ಮುಕ್ತವಾದೆ…ನೀ…ಮುಕ್ತವಾದೆ…!

-ಚಿನ್ಮಯ ಎಂ.ರಾವ್, ಹೊನಗೋಡು

ಕನಸು ಕೈಜಾರುವ ಮುನ್ನ
ಕರೆದು ಆಲಂಗಿಸಿ ನನ್ನ
ಕನಿಕರಿಸಿ ಕಾರಣಕೆ
ಮನವಿರಿಸಿ ಮೋಹಕ್ಕೆ
ಶರಣಾದೆ ಭರದಿಂದ
ಬರನೀಗಿ ಮುದದಿಂದ
ನಿಂತಲ್ಲೆ ನಿಲುವಾಗಿ
ನಿಷ್ಕಾಮ ನಡೆಯಾಗಿ
ನೀತಿ ರೀತಿಯ ಹಿಡಿದು
ಪ್ರೀತಿಗತಿಯನು ಮುಡಿದು
ನೀರಸದ ಬದುಕನೊಡೆದು
ಮುಕ್ತವಾದೆ…ನೀ…ಮುಕ್ತವಾದೆ…!

ಹಿಂಜರಿಕೆ ಹಿತವಾಗಿ
ಮುಂಜರಿಕೆ ಮುಂದಾಗಿ
ಸಮಯಕ್ಕೆ ಸಮನಾಗಿ
ಸಾವಧಾನಿಯು ಆಗಿ
ಸಾವಕಾಶದಿ ಬಾಗಿ
ಕನವರಿಕೆಯ ನೀಗಿ
ಮನವರಿಕೆಯ ಜೊತೆಯಾಗಿ
ಸಾನುರಾಗಕೆ ಸ್ವಾಧೀನವಾಗಿ
ಕಾಣುತಲೆ ಮರೆಯಾಗಿ
ಕಾಣದೆಲೆ ಬೆರೆತಾಗಿ
ಕಾದಭಾವದ ಕೈಪಿಡಿದು
ಮುಕ್ತವಾದೆ…ನೀ…ಮುಕ್ತವಾದೆ…!

ಶ್ರೀಮಂತ ಪರಿಧಿಯ
ಒಳಹೊರಗೆ ಇಣುಕುತ್ತ
ದಮನವಾಗದ ಹೊರತು
ಬಯಕೆಯನು ಬಯಸುತ್ತ
ಮನದಲ್ಲಿ ಭಯ ಸುತ್ತ
ಕಲ್ಪನೆಯ ಕೆಣಕುತ್ತ
ಪಯಣ ಪ್ರಾರಂಭದಲಿ
ತಂಗಾಳಿ ಮುಂಗಾರು ಒಂದಾಗಿ
ಮುಂಗಾರು ನಿಂತಿರಲು
ತಂಗಾಳಿ ಬೀಸಿರಲು
ಮುಕ್ತವಾದೆ…ನೀ…ಮುಕ್ತವಾದೆ…!

ಬೆಟ್ಟದಾರೋಹದಲಿ
ಬೆಂಬಿಡದೆ ಬೆಂಬಲಿಸಿ
ಹಣೆಬರಹವನೆ ಒರೆಸಿ
ಮುತ್ತಾಗಿಸಿ…
ಮುನ್ನುಡಿಗೆ ಮುತ್ತಾಗಿಸಿ
ಬೆನ್ನುಡಿಗು ಮುಖ ತೋರಿಸಿ
ಶಿಖರ ತಲುಪಲು ನಿತ್ಯ
ಮದ ಸರಿಯೆ ನೈಪಥ್ಯ
ಅಡಗಿ ಹೋದರೆ ಒಡಲು
ಮುಕ್ತಿಗದು ಪಥ್ಯ
ಹಿಂಬಾಲಿಸಲು
ಹಿಂದು ಹಿಂದಾಗದೆ
ಮುಂದು ಮುಂದಾಗದೆ
ಸಮಕೆ ಬಂದರೆ ಮಾತ್ರ
ಮುಕ್ತಿ ಹೊಂದಲು ಮುಕ್ತ
ಸಮಕೆ ಬರುವಲ್ಲಿರಲು
ಸುಪ್ತಚಿತ್ತ ನೋಡಿ ಅತ್ತ ಇತ್ತ
ಮುಕ್ತವಾದೆ…ನೀ…ಮುಕ್ತವಾದೆ…!

ಮುಕ್ತಿಯೆಂದರೆ ಏನು?
ಮುಕ್ತವಾಗುವುದೇನು?
ಶಕ್ತವಾಗುವುದೇನು?
ಆಸಕ್ತವಾಗುವುದೇನು?
ನಿರಾಸಕ್ತಿಯೇನು?
ನಿರಾಡಂಬರವೇನು?
ಅಲೌಕಿಕವೇನು?
ಲವ್ಕಿಕವೇನು?
ಲವಲವಿಕೆಯೇನು?
ಬಲ್ಲವರ್‍ಯಾರು?
ವಿಷಯಬಲ್ಲಿದರ್‍ಯಾರು?
ಸ್ವಾನುಭವದಿ ಹೇಳುವೆ ಕೇಳು..
ನಾ ಮುಕ್ತ ನೀ ಮುಕ್ತಿ
ಮುಕ್ತವಾಗುವ ಯುಕ್ತಿಯೇ ಮುಕ್ತಿ
ಇದು ನನ್ನದೇ ಉಕ್ತಿ
ಅಂತೂ ಸುಡುಗಾಡ ಸೇರುವ ಮುನ್ನವೇ
ಮುಕ್ತವಾದೆ…ನೀ…ಮುಕ್ತವಾದೆ…!
ಮುಕ್ತಿ ಪಡೆದೆ…ನಾ ಮುಕ್ತಿ ಪಡೆದೆ…!

************

Exit mobile version