‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ- ಅರ್ಜುನ್ ಸರ್ಜಾ ನೆನೆದ ಎಂ. ಎಂ. ಕೀರವಾಣಿ

ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾಗಿದೆ. ಈಗ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಪತಾಕೆ ಹಾರಿಸಿ ಇತಿಹಾಸ ಸೃಷ್ಟಿಸಿದೆ. ‘ನಾಟು ನಾಟು’ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆ ಮುತ್ತಿಟ್ಟಿದ್ದಾರೆ.

ಗೋಲ್ಡನ್ ಗ್ಲೋಬ್ ಅವಾರ್ಡ್ ಮೂಲಕ ಇತಿಹಾಸ ಸೃಷ್ಟಿಸಿರುವ ‘ಆರ್ ಆರ್ ಆರ್’ ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಇಲ್ಲಿವರೆಗಿನ ಜರ್ನಿಗೆ ಕಾರಣರಾದ ಎಲ್ಲರಿಗೂ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರನ್ನು ಎಂ. ಎಂ. ಕೀರವಾಣಿ ಸ್ಮರಿಸಿದ್ದಾರೆ. ಅರ್ಜುನ್ ಸರ್ಜಾ ಮೊಟ್ಟ ಮೊದಲ ನಿರ್ದೇಶನದಲ್ಲಿ ಬಂದ ‘ಸೇವಗನ್’ ಹಾಗೂ ‘ಪ್ರತಾಪ್’ ಚಿತ್ರಕ್ಕೆ ಎಂ. ಎಂ ಕೀರವಾಣಿ ಅವರಿಗೆ ಅವಕಾಶ ನೀಡಿದ್ದರು. ಅರ್ಜುನ್ ಸರ್ಜಾ ನಟನೆಯ ‘ಅಳಿಮಯ್ಯ’, ತಮಿಳಿನ ‘ಕೊಂಡಟ್ಟಂ’ ಸಿನಿಮಾಗಳಿಗೂ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಪುತ್ರಿ ಐಶ್ವರ್ಯ ಅರ್ಜುನ್ ನಟಿಸಿರುವ ‘ಪ್ರೇಮಬರಹ’ ಚಿತ್ರದ ಹಾಡೊಂದಕ್ಕೂ ಎಂ. ಎಂ ಕೀರವಾಣಿ ದನಿಯಾಗಿದ್ದಾರೆ.

ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕೀರವಾಣಿ ತಮ್ಮ ಆರಂಭಿಕ ದಿನಗಳಲ್ಲಿ ಸಂಗೀತ ನಿರ್ದೇಶನಕ್ಕೆ ಅವಕಾಶ ನೀಡಿದ ಖ್ಯಾತ ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ನೆನೆದು ಕೃತಘ್ನತೆ ತಿಳಿಸಿದ್ದಾರೆ. ಅವಕಾಶ ಕೊಟ್ಟವರನ್ನು ಸ್ಮರಿಸಿ ಸರಳತೆ ಮೆರೆದ ಕೀರವಾಣಿ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ಬಾಲಚಂದರ್, ಭರತನ್, ಭಟ್ ಸಾಬ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ ಎಂ.ಎಂ ಕೀರವಾಣಿ.

Exit mobile version