ನಾಡನ್ನಾಳಿದವರ ನಾಡಲ್ಲೊಂದು ವಿಶ್ವ ಕನ್ನಡ ಸಮ್ಮೇಳನ ?!

ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು

ಭೂಮಿಯಲ್ಲಿ ಸಕಲಜೀವಿಗಳಿಗೂ ಭಾವನೆಗಳನ್ನು ವ್ಯಕ್ತಪಡಿಸಲು ನೂರಾರು ದಾರಿಗಳಿವೆ. ತಾಯಗರ್ಭದಲ್ಲೇ ಮಗು ಹೊರಪ್ರಪಂಚದ ಮಾತು-ಮೌನಗಳಿಗೆ ಸ್ಪಂದಿಸುವ ಪರಿ ಸೃಷ್ಟಿಯ ವಿಭಿನ್ನ,ವಿಶೇಷ,ವಿಚಿತ್ರಗಳಲ್ಲೊಂದು. ಮಗುವೊಂದು ಭೂತಾಯ ಮಡಿಲಲ್ಲಿ ಮೊದಲು ಅಳುವಾಗ ತನ್ನನ್ನು ಮುದ್ದುಮಾಡಿ ಸುಮ್ಮನಾಗಿಸುವ ತಾಯ ಮೆಲ್ನುಡಿಯ ದನಿಯಲ್ಲಿ ಭಾಷೆಯೊಂದನ್ನು ಮೊದಲಸಲ ಕೇಳುತ್ತದೆ. ಅದೇ ರೀತಿಯ ದನಿ ಪದೇ ಪದೇ ಬೇರೆ ಬೇರೆ ರೀತಿಯಲ್ಲಿ ವಿಸ್ತಾರಗೊಳ್ಳುತ್ತಿದ್ದಂತೆ ಸವಿಸ್ತಾರವಾಗಿ ಆ ಮಗುವಿನ ಅಂತರಂಗದಲ್ಲಿ ಒಂದು ಭಾಷೆ ಅಂತರ್ಗತಗೊಳ್ಳುತ್ತಾ ಹೋಗುತ್ತದೆ. ಕ್ರಮೇಣ ಬೆಳೆಯುತ್ತಾ ಹೋದಂತೆ ಆಡುತ್ತಾ ಮುದ್ದುಮುದ್ದು ಮಾತಾಡುತ್ತಾ ತನ್ನ ಸುತ್ತಮುತ್ತಲಿನ ತನ್ನವರ ಭಾಷೆಯನ್ನೇ ತನ್ನದಾಗಿಸಿಕೊಳ್ಳುತ್ತದೆ. ತನ್ನ ಬೇಕುಬೇಡಗಳನ್ನು,ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯೇ ಅದಕ್ಕೆ ವರವಾಗುತ್ತದೆ.

ಹೀಗೆ ಹಿಂದೊಮ್ಮೆ ಮಗುವಾಗಿದ್ದ ನಾವೂ ಭಾಷೆಯೊಂದನ್ನು ನುಡಿನುಡಿದು ವರವಾಗಿಸಿಕೊಂಡಿದ್ದೇವೆ. ನಾವು ನುಡಿಯುತ್ತಿರುವ ಭಾಷೆಯ ಹೆಸರೇ “ಕನ್ನಡ”. ಹಾಗಾಗಿ ಕನ್ನಡವೇ ನಮ್ಮ ವರ. ತಾಯ್ನಾಡಿನ ಭಾಷೆಯನ್ನೆಂದಾದರು ಯಾರಾದರೂ ಮರೆಯುವರಾ?..ಸಾಧ್ಯವೇ ಇಲ್ಲ. ಭಾಷೆಯೊಂದು ಅಷ್ಟರಮಟ್ಟಿಗೆ ನಮ್ಮ ಭಾವನೆಗಳೊಂದಿಗೆ ಇನ್ನಿಲ್ಲದಂತೆ ಬೆಸೆದುಕೊಂಡಿದೆ.”ಅಮ್ಮ” ಎನ್ನುವಾಗ ಆಗುವ ಹಿತ “ಮದರ್”ಎಂದಾಗ ನಿಜವಾದ ಕನ್ನಡಿಗನಿಗೆ ಆಗುವುದಿಲ್ಲ. ಅದೇ ನಮ್ಮ ಮಾತೃಭಾಷೆಯಲ್ಲಿರುವ ಸಂತಸ.ತಾಯ್ನಾಡ ತಾಯ್ನುಡಿಯೊಂದಿಗೆ ನಮಗೆ ನಮ್ಮ ನಮ್ಮ ತಾಯಷ್ಟೇ ಅವಿನಾಭಾವ ಸಂಬಂಧ. ಒಂದೇ ಭಾಷೆಯನ್ನು ಮಾತನಾಡುವ ಜೀವಿಗಳಲ್ಲಿ ತಾವೆಲ್ಲಾ ಒಂದೇ ತಾಯ ಮಕ್ಕಳೆಂಬ ಭಾವ. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರಲ್ಲಿ ಪರಸ್ಪರ ಆಪ್ತಬಂಧ,ಸಂಬಂಧ. ಒಂದೇ ಭಾಷೆಯನ್ನು ಮಾತನಾಡುವ ಮಂದಿಗಳು ಒಂದುಗೂಡುವ,”ಸಂಗಮಿಸುವ” ಸನ್ನಿವೇಶಗಳು ಒಮ್ಮೊಮ್ಮೆ ತಾನಾಗಿಯೇ ಸಹಜವಾಗಿ ಒದಗಿ ಬರುತ್ತದೆ.ಏಕೆಂದರೆ ಭಾವದ ವಿನಿಮಯ ಅರ್ಥಪೂರ್ಣವಾಗಿ ಪರಿಪೂರ್ಣಗೊಂಡು ಸಂಭ್ರಮಿಸಿ ಆಗುವ “ಸಂಗಮ” ಪರಸ್ಪರ ಒಂದೇ ಭಾಷೆಯಲ್ಲಿ ಮಾತಾಡುವ ಜೀವಿಗಳಲ್ಲಿ ಮಾತ್ರ. ಅಂತಹ ಒಂದು ಸಂಭ್ರಮವನ್ನು ಸೃಷ್ಟಿಸಲು ಒಂದೇ ಭಾಷೆಯನ್ನು ನುಡಿವ ಒಂದಷ್ಟು ಮಂದಿ ಒಗ್ಗೂಡಿ ಒಡನಾಡಿ “ಸಂಗಮ”ಗೊಂಡಿದ್ದಾರೆ.

“ಸಂಗಮ” ಸಂಸ್ಥೆಯನ್ನು ಹುಟ್ಟುಹಾಕಿಕೊಂಡು ವಿಶ್ವ ಕನ್ನಡ ಸಮ್ಮೇಳನವನ್ನು ಮಾಡಲು ಮುಂದಾಗಿದ್ದಾರೆ. ಅದು ಎಲ್ಲಿ?ಎಂದು ಕೇಳಿದರೆ ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯಾಗುತ್ತದೆ. ಶತಶತಮಾನಗಳ ಕಾಲ ನಮ್ಮನ್ನು ಆಳಿ,ನಮ್ಮವರನ್ನು ಅಳಿಸಿ,ನಮ್ಮ ನಾಡನ್ನು ಅಳಿವಿನಂಚಿಗೆ ತಳ್ಳಿ ಕೊನೆಗೊಮ್ಮೆ ಇಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅಳಿದುಳಿದದ್ದನ್ನೂ ಎತ್ತಿಕೊಂಡು ಕಾಲ್ಕಿತ್ತಿದ್ದ ಬ್ರಿಟೀಷರ ನಾಡಿನಲ್ಲಿ.ಹೌದು..ಇಂತಹಾ ಒಂದು ಸಾಹಸಕ್ಕೆ ಕೈಹಾಕಿದ್ದಾರೆ ಲಂಡನ್ ನಿವಾಸಿ ಕನ್ನಡಿಗ “ಕುಮಾರ್”. ವಿಶ್ವ ಕನ್ನಡ ಸಮ್ಮೇಳನವನ್ನು ಯೂರೋಪ್ ರಾಷ್ಟ್ರಗಳಲ್ಲಿ ಆಯೋಜಿಸಬೇಕೆಂಬ ಅವರ ಈ ಯೋಜನೆ ಬಹುವರುಷಗಳ ಕನಸು.ಈಗ ನನಸಾಗಿಸಲು ಅವರಿಗೆ ಜೊತೆಯಾಗಿದ್ದಾರೆ ಅವರ ಕನ್ನಡ ಮಿತ್ರರಾದ (ಕನ್ನಡ ಭಾಷೆಯಿಂದ ಮಿತ್ರರಾದವರು) ಸಂಪತ್ ಯಾದವಾಡ್ ಮತ್ತು ಶರತ್ ಅಯ್ಯರ್.

ಕನ್ನಡದ ಸೇವೆಗಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ನಿವೃತ್ತ ಕನ್ನಡ ಅಧ್ಯಾಪಕ,ಲೇಖಕ,ಕವಿ ಹಾಗು ಬಹುಮುಖಪ್ರತಿಭೆ ಕಾಸರಗೋಡು ಸಮೀಪದ ಕುಂಟಿಕಾನಮಠದ ಬಾಲಕೃಷ್ಣ ಭಟ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಅದರಲ್ಲೂ ಏಡ್ಸ್ ಪೀಡಿತರ ದನಿಯಾಗಿರುವ “ಮುಖಪುಟ-ದಿ ಕವರ್ ಪೇಜ್” ಚಿತ್ರದ ನಟಿ,ನಿರ್ದೇಶಕಿ ಹಾಗು ಭರತನಾಟ್ಯ ಕಲಾ”ದೆ “ರೂಪಾ ಅಯ್ಯರ್”, ಈ ಸಮ್ಮೇಳನಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

“ವಿಶ್ವಕನ್ನಡ ಸಮ್ಮೇಳನ ಯೂರೋಪ್-೨೦೧೧”,ಇದನ್ನು ಲಂಡನ್ ನಗರದಲ್ಲಿ ಈ ವರುಷದ ಅಕ್ಟೋಬರ್ ನಲ್ಲಿ “ಸಂಗಮ ಸಂಸ್ಥೆ”ಯ ವತಿಯಿಂದ ನಡೆಸಲು ಈಗಾಗಲೇ ಇವರೆಲ್ಲಾ ಕಾರ್ಯೋನ್ಮುಖರಾಗಿದ್ದಾರೆ.

ನಮ್ಮ ನಾಡಿನ ಕಲೆ,ಸಂಸ್ಕೃತಿಯನ್ನು ಸಾಗರಾದಾಚೆಯ ಬ್ರಿಟೀಷರ ನಾಡಿನಲ್ಲಿ ಪರಿಚಯಿಸಿ ಆ ಮೂಲಕ ಆಂಗ್ಲರ ನೆಲದಲ್ಲಿ ಕನ್ನಡದ ಬೀಜವನ್ನು ಬಿತ್ತುವ ಕಾರ್ಯ “ಸಂಗಮ”ದ ಗೆಳೆಯರಿಂದ ಆಗಬೇಕೆಂಬುದು ಕಳೆದ ಹತ್ತು ವರುಷಗಳಿಂದ ಅಲ್ಲೇ ನೆಲೆಸಿರುವ ಕನ್ನಡಕುವರ “ಕುಮಾರ್”ಅವರ ಆಶಯ.ಇದಕ್ಕೆ ಅವರ ಪ್ರೌಡಶಾಲಾ ಸಹಪಾಠಿ (ಜನಸೇವಾ ವಿದ್ಯಾಕೇಂದ್ರ,ಚನ್ನೇನಹಳ್ಳಿಯಲ್ಲಿ)ಗೆಳೆಯ “ಸಂಸದ ಬಿ.ವೈ.ರಾಘವೇಂದ್ರ” ಸಹಕರಿಸುತ್ತಿರುವುದು ಸಂಗಮದ ಕನ್ನಡ ಮಿತ್ರರಿಗೆ ಆನೆಬಲ ಬಂದಂತಾಗಿದೆ.ಈ ಮಧ್ಯೆ ನಾಡಿನ ಮುಖ್ಯಮಂತ್ರಿ ತಾವೂ ಕೂಡ ಈ ಸಮ್ಮೇಳನದಲ್ಲಿ ಕುದ್ದು ಹಾಜರಿದ್ದು ಸಹಕರಿಸುವುದಾಗಿ ಹೇಳಿದ್ದಾರೆ.

ಹಲವಾರು ಸಂಘಸಂಸ್ಥೆಗಳ ಸಹಾಯದಿಂದ ರೂಪುಗೊಳ್ಳುತ್ತಿರುವ ಈ ಕನ್ನಡದ ನುಡಿಹಬ್ಬಕ್ಕೆ “ಸಂಗಮ”ದ ಗೆಳೆಯರು ತಮ್ಮ ಸ್ವಂತ ಸಂಪಾದನೆಯ ಹಣವನ್ನೂ ಸುರಿಯುತ್ತಿದ್ದಾರೆ. ಕೇವಲ ನಾನು ನನ್ನದೆಂದು ಸ್ವಾರ್ಥಿಗಳಾಗದೆ ದೂರದ ದೇಶದಲ್ಲಿದ್ದೂ ಕನ್ನಡಾಂಬೆಯ ಸೇವೆಯನ್ನು ನಾವು ನಮ್ಮದೆಂಬ ಅಭಿಮಾನದಿಂದ ಮಾಡುತ್ತಾ ,ನುಡಿಸೇವೆಗೆ ಮುನ್ನುಡಿ ಬರೆದು ಮುನ್ನಡೆಯುತ್ತಿರುವ ಕನ್ನಡಿಗರ ಸಂಗಮಕ್ಕೆ ಶುಭವಾಗಲಿ.ಸಮ್ಮೇಳನ ಯಶಸ್ವಿಯಾಗಲಿ. ಹಗಲಿರುಳೆನ್ನದೆ ತಮ್ಮತಮ್ಮ ಕೆಲಸದೊತ್ತಡದ ನಡುವೆಯೂ ಕನ್ನಡದ ಸೇವೆಗೆ ಕಂಕಣ ತೊಟ್ಟಿರುವ ಸಾಗರದಾಚೆಯ ಕನ್ನಡಾಭಿಮಾನಿಗಳು ಮೊಳಗಿಸುವ ಕನ್ನಡಕಹಳೆಯಿಂದಾದರೂ ನಮ್ಮ ಮಲಗಿರುವ ಕನ್ನಡಿಗರು ಎಚ್ಚೆತ್ತುಕೊಳ್ಳುವಂತಾಗಲಿ.
ಕನ್ನಡ ನಾಡು-ನುಡಿ ಅಮರವಾಗಲಿ.
ಈ ವಿಶ್ವಕನ್ನಡ ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – kumar@kuntikanamata.com

ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು

16-3-2011

Exit mobile version