‘ಹೊಂದಿಸಿ ಬರೆಯಿರಿ’ ಚಿತ್ರತಂಡಕ್ಕೆ ನಿರ್ದೇಶಕ ಯೋಗರಾಜ್ ಭಟ್ ಸಾಥ್ – ‘ನೀ ಇರದ ನಾಳೆ’ ಲಿರಿಕಲ್ ವೀಡಿಯೋ ರಿಲೀಸ್

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆಯ ಸನಿಹದಲ್ಲಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯವನ್ನು ಬಿಡುವಿಲ್ಲದೇ ನಡೆಸುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್, ಹಾಡುಗಳು ಸಿನಿ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ‘ನೀ ಇರದ ನಾಳೆ’ ಹಾಡಿನ ಲಿರಿಕಲ್ ವೀಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ವಿಕಟ ಕವಿ, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಪ್ರತಿ ಹಾಡುಗಳು ಸಿನಿಮಾದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಪ್ರೇಕ್ಷಕರ ಮನಗೆದ್ದಿದ್ದು, ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ಹಾಡು ‘ನೀ ಇರದ ನಾಳೆ ಬೇಕಿಲ್ಲ ನನಗೆ’ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಸಂಬಂಧಗಳಲ್ಲಿರುವ ಗೊಂದಲವನ್ನು ವ್ಯಕ್ತಪಡಿಸುವ ಹಾಡು ಇದಾಗಿದೆ. ಪ್ರವೀಣ್ ತೇಜ್, ಭಾವನ ರಾವ್ ಈ ಹಾಡಿನ ಭಾಗವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಹಾಡು ಇದಾಗಿದೆ. ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದು ಜೋ ಕೋಸ್ಟ ಸಂಗೀತ ನಿರ್ದೇಶನ ಹಾಡಿಗಿದೆ. ಸಂಡೆ ಸಿನಿಮಾಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯ ಭೂಮಿಕೆ ಚಿತ್ರದಲ್ಲಿದೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ಬಹು ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಒನ್ ಲೈನ್ ಕಹಾನಿ ಸುತ್ತ ಹೆಣೆಯಲಾದ ಚಿತ್ರವೇ ‘ಹೊಂದಿಸಿ ಬರೆಯಿರಿ’. ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣ ಹಾಗೂ ಭಾವನಾತ್ಮಕ ಜರ್ನಿ ಇದೆ.

ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದು. ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.

 

 

Exit mobile version