ಯಕ್ಷಕೊಳಲು ನರ್ತನ-ಈ ಪ್ರಯೋಗ ನೂತನ

ಕರ್ನಾಟಕದ ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದೇ ಖ್ಯಾತಿಯಾದಂತಹ ಭಾರತೀಯ ಆಧ್ಯಾತ್ಮಿಕ ,ಐತಿಹಾಸಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ವಿಜ್ರಂಭಿಸುವಂತಹ ಕಲೆಗಳಲ್ಲಿ “ಯಕ್ಷಗಾನ” ಒಂದು ಅದ್ಭುತ ಕಲೆ. ಇಂತಹ ಒಂದು ಯಕ್ಷಗಾನಕಲೆಯಲ್ಲಿ ಬಡಗು ಹಾಗು ತೆಂಕು ಎಂಬ ಎರಡು ವಿಭಿನ್ನ ವಿಶೇಷ ಸುಪ್ರಸಿದ್ಧ ಶೈಲಿಗಳು. ಈ ಎರಡು ಪ್ರಕಾರಗಳಲ್ಲಿ ಬಡಗು ತಿಟ್ಟಿನ ಹೆಸರಾಂತ ಮೇಳ ಪೆರ್ಡೂರು ಮೇಳ. ಹೊಸನಗರ ತಾಲೂಕು ಮಾರುತಿಪುರದ ಶಾಲಾ ಆವರಣದಲ್ಲಿ ಇತ್ತೀಚೆಗೆ ಪೆರ್ಡೂರು ಮೇಳದ ಒಂದು ವೇದಿಕೆಯಲ್ಲಿ ಯಕ್ಷಗಾನದ ಒಂದು ವಿನೂತನ ಪ್ರಯೋಗ ಯಶಸ್ವಿಯಾಗಿ ನಡೆಯಿತು. ಇದರ ರೂವಾರಿಗಳು ಚಂದ್ರಶೇಖರ್ ನಾರಾಯಣ್ ಹಾಗು ರಾಜು ಭಾಗವತ್ ಕಾಸ್ಪಾಡಿ.

ಕೆರೆಮನೆ ಶಂಭು ಹೆಗಡೆಯವರ ಕಲಾಕೇಂದ್ರದಲ್ಲಿ ಚಂದ್ರಶೇಖರ್ ಒಬ್ಬ ವಿದ್ಯಾರ್ಥಿಯಾಗಿ ಕಲಿತು ಈಗ ಆ ಮೇಳದ ವೃತ್ತಿ ಕಲಾವಿದ,ಒಳ್ಳೆಯ ನೃತ್ಯ ಕಲಾವಿದ. ಇನ್ನು ರಾಜು ಭಾಗವತ್ ಪರಂಪರಾಗತವಾಗಿ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ಯಕ್ಷಗಾನ ಮಾಡುತ್ತಾ ಪ್ರಜ್ನಾವಂತರ ಕೂಟವೊಂದನು ಕಟ್ಟಿ ಸದಾ ಚಟುವಟಿಕೆಯಿಂದಿದ್ದಾರೆ. ಇವರಿಬ್ಬರಿಗೆ ಯಕ್ಷಗಾನಲೋಕದಲ್ಲಿ ಏನಾದರೊಂದು ಹೊಸ ಪ್ರಯೋಗ ಮಾಡಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ಉಡುಪಿಯ ಹಿರಿಯ ಕಲಾವಿದರಾದ ಗುರುರಾಜ ಮಾರ್ಪಳ್ಳಿಯವರೊಡನೆ ಆತ್ಮೀಯ ಒಡನಾಟ ಈ ಇಬ್ಬರು ಯುವಕರಿಗೆ ಒಂದು ದಾರಿ ತೋರಿಸಿತು. ಯಕ್ಷಗಾನ ಪಂಡಿತ,ಸಂಸ್ಕೃತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಕೊಳಲುವಾದನದಲ್ಲೂ ಎತ್ತಿದ ಕೈ ಎಂಬುದನ್ನು ಅರಿತಿದ್ದ ಇವರಿಬ್ಬರೂ ಹೊಸ ಯೋಜನೆಯೊಂದನ್ನು ರೂಪಿಸಿಕೊಂಡರು. ಅದರ ಫಲಿತಾಂಶವೇ ಈ ಕಾರ್ಯಕ್ರಮ.

ಇದೇ ಮೊದಲುಭಾಗವತಿಕೆಯ ಬದಲು ಕೊಳಲು !

“ಯಕ್ಷಗಾನದ ಮೃದಂಗ ಮಾಂತ್ರಿಕ” ಎಂದೇ ಹೆಸರು ಮಾಡಿದ್ದ ಮದ್ದಳೆ ದುರ್ಗಪ್ಪನವರು ಈ ಹಿಂದೆ ಯಕ್ಷಗಾನದ ಪದ್ಯದ ಬದಲು ಮೃದಂಗವನ್ನು ಬಾರಿಸಿಕೊಂಡು ಕಾರ್ಯಕ್ರಮ ನಡೆಸಿದ್ದರು. ಆದರೆ ಕೊಳಲಿನಲ್ಲಿ ಈ ಪ್ರಯೋಗ ಇದೇ ಮೊದಲು. ಯಕ್ಷಗಾನದ ಭಾಗವತಿಕೆಯನ್ನು ಅಂದರೆ ಪದ್ಯಗಳನ್ನು ಹಾಡುವುದರ ಬದಲು ಕೊಳಲಲ್ಲಿ ನುಡಿಸಿದ ಗುರುರಾಜ ಮಾರ್ಪಳ್ಳಿಯವರಿಗೆ ಇದು ನಿಜಕ್ಕೂ ಒಂದು ದೊಡ್ಡ ಸವಾಲಾಗಿತ್ತು.

ಅಭಿಮನ್ಯು ಕಾಳಗದ ಎಲ್ಲಾ ಪ್ರಸಂಗದ ಆಯ್ಕೆಪದ್ಯಗಳ ಭಾವಾರ್ಥವನ್ನು ಮೊದಲೇ ನಿರೂಪಣೆ ಮಾಡಿದ್ದರಿಂದ ಪ್ರೇಕ್ಷಗರಿಗೆ ಪ್ರಸಂಗದ ಬಗ್ಗೆ ಯಾವುದೇ ರೀತಿಯ ಗೊಂದಲಗಳಿರಲಿಲ್ಲ. ಅದೂ ಯಕ್ಷಗಾನದ ಅಭಿಮಾನಿಗಳೇ ತುಂಬಿ ತುಳುಕುತ್ತಿದ್ದ ಸಭೆಯಲ್ಲಿ ನವರಸಗಳನ್ನು ಕಣ್ತುಂಬ ನೋಡಿ ಸವಿಯುವುದಷ್ಟೇ ಬಾಕಿ ಉಳಿದಿತ್ತು. ಪದ್ಯಗಳ ಸಾಹಿತ್ಯದ ಭಾವಂತರವಾಗಿದ್ದ ಕೊಳಲು ಭಾಗವತಿಕೆಯ ಹೊರತಾಗಿ ಸ್ವತಂತ್ರವಾಗಿ ನೆಲೆನಿಂತು ಪ್ರೇಕ್ಷಕರನ್ನು ಸೆರೆಹಿಡಿಯುವುದು ಕಷ್ಟಸಾಧ್ಯವಾಗಿತ್ತು. ಈ ವಿಚಾರದಲ್ಲಿ ಗುರುರಾಜ ಮಾರ್ಪಳ್ಳಿಯವರಿಗೆ ಸರಿಸಾಟಿ ಯಾರೂ ಇಲ್ಲವೇನೋ ಎಂದು ಪ್ರತೀಕ್ಷಣವೂ ಅನಿಸುತ್ತಿತ್ತು. ಪ್ರಾಯಶಹ ಯಕ್ಷಗಾನ ಲೋಕದಲ್ಲಿ ಇಷ್ಟು ವರುಷಗಳ ಅವರ ಅನುಭವ ಹಾಗು

ಕೊಳಲಿನಲ್ಲಿ ಅವರಿಗಿರುವ ಪ್ರಾವೀಣ್ಯ ಇವೆರಡರ ಸಂಗಮವೇನೋ ಎಂಬಂತೆ ಅಂದಿನ ಆ ಕಾರ್ಯಕ್ರಮಕ್ಕೆ ಶೋಭೆತಂದುಕೊಟ್ಟಿತ್ತು.

ದೇವದಾಸ್ ಶಣೈ ಮೃದಂಗದಲ್ಲಿ ಹಾಗು ಮಂಜುನಾಥ ನಾವಡ ಚಂಡೆಯಲ್ಲಿ ಇವರಿಗೆ ಸಹಕರಿಸಿದರು.

ನರ್ತಿಸಿದಳು ಅಪ್ರತಿಮ ಸಾಧಕಿ

ಸುಮಾರು ಒಂದುವರೆ ತಾಸು ನರ್ತಿಸಿದ ಗೀಜಗಾರಿನ ನಾಗಶ್ರೀ ತನ್ನ ಈವರೆಗಿನ ಸಾಧನೆಗಳನ್ನೆಲ್ಲಾ ವೇದಿಕೆಯಲ್ಲಿ ಕೊಡವಿ ಯಕ್ಷಲೋಕದ ನಕ್ಷತ್ರವಾದಳು. ಮನೆಯೆ ಮೊದಲ ಪಾಠಶಾಲೆ ಎಂಬಂತೆ ಅಮ್ಮನಿಂದ ಮೊದಲು ಕಲಿತ ನಾಗಶ್ರೀ ಸತತ ಸಾಧನೆ ಮಾಡುತ್ತಾ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಆದರೂ ಈ ಕೊಳಲಿನ ಭಾಗವತಿಕೆಗೆ ಮೈಮನತುಂಬಿ ನರ್ತಿಸಿದ್ದು ಇದೇ ಮೊದಲು. ಬೆಳಗಾಗುತ್ತಿದ್ದರೂ ಪ್ರೇಕ್ಷಕರು ನಿದ್ದೆಗೆ ಜಾರದೆ ಮೇಲೆದ್ದು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದುದೇ ಇದಕ್ಕೆ ಸಾಕ್ಷಿ ! ಒಂದುಕಾಲದಲ್ಲಿ ಕಾಡಸುಮವಾಗಿದ್ದ ನಾಗಶ್ರೀ ಇಂದು ನಾಡತಾರೆಯಾಗಿ ಅಭಿನಯದ ಬೇರೆ ಪ್ರಕಾರಗಳಾದ ಕಿರುತೆರೆ ಹಾಗು ಬೆಳ್ಳಿತೆರೆಗಳಲ್ಲಿ ಮಿಂಚುತ್ತಾ ಕನ್ನಡ ಚಿತ್ರೋದ್ಯಮದಲ್ಲೂ ಸಂಚಲನ ಮೂಡಿಸಿದ್ದಾಳೆ. ತೆಲುಗು ಚಿತ್ರವೊಂದರಲ್ಲಿ ನಾಯಕಿಯಾಗಿ ಸಕತ್ತಾಗಿ ಕುಣಿದು ಬಂದಿರುವ ಈಕೆ ತನ್ನ ಮೂಲಕಲೆಯಾದ ಯಕ್ಷಗಾನವನ್ನು ಮಾತ್ರ ತನ್ನ ತಾಯಷ್ಟೇ ಪ್ರೀತಿಸುತ್ತಿರುವುದು ಆಶಾದಾಯಕ ಸಂಗತಿ. ಯಕ್ಷಗಾನದ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ತಾನು ಎಲ್ಲವನ್ನೂ ಸಾಧಿಸಿ ತೋರಿಸುತ್ತೇನೆ ನೋಡಿ,ನಾನು ಯಕ್ಷಗಾನವನ್ನೆಂದೂ ಬಿಟ್ಟಿಲ್ಲ ಎಂದು ಆಕೆಯ ಅಂದಿನ ನರ್ತನ ಸಾಬೀತು ಮಾಡಿತ್ತು.

“ರಂಗಯ್ಯ ಓಡಿ ಬಾ ಬಾ.. ಮನೆಗೆ” ಹಾಗು “ಮಗನೇ ನೀ ಮತಿಗೆಟ್ಟು ನಡೆವರೇ…” ಹೀಗೆ ಅನೇಕ ಹಳೆಶೈಲಿಯ ಪದ್ಯಗಳಿಗೆ ಅಂದವಾಗಿ ನಾಗಶ್ರೀ ಹೆಜ್ಜೆ ಹಾಕುತ್ತಿರುವಾಗ ಕಲರಸಿಕರಿಗೆ ಮೈಯೆಲ್ಲಾ ಕಣ್ಣಾಗಿತ್ತು. ಮಗ ಯುದ್ಧಕ್ಕೆ ಹೋಗುವ ಸನ್ನಿವೇಶ…ಆಗ ನವಮಾಸ ಪರ್ಯಂತ ಹೊತ್ತು ಹೆತ್ತ ತಾಯಿ ..”ನೀನು ಚಿಕ್ಕವನು..ಏಕೆ ಯುದ್ಧಕ್ಕೆ ಹೋಗುವೆ? ನೀನು ರಣರಂಗದಲ್ಲಿ ಮಡಿದರೆ ನನಗೆ ದುಃಖ” ಎನ್ನುವಾಗ ನೋಡುಗರಿಗೂ ಕಣ್ಣೀರು ಬಂತು.

ಹಿರಿಯರ ಮುಂದೆ ಕಿರಿಯರ ಪ್ರಯೋಗ

ಪೆರ್ಡೂರು  ಮೇಳದ ಪ್ರಧಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ್ ಹಾಗು ಆ ಮೇಳದ ಇನ್ನಿತರ ಅನೇಕ ಕಲಾವಿದರು ಕಿರಿಯರ ಈ ಹೊಸಪ್ರಯೋಗಕ್ಕೆ ಹಿರಿಯರಾಗಿ ಬೆನ್ ತಟ್ಟಿ ಪ್ರೋತ್ಸಾಹಿಸಿ ತಮ್ಮ ಹಿರಿತನವನ್ನು ಮೆರೆದರು. ಸ್ವತಹ ಪ್ರೇಕ್ಷಕರಾಗಿ ಕುಳಿತು ಇಂತಹ ಪ್ರಯೋಗಗಳು ಚಿರಕಾಲ ಬಾಳಲಿ ಎಂದರು.

ಒಟ್ಟಿನಲ್ಲಿ ಈ ಪ್ರಯೋಗದಿಂದಾಗಿ ಯಕ್ಷಗಾನಲೋಕದಲ್ಲಿ ಹೊಸ ಸಂಚಲನವೊಂದು ಮೂಡಿರುವುದಂತೂ ನಿಜ. ಕಲಾರಸಿಕರಿಗೆ ಯಕ್ಷಗಾನವನ್ನು ಮತ್ತೊಂದು ರೀತಿಯಲ್ಲಿ ನೋಡುವ ಅವಕಾಶವೂ ಆದಂತಾತು. ಪರಂಪರೆಯಿಂದ ಪರಂಪರೆಗೆ ಸಾಗುವಾಗ ಇಂತಹ ಹೊಸ ಹೊಸ ಸಂಗತಿಗಳು ಸೇರುತ್ತ ಸೇರುತ್ತ ಭಾರತೀಯ ಕಲೆಗಳು ಶ್ರೀಮಂತವಾಗಿವೆ. ಹೀಗೆ ಶ್ರೀಮಂತವಾಗಲು ಕಾರಣ ಹೊಸಹೊಸ ಪ್ರಯೋಗ. ಇದು ಹೀಗೇ ನಡೆಯುತ್ತಿರಲಿ ಆಗಾಗ.

ಲೇಖನಚಿನ್ಮಯ.ಎಂ.ರಾವ್ ಹೊನಗೋಡು

‎Friday, ‎June ‎3, ‎2011

**********************

Exit mobile version