ಪ್ರಳಯ ಜಗದ ಲಯ

 

ಜಗದ ಜನ ಕಾದಿತ್ತು ಪ್ರಳಯವನು
ಅಳಿದು ಹೋಗುವ ಭೀತಿ ಆತಂಕದಲಿ
ಇಂದೂ ಕಾಯುತಿಹರು ಜನರು
ಪ್ರಳಯವಾಗಲಿಲ್ಲೆಂಬ ಕೌತುಕದಲಿ

ಸ್ವರ್ಗಕ್ಕೆ ಟೂರ್ ಹೋಗುವಾಸೆ ಕೆಲವರಿಗೆ
ಅಲ್ಲೂ ಕಂಪನ ಹುಟ್ಟೀತೆಂಬ ನಡುಕ ಹಲವರಿಗೆ
ಅಷ್ಟರೊಳಗೊಮ್ಮೆ ಗೂಡು ಸೇರುವ ಆಸೆ
ಬದುಕ ಕಟ್ಟುವ ಭರದಿ ಊರ ಬಿಟ್ಟವರಿಗೆ

ಊಟ ಬಿಟ್ಟವರೆಷ್ಟೋ; ನಿದ್ದೆ ಕಳೆದವರೆಷ್ಟೋ
ದಿನಬೆಳಗೆ ಕೂಡು-ಕಳೆವ ಲೆಕ್ಕ ಮಾಡಿದವರೆಷ್ಟೋ
ಮೂರ್ಖರಾದರು ಜನರು, ಮೂರ್ಖ ಪೆಟ್ಟಿಗೆಯೆದುರು
ಸಾರ್ಥಕವಾಗಿತ್ತು ಅದನು ಹುಟ್ಟುಹಾಕಿದ್ದು

ನಾಲ್ಕಾರು ತಿಂಗಳಿಂದ ಪ್ರಳಯದ್ದೇ ಕಥೆ ಇಲ್ಲಿ
ದೂರದರ್ಶನದವರಿಗೆ ಇದೇ ತಟ್ಟೆ ತಾಂಬೂಲ
ಪ್ರಳಯವಾಗಲಿ ಬಿಡಲಿ ಅವುಗಳಿಗೆ
ನೆಲಕಚ್ಚಿದ್ದ ಟಿಆರ್‌ಪಿ ಹೆಚ್ಚಿದರೆ ಸಾಕು ಅಡಿಗಡಿಗೆ

ಜ್ಯೋತಿಷಿಗಳದ್ದೋ ಮತ್ತೊಂದು ವರಾತ
ಪಾಪದಾ ಕೊಡ ತುಂಬಲಿಲ್ಲ ಜನರದ್ದು, ಅದಕೇ
ಪ್ರಳಯದಾ ಸದ್ದಡಗಿದ್ದು, ವಿಜ್ಞಾನಿಗಳೆಂದರು
ಕೇಳಲಿಲ್ಲವೇ ನಿಮಗೆ, ನಾವಂದಿದ್ದು ಆಡಿದ್ದು

ಸಾಹಿತಿಗಳ ತಕರಾರು ಬೇರೊಂದು ಬಗೆಯದ್ದು
ಪ್ರಳಯವಾಗಲಿ ಇಂದೇ ಜನಮಾನಸದಲಿ
ಹುಚ್ಚೆದ್ದು ಹರಿಯಲಿ ಮನ್ವಂತರದಮೃತ ಹೊಳೆ
ಕೊಚ್ಚಿಹೋಗಲಿ ಸ್ವಾರ್ಥ, ಮತಭೇದ ಭಾವಕೊಳೆ
– ದೀಕ್ಷೆ

Exit mobile version