ಸಾರಂಗಿ ಸಂತ ಉಸ್ತಾದ್ ಫಯ್ಯಾಜ್ ಖಾನ್

ಸಂದರ್ಶನ-ಲೇಖನ: ಅನನ್ಯ ಭಾರ್ಗವ ಬೇದೂರು

ಲೇಖಕರು ಯುವ ಸಂಗೀತಗಾರರು ಹಾಗು
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು
sursadhaka@gmail.com

ಮಹಾನ್ ಸಂಗೀತಗಾರರು, ಸಾಹಿತಿಗಳು, ಕಲಾವಿದರಿಗೆ ಜನ್ಮಕೊಟ್ಟ ಗಂಡುಮೆಟ್ಟಿನ ನಾಡು ಧಾರವಾಡದಲ್ಲಿ ಹುಟ್ಟಿ ಬೆಳೆದು, ಇಂದು ಬೆಂಗಳೂರೆಂಬ ಮಹಾನಗರದಲ್ಲಿ ಹೆಮ್ಮರವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಾದ್ಯಗಳಲ್ಲೊಂದಾದ ಸಾರಂಗಿ ವಾದ್ಯದ ಮುಖಾಂತರ ಪ್ರಖ್ಯಾತರಾದವರು ಉಸ್ತಾದ್ ಫಯ್ಯಾಜ್ ಖಾನ್‌ರವರು.

ಸಾರಂಗಿ; ಈ ವಾದನದಲ್ಲಿ ಅದೇನೋ ದೈವಿಕಶಕ್ತಿಯಿದೆ. ಇದಕ್ಕೆ ಕೇಳುಗನ ಹೃದಯತಂತಿಯನ್ನು ಮೀಟುವ ಸಾಮರ್ಥ್ಯವಿದೆ. ನಮ್ಮ ದೇಶದ ಇತಿಹಾಸದಲ್ಲಿ ಅದೆಷ್ಟೂ ಸಾರಂಗಿ ವಾದಕರು ಬಂದುಹೋಗಿದ್ದಾರೆ. ಇಂತಹ ವಾದ್ಯವನ್ನು ತಪಸ್ಸಿನಂತೆ ಸ್ವೀಕರಿಸಿ, ಸಾಧನೆಯ ಹಾದಿಯಲ್ಲಿ ಸಾಗಿ ನಮ್ಮ ನಾಡಿನ ಹಾಗೂ ದೇಶದ ಪ್ರಮುಖ ಸಾರಂಗಿವಾದಕರಲ್ಲಿ ಒಬ್ಬರಾಗಿ ಬೆಳೆದು ನಿಂತವರು ಉಸ್ತಾದ್ ಫಯ್ಯಾಜ್ ಖಾನ್.

ನನ್ನ ಮನದಲ್ಲಿ ಅದೆಷ್ಟೋ ಬಾರಿ ಅಂದುಕೊಂಡಿದ್ದೆ; ಕಲಾವಿದರ ಸಂದರ್ಶನ ಮಾಡಬೇಕು, ಅವರ ಜೀವನಚರಿತ್ರೆಯ ಬಗ್ಗೆ ಅಧ್ಯಯನ ಮಾಡಬೇಕೆಂದು. ಇದರಿಂದ ಒಬ್ಬ ಗಾಯಕನಾಗಿ ನನಗೆ ಅನೇಕ ಹಿರಿಯ ಕಲಾವಿದರ ಜೊತೆ ಬೆರೆಯುವ ಅವಕಾಶ ಹಾಗೂ ಅವರ ಮಾರ್ಗದರ್ಶನ ಸಿಗುವುದು. ಇದರಿಂದ ನಾನೂ ಕೂಡ ಅವರಲ್ಲಿರುವ ಉತ್ತಮ ಅಂಶಗಳನ್ನು ರೂಢಿಸಿಕೊಂಡು ಬೆಳೆಯಬಹುದೆಂಬ ಆಶಾಕಿರಣ. ಹೀಗೆ ನಾನು ಬಯಸಿದ ಒಂದು ಕಲ್ಪನೆ ಸಾಕಾರಗೊಂಡಿದ್ದು ಕನ್ನಡ ಟೈಮ್ಸ್ ಪತ್ರಿಕೆಗೆ ಈ ಲೇಖನ ಮಾಡುವುದರ ಮುಖಾಂತರವಾಗಿ.

ಕನ್ನಡ ಟೈಮ್ಸ್ ಪತ್ರಿಕೆಗೆ ನಿಮ್ಮದೊಂದು ಸಂದರ್ಶನ ಬೇಕೆಂದು ಕೇಳಿದಾಗ, ನಾನು ಊರಿಗೆ ಹೊಂಟೇನ್ರಿ. ಬರೂದ್ ಇನ್ನೂ ೩-೪ ದಿನ ಆಗ್ತದ ಎಂದು ಹೇಳಿದರು ಖಾನ್ ಸಾಹೇಬರು. ನಾನು ಕಾಲ್ ಮಾಡುವಾಗ ಮಧ್ಯಾಹ್ನ ೧೨ ಗಂಟೆ. ಆದರೆ ಏನಾದರೂ ಮಾಡಿ ಅವರ ಸಂದರ್ಶನ ತೆಗೆದುಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದು, ಇಂದೀಗಲೇ ತಾವು ದಯವಿಟ್ಟು ಸ್ವಲ್ಪ ಸಮಯ ನೀಡಿ ಎಂದಾಗ, ಅವರು ಆಯ್ತು ಬರ್ರಿ. ನಮ್ಮನೆ ಗೊತ್ತದೇನ್ರಿ ನಿಮ್ಗೆ? ಬಸವೇಶ್ವರನಗರದಲ್ಲಿ ಇದೇರಿ ಎಂದು ಅಡ್ರೆಸ್ ಕೊಟ್ಟರು. ತಕ್ಷಣ ಬೈಕೇರಿ ಅವರ ಮನೆ ಮುಂದೆ ನಿಂತೆ. ಫಯ್ಯಾಜ್‌ಖಾನ್‌ರು ಆತ್ಮೀಯವಾಗಿ ಬರಮಾಡಿಕೊಂಡರು. ಮುಂದಿನದ್ದು ಕನ್ನಡ ಟೈಮ್ಸ್ಗೆ ಕೊಟ್ಟ ಸಂದರ್ಶನ.
*-*-**-*-*

ಪ್ರಶ್ನೆ-೧ : ಸರ್, ತಮ್ಮ ಬಾಲ್ಯ ಹೇಗಿತ್ತು?

ಫ.ಖಾನ್: ನಮ್ಮದು ಸಂಗೀತಕ್ಷೇತ್ರದ ಮನೆತನ. ನಾನು ಹುಟ್ಟಿದ್ದು, ಬೆಳೆದಿದ್ದೆಲ್ಲಾ ಧಾರವಾಡ. ಐದನೇ ವರ್ಷಕ್ಕೆ ತಬಲಾ ಕಲಿಯೋದಕ್ಕೆ ಸ್ಟಾರ್ಟ್ ಮಾಡಿದೆ. ಸುಮಾರು ೧೦ರಿಂದ ೧೨ ವರ್ಷಗಳ ಕಾಲ ತಬಲಾ ಕಲಿತೆ. ಪಂ|| ಬಸವರಾಜ್ ಬೆಂಡಿಗೇರಿಯವರು ತಬಲಾ ಗುರುಗಳಾಗಿದ್ದರು. ಮನೆಯಲ್ಲಿ ನಮ್ಮ ತಂದೆಯವರು ಗಾಯನ ಮತ್ತು ಸಾರಂಗಿ ಹೇಳಿಕೊಡ್ತಾ ಇದ್ರು. ಆದ್ರೆ ನನಗೆ ಶಾಲೆ ಜಾಸ್ತಿ ಕಲಿಯಾದಕ್ಕ ಆಗ್ಲಿಲ್ಲರಿ. ಅನಿವಾರ್ಯ ಕಾರಣಗಳಿಂದಾಗಿ ೧೦ನೇ ತರಗತಿವರೆಗೆ ಓದಿದೆ. ಆಮೇಲೆ ಸಂಪೂರ್ಣವಾಗಿ ಸಂಗೀತಕ್ಕ ಬರುವಂಥ ಸಂದರ್ಭ ಬಂತು. ಬಾಲ್ಯದಲ್ಲಿ ಆಟವಾಡಿದ್ದು ವಾದ್ಯಗಳ ಜೊತೇನೇ. ತಬಲಾ, ಸಾರಂಗಿ, ತಂಬೂರ ಹೀಗೆ. ನಮ್ಮ ಚಿಕ್ಕಪ್ಪ, ಸೋದರಮಾವ ಎಲ್ಲರೂ ಕಲಾವಿದರು. ಹೀಗಾಗಿ ಸಂಗೀತ ವಾತಾವರಣದಲ್ಲೇ ನನ್ನ ಬಾಲ್ಯ ಕಳೀತು.

ಪ್ರಶ್ನೆ-೨ : ತಮ್ಮ ಕೌಟುಂಬಿಕ ಹಿನ್ನೆಲೆ…

ಫ.ಖಾನ್: ಕಿರಾಣ ಅಂತ ಒಂದು ಊರಿದೆ. ಆ ಊರಿನವರು ನಮ್ಮ ತಾತ. ಅವರು ಕರ್ನಾಟಕಕ್ಕೆ ಬಂದು ಹೋಗಿ ಮಾಡ್ತಾ ಇದ್ದರು. ಮೈಸೂರು ಮಹಾರಾಜರು ಇಲ್ಲೇ ಉಳಿಯೋದಕ್ಕೆ ವ್ಯವಸ್ಥೆ ಮಾಡಿದ್ರು. ಸ್ವಲ್ಪಕಾಲ ಉಳಿದರು. ಹೈದ್ರಾಬಾದ್ ನವಾಬರೂ ಇದ್ರಲ್ಲ, ಹಾಗೇ ಅವರ ಆಸ್ಥಾನಕ್ಕೂ ಹೋಗಿ ಬಂದು ಮಾಡ್ತಾ ಇದ್ದರು. ಸಂಗೀತದ ಸಲುವಾಗಿ, ಸಾರಂಗಿ ಸಂಗತ್ ಸಾಥ್‌ಗಾಗಿ ಬರ್‍ತಿದ್ರು. ಕೊನೆಗೆ ನಮ್ಮ ಚಿಕ್ಕಪ್ಪನಿಗೆ ಹೈದ್ರಾಬಾದ್ ಆಕಾಶವಾಣಿಯಲ್ಲಿ ನೌಕರಿ ಆಯಿತು. ನಮ್ಮ ತಂದೆಯವರು ಅಂದರೆ ಅಬ್ದುಲ್ ಖಾದರ್‌ಖಾನ್ ಅವರಿಗೆ ತುಂಬಾ ಚಿಕ್ಕವಯಸ್ಸಿನಲ್ಲಿ ಧಾರವಾಡ ಆಕಾಶವಾಣಿಯಾಗ ನೌಕರಿಯಾಯಿತು. ಧಾರವಾಡ ಆಕಾಶವಾಣಿಯಲ್ಲಿ ನೌಕರಿಯಾದ ಮೇಲೆ ನಮ್ಮ ತಂದೆಯವರು ಇಲ್ಲೇ ಉಳಿದರು. ಮಧ್ಯದಲ್ಲಿ ನಮ್ಮ ತಾತ ಟ್ರೈನ್‌ನಲ್ಲಿ ಶಿವಮೊಗ್ಗದಿಂದ ಹೈದ್ರಾಬಾದ್‌ಗೆ ಹೋಗಬೇಕಾದರೆ ಟ್ರೈನ್ ಆಕ್ಸಿಡೆಂಟ್‌ನಲ್ಲಿ ಹೋಗ್ಬಿಟ್ರು. ಆ ಕಾಲದಲ್ಲಿ ಅದು ಭಯಂಕರ ಆಕ್ಸಿಡೆಂಟ್. ಹೀಗಾಗಿ ನಮ್ಮ ಮನೆತನ ಕಿರಾಣದಿಂದ ಬಂದು ಧಾರವಾಡದಲ್ಲಿ ನೆಲೆ ಆಯಿತು. ನಾವೆಲ್ಲಾ ಹುಟ್ಟಿ ಬೆಳೆದದ್ದು ಅಲ್ಲೇ.

ಪ್ರಶ್ನೆ-೩ : ನಿಮಗೆ ಸಾರಂಗಿಯ ಮೇಲೆ ಪ್ರೀತಿ ಮೂಡಲು ಕಾರಣ?

ಫ.ಖಾನ್: ಮನೆಯ ವಾತಾವರಣ. ಆಮೇಲೆ ನಮ್ಮ ತಂದೆಯವರು ೧೯೮೪ರಲ್ಲಿ ದೈವಾಧೀನರಾದರು. ಅದಾದ ನಂತರ ನಮ್ಮ ಮನೆತನದಲ್ಲಿ ನನ್ನನ್ನು ಬಿಟ್ಟು ಬೇರಾರೂ ಸಂಗೀತವನ್ನು ತಗೊಂಡಿರ್‍ಲಿಲ್ಲ. ನಾನು ತಬ್ಲಾ ನುಡುಸ್ಕೊಂಡು, ಹಾಡ್ಕೊಂಡು ಏನೋ ಮಾಡ್ಕೊಂಡು ಇದ್ದೆ. ಕೊನೆಗೊಮ್ಮೆ ನಮ್ಮ ತಂದೆಯವರ ಕೋಣೆಯೊಳಗೆ ಹೋದಾಗ ಬೇರೆ ವಾದ್ಯಗಳ ಜೊತೆ ಸಾರಂಗಿ ಇಟ್ಟಿದ್ರಲ್ಲಾ, ಅದನ್ನು ನೋಡಿದೆ. ಯಾಕೋ ಮನ್ಸಿಗ್ ಭಾಳ ಬೇಸರ ಆಯ್ತು. ಈ ವಾದ್ಯ ಮೂಕ ಆಗೋಯ್ತಲ್ಲ ನಮ್ಮ ಮನೆಯೊಳಗ ಅಂತ. ಇದನ್ನೇ ಯಾಕೆ ಮುಂದುವರಿಸಬಾರದು ಅಂತ ಭಾಳ ವಿಚಾರ ಮಾಡಿದೆ. ಮೊದ್ಲೇ ಸ್ವಲ್ಪ ಕಲಿತದ್ದರಿಂದ ಇದನ್ನೇ ಮುಂದುವರಿಸೋಣ ಅಂತ ಪ್ರಾರಂಭ ಮಾಡಿದೆ. ಮುಂದೆ ಅದೇ ನನ್ನ ಜೀವನವಾಯಿತು.

ಪ್ರಶ್ನೆ-೪ : ನಿಮ್ಮ ಕಲಿಕೆಯ ಹಂತ ಹೇಗಿತ್ತು?

ಫ.ಖಾನ್: ತಂದೆಯವರು ಇಲ್ಲದ ಕಾಲಕ್ಕೆ ನಾನೊಬ್ಬನೇ ಅಭ್ಯಾಸ ಮಾಡುವ ಪರಿಸ್ಥಿತಿ ಬಂತು. ಆಮೇಲೆ ಹೀಗೇ ಒಬ್ಬನೇ ಕುಳಿತು ಅಭ್ಯಾಸ ಮಾಡಿದ್ರೆ ಸಾಕಾಗೊಂಗಿಲ್ಲ. ಇದಕ್ಕೇ ಅಂತ ಒಬ್ಬರು ಗುರುಗಳು ಬೇಕು ಅನ್ಕೊಂಡು ಗುರುವಿನ ಹುಡುಕಾಟಕ್ಕೆ ಹೊರಟೆ. ಆ ಕಾಲಕ್ಕೆ ಹೇಳಬೇಕೂ ಅಂದ್ರೆ ಭಾಳ ಓಡಾಡಬೇಕಾಯಿತು. ಮೊದ್ಲು ಮುಂಬೈಗೆ ಹೋಗಿ ಆಮೇಲೆ ಭೋಪಾಲಕ್ಕ ಹೋದೆ. ಅಲ್ಲಿ ಅಬ್ದುಲ್ ಲತೀಫ್‌ಖಾನ್ ಅಂತ; ಅವರೊಬ್ಬ ದೊಡ್ಡ ಸಾರಂಗಿವಾದಕರು. ಅವರ್‍ಹತ್ರ ಸ್ವಲ್ಪ ಇದ್ದು ಹೇಳಿಸ್ಕೊಂಡೆ. ಆದ್ರೆ ಅಲ್ಲಿ ಭಾಳ ಕಾಲ ಉಳೀಲಿಕ್ಕೆ ಆಗ್ಲಿಲ್ಲ. ಅಲ್ಲಿಂದ ಮುಂಬೈಕ್ಕ ಬಂದು ಸ್ವಲ್ಪಕಾಲ ಸುಲ್ತಾನ್‌ಖಾನ್ ಸಾಹೇಬರ್ರ ಹತ್ರನೂ ಸ್ವಲ್ಪ ಕಲ್ತೆ. ಆದ್ರೆ ಅವರಿಗೆ ತುಂಬಾ ಪ್ರೋಗ್ರಾಂ ಇರೂದ್ರಿಂದ ಕೈಗೇ ಸಿಗ್ತಾ ಇರ್ಲಿಲ್ಲ. ಮತ್ತೆ ಗುರುವಿನ ಹುಡುಕಾಟ ನಡೆದಿತ್ತು. ಹೀಗೇ ನಡೀತಿರಬೇಕಾದ್ರೆ ಆಕಾಶವಾಣಿಯಲ್ಲಿ ಯುವ ಕಲಾವಿದರಿಗೆ ಕೊಂಪಿಟೇಷನ್ ಮಾಡ್ತಾ ಇದ್ರು. ಈಗ್ಲೂ ಮಾಡ್ತಾರೆ. ಅದ್ರಲ್ಲಿ ಭಾಗವಹಿಸಿದ್ದೆ. ಅಲ್ಲಿ ೧೦ ನಿಮಿಷ ಕೊಡ್ತಾರ. ಅದ್ರಲ್ಲಿ ನಮ್ಮ ಪ್ರತಿಭೆ ತೋರ್‍ಸಬೇಕು. ಏನಾದ್ರ ಆಗ್ಲಿ ಅಂತ ನುಡಿಸಿದೆ. ನನ್ನ ಅದೃಷ್ಟಕ್ಕೆ ಮೊದಲನೇ ಬಹುಮಾನ ಬಂತು. ಬಹುಮಾನ ಕಾರ್ಯಕ್ರಮ ಮುಂಬೈಯಲ್ಲಿ ಇಟ್ಟಿದ್ದರು. ಆ ಸಂದರ್ಭದಲ್ಲಿ ನನಗೆ ಪಂ|| ರಾಮ್‌ನಾರಾಯಣ್‌ಜೀ ಅವರು ಸಂಪರ್ಕಕ್ಕೆ ಬಂದ್ರು. ಪಂಡಿತ್‌ಜೀ ಅವರು ಯಾರತ್ರ ಕಲೀತಾ ಇದ್ದೀ ಅಂತ ಕೇಳಿದ್ರು. ಇಷ್ಟು ದಿನ ನಮ್ಮ ತಂದೆಯವರಲ್ಲಿ ಕಲೀತಾ ಇದ್ದೆ. ಈಗ ಅವರಿಲ್ಲ. ಗುರುಗಳಿಗಾಗಿ ಹುಡುಕುತ್ತಾ ಇದ್ದೇನೆ. ತಾವು ದಯಮಾಡಿ ನನಗ ಪಾಠ ಹೇಳಿಕೊಡ್ರಿ ಅಂದಾಗ ಅವ್ರು ಬಾ ನಮ್ಮ ಮನೆಗೆ ಅಂತ ಸಂತೋಷದಿಂದ ಹೇಳಿದ್ರು. ಹೀಗೆ ಅವರ ಶಿಷ್ಯನಾಗಿ ಸುಮಾರು ಆರು ವರ್ಷಗಳ ಕಾಲ ಅಲ್ಲೇ ಅವರ ಮನೆಯಲ್ಲೇ ಗುರುಕುಲ ಮಾದರಿಯಲ್ಲಿ ಸಂಗೀತ ಕಲಿತೆ. ಅವರ ಮನೆಯಲ್ಲೇ ಇದ್ದು ಗುರುಸೇವೆ ಮಾಡ್ಕೊಂಡು ಕಲಿತೆ.

ಪ್ರಶ್ನೆ-೫ : ಗಾಯಕರಾಗಿಯೂ ಪರಿಚಿತರು ನೀವು. ಹೇಗೆ ಗಾಯನವನ್ನು ಸಿದ್ಧಿಸಿಕೊಂಡಿರಿ?

ಫ.ಖಾನ್: ಮುಂಬೈಯಲ್ಲಿ ಅಧ್ಯಯನ ಮಾಡಬೇಕಿದ್ದರೆ ನನಗೆ ತಿಳಿದುಬಂದ ಒಂದು ವಿಷಯ ಅಂದ್ರೆ ಗಾಯನ ಎಲ್ಲಿಯವರೆಗೆ ಸರಿಹೋಗೋದಿಲ್ವೋ ಅಲ್ಲೀವರೆಗೆ ಸಾರಂಗಿನೂ ಸರಿಹೋಗಲ್ಲ ಅನಿಸ್ಲಿಕ್ಕೆ ಹತ್ತತು. ಹಾಗಾಗಿ ನಾನು ನಮ್ಮ ಗುರುಗಳಲ್ಲಿ ಗಾಯನ ಹಾಗೂ ಸಾರಂಗಿ ಎರಡನ್ನೂ ಹೇಳ್ಸಿಕೋತಾ ಇದ್ದೆ. ಧಾರವಾಡದಲ್ಲಿ ಇದ್ದಾಗ್ಲೂ ನಮ್ಮ ತಂದೆಯವರು ಭಾಳ ಕಡೆ ಕಳುಹಿಸ್ತಾ ಇದ್ರು. ಆ ಸಂದರ್ಭದಲ್ಲಿ ರಾಜಗುರುಗಳ ಮನೆಗೂ ಹೋಗ್ತಾ ಇದ್ದೆ. ಪಾಠ ನಡೀತಿರೋವಾಗ ಕೂತ್ಕೊಳ್ಳೋದು. ಆಗ ಅವರು ತಬ್ಲಾ ನುಡಿಸೋ ಅಂದ್ರೆ ತಬ್ಲಾ ನುಡಿಸೋದು. ಹೀಗೆ ಕೇಳಿ ಕೇಳೀನೇ ಕಲಿತಾ ಇದ್ದೆ. ಅಲ್ಲೇ ನನಗೆ ಇನ್ನೊಬ್ಬ ಗುರುಗಳಿದ್ರು; ರಂಗನಾಥ್ ಜೋಷಿ ಅಂತ. ಅವರು, ಮತ್ತೆ ಅಬ್ದುಲ್ ಕರೀಂಖಾನ್‌ರವರ ಮಗ, ಸುರೇಶ್‌ಬಾಬು ಮಾನೆ ಅಂತ; ಅವರಿಗೆ ಅಸ್ತಮಾ ಇರೋದ್ರಿಂದ ಹಾಡೋಕೆ ಆಗ್ತಾ ಇರ್‍ಲಿಲ್ಲ. ಆದ್ರೆ ಸಂಗೀತದ ಬಗ್ಗೆ ತುಂಬಾ ತಿಳ್ಕೊಂಡಿದ್ದರು. ಅವರಿಂದಾನೂ ಕಲಿತೆ.

ಪ್ರಶ್ನೆ-೬ : ಗುರುಗಳು ಎಂದು ಯಾರನ್ನು ಗುರುತಿಸುತ್ತೀರಿ?

ಫ.ಖಾನ್: ಬಹಳ ಜನ ಗುರುಗಳಿದ್ದರು. ಮೊಟ್ಟಮೊದಲನೇ ಗುರು ನಮ್ಮ ತಂದೆಯವರೇ. ನಮ್ಮ ತಾಯಿ ಕೂಡ ಸಾರಂಗಿ ನುಡಿಸುತ್ತಿದ್ದರು. ಆದರೆ ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಹೊರಗಡೆ ಹೋಗುವ ಅವಕಾಶ ಆವಾಗ್ಲೂ ಇರ್‍ಲಿಲ್ಲ, ಇವಾಗ್ಲೂ ಭಾಳ ಕಡಿಮೆನೇ. ಅವರು ಮನೆಯಲ್ಲೇ ಸಾರಂಗಿಯನ್ನು ನುಡಿಸುತ್ತಾ ಇದ್ರು. ಅದನ್ನು ನೋಡ್ತಾ ಇದ್ದೆ. ಹೀಗೆ ಅಮ್ಮನೂ ಗುರುವೇ ಆಗಿದ್ದರು. ಮುಖ್ಯವಾಗಿ ಹೇಳಬೇಕಂದ್ರ ಬಸವರಾಜ್ ಬೆಂಡಿಗೇರಿಯವರು, ರಾಮ್‌ನಾರಾಯಣ್‌ಜೀಯವರು.

ಪ್ರಶ್ನೆ-೭ : ನಿಮ್ಮ ತಂದೆಯವರ ಕುರಿತು ಏನಾದ್ರೂ ಹೇಳಿ.

ಫ.ಖಾನ್: ಚಿಕ್ಕವಯಸ್ಸಿನಲ್ಲಿಯೇ ನಮ್ಮ ತಂದೆಯವರಿಗೆ ಆಕಾಶವಾಣಿಯಲ್ಲಿ ಜಾಬ್ ಆಯ್ತು ಅಂತ ಹೇಳಿದ್ನಲ್ಲಾ. ಹಾಗೆ ಅವರು ಆಕಾಶವಾಣಿಯಲ್ಲಿ ಇದ್ದಕಾಲಕ್ಕೆ ಬಹಳ ಜನ ಹಳೆಯ ಕಲಾವಿದರ ಸಂಗೀತ ಕೇಳ್ತಾ ಇದ್ದೆ. ಇದಕ್ಕೆ ಮುಖ್ಯಕಾರಣ ತಂದೆಯವರು. ನಮ್ಮ ತಂದೆಯವರು ಆ ಕಾಲದ ಮೇರು ಕಲಾವಿದರಿಗೆ ಸಂಗತ್ ಸಾಥ್ ಮಾಡೋದಕ್ಕೆ ಹೋಗ್ತಾ ಇದ್ರು. ಅವರಲ್ಲಿ ಪ್ರಮುಖರು; ಪಂ|| ಭೀಮಸೇನ್ ಜೋಷಿಯವರು, ಗುರುರಾವ್ ದೇಶಪಾಂಡೆಯವರು. ಆಮೇಲೆ ಮಲ್ಲಿಕಾರ್ಜುನ ಮನ್ಸೂರ್‌ರವರು, ಗಂಗೂಬಾಯಿ ಹಾನಗಲ್‌ರವರು, ರಾಜಗುರುಗಳವರು, ಸಂಗಮೇಶ್ವರ್ ಗುರವ್‌ರವರು-ಇವರಿಗೆಲ್ಲಾ ತಂದೆಯವರೇ ಸಾಥ್ ಮಾಡ್ತಾ ಇದ್ರು. ಹೀಗಾಗಿ ನಮಗೂ ಕೂಡ ಭಾಳ ಕೇಳಲಿಕ್ಕೆ ಹಾಗೂ ಕಲೀಯುದಕ್ಕೆ ಸಿಗ್ತು. ಇದರ ಕೀರ್ತಿ ನಮ್ಮ ತಂದೆಯವರಿಗೇ ಸಲ್ಲಬೇಕು.

ಪ್ರಶ್ನೆ-೮ : ಸರ್. ತಾವು ಕಲಿಕೆಯ ಸಂದರ್ಭದಲ್ಲಿ ಜೀವನ ನಿರ್ವಹಣೆ ಹೇಗೆ ಮಾಡ್ತಿದ್ರಿ?

ಫ.ಖಾನ್: [ನಗು] ಸಾರಂಗಿನೇ ಹೆಚ್ಚಾಗಿ ತಗೊಂಡಾಗ ನೀವು ಹೇಳ್ದಾಂಗ ಜೀವನ ಮಾಡೂದು ಕಷ್ಟ ಇತ್ತು. ಆದ್ರೆ ನನ್ನ ಚಿಕ್ಕವಯಸ್ಸಿನಾಗೇ ತಬ್ಲಾ ಕಲ್ತಿದ್ದೆ ಅಂತ ಹೇಳಿದ್ನಲ್ಲ. ಅದು ಇಲ್ಲಿ ಉಪಯೋಗಕ್ಕೆ ಬಂತ್ರಿ. ಅಲ್ಲಿನೂ ನನಗ [ಮುಂಬೈಯಲ್ಲಿ] ಸಹಾಯ ಮಾಡೋ ಸ್ಥಿತೀಲಿ ಯಾರೂ ಇರ್‍ಲಿಲ್ಲ. ಆಗ ನಾನು ತಬ್ಲಾ ಸಾಥ್ ಸಂಗತ್ ಮಾಡಿ, ಅಲ್ಲಿ-ಇಲ್ಲಿ ಪಾಠ ಮಾಡಿ ಅದ್ರಿಂದ ಬಂದ ಹಣದಿಂದ ಜೀವನ ನಿರ್ವಹಣೆ ಮಾಡ್ತಾ ಇದ್ದೆ.

ಪ್ರಶ್ನೆ-೯ : ಗುರುಕುಲ ಮಾದರಿಯ ಕಲಿಕೆ ಸೂಕ್ತವೇ ಅಥವಾ ಇಂದಿನ ದಿನಗಳಲ್ಲಿ ನಾಯಿಕೊಡೆಗಳಂತೆ ಹುಟ್ಟುತ್ತಿರುವ ಮ್ಯೂಸಿಕ್ ಇನ್‌ಸ್ಟಿಟ್ಯೂಟ್, ಮ್ಯೂಸಿಕ್ ಕಾಲೇಜ್‌ಗಳು ಹೀಗೆ. . . ನಿಮ್ಮ ಅಭಿಪ್ರಾಯ?

ಫ.ಖಾನ್: ಇನ್‌ಸ್ಟಿಟ್ಯೂಟ್ ಅಥವಾ ಕಾಲೇಜ್‌ಗಳಲ್ಲಿ ಸುಮ್ಮನೆ ಸರ್ಟಿಫಿಕೇಟ್‌ಗೋಸ್ಕರ ಸಂಗೀತವೇ ಹೊರತು ನಿಜವಾದದ್ದಲ್ಲ. ಇಂಥಹವುಗಳಿಂದ ಎಷ್ಟು ಜನ ಕಲಾವಿದ್ರು ಹೊರಗ್ ಬಂದಾರ ಹೇಳ್ರಿ. ಗುರುಗಳ ಬಳಿ ಇದ್ದು, ಅವರ ಸೇವೆ ಮಾಡಿಕೊಂಡು, ಅವರ ಜೊತೆಯಲ್ಲೇ ಇದ್ದು ಕಲಿಯುವುದೇ ಒಳ್ಳೆಯದು. ಇದರಿಂದ ಕೇಳಿ, ನೋಡಿ ಕಲಿಯುವ ಅವಕಾಶ ಒದಗಿಬರುತ್ತದೆ. ಆದ್ರೆ ಕಾಲೇಜ್‌ನಾಗ್ ನೋಡ್ರಿ. ಸೆಮಿಸ್ಟರ್ ಪದ್ಧತಿ ಬಂದದ. ಒಂದೊಂದು ಸೆಮಿಸ್ಟ್ರಿನಾಗ ೩೦ರಿಂದ ೪೦ ರಾಗ ಇರ್‍ತದ. ಒಂದೊಂದು ರಾಗ ಕಲಿತು ಅರಗಿಸಿಕೊಳ್ಳೋಕೇ ೪-೫ ವರ್ಷಗಳು ಬೇಕು. ಹಾಗಿದ್ದಲ್ಲಿ ಒಂದು ಸೆಮಿಸ್ಟ್ರಲ್ಲಿ ೩೦ ರಾಗ ಎಲ್ಲಿ ಕಲಿಯೋಕೆ ಆಗುತ್ತೆ? ಹಾಗಾಗಿ ಇಂದಿಗೂ ಗುರುಕುಲ ಪದ್ಧತಿಯ ಸಂಗೀತ ಕಲಿಕೆಯೇ ಸೂಕ್ತ ಅನ್ನೋದು ನನ್ನ ಅಭಿಪ್ರಾಯ.

ಪ್ರಶ್ನೆ-೧೦ : ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಘರಾನಾ ಮೌಲ್ಯಗಳು ಇಂದಿಗೂ ಉಳಿದಿವೆ ಅನ್ನಿಸುತ್ತಾ?

ಫ.ಖಾನ್: ಘರಾನಾ ಮೌಲ್ಯಗಳು ಈಗ ಸ್ವಲ್ಪಮಟ್ಟಿಗೆ ಕಡಿಮೆ ಆಗಿವೆ. ಯಾಕಂದ್ರ ಒಂದು ಕಾಲದಲ್ಲಿ ಘರಾನಾ ಪದ್ಧತಿ ಬಿಟ್ರೆ ಬೇರೇನೂ ಕೇಳೊದಿಕ್ಕೆ ಸಿಗ್ತಾ ಇರಲಿಲ್ಲ. ಆಕಾಶವಾಣಿ ಬಂದಿದ್ರಿಂದ ಎಲ್ಲಾ ಘರಾನಾ ಕಲಾವಿದರ ಗಾಯನ ಕೇಳೋ ಅವಕಾಶ ಬಂತು. ಮೊದ್ಲು ಹೇಗಿತ್ತು ಅಂದ್ರೆ ನಾವು ಯಾವ ಗುರುಗಳಲ್ಲಿ ಕಲಿತಾ ಇದ್ವೋ ಅಂದ್ರೆ, ಆಗ್ರಾ ಘರಾನಾ ಅಂದ್ರೆ ಅದೊಂದೇ ಆಗಿತ್ತು. ಬೇರೆ ಘರಾನಾ ಕೇಳೋಕೆ ಸಿಗ್ತಾ ಇರ್‍ಲಿಲ್ಲ. ಈಗ ಕೇಳ್ಮೆ ಜಾಸ್ತಿ ಇರೋದ್ರಿಂದ ಸಾಕಷ್ಟು ಘರಾನಾಗಳು ಮಿಶ್ರಗೊಂಡಿವೆ. ಯಾವುದೂ ಪರಿಶುದ್ಧವಾಗಿ ಉಳಿದಿದೆ ಅಂತ ಹೇಳೋದು ಕಷ್ಟ. ಎಲ್ಲ ಘರಾನಾಗಳ ಒಳ್ಳೆಯ ಅಂಶಗಳನ್ನು ಕಲಾವಿದರು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ಒಂದೊಂದು ಸಾಲು ಇದೇ ಘರಾನಾದಾಗೆ ಹಾಡ್ತೀವಿ ಅನ್ನೋರನ್ನು ಎಷ್ಟು ಮಂದಿ ತೋರಿಸ್ತೀರಿ? ಈಗ ಅಷ್ಟು ಪರಿಶುದ್ಧತೆ ಇಲ್ಲ. ಯಾಕಂದ್ರೆ; ಕೇಳಬೇಕು. ನಾವು ಎಷ್ಟು ಕೇಳ್ತೀವೊ ಅಷ್ಟು ಕಲೀತೀವಿ. ಉದಾ: ಭೀಮ್‌ಸೇನ್ ಜೋಷಿಯವರ ಗಾಯನ ತಗೊಳ್ಳಿ. ಅವ್ರು ಹಾಡಬೇಕಿದ್ದರೆ ಒಂದ್ಸಾರಿ ಅಮೀರ್‌ಖಾನ್ ಸಾಹೇಬರ ಗಾಯನ ಕೇಳಿಸ್ತದೆ, ಇನ್ನೊಂದು ಸಾರಿ ಅಬ್ದುಲ್‌ಕರೀಂಖಾನ್‌ರ ಗಾನ ಕೇಳಿಸ್ತದ. ಇನ್ನೊಂದು ಸಾರಿ ಬಡೇ ಗುಲಾಂಅಲೀಖಾನ್ ಸಾಹೇಬ್ರ ಗಾಯನ ಕೇಳಿಸ್ತದ. ಖಂಡಿತ ಅದೇ ಪರಂಪರೆಗೆ ಸಂಬಂಧಪಟ್ಟಿದ್ದು ಆದರೂ ಎಲ್ಲರದ್ದೂ ತಗೊಂಡ್ರಲ್ಲ ಅವರು. ಎಲ್ಲರದ್ದೂ ತಗೊಂಡು ತನ್ನದೇ ಆದಂತಹ ಅಡುಗೆ ಮಾಡಿದ್ರು. ಅದಕ್ಕೇ ದೊಡ್ಡವರಾದರು. ಒಳ್ಳೇ ಅಂಶಗಳನ್ನು ತಗೊಂಡು ಬೆಳೆಯುವುದೇ ಒಳ್ಳೆಯ ಕಲಾವಿದನ ಧರ್ಮ.

ಪ್ರಶ್ನೆ-೧೧ : ಕರ್ನಾಟಕದಲ್ಲಿ ಸಾರಂಗಿ ಭವಿಷ್ಯ ಹೇಗಿದೆ?

ಫ.ಖಾನ್: ಕರ್ನಾಟಕದಲ್ಲಿ ಸಾರಂಗಿ ವಾದನದ ಭವಿಷ್ಯ ಸ್ವಲ್ಪ ಕಠಿಣ ಅಂತ ಅನ್‌ಸ್ಲಿಕ್ ಹತ್ತದ. ಈ ವಾದ್ಯ ಹೆಚ್ಚಾಗಿ ಬಳ್ಸೂದು ಸಾಥ್‌ಗೆ. ಸಂಗೀತದ ಗಾಯಕ ಅಥವಾ ಗಾಯಕಿಯ ಜೊತೆ ಬಳಸುವ ವಾದ್ಯ. ಆದ್ರೆ ಅದರ ಬಳಕೆ ಕಡಿಮೆ ಆಗಿದೆ. ಅದಕ್ಕೆ ಸುಮಾರು ಕಾರಣಗಳಿವೆ. ಅದರ ವಿಶ್ಲೇಷಣೆ ಬೇಕಾಗಿಲ್ಲ [ನಗು]. ಈಗ ನೋಡ್ರಿ ನನ್ನ ಮನೇಲಿ ನಾನೇ ನುಡ್ಸಬೇಕು. ಇಲ್ಲ ಅಂದ್ರೆ ಮಗ ನುಡಿಸಬೇಕು. ಅದರ ಹೊರತಾಗಿ ಕರ್ನಾಟಕದಲ್ಲಿ ಯಾರೂ ಸಾರಂಗಿ ನುಡಿಸೋರೇ ಇಲ್ಲ. ಕರ್ನಾಟಕದಲ್ಲಿ ಏನು, ಇಡೀ ಸೌತ್ ಇಂಡಿಯಾನಲ್ಲೇ ಯಾರೂ ಇಲ್ಲ.

ಪ್ರಶ್ನೆ-೧೨ : ಹಾಗಿದ್ದರೆ ಕರ್ನಾಟಕದಲ್ಲಿ ಯಾರೂ ಈ ವಾದ್ಯ ಕಲೀಬೇಕು ಅಂತ ನಿಮ್ಮ ಬಳಿ ಬಂದಿಲ್ವಾ?

ಫ.ಖಾನ್: ಹಾಗೇನಿಲ್ಲ, ಬಂದಿದ್ದಾರೆ. ಒಂದಷ್ಟು ಜನ ಸ್ಟೂಡೆಂಟ್ಸ್ ಇದ್ದಾರೆ. ಅವರೂ ಶ್ರದ್ಧೆಯಿಂದ ಕಲೀತಾ ಇದ್ದಾರೆ. ಆದರೂ ಇದು ಬಹಳ ಟೈಮ್ ತಗೊಳ್ಳೊ ವಿಷಯ. ಹಾರ್‍ಮೋನಿಯಂ ಆದ್ರೆ ೪-೫ ವರ್ಷದೊಳಗ ಒಂದು ಹಂತಕ್ಕ ಬಂದುಬಿಡಬಹುದು. ಸಾರಂಗಿ ಒಳಗ ಅಷ್ಟು ಸುಲಭ ಅಲ್ಲ. ಯಾಕಂದ್ರ ಒಂದು ಕೂದಲೆಳೆಯ ಸ್ವರವನ್ನೂ ಮುಟ್ಟುವ ಒಂದು ತಂತುವಾದ್ಯ. ಹಾಂಗಾಗಿ ಸಾರಂಗಿ ಕಲ್ಸೂದು ಅಷ್ಟು ಸುಲಭ ಇಲ್ಲ. ಮೊದಲು ಅವನಿಗೆ ಗಾಯನ ಬರಬೇಕು. ಗಾಯನ ಬರೂದಿಲ್ಲ ಅಂದ್ರೆ ಸಾರಂಗಿ ಬರೋದಿಲ್ಲ. ಹಾಂಗಾಗಿ ಬಹಳ ಜನ ಬರೋಲ್ಲ. ಇವತ್ತಿನ ದಿನಗಳಲ್ಲಿ ೧೦-೧೫ ವರ್ಷ ಟೈಮ್ ಹಾಕೋರು ಯಾರು? ಇದನ್ನು ಸಣ್ಣವಯಸ್ಸಿನಿಂದ ಆರಂಭ ಮಾಡ್ಕೋಬೇಕು. ಒಂದು ವಯಸ್ಸು ಆದಮೇಲೆ ಕಲೀತಿನಿ ಅಂದ್ರೆ ಭಾಳ ಕಷ್ಟ. ಗಂಟೆಗಳ ಕಾಲ ಕೂತು ಪ್ರಾಕ್ಟೀಸ್ ಮಾಡಬೇಕು. ಸ್ವಲ್ಪ ಟೈಮಲ್ಲೇ ಎಲ್ಲ ಕಲಿತು ಹೆಸರು ಮಾಡಿಬಿಡಬೇಕು ಅನ್ನೋ ಕಾಲ ಈಗ. ಆತುರದ ಮನಸ್ಥಿತಿ ಇರೋದ್ರಿಂದ ಸಾರಂಗಿಯಂತಹ ವಾದ್ಯಗಳನ್ನ ಕಲಿಯೋಕೆ ಬರೋರ್ ಸಂಖ್ಯೆನೂ ಕಡಿಮೆ. ಅದ್ರಲ್ಲೂ ಒಂದಷ್ಟು ಜನ ಬರ್‍ತಾ ಇದ್ದಾರೆ ಅನ್ನೋದೇ ಖುಷಿ ಕೊಡೋ ಸಂಗತಿ.

ಪ್ರಶ್ನೆ-೧೩ : ಸಾರಂಗಿವಾದ್ಯವನ್ನೇ ವೃತ್ತಿಯಾಗಿ ತಗೊಂಡು ಜೀವನ ನಿರ್ವಹಣೆ ಮಾಡಬಹುದೇ? ಅದು ಎಷ್ಟರಮಟ್ಟಿಗೆ ಸಾಧ್ಯ?

ಫ.ಖಾನ್: ಹ್ಹ.. ಹ್ಹ.. ಹ್ಹಾ….. ನಾನಿಲ್ವೇನ್ರಿ? ಖಂಡಿತಾ ಮಾಡಬಹುದು. ಬೇರೆ ವಿಷಯಗಳನ್ನು ತಗೊಂಡು ಮಾಡಬಹುದಾದರೆ ಸಾರಂಗಿ ಯಾಕೆ ಆಗಲ್ಲ? ಆದರೆ ಡೆಡಿಕೇಶನ್ ಮಾಡೋರು ಬೇಕು. ದಿನಕ್ಕೆ ೧೦ ಘಂಟೆಗಳ ಕಾಲ ಕೂತ್ಕೊಂಡು ಅಭ್ಯಾಸ ಮಾಡೋರು ಬೇಕು. ಅಂದ್ರ ಒಂದು ಲೆವೆಲ್‌ಗೆ ಬರ್‍ತದ. ಆಮೇಲೆ ಇನ್ನೊಂದು ಜವಾಬ್ದಾರಿ ಏನಿದೆ ಅಂದ್ರ ನಮ್ಮ ಸಂಗೀತ ಕ್ಷೇತ್ರದಲ್ಲಿ ಇರತಕ್ಕಂಥ ಗಾಯಕರು, ಇವರು ಇರುವಂಥ ವಾದ್ಯಗಳನ್ನು ಬಳಸಬೇಕು. ಅವರು ಬಳಸಲೇ ಇಲ್ಲ ಅಂದ್ರ ಬೆಳೆಯೋದು ಹೇಗೆ? ಈ ನಿಟ್ಟಿನಲ್ಲಿ ನಾನೇನು ಮಾಡೇನಿ ಅಂದ್ರ ನಮ್ಮ ಶ್ರೀಮತಿಯವರ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡ್ಕೊಂಡು ಅಲ್ಲಿ ಗಾಯಕರು ಸಾರಂಗಿಯನ್ನೇ ಸಾಥ್‌ಗೆ ಉಪಯೋಗಿಸುವಂತೆ ನೋಡ್ಕೊಂಡು ಈ ಪ್ರಯೋಗ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದೇನೆ.

ಪ್ರಶ್ನೆ-೧೪ : ಸಾರಂಗಿ; ಈ ವಾದ್ಯವನ್ನೇ ನಿಮ್ಮ ಜೀವನ ಮಾಡಿಕೊಂಡಿರಿ. ಇದು ನಿಮಗೆ ತೃಪ್ತಿ ಕೊಟ್ಟಿದೆಯೇ?

ಫ.ಖಾನ್: ನೋಡ್ರಿ. ಸಂಗೀತದಾಗ ಯಾವತ್ತೂ ತೃಪ್ತಿ ಇಲ್ರಿ. ಅವತ್ತಿಗೆ ಆ ಕ್ಷಣದ ಆನಂದ ಅದು. ಹಂಗ ಕಲ್ತು ಪೂರ್ಣಾದೆ ಅಂತ ಯಾವತ್ತೂ ಅನ್ಸಿಲ್ರಿ. ಇನ್ನೂ ಆಳಕ್ಕೆ ಹೋಗಬೇಕು ಅನ್ಸ್ತದ ಹೊರ್‍ತು ಕೊನೆ ಅನ್ನೋದೇ ಇಲ್ಲ. ಕಲಿತು ಮುಗೀತು ಅನ್ನೋದು ಯಾವತ್ತಿಗೂ ಇಲ್ಲ.

ಪ್ರಶ್ನೆ-೧೫ : ಇಂದಿನ ಸಿನಿಮಾಗಳಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವ ಹಾಗೂ ಸಾರಂಗಿ ಈ ವಾದ್ಯವನ್ನು ಎಷ್ಟರಮಟ್ಟಿಗೆ ಬಳಸುತ್ತಾರೆ?

ಫ.ಖಾನ್: ಶಾಸ್ತ್ರೀಯ ಸಂಗೀತದ ಪ್ರಭಾವ ಇಂದಿನ ಸಿನಿಮಾಗಳಲ್ಲಿ ಇಲ್ಲ. ಹಿಂದೆ ಇತ್ತು. ಯಾಕಂದ್ರ ಹಿಂದೆ ಶಾಸ್ತ್ರೀಯ ರಾಗಗಳನ್ನು ಬಳಸಿಕೊಂಡು ಗೀತೆಗಳು ತಯಾರಾಗ್ತಿದ್ವು. ಇವಾಗ ರಾಗ ಆಧಾರಿತ ಸಂಗೀತ ಎಲ್ಲಿದೆ ಹೇಳ್ರಿ. ಇವಾಗ ಗಲಾಟೆ ಆಧಾರಿತ ಸಂಗೀತವೇ ಹೆಚ್ಚು. ಅಲ್ಲಿ ಸಂಗೀತವೇ ಇರೋದಿಲ್ಲ. ಆದರೆ ಸಾರಂಗಿಯಂತಹ ವಾದ್ಯಗಳನ್ನು ಬಳಸುತ್ತಾರೆ. ರಾಗದ ದೃಷ್ಟಿಯಿಂದ ಅಲ್ಲ, ಆದರೆ ಟೋನ್ ದೃಷ್ಟಿಯಿಂದ ಬಳಸುತ್ತಾರೆ. ನಮಗೆ ಇಂತಹ ಟೋನ್ ಬೇಕು ಅಂತ. ಹೇಗೆ ಅಂದ್ರೆ ಸಿತಾರ್, ಶಹನಾಯ್, ಸಾರಂಗಿ ವಾದ್ಯಗಳ ಸೌಂಡ್ ಬರಬೇಕು ಅಷ್ಟೆ ಅವರಿಗೆ. ರಾಗ ಏನೂ ಬೇಕಾಗಿಲ್ಲ.

ಪ್ರಶ್ನೆ-೧೬ : ತುಂಬಾ ಚುಟುಕಾಗಿ ಕೇಳ್ತೀನಿ ಸರ್, ನಿಮಗೆ ಅತ್ಯಂತ ಪ್ರಿಯವಾಗಿರುವ ತಾಣ ಯಾವುದು?

ಫ.ಖಾನ್: ಸಂಗೀತಪ್ರಿಯರಿರುವ ಎಲ್ಲಾ ತಾಣಗಳು ಇಷ್ಟ ಆಗುತ್ತೆ [ನಗು].

ಪ್ರಶ್ನೆ-೧೭ : ನಿಮ್ಮ ಜೀವನದಲ್ಲಿ ಅತ್ಯಂತ ದೋಡ್ಡ ಸೋಲು ಅಂತ ಯಾವುದಾದ್ರೂ ಅನಿಸಿದ್ದು ಇದೆಯಾ?

ಫ.ಖಾನ್: ದೊಡ್ಡ ಸೋಲು ಅಂತ ನಾನು ಅನುಭವಿಸಿರುವ ಘಟನೆಗಳೇ ಇಲ್ಲ. ಯಾಕೆಂದ್ರೆ ಪರಮಾತ್ಮ ನಾನು ಪಟ್ಟ ಶ್ರಮಕ್ಕೆ ಏನೇನು ಕೊಡಬೇಕೋ ಅದನ್ನೆಲ್ಲಾ ಕೊಡುತ್ತಾ ಬಂದಿದ್ದಾನೆ. ಹಾಗಾಗಿ ನನಗೆ ಆ ತೃಪ್ತಿ ಇದೆ. ಸೋಲು ಅಂತ ಕಂಡಿಲ್ಲ.

ಪ್ರಶ್ನೆ-೧೮ : ಎಂದೂ ಮರೆಯಲಾಗದ ಕ್ಷಣ…?

ಫ.ಖಾನ್: ಜೀವನದಲ್ಲಿ ಮಾನಸಿಕವಾಗಿ ಹಿಂಸೆ ಕೊಡುವ ಘಟನೆಗಳು ನಡೆದಿವೆ. ಆದರೆ ಅದು ನನ್ನ ವೈಯಕ್ತಿಕ ಜೀವನ. ನಮ್ಮ ತಂದೆಯವರು ಹೋದಾಗ ಬಹಳ ನೊಂದಿದ್ದೆ. ಈಗ ಕೆಲದಿನಗಳ ಹಿಂದೆ ನಮ್ಮ ಶ್ರೀಮತಿಯವರು ಆಕ್ಸಿಡೆಂಟ್‌ನಲ್ಲಿ ತೀರಿಕೊಂಡರು. ಆ ಸಂದರ್ಭದಲ್ಲಿ ನನಗೂ ಆಘಾತಕರ ಏಟಾಯಿತು.

ಪ್ರಶ್ನೆ-೧೯ : ಅತ್ಯಂತ ದುಃಖವಾದರೆ ಏನು ಮಾಡ್ತೀರಿ?

ಫ.ಖಾನ್: ಅತ್ಯಂತ ದುಃಖ ಆದ್ರೆ ಸಂಗೀತ ಕೇಳ್ತೀನಿ, ಇಲ್ಲಾ ಹಾಡ್ತೀನಿ. ಅದೊಂದೇ ದಾರಿ ನಮಗೆ.

ಪ್ರಶ್ನೆ-೨೦ : ನಿಮ್ಮ ಕಲ್ಪನೆಯಲ್ಲಿ ಪರಮಸುಖ ಅಂದ್ರೆ ಯಾವುದು?

ಫ.ಖಾನ್: ಕಳೆದುಹೋಗುವುದು. ಉದಾ: ಸಂಗೀತಧ್ಯಾನದಲ್ಲಿ ಕಳೆದುಹೋಗುವ ಸುಖ ಇದೆಯಲ್ಲಾ. ಅದಕ್ಕಿಂತ ದೊಡ್ಡ ಸುಖ ಇನ್ನೊಂದಿಲ್ಲ. ಸಂಗೀತ ಸರಸ್ವತಿಯ ಆರಾಧನೆಯಲ್ಲಿ ಕಳೆದುಹೋಗುವುದೇ ಪರಮಸುಖ.

ಪ್ರಶ್ನೆ-೨೧ : ನೀವು ಎಲ್ಲೇ ಹೋದರೂ ನಿಮ್ಮೊಂದಿಗೆ ಒಯ್ಯುವ ವಸ್ತು ಯಾವುದು?

ಫ.ಖಾನ್: ಹ್ಹ.. ಹ್ಹ… ಹ್ಹಾ. . . . [ನಗು] ಸದಾ ನನ್ನೊಂದಿಗೆ ಸಾರಂಗಿ ವಾದ್ಯ.

ಪ್ರಶ್ನೆ-೨೨ : ನಿಮಗೆ ಸಂದ ಪ್ರಶಸ್ತಿ ಹಾಗೂ ಅವುಗಳ ಬಗ್ಗೆ ನಿಮಗಿರುವ ಗ್ರಹಿಕೆ ಏನು?

ಫ.ಖಾನ್: ಪ್ರಶಸ್ತಿಗಳು ಸಾಕಷ್ಟು ಬಂದಿವೆ. ನಾನು ಪ್ರಶಸ್ತಿಗೋಸ್ಕರ ಯಾವ ಕೆಲಸಾನೂ ಮಾಡಿಲ್ಲ. ಯಾಕಂದ್ರೆ ನಾವು ಸಮಯ ಕಳೆದಿದ್ದು ಋಷಿಮುನಿಗಳಂತಹ ಗುರುಗಳ ಜೊತೆ. ಹಾಗಾಗಿ ಪ್ರಶಸ್ತಿಗಾಗಿ ಯಾವ ಲಾಬಿಯನ್ನೂ ನಡೆಸಿಲ್ಲ. ಆದರೂ ಕೆಲವು ಪ್ರಶಸ್ತಿಗಳು ಬಂದಿವೆ. ಸಂಸ್ಕೃತಿಪೀಠದವರು ಕಲಾವಸಂತ ಅನ್ನೋ ಪ್ರಶಸ್ತಿ ಕೊಟ್ಟರು. ಕಲಾಕೌಮುದಿ, ಂ ಃesಣ Sಣಡಿiಟಿg Pಟಚಿಥಿeಡಿ ಅಂತ ಬೆಂಗಳೂರು ಅಕಾಡೆಮಿಯವರು ಕೊಟ್ಟರು. ಆರ್ಯಭಟ ಅಂತ ಒಂದು ಬಂದಿದೆ. ಟಿ.ವಿ., ಸಿನಿಮಾ ಮಾಧ್ಯಮಗಳಿಂದಲೂ ಪ್ರಶಸ್ತಿಗಳು ಬಂತು. ಈಗ ಕೆಲವು ದಿನಗಳ ಹಿಂದೆ ರಾಜ್ಯಪ್ರಶಸ್ತಿಯೂ ಬಂದಿದೆ. ಪ್ರಶಸ್ತಿಗಳು ಮುಖ್ಯವಲ್ಲ. ನಾವು ಮಾಡುವ ಕೆಲಸ ಮುಖ್ಯ.

ಪ್ರಶ್ನೆ-೨೩ : ನಿಮ್ಮ ಮಕ್ಕಳ ಬಗ್ಗೆ ಹೇಳಿ.

ಫ.ಖಾನ್: ಹಿರೇಮಗ ಸರ್ಫ್‌ರಾಜ್‌ಖಾನ್ ಅಂತ. ಇವನು ಈಗ ಪಂ|| ರಾಮನಾರಾಯಣ್‌ಜೀ ಅವರ ಬಳಿ ಸಾರಂಗಿ ಕಲೀತಿದ್ದಾನೆ. ಇಷ್ಟು ವರ್ಷ ನಾನು ಹೇಳಿಕೊಟ್ಟೆ. ಗಾಯನವನ್ನೂ ಹೇಳಿಕೊಟ್ಟಿದ್ದೇನೆ. ಈಗ ಅವರ ಕಡೆ ಕಲೀಲಿಕ್ಕೆ ಹೋಗಿದಾನೆ. ಚಿಕ್ಕವನು ಫರಾಜ್‌ಖಾನ್ ಅಂತ. ಇವನು ಪಂ|| ರಾಜೀವ್ ತಾರಾನಾಥ್ ಬಳಿಯಲ್ಲಿ ಸರೋದ್ ಕಲೀತಾ ಇದ್ದಾನೆ. ಗಾಯನ ನಾನೇ ಹೇಳಿಕೊಡ್ತಾ ಇದ್ದೇನಿ. ಇಬ್ಬರೂ ಮಕ್ಕಳು ನನ್ನ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದಾರೆ.

ಪ್ರಶ್ನೆ-೨೪ : ಯುವ ಸಂಗೀತದ ಪೀಳಿಗೆಗೆ ನಿಮ್ಮ ಸಂದೇಶ ಏನು?

ಫ.ಖಾನ್: ಒಳ್ಳೆಯ ಗುರುಗಳನ್ನು ಹುಡುಕಿರಿ. ಯಾಕಂದ್ರೆ ಇತ್ತೀಚಿನ ದಿನಗಳಲಿ ಎಲ್ಲರೂ ಗುರುಗಳಾಗ್ಯಾರ. ಹಾಂಗಾಗೂದಿಲ್ಲ. ಗುರು ಅಂದ್ರೆ ಬೇರೇನೋ ಇರ್‍ತದ ವಿಷಯ. ಒಳ್ಳೇ ಗುರುಗಳನ್ನ ದೇಖ್ಯಾ, ಸೀಖ್ಯಾ, ಪರ್‌ಖ್ಯಾ ಅಂತ. ನಾವು ನೋಡಿ ತಿಳಕೊಂಡ್ರೂನು ಮತ್ತೊಂದು ಪ್ರಮಾಣಿಸಿ ನೋಡುದು ಅಂತ ಇರ್‍ತದಲ್ಲ. ಅದು ಮುಖ್ಯ. ಆ ಪ್ರಮಾಣೀಕರಣ ನಮಗೆ ಬೇಕು. ಇಂತಹ ಗುರುಗಳಿಂದ ನಾನು ಕಲಿಯಬಹುದೆಂದು ನಮಗೂ ಅನಿಸಬೇಕು. ಅಂತಹ ಗುರುಗಳು ಸಿಕ್ಕಮೇಲೆ ಗುರುಭಕ್ತಿಯಿಂದ, ಸಂಗೀತದ ಭಕ್ತಿಯಿಂದ, ಸರಸ್ವತಿಯ ಭಕ್ತಿಯಿಂದ ಹೆಚ್ಚು ಹೆಚ್ಚು ಅಭ್ಯಾಸದ ಮುಖಾಂತರ ಪರಿಶುದ್ಧಿ ಮಾಡುತ್ತಾ ಹೋಗಬೇಕು. ದಿನಕ್ಕೊಂದು ಅರ್ಧತಾಸು ಪ್ರಾಕ್ಟೀಸ್ ಮಾಡಿ ನಾನು ದೊಡ್ಡ ಸಂಗೀತಗಾರ ಆಗಬೇಕು ಅನ್ಕೊಂಡ್ರೆ ದೇವ್ರಾಣೆಗೂ ಆಗಲ್ಲ. ಸಂಗೀತ ಕ್ಷೇತ್ರ ಸಾಕಷ್ಟು ಸಮಯ ಕೇಳುತ್ತದೆ. ಹಾಗೇ ಕೇಳುವುದೂ ತುಂಬಾ ಮುಖ್ಯ. ಸಂಗೀತ ನನಗೇನು ಕೊಟ್ಟಿದೆ ಅನ್ನೋದಕ್ಕಿಂತ ನಾನು ಸಂಗೀತಕ್ಷೇತ್ರಕ್ಕೆ ಏನು ಕೊಟ್ಟಿದೇನೆ ಅನ್ನೋದು ಮುಖ್ಯ ಸಂಗತಿ.

ಪ್ರಶ್ನೆ-೨೫ : ನಿಮ್ಮನ್ನು ಜನ ಹೇಗೆ ನೆನಪಿಸಿಕೊಳ್ಳಬೇಕೆಂದು ಬಯಸುತ್ತೀರಿ?

ಫ.ಖಾನ್: ನನ್ನ ಕಲೆಯ ಮುಖಾಂತರ. ಇನ್ನೊಂದು; ಈ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಅಂತ ಗುರುತಿಸಲಿ.

****************************************

Monday, ‎March ‎7, ‎2016

Exit mobile version