ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆಗೆ ಕನ್ನಡಿ ಹಿಡಿದ ಸ್ವರಮೇಧಾ ಸಂಗೀತೋತ್ಸವ

ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಭಾನುವಾರ ನಡೆದ ಸ್ವರಮೇಧಾ ಸಂಗೀತೋತ್ಸವದಲ್ಲಿ ಸತತವಾಗಿ ಹನ್ನೊಂದು ಗಂಟೆಗಳ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಹಾಗೂ ಚಿಂತನೆಯ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಸ್ವರಮೇಧಾ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದಲ್ಲಿ ಸಂಗೀತದ ಕೃತಿಗಳ ಗಾಯನಕ್ಕೂ ಮೊದಲು ವಾಗ್ಗೇಯಕಾರರ ವಿವರ ಹಾಗೂ ಕೃತಿಗಳ ಭಾವಾನುವಾದವನ್ನು ವಿದ್ಯಾರ್ಥಿಗಳು ವಿವರಿಸಿದರು.

ಆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವರಮೇಧಾ ಸಂಸ್ಥಾಪಕ ಡಾ.ಚಿನ್ಮಯ ರಾವ್ ಅವರಿಂದ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ವಿದ್ವಾನ್ ಶೃಂಗೇರಿ ಹೆಚ್ ಎಸ್ ನಾಗರಾಜ್ ಅವರು ಭಾರತೀಯ ಸಂಗೀತ ಹಾಗೂ ಭಾರತೀಯ ಸನಾತನ ವಿದ್ಯೆಗಳ ಆಳ ಅಗಲವನ್ನು ನಾವು ವಿಶ್ವದಾದ್ಯಂತ ಪ್ರತಿಷ್ಠಾಪಿಸಬೇಕಾಗಿದೆ. ಹಾಗಾಗಿ ನಾವು ಪಾಶ್ಚಿಮಾತ್ಯ ಶಿಕ್ಷಣದ ಪರಿಕಲ್ಪನೆಯಿಂದ ಹೊರಬಂದು ನಮ್ಮ ಪೂರ್ವಜರು ಪಾಲಿಸುತ್ತಿದ್ದ ಜೀವನಕ್ರಮ ಹಾಗೂ ಮೌಲ್ಯಾಧಾರಿತ ವಿದ್ಯಾದಾನದ ಕಡೆ ಗಮನ ಹರಿಸಬೇಕಾಗಿದೆ ಎಂದರು. ತಮ್ಮ ಗುರುಗುಹ ಮಹಾವಿದ್ಯಾಲಯದಂತೆ ಸ್ವರಮೇಧಾ ಕೂಡ ಈ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಸ್ವರಮೇಧಾ ಸಂಗೀತರತ್ನ ಬಿರುದನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ವೀಣಾವಾದಕರಾದ ವಿದ್ವಾನ್ ಪ್ರಶಾಂತ ಅಯ್ಯಂಗಾರ್, ಸಂಗೀತವೆಂಬ ಅತ್ಯಮೋಘ ವಿದ್ಯೆ ಕೇವಲ ಸಂಪಾದನೆಗೆ ಮಾತ್ರ ಸೀಮಿತವಾಗದೆ ಅದು ಅನುಸಂಧಾನದ ಕಡೆಗೆ ಸಾಗುವಂತಾಗಬೇಕು ಎಂದರು. ಇಂದಿನ ಸಂಗೀತ ಕಲಾವಿದರು ಈ ಬಗ್ಗೆ ಚಿಂತನೆ ಹಾಗೂ ಆತ್ಮಾವಲೋಕನಮಾಡಿಕೊಳ್ಳಾಬೇಕಾದ ಅನಿವಾರ್ಯತೆಯಿದೆ ಎಂದರು.

ಕೇವಲ ಸುಪ್ರಸಿದ್ಧ ಕಲಾವಿದರನ್ನು ಮಾತ್ರ ಗುರುತಿಸಿ ಗೌರವಿಸುವ ಇಂದಿನ ದಿನಗಳಲ್ಲಿ ಸ್ವರಮೇಧಾ ಮಾತ್ರ ನನ್ನಂತಹ ಮೃದಂಗವಾದಕರನ್ನೂ ಗೌರವಿಸಿದೆ ಎಂದು ಸ್ವರಮೇಧಾ ಸಂಗೀತವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿ ಹಿರಿಯ ಮೃದಂಗ ವಿದ್ವಾಂಸ ಜಿ.ಎಲ್ ರಮೇಶ್ ಮಾತನಾಡಿದರು.

ಜಾನಪದ ಹಿನ್ನೆಲೆಯಿಂದ ಬಂದ ಪ್ರಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು ಸ್ವರಮೇಧಾ ಸಂಗೀತಶ್ರೀ ಪ್ರಶಸ್ತಿಗೆ ಪಾತ್ರರಾದರು. ಹಳ್ಳಿಯ ಹುಡುಗನಾಗಿದ್ದ ನನಗೆ ಸಂಗೀತ ವಿದ್ವಾಂಸರಿಂದ ಕಲಿಯುವ ಅವಕಾಶವಾಗಲಿಲ್ಲ. ಆದರೆ ಸ್ವರಮೇಧಾ ಇಂದು ಆನ್ ಲೈನ್ ಶಿಕ್ಷಣದ ಮೂಲಕ ಕೇವಲ ನಗರವನ್ನು ಮಾತ್ರ ಕೇಂದ್ರೀಕರಿಸದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೂ ತಲುಪುವಂತಹ ಸದವಕಾಶವನ್ನು ಆಸಕ್ತರಿಗೆ ನೀಡುತ್ತಿದೆ ಎಂದು, “ಒಳಿತು ಮಾಡು ಮನುಜ ಇರೊದು ಮೂರು ದಿವಸ” ಹಾಡನ್ನು ಹಾಡಿ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದರು.

ಜೀವನ ವಿಕಾಸಕ್ಕೆ ಸ್ವರಮೇಧಾ ಸಂಗೀತ ಎಂಬ ವಿಚಾರವನ್ನು ಕುರಿತು ಚಿಂತಕ ರಾಘವೇಂದ್ರ ಗುರೂಜಿ ಉಪನ್ಯಾಸ ನೀಡಿದರು. ಜನಸೇವಾ ವಿದ್ಯಾಕೇಂದ್ರದ ಮುಖ್ಯಸ್ಥರಾದ ನಿರ್ಮಲ್ ಕುಮಾರ್ ಅವರು ವಿಶ್ವಗುರುವಾಗುವತ್ತಿರುವ ಭಾರತದೇಶಕ್ಕೆ ಸ್ವರಮೇಧಾ ತನ್ನ ಸೇವೆಯನ್ನೂ ಸಲ್ಲಿಸುವಂತಗಾಲಿ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ನಟ ರಮೇಶ್ ಭಟ್ ಸ್ವರಮೇಧಾ ಸಂಸ್ಥೆಯ ಸಂಗೀತಸೇವೆಯನ್ನು ಶ್ಲಾಘಿಸಿದರು. ಚಿತ್ರನಟಿ ಐಂದ್ರಿತ ರೆ ಸ್ವರಮೇಧಾ ಅಂತರಜಾಲಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಭರತ್ ರಾವ್ ಕೆ.ಎಸ್, ಸುಪ್ರಸಿದ್ಧ ಗೋಸೇವಕ ಮಹೇಂದ್ರ ಮುನ್ನೋಟ್ ಹಾಗೂ ಉದ್ಯಮಿ ರಾಜೇಶ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಗಾಯನಕ್ಕೆ ಪಕ್ಕವಾದ್ಯದಲ್ಲಿ ಹಿರಿಯ ಮೃದಂಗ ವಿದ್ವಾನ್ ರಮೇಶ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಸುರೇಶ್ ಅವರು ಸಹಕರಿಸಿದರು. ಕವಿತಾ ದೀಪಕ್, ಮೀನಾ ಶಾಂತಲ ಹಾಗೂ ಹಿಮಾ ಶ್ರೀನಿವಾಸ್ ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

SWARAMEDHA MUSIC FESTIVAL 2021-22 SELECTED VIDEO CLIPS

https://www.youtube.com/playlist?list=PLaSBeq6W95OSsoNrHsxVhVQMiuZ3Cms2f

SWARAMEDHA MUSIC FESTIVAL 2021-22 OFFICIAL 1350 PHOTOS

Exit mobile version