ತೆಲಂಗಣದ ಹೈ ರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ

ಅತಿ ಹೆಚ್ಚು ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ವಿಶ್ವದ ಪ್ರಪ್ರಥಮ ಗಾಯಕ ಚಿನ್ಮಯ ಎಂ.ರಾವ್

ಸಾಗರ : ಇತ್ತೀಚೆಗಷ್ಟೇ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಹಲವಾರು ವಿಶ್ವ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ಈಗ ತೆಲಂಗಣದ ಹೈ ರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಚಿನ್ಮಯ ಎಂ.ರಾವ್ ಅತಿ ಹೆಚ್ಚು ಅಂದರೆ ೬,೬೨೧ ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ವಿಶ್ವದ ಪ್ರಪ್ರಥಮ ಗಾಯಕ ಎಂದು ಪ್ರಶಸ್ತಿ ಪತ್ರದಲ್ಲಿ ನಮೂದಿಸಲಾಗಿದೆ.

 

ಒಟ್ಟು ೨೮ ಗಂಟೆ ೮ ನಿಮಿಷ ೩೮ ಸೆಕೆಂಡ್ ಧ್ವನಿಮುದ್ರಣವಾಗಿರುವ ಈ ಡಿ.ವಿ.ಡಿಯನ್ನು ೨೦೧೭ರ ಮೇ ತಿಂಗಳ ೨೪ರಂದು ಹರಿಹರದ ನಾರಾಯಣಾಶ್ರಮದಲ್ಲಿ ದತ್ತ ಪರಂಪರೆಯ ಶ್ರೀ ಪ್ರಭುದತ್ ಮಹರಾಜ್ ಲೋಕಾರ್ಪಣೆಗೊಳಿಸಿದ್ದರು.

 

“ಶ್ರೀ ಗುರುಸಂಹಿತಾ” ಎಂಬ ಹೆಸರಿನ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಪವಿತ್ರ ಗ್ರಂಥದಲ್ಲಿನ ೫೨ ಅಧ್ಯಾಯಗಳಲ್ಲಿರುವ ಅನುಷ್ಟುಪ್ ಛಂದಸ್ಸಿನ ಒಟ್ಟು ೬,೬೨೧ ಸಂಸ್ಕೃತ ಶ್ಲೋಕಗಳನ್ನು ಚಿನ್ಮಯ ಎಂ.ರಾವ್ ತಮ್ಮ ಹೊನಗೋಡಿನ ಮನೆಯಲ್ಲಿರುವ ಪುಟ್ಟ ಸ್ಟೂಡಿಯೋದಲ್ಲಿ ತಾವೇ ಧ್ವನಿಮುದ್ರಣ ಮಾಡಿಕೊಂಡು ಇದರ ಸಂಕಲನದ ಕೆಲಸವನ್ನೂ ತಾವೇ ಮಾಡಿಕೊಂಡು ಅಂತಿಮ ಹಂತದ ಮಾಸ್ಟರ್ ಡಿ.ವಿ.ಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಚಿನ್ಮಯ ಎಂ.ರಾವ್ ೨೦೧೦ರಿಂದ ೨೦೧೩ರರವರೆಗೆ ೩ ವರ್ಷ ಈ ಅಡಕ ಮುದ್ರಿಕೆಯ ಧ್ವನಿಮುದ್ರಣಕ್ಕಾಗಿ ಒಟ್ಟು ೨,೪೦೦ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

 

ಮೂಲತಹ ಮರಾಠಿ ಭಾಷೆಯ ಗಂಗಾಧರ ಸರಸ್ವತಿ ಎಂಬ ಕವಿಯಿಂದ ರಚಿಸಲ್ಪಟ್ಟ ಶ್ರೀ ಗುರುಚರಿತ್ರಾ ಎಂಬ ಈ ಪವಿತ್ರ ಗ್ರಂಥ ಇಂದಿಗೂ ಮಹಾರಾಷ್ಟ್ರದಾದ್ಯಂತ ಪ್ರಚಲಿತವಾಗಿದೆ. ಶ್ರೀ ಗುರುಚರಿತ್ರೆಯು, ಶ್ರೀ ದತ್ತಾತ್ರೇಯರ, ಶ್ರೀಪಾದಶ್ರೀವಲ್ಲಭರ, ಶ್ರೀ ನೃಸಿಂಹ ಸರಸ್ವತಿಗಳ ಅದ್ಭುತವೂ ಪರಮಾನಂದವೂ ಆದ ದಿವ್ಯ ಚರಿತ್ರೆ. ಶ್ರೀ ವಾಸುದೇವಾನಂದ ಸರಸ್ವತಿಗಳು ದತ್ತನ ಪ್ರೇರಣೆಯಿಂದ ಸಂಸ್ಕೃತ ಭಾಷೆಗೆ ಇದನ್ನು ಅನುವಾದಿಸಿದ್ದಾರೆ.

ಚಿತ್ರದುರ್ಗದ ಹಿರಿಯ ಜ್ಯೋತಿಷಿ ಶ್ರೀ ಎಸ್ ಶ್ರೀಧರ ಮೂರ್ತಿ ನಿರ್ಮಾಣದ ಈ ಆಡಿಯೋ ಡಿ.ವಿ.ಡಿಯನ್ನು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಹೊರತಂದಿದೆ.

Exit mobile version