‘ಲವ್ ರಿಸೆಟ್’ ಕಿರುಚಿತ್ರದ ಸಾಂಗ್ ರಿಲೀಸ್ – ಪವನ್, ಸಂಜನಾ ಬುರ್ಲಿ ಅಭಿನಯದ ಕಿರುಚಿತ್ರ

ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವುಳ್ಳ ಶ್ರೀ ಗಣೇಶ್ ‘ಲವ್ ರಿಸೆಟ್’ ಎಂಬ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷ ಏನಪ್ಪ ಅಂದ್ರೆ ಈ ಕಿರುಚಿತ್ರದಲ್ಲಿ ಸಿನಿಮಾದಂತೆಯೇ ಬ್ಯೂಟಿಫುಲ್ ಲೊಕೇಶನ್ ನಲ್ಲಿ ಸೆರೆ ಹಿಡಿದ ಹಾಡು ಕೂಡ ಇದೆ. ಇಂದು ಶ್ರೀ ಗಣೇಶ್ ಹಾಗೂ ಅವರ ತಂಡ ‘ಲವ್ ರಿಸೆಟ್’ ಹಾಡಿನೊಂದಿಗೆ ಮಾಧ್ಯಮ ಮಿತ್ರರನ್ನು ಎದುರುಗೊಂಡಿತ್ತು.

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಪವನ್ ಹಾಗೂ ಸಂಜನಾ ಬುರ್ಲಿ ನಾಯಕ ನಾಯಕಿಯಾಗಿ ನಟಿಸಿರುವ ಕಿರುಚಿತ್ರ ‘ಲವ್ ರಿಸೆಟ್’. ಲವ್ ಸಬ್ಜೆಕ್ಟ್ ಒಳಗೊಂಡ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಲ್ಲಿ ಅರಳಿದ ‘ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡೊಂದಿದೆ. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನವಿದೆ. ಅಂದ್ಹಾಗೆ ನಾಳೆ ಎ2 ಮ್ಯೂಸಿಕ್ ನಲ್ಲಿ ಈ ಸಾಂಗ್ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ಶ್ರೀಗಣೇಶ್ ಮಾತನಾಡಿ ನಾವಿದನ್ನು ಕಿರುಚಿತ್ರ ಅಂತ ಮಾಡಿಲ್ಲ. ಒಂದು ಸಿನಿಮಾ ರೀತಿ ಮಾಡಿದ್ದೀವಿ. ಕ್ವಾಲಿಟಿ ಕೂಡ ಸಿನಿಮಾ ರೀತಿಯೇ ಮೂಡಿಬಂದಿದೆ. ಕಲಾವಿದರು, ತಂತ್ರಜ್ಞರು ಪ್ರತಿಯೊಬ್ಬರು ಅನುಭವವುಳ್ಳವರೇ ಇಲ್ಲಿ ಕೆಲಸ ಮಾಡಿದ್ದಾರೆ. ಕಿರುಚಿತ್ರ ಎಂದು ಬಂದಾಗ ಹಾಡು ಅಥವಾ ಟೀಸರ್ ಬಿಡುಗಡೆ ಮಾಡಿ ಪ್ರಮೋಷನ್ ಮಾಡೋದು ಬಹಳ ಕಡಿಮೆ. ಅಂತಹದ್ದೊಂದು ಪ್ರಯತ್ನವನ್ನು ನಾವು ಮಾಡಿದ್ದೇವೆ. ಸದ್ಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ‘ಲವ್ ರಿಸೆಟ್’ ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ರು.

ನಿರ್ದೇಶಕರು ಕಿರುಚಿತ್ರದ ಬಗ್ಗೆ ಹೇಳಿದಾಗ ಹಾಗೂ ಸಿನಿಮಾದಲ್ಲಿರುವಂತೆ ಹಾಡು ಕೂಡ ಇದೆ ಎಂದಾಗ ಸಖತ್ ಇಂಟ್ರಸ್ಟಿಂಗ್ ಎನಿಸಿತು. ಜೊತೆಗೆ ಶ್ರೀ ಗಣೇಶ್ ಅವರ ಕೆಲಸದ ಬಗ್ಗೆ ಮುಂಚೆಯೇ ತಿಳಿದಿತ್ತು. ಆದ್ರಿಂದ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಕಲಾವಿದರು, ತಂತ್ರಜ್ಞರಿಗೂ ಲವ್ ಸ್ಟೋರಿ ಅಂತ ಇರುತ್ತೆ. ಪ್ರೀತಿ ಹಾಗೂ ಕೆರಿಯರ್ ಅಂತ ಬಂದಾಗ ಅದನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಅನ್ನೋದ್ರ ಸುತ್ತ ಹೆಣೆಯಲಾದ ಕಥೆ ಕಿರುಚಿತ್ರದಲ್ಲಿದೆ. ಶಿರಸಿಯಲ್ಲಿ ಒಟ್ಟು ನಾಲ್ಕು ದಿನ ಶೂಟ್ ಮಾಡಿದ್ವಿ ಒಂದೊಳ್ಳೆ ಟ್ರಿಪ್ ಹೋಗಿ ಬಂದ ಫೀಲ್ ಇತ್ತು ಎಂದು ನಾಯಕ ಪವನ್ ತಮ್ಮ ಅನುಭವ ಹಂಚಿಕೊಂಡ್ರು.

ಈ ಕಿರುಚಿತ್ರವನ್ನು ಸಂತೋಷ್ ನಿರ್ಮಿಸಿದ್ದು, ಮ್ಯಾಜಿಕ್ ಫ್ರೇಮ್ ಕ್ರಿಯೇಷನ್ಸ್ ಸಹ ನಿರ್ಮಾಣವಿದೆ. ಪ್ರಜ್ವಲ್ ಭಾರಧ್ವಜ್ ಛಾಯಾಗ್ರಹಣ, ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನ, ಅಸ್ಲಾಮ್ ಮತ್ತು ಕೃಷ್ಣ ಸುಜ್ಞಾನ್ ಸಂಕಲನ, ರಂಜಿತ್ ಶಂಕರೆ ಗೌಡ ಸಹ ನಿರ್ದೇಶನ ಈ ಕಿರುಚಿತ್ರಕ್ಕಿದೆ.

 

Exit mobile version