ದುರ್ಮುಖವೊ…ಮತ್ತೊಂದೊ…

-ಚಿನ್ಮಯ ಎಂ.ರಾವ್ ಹೊನಗೋಡು

ಸಂಭವಿಸುತಿದೆಯೊಂದು
ಸಂತಸದ ಶುಭಬಿಂದು
ಸಂವತ್ಸರವೇ ಒಂದು
ಆರಂಭವಿಂದು..
ಸಂಕಷ್ಟಗಳು ಮುಗಿದು
ಸುಖವಿನ್ನು ಮುಂದು || ೧ ||

ಹಸಿರಾಗಲಿದೆ ಬಾಳು
ನಳನಳಿಸಲಿದೆ ಕೇಳು
ಇನ್ನೆಂದೂ ದುಃಖಿಸದಿರು
ಎಲ್ಲಿದೆ ಹೇಳು ಗೋಳು?
ಯಾರಿಗಿಲ್ಲ ಹೇಳು ಗೋಳು?
ಎಲ್ಲಿಲ್ಲದ್ದು ನಿನಗೇನಿಲ್ಲ
ನಿನಗೊಂದು ಗೀಳು
ಸಾಕು ನಿಲ್ಲಿಸು ನಿನ್ನಳು || ೨ ||

ನನಸಾಗಲಿದೆ ನೋಡು
ಸಹನೆಯೊಂದನು
ಆ ದೇವರಲಿ ಬೇಡು
ಸಹಿಸಿಕೊಳ್ಳುವ
ಶಕ್ತಿಯ ನೀಡು
ಗುರಿ ತಲುಪುವವರೆಗೆ
ಆಸಕ್ತಿ ನೀಡು || ೩ ||

ಚೇತರಿಕೆ ಕಾಣುವುದು
ನೋವು ಹಿಂದಾಗುವುದು
ನಲಿವೆ ಮುಂದಾಗುವುದು
ಗೆಲುವೆ ನಿಂದಾಗುವುದು
ನಿನ್ನಿಂದ ನಿನ್ನಿಂದ
ನಿನ್ನಿಂದ ಮಾತ್ರ ಇದು
ನೀನೇ ಅಚ್ಚರಿ ಪಡುವೆ ನೋಡು
ಇಷ್ಟೇಲ್ಲಾ ಸಂಗತಿಗಳು
ಬಾಳ ಹಾದಿಯಲಿ
ಹೋದವಾ…ಹಾದು..?!

ತತ್ತರಿಸದಿರು ಎಂದೂ
ಉತ್ತರಿಸುತಿರು ಎಂದೂ
ಕಷ್ಟಗಳೂ ನಿನ್ನ ಬಂಧು
ಆಗಾಗ ಹೋಗುವುದು ಬಂದು
ನೀನೇಕೆ ಹೋಗುವೆ ಬೆಂದು?
ಜಪಿಸದಿರು ಜರಿಯದಿರು
ಸಾಕು ಸಾಕೆಂದು || ೫ ||

ನಗಲೂ ನಗದು ಬೇಕೇನು?
ನೀರಸವಾಗಿಸದಿರು
ಪ್ರತಿ ಸಲದಂತೆ ಯುಗಾದಿಯು
ಬರಲಿದೆ, ಅದರಲ್ಲಿ
ವಿಶೇಷವಿನ್ನೇನು?
ಎನ್ನದಿರು ನೀನಿನ್ನು..
ದುರ್ಮುಖವೊ ಮತ್ತೊಂದೊ
ಒಂದರ ಹಿಂದೆ ಇನ್ನೊಂದು
ಒಂದಂತೂ ಸತ್ಯ
ಇದರ ಹಿಂದೆ
ಅಡಗಿಹುದೊಂದು ತತ್ವ
ಪ್ರತೀ ಯುಗಾದಿಯಂದು
ಕಳೆಯುತ್ತಲೇ ಇರಬೇಕು
ನಮ್ಮ ಜಡತ್ವ
ಈ ಯುಗಾದಿಯಂದೂ
ಮತ್ತೊಮ್ಮೆ ಆದಿಯಾಗಲಿ
ಸಾಧಿಸಲು ಹೆಚ್ಚಿನ ಗುರುತ್ವ || ೬ ||

***********

Exit mobile version