ಭಕ್ತಿಯೊಳಗೊಂದು ಭಾವ…ಭಾವದೊಳಗೊಂದು ಭಕ್ತಿ….-ಪ್ರಾರ್ಥನಾ….ಬೃಂದಾವನ…ನಂದಿನಿಯ ಗಾಯನ…

ಕನ್ನಡದ ಗಾಯಕಿಯೊಬ್ಬಳು ಮದುವೆಯಾಗಿ ದೂರದ ಪೂನಾಕ್ಕೆ ಹೋದರೆ ಏನಾಗಬಹುದು? ಸಂಸಾರ…ಮನೆ….ಮಕ್ಕಳು…ಮನೆಗೆಲಸ. ಇನ್ನು ಪತಿಯನ್ನು ಸ್ವಲ್ಪ ಒಲಿಸಿಕೊಂಡರೆ ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಮುಂದುವರೆಸಬಹುದು ಅಷ್ಟೇ. ಆತನಿಗೆ ಅದೆಲ್ಲಾ ಇಷ್ಟವಿಲ್ಲದಿದ್ದರೆ ಅದೂ ಇಲ್ಲ. ಅದೇ ಆತ ಕೇವಲ ಪತಿಯಾಗದೆ,ತನ್ನ ಪತ್ನಿಯನ್ನು ಉತ್ತಮ ಕಲಾವಿದೆಯೆಂದು ಗೌರವಿಸಿ ಆಕೆಯ ಕಲಾಭಿಮಾನಿಯಾದರೆ ಏನಾಗಬಹುದು? ಬೇರೆಯವರ ವಿಚಾರದಲ್ಲಿ ಏನೊ ಗೊತ್ತಿಲ್ಲ. ಆದರೆ ಇಲ್ಲಿ ಈ ಕಾರಣಕ್ಕಾಗಿ ಸಂಗೀತಲೋಕಕ್ಕೆ ಎರಡು ಅಡಕಮುದ್ರಿಕೆಗಳು (ಸಿ.ಡಿಗಳು) ಅರ್ಪಣೆಯಾಗುತ್ತಿವೆ.

ಹೌದು, ವರುಷದ ಹಿಂದೆ ನಾಡಿನ ಉದಯೋನ್ಮುಖ ದಕ್ಷಿಣಾದಿ ಗಾಯಕಿ ಪಿ.ನಂದಿನಿ ರಾವ್ ಪೂರಬ್ ಗುಜಾರ್ ಅವರನ್ನು ಮದುವೆಯಾಗಿ ಪೂನಾಕ್ಕೆ ಹಾರಿದರು. ಈಗ ೨ ಮ್ಯುಸಿಕ್ ಆಲ್ಬಂಗಳನ್ನು ತನ್ನ ಪತಿಯ “ಕ್ಯಾಮಿಯೋ” ಸಂಸ್ಥೆಯಿಂದ  ಕನ್ನಡಿಗರಿಗೆ,ಭಾರತೀಯರಿಗೆ ನೀಡುತ್ತಿದ್ದಾರೆ. ಈ ಎರಡು ಆಲ್ಬಂಗಳ ಹುಟ್ಟು ಹೇಗಾಯಿತೆಂದು ತಿಳಿಯೋಣ ಬನ್ನಿ.

ಹೊಸ ಊರು ಪೂನಾ-ತಯಾರಾತು “ಪ್ರಾರ್ಥನ”

ಹೇಳಿಕೇಳಿ “ಪೂನಾ” ಹಿಂದುಸ್ಥಾನಿ ಸಂಗೀತದ ರಾಜಧಾನಿ. ಅಂತಲ್ಲಿ ತನ್ನ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೊಂದು ನೆಲೆ ಅರಸಿದಳು ಈ ನಂದಿನಿ. ತನ್ನ ಶೈಲಿಯನ್ನು ಅಲ್ಲಿ  ನೆಲನಿಲ್ಲಿಸಬೇಕೆಂದರೆ ಅವರ ಶೈಲಿಯಲ್ಲಿ ತಾನು ಮೊದಲು ಹಾಡಿ ತೋರಿಸಬೇಕೆಂದು ಸನ್ನದ್ಧಳಾದಳು ಈ ಗಾಯಕಿ. ಜೊತೆಗೆ ಯಾವುದೇ ಶೈಲಿಯಲ್ಲೂ ತಾನು ಸಮರ್ಥವಾಗಿ ಹಾಡಬಲ್ಲೆನೆಂದು ಸಾಬೀತುಪಡಿಸಲು ವಿಭಿನ್ನ ಶೈಲಿಯಲ್ಲಿ ರಾಗಸಂಯೋಜಿಸುವಂತೆ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಅವರಿಗೆ ಹೇಳಿದಳು. ಅಂತೆಯೇ ದಕ್ಷಿಣಾದಿ,ಉತ್ತರಾದಿ,ಸೂಫಿ,ಜಾನಪದ,ದಾಂಡಿಯ,ಪಾಶ್ಚಾತ್ಯ,ಫ್ಯೂಜನ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಟ್ಯುನ್‌ಗಳು ಸಿದ್ಧವಾದವು.

ಹಿಂದಿಯನ್ನು ಚೆನ್ನಾಗಿ ಬಲ್ಲ ನಂದಿನಿಯೇ ಹಿಂದಿ ಭಕ್ತಿಗೀತೆಗಳನ್ನು ಬರೆದಳು. ಆದರೂ ಪೂರ್ಣ ಸಮಾಧಾವಾಗಲಿಲ್ಲ. ಹೊಸಬರಿಂದ ಹಾಡುಗಳನ್ನು ಬರೆಸೋಣವೆಂದು ಫೇಸ್‌ ಬುಕ್ ಗೆಳತಿ ರಾಜಸ್ಥಾನದ ಕವಯಿತ್ರಿ ಕವಿತ ಕಿರಣ್ ಅವರಿಗೆ ಆ ಜವಾಬ್ದಾರಿ ವಹಿಸಿದಳು. ಎಲ್ಲರ ಒತ್ತಾಯದ ಮೇರೆಗೆ ತಾನು ಮೊದಲು ಬರೆದ ಗೀತೆಗಳಲ್ಲಿ ಒಂದನ್ನು ಹಾಗೇ ಉಳಿಸಿಕೊಂಡಳು. ಧ್ವನಿಮುದ್ರಣಕಾರ್ಯ ಯಶಸ್ವಿಯಾಗಿ ಸಂಪನ್ನವಾತು. “ಟೆಸ್ಟ್ ಮಾರ್ಕೇಟ್”ನಲ್ಲಿ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಬಂತು.

ಇನ್ನೇನು ಹಿಂದಿ ಭಕ್ತಿಗೀತೆ “ಪ್ರಾರ್ಥನಾ” ಬಿಡುಗಡೆಯಾಗಬೇಕು….ಆಗ….

ಬೃಂದಾವನ….ನಲುಮೆಯ ತಾಣ…

ಗೀತೆಗಳ ಬಗ್ಗೆ ಅಭಿಪ್ರಾಯ ಕೇಳೋಣವೆಂದು ಪರಿಚಯವಿದ್ದ ಕನ್ನಡದ ಕವಿ ಹೃದಯಶಿವ ಅವರಿಗೆ ಮಾತಿನ ನಡುವೆ “ಪ್ರಾರ್ಥನ”ದ ಹಾಡೊಂದನ್ನು ಹಾಕಿ ತೋರಿಸಿದಳು ನಂದಿನಿ. ಹೃದಯಶಿವ ಮಾತುಗಳನ್ನೇ ಕವಿತೆಯ ಸಾಲುಗಳನ್ನಾಗಿಸುವ ಆಶುಕವಿ ! ಇನ್ನು ಹಾಡಿನ ಮಧುರ ರಾಗಗಳನ್ನು ಕೇಳಿಯೂ ಸುಮ್ಮನಿರಲು ಅವರೊಳಗಿನ ಕವಿಹೃದಯ ಸುಮ್ಮನಿರುವನೆ? ಅಲ್ಲೇ ಅದೇ ಹಾಡುಗಳಿಗೆ ಕನ್ನಡದ ಭಾವಗೀತೆಗಳನ್ನು ನೋಡನೋಡುತ್ತಲೇ ರಚಿಸಿದರು ಹೃದಯಶಿವ! ಈ ಗೀತೆಗಳು ಕನ್ನಡದಲ್ಲಿ ಈ ಹಿಂದೆ ಬಂದ ಭಾವಗೀತೆಗಳಿಗಿಂತ ವಿಭಿನ್ನವಾಗಿ ಕೇಳಲಾರಂಭಿಸಿತು. ಇದೊಂದು ಹೊಸ ಪ್ರಯೋಗ,ಮಾಡಿಯೇ ಬಿಡೋಣ ಎಂದು ಹೃದಯಶಿವ ಬರೆದ ಆರು ಕನ್ನಡ ಗೀತೆಗಳಿಗೆ ನಂದಿನಿ ದನಿಗೂಡಿಸಿದಳು. “ಬೃಂದಾವನ” ಎಂಬ ಹೆಸರಿನ ಕನ್ನಡದ ಭಾವಗೀತೆಗಳ ಗುಚ್ಛ ರೂಪುಗೊಂಡಿತು. ಹೀಗೆ ಏಕಕಾಲಕ್ಕೆ ಹಿಂದಿ ಭಕ್ತಿಗೀತೆಯ ಆಲ್ಬಮ್ ಒಂದು ಕನ್ನಡದ ಹೊಸರೀತಿಯ ಭಾವಗೀತೆಗಳ ಹುಟ್ಟಿಗೆ ಕಾರಣವಾಯಿತು. ಹೈಕೋರ್ಟ್‌ನ ನಿವೃತ್ತ ನ್ಯಾಯಾದೀಶ ಜಗನ್ನಾಥ ಶೆಟ್ಟಿ ಧ್ವನಿಮುದ್ರಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಈ ಕಲಾಸೇವೆಯಲ್ಲಿ ಭಾಗಿಯಾದರು.

ನಂದಿನಿಯ ಮೂಲಕ ಕನ್ನಡದ ಸುಗಮಸಂಗೀತ ಲೋಕದಲ್ಲಿ ಹೊಸಪ್ರಯೋಗವೊಂದಕ್ಕೆ ಯೋಗ ಕೂಡಿ ಬಂದಿದೆ. ಇದು ಹೀಗೇ ಮುಂದುವರೆದು ಕನ್ನಡ ಭಾವಗೀತೆಗಳ ಕಣಜ ಸಮೃದ್ಧವಾಗಲಿ ಅಲ್ಲವೆ?

ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು

‎Wednesday, ‎July ‎20, ‎2011

************

ಈ ಸಿ.ಡಿ ಗಳಿಗೆ ಸಂಪರ್ಕಿಸಿ

CAMEO

#3, “SWOJAS GULMOHAR”,

LAW COLLAGE ROAD,

PUNE-411004

EMAIL-info@cameoml.com

Ph-    +91 80 32469813

*************

Exit mobile version