಸಾಧನೆ ಮಾಡಿ ರಂಗಪ್ರವೇಶ ಕಾರ್ಯಕ್ರಮದ ಮೂಲಕ ಅನಾವರಣ ಮಾಡಿದ್ದಾನೆ ಎಂದಾದರೆ ಅದೇನು ಸಾಮಾನ್ಯ ವಿಷಯವಲ್ಲ. ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಇತ್ತೀಚೆಗಷ್ಟೇ ಅಭಿನವ ಕಲಾಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನವೀನ್ ಆರ್.ಹೆಗಡೆ ಕಲಾರಸಿಕರ ಹುಬ್ಬೇರಿಸುವಂತೆ ಮಾಡಿದರು.

ಬಾಲ್ಯಾವಸ್ತೆಯಲ್ಲೇ ನರ್ತನಾಸಕ್ತಿ…

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಗೆ ಬಗೆಯ ನರ್ತನಕ್ಕೆ ತನ್ನ ಪುಟ್ಟ ಕಂದನ ಹೆಜ್ಜೆಗಳು ತಾನೇ ತಾನಾಗಿ ನರ್ತಿಸಲಾರಂಭಿಸಿದ್ದನ್ನು ಕಂಡ ತಾಯಿ ನಿರ್ಮಲ ಆರ್.ಹೆಗಡೆ ತಡ ಮಾಡದೆ ನಾಟ್ಯದ ತರಗತಿಗೆ ಸೇರಿಸಿಬಿಟ್ಟರು. ಆ ತಾಯಿಯ ಅಂದಿನ ದೂರದೃಷ್ಟಿಯ ಪರಿಣಾಮವಾಗಿ ಇಂದು ಪುತ್ರ ನವೀನ್ ಆರ್.ಹೆಗಡೆಯನ್ನು ಭರತನಾಟ್ಯಕ್ಷೇತ್ರದಲ್ಲಿ ಇಷ್ಟು ದೂರದ ಸಾಧನೆಯವರೆಗೆ ಕರೆದುಕೊಂಡು ಬಂದಿದೆ. ಇದು ಇನ್ನಷ್ಟು ಮತ್ತಷ್ಟು ದೂರ ದೂರ ಸಾಗಿ ಸಾಧನೆಯ ಶಿಖರ ತಲುಪಿದರೆ ಅದರಲ್ಲಿ ಮಹದಾಶ್ಚರ್ಯವೇನಿಲ್ಲ.

ಶಿವಮೊಗ್ಗ ಜಿಲ್ಲೆಯ ಸಾಗರದ ಸುಪ್ರಸಿದ್ಧ ಪರಂಪರಾಗತ ವೈದ್ಯ ಪದ್ಧತಿಯ ಆಯುರ್ವೇದ ವೈದ್ಯ ಆರ್.ವಿ ಹೆಗಡೆ ಅವರ ಪುತ್ರ ಸಾಗರದಲ್ಲಿ ಓದುವ ಸಮಯದಲ್ಲಿಯೇ ಚಿಕ್ಕಂದಿನಿಂದಲೇ ಸುಮಾರು ಹತ್ತು ವರ್ಷಗಳ ಕಾಲ ಭರತನಾಟ್ಯದ ಪ್ರಾಥಮಿಕ ಅಭ್ಯಾಸವನ್ನು ಪರಿಣಿತಿ ಕಲಾಕೇಂದ್ರದ ನಾಟ್ಯಾಚಾರ್ಯ ವಿದ್ವಾನ್ ಗೋಪಾಲ್ ಅವರಲ್ಲಿ ಪಡೆದರು. ನಂತರ ಬೆಂಗಳೂರಿನ ಪ್ರಖ್ಯಾತ ನೃತ್ಯ ಕಲಾವಿದರಾದ ನಿರುಪಮ ರಾಜೇಂದ್ರ ಹಾಗು ಟಿ.ಡಿ ರಾಜೇಂದ್ರ ಅವರಲ್ಲಿ ಭರತನಾಟ್ಯದ ಪ್ರೌಢ ಶಿಕ್ಷಣವನ್ನು ಕಳೆದ ನಾಲ್ಕು ವರ್ಷಗಳಿಂದ ಪಡೆಯುತ್ತಾ ಪ್ರೌಢಿಮೆಯನ್ನು ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ ! ಜೊತೆಜೊತೆಗೆ ತಂಜಾವೂರಿನ ಸುಪ್ರಸಿದ್ಧ ಶಾಸ್ತ್ರಾ ವಿಶ್ವವಿದ್ಯಾಲಯದಲ್ಲಿ ಪ್ರಖ್ಯಾತ ನರ್ತಕಿ ಹಾಗು ಗುರು ಡಾ.ಪದ್ಮಾ ಸುಬ್ರಹ್ಮಣ್ಯಮ್ ಅವರ ಮಾರ್ಗದರ್ಶನದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಕೋರ್ಸ್ ಕೂಡ ಮಾಡುತ್ತಿದ್ದಾರೆ.

ನವೀನ ನರ್ತನದ ವಿಶೇಷ ?

ಈಗಾಗಲೇ ಹಲವಾರು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಉತ್ಸವಗಳಲ್ಲಿ ಅಭಿನವ ಕಲಾಕೇಂದ್ರದ ಅಡಿಯಲ್ಲಿ ಪ್ರದರ್ಶನ ನೀಡಿರುವ ನವೀನ್ ಆರ್.ಹೆಗಡೆ ನೂರಾರು ಸೋಲೊ ಕಾರ್ಯಕ್ರಮಗಳನ್ನೂ ನೀಡಿ ಜನರಂಜಿಸಿದ್ದಾರೆ. ಸುಬ್ರಮಣ್ಯ ಭಾರತಿ ಅವರ ಪ್ರಸಿದ್ಧವಾದ ಶುಟೃಮ್ ವಿಜ಼ಿ ಕೃತಿಯನ್ನು ಪ್ರಸ್ತುತಪಡಿಸುವಲ್ಲಿ ಇವರು ಚಾಣಾಕ್ಷ. ಆ ನೃತ್ಯದ ಸನ್ನಿವೇಶದಲ್ಲಿ ನಾಯಕನು ನಾಯಿಕೆಯನ್ನು ಎಲ್ಲೊ ನೊಡಿರುತ್ತಾನೆ, ಪ್ರೇಮ ಉಂಟಾಗಿ ಪ್ರೇಮದ ಅಲೆಯನ್ನು ಹತ್ತಿಕ್ಕಲಾಗದೆ ಆಗದೆ ಅವಳನ್ನು ಕುರಿತು ಪ್ರೇಮ ಪತ್ರವನ್ನು ಬರೆಯುತ್ತಾನೆ, ಅವಳ ಕಣ್ಣಿನ ಕಪ್ಪು ಭಾಗವು ಕಾರ್ಮೊಡವೆಂದು, ಅವಳ ಸೆರೆಗಂಚಿನಲ್ಲಿ ಇರುವ ಜರಿಯು ನಕ್ಷತ್ರಗಳೆಂದು, ಅವಳ ನಗುವನ್ನು ನೊಡಿ ಹೂಗಳು ಸಹ ನಾಚಿ ನೀರಾಗುತ್ತದೆ ಎಂದೆಲ್ಲ ವರ್ಣಿಸಿ ಕೊನೆಗೆ ಪತ್ರ ಕೊಡದೆ ತನ್ನ ಪ್ರೇಮವನ್ನು ಮನಸಿನಲ್ಲಿಟ್ಟು ಪೂಜಿಸುತ್ತಾನೆ. ಇದು ಈ ಅಭಿನಯ ಭಾಗದ ವಿಷೆಶವಾದ ಸಂಧರ್ಭ. ಈ ಸನ್ನಿವೇಶ ನವೀನ ಅವರ ನರ್ತನಕ್ಕೆ ಸವಾಲೆನಿಸಿದರೂ ಅದ್ಭುತವಾಗಿ ಪ್ರದರ್ಶಿಸಿ ತಮ್ಮ ಛಾಪನ್ನು ತೋರಿಸುತ್ತಾರೆ.

ಸಾಗರದ ಪ್ರತಿಭೆಗಳು ಸಾಗರದಾಚೆಗೂ….

ಚಿಗುರುಮೀಸೆಯ ಈ ನವಯುವಕನ ಹೊಂಗನಸುಗಳು ಈಗಷ್ಟೇ ಚಿಗುರೆಡೆಯುತ್ತಿವೆ. ತನ್ನೂರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಹುದೊಡ್ಡ ನಾಟ್ಯಶಾಲೆಯೊಂದನ್ನು ಆರಂಭಿಸಿ ಸಾಗರದ ಪ್ರತಿಭೆಗಳು ಸಾಗರದಾಚೆಗೂ ನಾಟ್ಯ ಪ್ರದರ್ಶಿಸುವಂತಾಗಿ ಇಂತಹ ಭಾರತೀಯ ಕಲೆಯೊಂದಕ್ಕೆ ವಿಶ್ವಮಾನ್ಯತೆ ಸದಾ ಇರುವಂತೆ ಕಾಪಾಡಬೇಕೆಂಬುದೇ ನವೀನ್ ಆರ್.ಹೆಗಡೆ ಅವರ ಕನಸು. ಇದು ನನಸಾಗುವಂತಾಗಲಿ ಎಂದು ನಾವು ನೀವೆಲ್ಲಾ ಪ್ರೋತ್ಸಾಹಿಸೋಣ….ಅಲ್ಲವೇ?

– ಚಿನ್ಮಯ ಎಂ.ರಾವ್ ಹೊನಗೋಡು

30-6-2014

Exit mobile version