ಏನೇನೂ ಸಾಲದು

– ಡಾ. ಚಿನ್ಮಯ ರಾವ್ ಹೊನಗೋಡು

ಅದೆಷ್ಟೋ ಕಾಲದಿಂದ ನಿನ್ನ ಮೌನಸಮ್ಮತಿಯ
ಜೊತೆಗೆ ನಿನ್ನನ್ನು ಹಿಂಬಾಲಿಸುತ್ತಲೇ ಇರುವ
ನಿನ್ನಲ್ಲಿ ನಾನು ಅದೆಷ್ಟು ಸಲ
ಕ್ಷಮೆ ಕೇಳಿದರೂ ಸಾಲದು
ಆದರೆ ನೀನು ಮಾತ್ರ ಅದೆಷ್ಟೋ ವರುಷಗಳ
ನನ್ನ ಪ್ರಾಮಾಣಿಕ ಮನವಿಗೆ
ಸ್ಪಂದಿಸಿದ್ದು ಏನೇನೂ ಸಾಲದು
ಇಷ್ಟು ಕಾಲದ ನನ್ನ ಅದೆಷ್ಟೋ ಕವನಗಳ
ಯಾವುದೋ ಒಂದು ಸಾಲದು
ಆತ್ಮವಿಶ್ವಾಸದಿಂದ ಹೇಳುತ್ತಿದೆ ನಿನ್ನನ್ನೇ ನೋಡಿ
ಒಲವಧಾರೆಯನ್ನು ನಿರಂತರವಾಗಿ
ಪ್ರವಹಿಸುತ್ತಲೇ ಇರುವ ತನ್ನ ಸರ್ವಪ್ರಯತ್ನ
ಎಂದಿಗೂ ಸೋಲದು..ಅದೆಂದಿಗೂ ಸೋಲದು…

ತಂಗಾಳಿಯನ್ನು ಧೂಳೆಂದು ಭಾವಿಸಿ
ಗಾಳಿಗೆ ತೂರುತ್ತಿರುವ ನಿನ್ನ ನಿಗೂಢಮೌನವದು
ನನ್ನ ಸೋಲಲ್ಲ, ನಿನ್ನದೇ ಸೋಲದು
ಆದರೆ ನನ್ನೆಡೆಗೆ ಅಪ್ರಯತ್ನಪೂರ್ವಕವಾಗಿ
ಸಾಗಿ ಬರುವ ನಿನ್ನ ಅವಿರತ ಪ್ರಯತ್ನ
ಎಂದಿಗೂ ಸೋಲದು..ಅದೆಂದಿಗೂ ಸೋಲದು…
ನನ್ನ ಸೋಲಲ್ಲೇ ನಿನ್ನ ಗೆಲುವನ್ನು
ಮುಡಿಗೇರಿಸಿಕೊಳ್ಳಬೇಕೆಂಬ ನಿನ್ನ ವ್ಯರ್ಥಪ್ರಯತ್ನ
ಎಂದಿಗೂ ಗೆಲ್ಲದು.. ಅದೆಂದಿಗೂ ಗೆಲ್ಲದು
ನನ್ನ ಗೆಲುವಲ್ಲೇ ನಿನ್ನ ಗೆಲುವೂ ಅಡಗಿದೆಯೆಂಬ
ಮನೋಭಾವ ನನ್ನೊಬ್ಬನಿಗೆ ಮಾತ್ರ ಇದ್ದರೆ
ಅದು ಏನೇನೂ ಸಾಲದು…ಏನೇನೂ ಸಾಲದು…

ನನ್ನದು ಸೋಲು…ನಿನ್ನದು ಗೆಲುವೆಂಬ
ಅರ್ಥಹೀನ ಲೆಕ್ಕಾಚಾರವಿಲ್ಲಿ ಸಲ್ಲದು
ಸೋತು ಗೆಲ್ಲುವ, ಗೆದ್ದು ಸೋಲುವ
ಸಾಮರಸ್ಯವೇ ಸಾಮಾನ್ಯವಾಗಿ
ಅಸಾಮಾನ್ಯ ವಿಶೇಷ ವಿಚಾರ
ನನ್ನದು ನಿನ್ನದು, ನಿನ್ನದು ನನ್ನದು
ನನ್ನದೂ ನಿನ್ನದು, ನಿನ್ನದೂ ನನ್ನದು

ನನ್ನದೆಲ್ಲವೂ ನಿನ್ನದು, ನಿನ್ನದೆಲ್ಲವೂ ನನ್ನದು
ಎಂಬ ಏಕಮೇವಾದ್ವಿತೀಯ ತತ್ವವನ್ನು
ನಾವಿಬ್ಬರೂ ಅರಿತು ನುರಿತುಕೊಂಡಿದ್ದು
ಏನೇನೂ ಸಾಲದು… ಏನೇನೂ ಸಾಲದು
ಅವಿನಾಭಾವದಲ್ಲಿ ಅನುಭವಿಗಳಾಗುವ
ಸದವಕಾಶವನ್ನು ಸಾವಕಾಶವಾಗಿ ಬಳಸಿಕೊಂಡರೆ
ನಮ್ಮ ಸುಖಪಯಣ ಎಂದಿಗೂ ನಿಲ್ಲದು..
ಅದೆಂದಿಗೂ ನಿಲ್ಲದು ಎಂದೆಂದಿಗೂ ನಿಲ್ಲದು
ಯಾರ ಎದುರಿಗೂ ಸೋಲದು.. ಎಲ್ಲೂ ಸೋಲದು…

ಈ ಇಹಪರದ ತತ್ವಸೌಂದರ್ಯವನ್ನು
ನೀನು ಅರ್ಥಮಾಡಿಕೊಂಡಿದ್ದು
ಏನೇನೂ ಸಾಲದು…ಏನೇನೂ ಸಾಲದು
ನಿನಗೆ ಅರ್ಥ ಮಾಡಿಸುವ ನನ್ನ ಸಾರ್ಥಕಪ್ರಯತ್ನ
ಎಂದಿಗೂ ಸೋಲದು, ಅದೆಂದಿಗೂ ಸೋಲದು..
ಮುಂದೆ ಕಾಣುವ ಸೋಲದು
ಖಂಡಿತವಾಗಿ ನಿನ್ನದೇ ಸೋಲದು..ನಿನ್ನದೇ ಸೋಲದು..
ನಿನ್ನ ಸೋಲಲ್ಲೇ ನನ್ನ ಗೆಲುವು
ನನ್ನ ಗೆಲುವಲ್ಲೇ ನಿನ್ನ ಗೆಲುವೆಂಬ
ಲೆಕ್ಕಾಚಾರಕ್ಕೆ ಸೂತ್ರವವನ್ನು ಸಸೂತ್ರವಾಗಿ
ಕಲಿಸುವಲ್ಲಿ ನನ್ನ ಕೌಶಲ್ಯಯುತ ಪಾಠ
ಏನೇನೂ ಸಾಲದು, ಅದೇನೇನೂ ಸಾಲದು
ನಿನ್ನ ಕಲಿಕೆ ದಾರಿ ತಪ್ಪಿದ್ದು
ನನ್ನದೇ ಸೋಲದು, ನನ್ನದೇ ಸೋಲದು
ಸೋಲನ್ನು ಒಪ್ಪಿಕೊಳ್ಳುವ ಜಾಯಮಾನ ನನ್ನದು
ನನ್ನ ಸೋಲನ್ನು ನಿನ್ನದೇ ಸೋಲೆಂದು ಭಾವಿಸಿ
ಬುದ್ಧಿಯನ್ನು ಬದಿಗಿಟ್ಟು ಭಾವಜೀವಿಯಾಗುವ
ಜಾಯಮಾನ ನಿನ್ನದು.. ನಿನ್ನದು…
ಅಂತಿಮವಾಗಿ ಜಯವನ್ನೇ ನಮ್ಮಿಬ್ಬರದಾಗಿಸಿಕೊಳ್ಳುವ
ಜಾಯಮಾನ ನಮ್ಮಿಬ್ಬರದು.. ನಮ್ಮಿಬ್ಬರದು…

****************

Exit mobile version