ಯುವಗಾಯಕ ಚಿನ್ಮಯ ರಾವ್ ಅವರಿಗೆ ಪುಣೆಯ ಶ್ರೀ ವಾಸುದೇವ ನಿವಾಸದಲ್ಲಿ ಸನ್ಮಾನ

ಸಾಗರ : ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ “ಶ್ರೀ ಗುರುಸಂಹಿತಾ” ಎಂಬ ಶ್ರೀ ಗುರುಚರಿತ್ರೆಯ ಬೃಹತ್ ಗ್ರಂಥದ ಎಲ್ಲಾ 6,621 ಸಂಸ್ಕೃತ ಶ್ಲೋಕಗಳನ್ನು ತಮ್ಮ ಕಂಠದಲ್ಲಿ ಗಾಯನ ಮಾಡಿ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ ಎಂದು ವಿಶ್ವದಾಖಲೆಗೆ ಪಾತ್ರರಾದ ಹೊನಗೋಡಿನ ಯುವಗಾಯಕ ಚಿನ್ಮಯ ರಾವ್ ಅವರಿಗೆ ಇತ್ತೀಚೆಗೆ ಪುಣೆಯ ಶ್ರೀ ವಾಸುದೇವ ನಿವಾಸದಲ್ಲಿ ಆಶಿರ್ವಾದಪೂರ್ವಕವಾಗಿ ಸನ್ಮಾನಿಸಲಾಯಿತು.

 

 

ಇದೇ ಗ್ರಂಥದ ಮೊದಲ ಅಧ್ಯಾಯದ ಶ್ಲೋಕಗಳನ್ನು ಚಿನ್ಮಯ ರಾವ್ ಗಾಯನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ಈ ಬೃಹತ್ ಧ್ವನಿಮುದ್ರಿಕೆ ರಚನೆಯಾದ ಬಗೆ ಹಾಗೂ ಧ್ವನಿಮುದ್ರಣದಲ್ಲಿನ ಸವಾಲುಗಳ ಬಗ್ಗೆ ನೆರೆದಿದ್ದ ಭಕ್ತಾದಿಗಳ ಮುಂದೆ ಚಿನ್ಮಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

 

 

ಆ ನಂತರದಲ್ಲಿ ಅಭಿನಂದನಾ ಪೂರ್ವಕವಾಗಿ ಚಿನ್ಮಯ ರಾವ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀವಾಸುದೇವ ನಿವಾಸದ ಸ್ವಾಮೀಜಿ ಪರಮಪೂಜ್ಯ ಭಗವತಾಚಾರ್ಯ ಶ್ರೀ ಶರದ್ ಶಾಸ್ತ್ರೀ ಜೋಶಿ ಮಹರಾಜ್ ಅವರು ಇಂತಹ ಬೃಹತ್ತಾದ ಗ್ರಂಥದ ಇಷ್ಟೊಂದು ಸಂಸ್ಕೃತ ಶ್ಲೋಕಗಳನ್ನು ಕೇವಲ ಒಂದೇ ಗಾಯಕ ತನ್ನ ಕಂಠದಲ್ಲಿ ಧ್ವನಿಮುದ್ರಿಸಿ ಜಗತ್ತಿಗೆ ನೀಡುವ ಮೂಲಕ ಜಾಗತಿಕ ದಾಖಲೆಯನ್ನೂ ಮಾಡಿದ್ದಾರೆ. ಇದೊಂದು ಕಷ್ಟಸಾಧ್ಯದ ಕೆಲಸ. ಇದನ್ನು ಯಶಸ್ವಿಯಾಗಿ ಪೂರೈಸಿರುವ ಗುರುಭಕ್ತ ಚಿನ್ಮಯ ರಾವ್ ಅವರಿಗೆ ಪುಣೆಯ ವಾಸುದೇವ ನಿವಾಸದ ಪರವಾಗಿ ನಮ್ಮ ಹೃದಯಪೂರ್ವಕ ಅಭಿನಂದನೆಗಳು, ಭವಿಷ್ಯದ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚಿನ ಇಂತಹ ಕಾರ್ಯಗಳು ನಡೆಯುವಂತಾಗಲಿ ಎಂದರು.

 

 

ಈ ಸಂದರ್ಭದಲ್ಲಿ ಶ್ರೀ ವಾಸುದೇವ ನಿವಾಸದ ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು. ಶ್ರೀ ವಾಸುದೇವ ನಿವಾಸದ ಮುಖ್ಯಸ್ಥ ಆನಂದ್ ಕುಲ್ಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version