ನಿರ್ದೇಶನದತ್ತ ಟಿಕ್ ಟಾಕ್ ಸ್ಟಾರ್ ಅಲ್ಲು ರಘು – ಚೊಚ್ಚಲ ನಿರ್ದೇಶನದ ‘ಸಾವಿರುಪಾಯಿಗೆ ಸ್ವರ್ಗ’ ಕಿರುಚಿತ್ರ ರಿಲೀಸ್

ಟಿಕ್ ಟಾಕ್ ಮೂಲಕ ಖ್ಯಾತಿ ಗಳಿಸಿರುವ ಅಲ್ಲು ರಘು ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಟಿಕ್ ಟಾಕ್ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಲ್ಲು ರಘು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಅದರ ಚೊಚ್ಚಲ ಪ್ರಯತ್ನ ಎಂಬಂತೆ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದು, ‘ಸಾವಿರುಪಾಯಿಗೆ ಸ್ವರ್ಗ’ ಶೀರ್ಷಿಕೆಯ ಕಿರುಚಿತ್ರ ಬಿಡುಗಡೆಯಾಗಿದೆ. ಕಿರುಚಿತ್ರ ಬಿಡುಗಡೆಯ ಜೊತೆಗೆ ಒಂದಿಷ್ಟು ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ ಯಶಾರಾದ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಡಿಂಡಿಮ ಸಂಭಾಷಣೆ, ರಾಘವ್ ಹಾಗೂ ಅಭಿನಂದನ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಚಲ್ಲ ಛಾಯಾಗ್ರಾಹಣ, ಕೃಷ್ಣ ಸುಜನ್ ಸಂಕಲನ ಚಿತ್ರಕ್ಕಿದೆ.

‘ಅಲ್ಲು ರಘು ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಕಿರುಚಿತ್ರ. ಈ ಚಿತ್ರಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಜನ ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಈ ಕಿರುಚಿತ್ರ ಮಾಡಲು ಸಾಧ್ಯವಾಯ್ತು ಎಲ್ಲರಿಗೂ ನನ್ನ ಧನ್ಯವಾದಗಳು. ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಒಂದು ಪ್ರಯತ್ನ ಮಾಡಿದ್ದೇನೆ. ಏನೇ ತಪ್ಪಿದ್ದರು ತಿಳಿಸಿ. ಎಲ್ಲರೂ ಈ ಕಿರುಚಿತ್ರ ನೋಡಿ ಅಭಿಪ್ರಾಯ ತಿಳಿಸಿ ಎಂದು ಕೇಳಿಕೊಂಡ್ರು.

ಚಿತ್ರದ ಸಂಕಲನಕಾರ ಕೃಷ್ಣ ಸುಜನ್ ಮಾತನಾಡಿ ನಾವೆಲ್ಲ ತುಂಬಾ ಹಳೆಯ ಸ್ನೇಹಿತರು. ಅಲ್ಲುಗೆ ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇತ್ತು. ಆದ್ರೆ ನಾನು ಫ್ಯೂಚರ್ ಫಿಲ್ಮಂ ಮಾಡೋದು ಅಷ್ಟು ಸುಲಭವಲ್ಲ. ಮೊದಲು ಕಿರುಚಿತ್ರ ಮಾಡು ಮತ್ತೊಂದಿಷ್ಟು ನಿರ್ದೇಶನದ ಬಗ್ಗೆ, ಕ್ಯಾಮೆರಾ ವರ್ಕ್ ಎಲ್ಲದರ ಬಗ್ಗೆ ತಿಳಿದುಕೋ ಆಮೇಲೆ ಸಿನಿಮಾ ಮಾಡುವಂತೆ ಎಂದು ಹೇಳಿದ್ದೆ. ಆ ಚರ್ಚೆ ನಂತರ ಆರಂಭವಾದ ಕಿರುಚಿತ್ರ ‘ಸಾವಿರುಪಾಯಿಗೆ ಸ್ವರ್ಗ’. ಫೈನಲ್ ಔಟ್ ಪುಟ್ ನೋಡಿ ಖುಷಿ ಆಯ್ತು. ಇಷ್ಟರಮಟ್ಟಿಗೆ ಬಂದಿದೆ ಅಂದ್ರೆ ನಮಗೆ ತುಂಬಾ ಖುಷಿ ಎನಿಸುತ್ತೆ ಎಂದು ಸಂತಸ ಹಂಚಿಕೊಂಡ್ರು.

ಒಳ್ಳೆ ಅವಕಾಶ ಕೊಟ್ಟಿದ್ದಕ್ಕೆ ಅಲ್ಲು ರಘುಗೆ ತುಂಬಾ ಧನ್ಯವಾದಗಳು, ನನಗೆ ಹೀರೋ ಆಗಬೇಕು ಎಂದು ಬಹಳ ಆಸೆ ಇತ್ತು ಈ ಚಿತ್ರದ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇನ್ನು ಹೆಚ್ಚು ಸಿನಿಮಾಗಳನ್ನು ಮಾಡುತ್ತೇವೆ. ಎಲ್ಲರ ಸಪೋರ್ಟ್ ನಮ್ಮ ತಂಡದ ಮೇಲೆ ಹೀಗೆ ಇರಲಿ. ಅಲ್ಲು ರಘು ಅವರ ಬಳಿ ಹಲವಾರು ಕಥೆಗಳಿವೆ ಅವರಿಗೂ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಕಿರುಚಿತ್ರದಲ್ಲಿ ನಟಿಸಿರುವ ವರುಣ್ ಆರಾಧ್ಯ ಸಂತಸ ಹಂಚಿಕೊಂಡ್ರು.

ನಟಿ ರಶ್ಮಿತ ಗೌಡ ಮಾತನಾಡಿ ಇದು ನನ್ನ ನಟನೆಯ ಮೊದಲ ಕಿರುಚಿತ್ರ. ನಾನು ಭರತನಾಟ್ಯ ಡಾನ್ಸರ್, ಆಯ್ಕೆ ಮಾಡಿಕೊಂಡಿದ್ದು ಮಾಡೆಲಿಂಗ್. ಇದರ ಜೊತೆಗೆ ನಟನೆ ಅಂದ್ರೆ ನನಗೆ ತುಂಬಾ ಇಷ್ಟ. ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಖುಷಿ ಇದೆ. ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ತುಂಬಾ ಧನ್ಯವಾದಗಳು. ಎಲ್ಲರೂ ಕಿರುಚಿತ್ರ ನೋಡಿ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡ್ರು.

Exit mobile version