ಹೊನಗೋಡಿನ ಚಿನ್ಮಯ ಎಂ.ರಾವ್ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ಆನಂದಪುರ-ಸಮೀಪದ ಹೊನಗೋಡಿನ ಚಿನ್ಮಯ ಎಂ.ರಾವ್ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹಲವಾರು ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಚಿನ್ಮಯ ಹಲವು ಸುಪ್ರಸಿದ್ಧ ಗಾಯಕರನ್ನು ತಮ್ಮ ಸಂಗೀತ ನಿರ್ದೇಶನದಲ್ಲಿ ಹಾಡಿಸಿದ್ದಾರೆ. ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಉನ್ನಿಕೃಷ್ಣನ್, ಮಧುಬಾಲಕೃಷ್ಣನ್, ರಾಜೇಶ್ ಕೃಷ್ಣನ್ ಹಾಗು ಎಂ.ಡಿ ಪಲ್ಲವಿ ಇವರ ಸಂಗೀತಕ್ಕೆ ಹಾಡಿದ ಪ್ರಮುಖರು. ಪ್ರಸ್ತುತ ಎರಡು ವರ್ಷಗಳಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪ್ರೀತಿಯಿಂದ” ಮೆಗಾ ಧಾರಾವಾಹಿಗೆ ಶೀರ್ಷಿಕೆ ಗೀತೆಗೆ ಕಂಠದಾನ ಮಾಡಿ ಚಿನ್ಮಯ ಕಿರುತೆರೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. “ಅಗಮ್ಯ” ಇವರ ಸಂಗೀತ ನಿರ್ದೇಶನದ ಮೊದಲ ಚಿತ್ರ. ನಿನ್ನೆಯಷ್ಟೆ ಇದರ ಆಡಿಯೊ ಬಿಡುಗಡೆ ಸಮಾರಂಭ ಬೆಂಗಳೂರಿನ ಗ್ರೀನ್ ಹೌಸಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜರುಗಿತು. ಬೆಂಗಳೂರಿನ ಮೇಯರ್ ಡಿ. ವೆಂಕಟೇಶ ಮೂರ್ತಿ, ಹಿರಿಯ ನಿರ್ಮಾಪಕ ಕೆ.ಮಂಜು ಹಾಗು “ಅಗಮ್ಯ” ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿರುವ ಲಹರಿ ಆಡಿಯೊ ಸಂಸ್ಥೆಯ ಮಾಲಿಕ ವೇಲು ಅಡಕ ಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು.

ಬಿಡುಗಡೆಯ ನಂತರ ಮಾತನಾಡಿದ ಚಿನ್ಮಯ “ಸಂಗೀತ ನಿರ್ದೇಶನದಲ್ಲಿ ಅನುಭವ ಪಡೆಯುವ ಕಾರಣದಿಂದ ನಾನು ಇಷ್ಟು ವರ್ಷ ಭಕ್ತಿಗೀತೆ ಹಾಗು ಭಾವಗೀತೆಗಳಿಗೆ ಸಂಗೀತ ನೀಡುತ್ತಿದ್ದೆ. ಆದರೆ ಈ ನಡುವೆ ಚಿತ್ರರಂಗದ ಕೆಲವರು ನಾನು ಭಕ್ತಿಗೀತೆಗಳಿಗೆ ಮಾತ್ರ ಲಾಯಕ್ಕು. ಚಿತ್ರಗೀತೆಗಳಿಗೆ ಸಂಗೀತ ನೀಡಲು ನಾಲಾಯಕ್ಕು ಎಂದು ಹಣೆ ಪಟ್ಟಿ ಕಟ್ಟಿದ್ದರು. ಬಂದ ಕೆಲವು ಚಿತ್ರಗಳ ಅವಕಾಶಗಳನ್ನೂ ಅಪಪ್ರಚಾರ ಮಾಡಿ ತಪ್ಪಿಸುತ್ತಿದ್ದರು. ಆದರೆ ಈಗ ಕಾಲ ಕೂಡಿ ಬಂದಿದೆ. ಈ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ನಾನೂ ಚಲನಚಿತ್ರಗಳಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ಸಂಗೀತ ನೀಡಬಲ್ಲೆ ಎಂಬುದನ್ನು ಸಾಬೀತು ಪಡಿಸಿದ್ದೇನೆ. ಚಲಚಿತ್ರಕ್ಕೆ ಸಂಗೀತ ನೀಡಬೇಕೆನ್ನುವ ನನ್ನ ಬಹು ವರ್ಷಗಳ ಬಯಕೆ ಇಂದು ಈಡೇರಿದೆ. ಆದರೆ ಈ ರಂಗದಲ್ಲಿ ನೆಲೆನಿಂತು ಒಬ್ಬ ಯಶಸ್ವಿ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಸಲ್ಲಿಸಬೇಕೆನ್ನುವುದು ನನ್ನ ಮುಂದಿನ ಗುರಿ. ಚಿತ್ರಗೀತೆಗಳು ಹೇಗಿರಬೇಕೆಂಬುದಕ್ಕೆ ನನ್ನದೇ ಆದ ಸ್ಪಷ್ಟ ಪರಿಕಲ್ಪನೆಗಳಿವೆ. ಸಂಗೀತದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಸದಾ ಹೊಸತನ್ನು ಸೃಷ್ಠಿಸಬೇಕೆಂಬುದು ನನ್ನ ಹಂಬಲ.

ಈ ದಿಕ್ಕಿನಲ್ಲಿ ಅಗಮ್ಯ ಚಿತ್ರ ನನ್ನ ಮೊದಲ ಪ್ರಯೋಗ. ನನ್ನ ಈವರೆಗಿನ ಕಲಿಕೆ ಹಾಗು ಅನುಭವವನ್ನು ಇಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದೇನೆ. ನನ್ನ ಕಲಿಕೆ ಹಾಗು ಅನುಭವ ಹೆಚ್ಚುತ್ತಾ ಹೋದಂತೆ ಇನ್ನೂ ಹೆಚ್ಚಿನ ಮನರಂಜನೆಯನ್ನು ಸಂಗೀತಪ್ರಿಯರು ನನ್ನಿಂದ ನಿರೀಕ್ಷಿಸಬಹುದೆಂಬುದು ನನ್ನ ಅನಿಸಿಕೆ” ಎನ್ನುತ್ತಾ ತಮಗೆ ಅವಕಾಶವನ್ನು ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ ಉದಿತ್ ನಾರಾಯಣ್, ವಿಜಯ ಪ್ರಕಾಶ್, ಅನುರಾಧ ಪೌಡ್ವಾಲ್, ಅನುರಾಧ ಭಟ್, ಎಂ.ಡಿ ಪಲ್ಲವಿ ಹಾಗು ಸಮಸ್ತ ವಾದ್ಯವೃಂದದವರಿಗೆ ಚಿನ್ಮಯ ಧನ್ಯವಾದ ಸಮರ್ಪಣೆ ಮಾಡಿದರು.

ಅಗಮ್ಯ ಚಿತ್ರದ ನಿರ್ಮಾಪಕ ಎಲ್.ಸಿದ್ದಮಾರಯ್ಯ, ಚಿತ್ರದ ನಿರ್ದೇಶಕ ಉಮೇಶ್ ಗೌಡ, ಗೀತಸಾಹಿತಿ ಮಹೇಶ್ ಬಿ.ಕೆ, ಈ ಚಿತ್ರದಿಂದ ಚಿತ್ರರಂಗಕ್ಕೆ ನಾಯಕ ನಟರಾಗಿ ಪ್ರವೇಶ ಪಡೆಯುತ್ತಿರುವ ಭೂಗತ ಜಗತ್ತಿನ ಮಾಜಿ ದೊರೆ ದಿವಂಗತ ಎಂ.ಪಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್, ಯುವನಟ ವಿಹಾನ್ ಗೌಡ ಹಾಗು ಚಿತ್ರದ ನಾಯಕಿಯರಾದ ರಮಣೀತು ಚೌದ್ರಿ, ದಿಶಾ ಪೂವಯ್ಯ, ಪವಿತ್ರ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಮಿಮಿಕ್ರಿ ಗೋಪಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಸ್ಪೆನ್ಸ್-ಹಾರಾರ್ ಶೈಲಿಯ ಕಥೆಯುಳ್ಳ ಈ ಚಿತ್ರದ ಹೆಚ್ಚಿನ ಭಾಗವನ್ನು ಸಾಗರ ಸಮೀಪದ ಕುಂಟುಗೋಡು ಗಣಪತಿ ಅವರ ಬಂಗಲೆಯಲ್ಲಿ ಚಿತ್ರಿಸಿದ್ದಾರೆ ಎಂಬುದು ಇನ್ನೊಂದು ವಿಶೇಷ.

18-1-2013

Exit mobile version