ಆಪ್ಯಾಯಮಾನದ ಸಂಗತಿ…

ಬದುಕು ತನಗೆ ಹೇಗೆ ಬೇಕೊ ಹಾಗೆ ನಿನ್ನನ್ನು ಆಡಿಸಿತ್ತು. ಈಗ ನೀನೇ ಹೇಗೆ ಬೇಕೊ ಹಾಗೆ ಬದುಕನ್ನು ಆಡಿಸುತ್ತಿರುವೆ. ಬದುಕನ್ನು ಆನಂದಮಯವಾಗಿ ಬದುಕಿಸುವಲ್ಲಿ ಹಿಂದಿನ ಅಂದಿನ ನಿನ್ನೆಲ್ಲಾ ನೋವುಗಳನ್ನು ನೀನೇ ಸಾಯಿಸಿರುವೆ. ನಲಿವನ್ನು ಮಾತ್ರ ಬದುಕಿಸಲು ನೀನು ಬದುಕುತ್ತಿರುವೆ. ನಿನ್ನ ನಿರಂತರ ನಗುಮುಖ ಬದುಕನ್ನು ನಗುವಿನತ್ತ ಮಾತ್ರ ಮುಖ ಮಾಡಲು ಕಾತರಗೊಂಡಿದೆ. ಒಂದಾದ ನಂತರ ಇನ್ನೊಂದು ಮತ್ತೊಂದು ಕೆಲಸಗಳನ್ನು ಮಾಡುತ್ತಲೇ ಇರುವ ಆತುರದಲ್ಲಿ ಅತ್ಯುತ್ಸಾಹ ಹಾಗು ಲವಲವಿಕೆ ಹದವಾಗಿ ಬೆರೆತು ನಿನ್ನನ್ನು ಮುದಗೊಳಿಸುತ್ತಲೇ ಇದೆ. ನಿನ್ನ ಅಂತರಂಗದಲ್ಲಡಗಿರುವ ಆತ್ಮಶಕ್ತಿ ಕಂಗಳ ಕಾಂತಿಯಾಗಿ ಸುತ್ತೆಲ್ಲಾ ಸಿಂಚನ ಮಾಡುತ್ತಾ ಪರಮಪ್ರೇಮವನ್ನೇ ಪಸರಿಸುವ ಪರಿಧಿ ನಿರ್ಮಿಸುತ್ತಿದೆ. ಆ ಪರಿಧಿಯೊಳಗೆ ಬಂದು ಹೋಗುವವರೆಲ್ಲಾ ಚೈತನ್ಯದ ಚಿಲುಮೆಯಾಗುತ್ತಿದ್ದಾರೆ. ಹಾಗಾಗಿ ಅವರೆಲ್ಲಾ ನಿನ್ನೊಲುಮೆ ಗಳಿಸಲು ಹವಣಿಸುವಂತೆ ತೋರುತ್ತಿದೆ. ಕೇವಲ ತೋರಿಕೆಯ ಪ್ರೀತಿ ನಿನ್ನದಲ್ಲ. ನಿನ್ನದು ನಿಜವಾದ ಪ್ರೇಮವೆಂಬ ಸತ್ಯದ ಅರಿವು ಅವರಿಗೆ ಗೋಚರವಾಗಿದೆ. ತೋರಿಕೆಯ ಪ್ರೇಮವನ್ನು ತೋರಲು ನೀನು ಯಾರನ್ನೂ ಮಾತನಾಡಿಸುವುದಿಲ್ಲವೆಂಬುದು ನಿನ್ನ ನಡೆನುಡಿಯಿಂದ ತೋರುತ್ತದೆ. ಪ್ರತೀಕ್ಷಣವೂ ಹೀಗೇ ನಡೆಯಬೇಕೆಂದು ನಿನ್ನಂತರಂಗ ನಿನಗೆ ನುಡಿಯುತ್ತಿದೆಯೆಂದು ಭಾಸವಾಗುತ್ತಿದೆ. ಎಲ್ಲಾ ಅಚಾತುರ್ಯಗಳಿಂದ ಅತೀತವಾಗುವ ಲಕ್ಷಣ ನಿನ್ನಲ್ಲಿ ಕಾಣುತ್ತಿದೆ.

ಈ ಬದುಕಿನ ಹಲವು ದಾರಿಗಳಲ್ಲಿ ನಡೆನಡೆದು ಈಗ ಬದುಕಿಗೆ ನೀನೇ ದಾರಿಯನ್ನು ದಿಗ್ದರ್ಶಿಸುವಂತೆ ದರ್ಶನವಾಗುತ್ತಿದೆ. ಬದುಕನ್ನು ಹಲವು ಬಗೆಯಲ್ಲಿ ದರ್ಶಿಸಲು ಬದುಕು ನಿನಗೆ ದಾರಿ ಮಾಡಿಕೊಟ್ಟಿದೆ. ಅದನ್ನೆಲ್ಲಾ ಸದುಪಯೋಗಪಡಿಸಿಕೊಂಡು ಈ ಜಗತ್ತಿಗೊಂದು ಉಪಯೋಗದ ಜೀವಿಯಾಗಿರುವೆ ನೀನು. ಉಪಯೋಗದ ಉಪಕಾರದ ಜೀವಿಗಳಾದರೆ ಮಾತ್ರ ಬದುಕು ಮುಗಿದ ಮೇಲೂ ಜೀವಂತವಾಗಿರಬಹುದೆಂಬ ಅದೆಷ್ಟೋ ಉದಾಹರಣೆಗಳ ಸಾಲಿನಲ್ಲಿ ಮುಂದೆಂದೋ ನೀನೂ ಸೇರಬಹುದೆಂದೆನಿಸುತ್ತಿದೆ. “ಬದುಕು ಮುಗಿದ ಮೇಲೂ” ಎಂದೆನ್ನುವುದಕ್ಕಿಂತ ಅಂಥವರ ಬದುಕು ಮುಗಿಯುವುದೇ ಇಲ್ಲ ಎನ್ನಬಹುದು. ಬದುಕು ಮುಗಿಯದವರನ್ನು ನೋಡಿ ಎಲ್ಲರೂ ಕೈಮುಗಿಯುತ್ತಾರೆ ! ನಿನ್ನ ಬಾಹ್ಯ ಸೌಂದರ್ಯ ನಿನ್ನ ಅಂತರಂಗದವರೆಗೂ ವ್ಯಾಪಿಸಿಕೊಂಡಿರುವುದರಿಂದ ನೀನೀಗ ಎಲ್ಲೆಡೆ ವ್ಯಾಪಕವಾಗಿ ವ್ಯಾಪಿಸಿಕೊಳ್ಳುತ್ತಿರುವೆ. ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿರುವ ನಿನ್ನ ಚಲನಶೀಲ ವ್ಯಕ್ತಿತ್ವವೇ ಎಲ್ಲರಿಗೂ ಆಪ್ಯಾಯಮಾನ ಎನಿಸುತ್ತಿದೆ. ಅಂತಹ ಆಪ್ಯಾಯಮಾನದ ಸಂಗತಿಗಾಗಿ ಎಲ್ಲರೂ ನಿನ್ನ ಸಾಂಗತ್ಯ ಬೇಡುತ್ತಾರೆ ಎಂದು ನನಗನಿಸುತ್ತಿದೆ.

ಪ್ರೀತಿಯಿಂದ

ಚಿನ್ಮಯ ಎಂ.ರಾವ್ ಹೊನಗೋಡು

16-2-2013

Exit mobile version