ಸ್ಯಾಂಡಲ್ ವುಡ್

‘ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್- ಫೆಬ್ರವರಿ 10ಕ್ಕೆ ಸಿನಿಮಾ ರಿಲೀಸ್

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿರುವ ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ಮುಖ್ಯ ಭೂಮಿಕೆ ಈ ಚಿತ್ರದಲ್ಲಿದೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ ‘ಹೊಂದಿಸಿ ಬರೆಯಿರಿ’ ಎಂದಾಗ ನೆನಪಾಗೋದು ಬಾಲ್ಯ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐದು ಜನ ಸ್ನೇಹಿತರ ಹನ್ನೆರಡು ವರ್ಷದ ಜರ್ನಿ ಈ ಚಿತ್ರದಲ್ಲಿದೆ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಈ ಜರ್ನಿಯನ್ನು ಒಳಗೊಂಡಿದೆ. ತುಂಬಾ ಜನಕ್ಕೆ ಈ ಸಿನಿಮಾ ಕನೆಕ್ಟ್ ಆಗುತ್ತೆ. ಈ ಚಿತ್ರದ ಟೈಟಲ್ ನೀಡಿದ್ದು ಮಾಸ್ತಿ ಸರ್. ನನಗೆ ಈ ಚಿತ್ರ ಹೊಸತು. ಇಲ್ಲಿ ನಟಸಿರೋರೆಲ್ಲ ಅನುಭವಿಗಳು ಆದ್ರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ಕೆಲಸ ಆರಂಭಿಸಿದ್ವಿ. ಫೆಬ್ರವರಿ10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಟ ಪ್ರವೀಣ್ ತೇಜ್ ಮಾತನಾಡಿ ನಮ್ಮ ಚಿತ್ರದ ನಿಜವಾದ ನಾಯಕ ನಿರ್ದೇಶಕ ಹಾಗೂ ನಿರ್ಮಾಪಕ ರಾಮೇನಹಳ್ಳಿ ಜಗನ್ನಾಥ್. ಒಂದೊಳ್ಳೆ ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ನಿಭಾಯಿಸಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಅನುಭವವನ್ನು ಈ ಸಿನಿಮಾ ನೀಡಿದೆ ಎಂದು ತಿಳಿಸಿದ್ರು.

ನಟಿ ಭಾವನ ರಾವ್ ಮಾತನಾಡಿ ಹೊಂದಿಸಿ ಬರೆಯಿರಿ ಕಥೆ ಕೇಳಿದಾಗ ಸಿಂಪಲ್ ಕಥೆ ಬಟ್ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಅನಿಸ್ತು. ನಮ್ಮ ಜೀವನದ ಹಾಗೆ ಕೆಲವು ಸನ್ನಿವೇಶಗಳಿಂದ ನಾವು ಜೀವನವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಚಿತ್ರದಲ್ಲಿ ನಾನು ಭೂಮಿಕ ಪಾತ್ರ ನಿರ್ವಹಿಸಿದ್ದೇನೆ. ಈ ಸಿನಿಮಾ ತುಂಬಾ ಜನಕ್ಕೆ ಕನೆಕ್ಟ್ ಆಗುತ್ತೆ. ನಿರ್ದೇಶಕರು ಈ ಸಿನಿಮಾ ಬಗ್ಗೆ ಆರಂಭದಿಂದಲೂ ತುಂಬಾ ಕ್ಲಿಯರ್ ಆಗಿದ್ದರು ಇಂತಹ ಬ್ಯೂಟಿಫುಲ್ ಸಿನಿಮಾ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ರು.

ನಟ ಶ್ರೀ ಮಹದೇವ್ ಮಾತನಾಡಿ ಹೊಂದಿಸಿ ಬರೆಯಿರಿ ಎಂದಾಗ ಬಾಲ್ಯ ನೆನಪಾಗುತ್ತೆ. ಆದ್ರೆ ಕೇವಲ ಬಾಲ್ಯ ಅಲ್ಲ ಜೀವನ ಹೇಗೆ ನಡೀತಿದೆ, ನಾವು ಹೇಗಿರಬೇಕು. ಚಿಕ್ಕ ತಪ್ಪು ಎಷ್ಟು ದೊಡ್ಡದಾಗುತ್ತೆ ಎಲ್ಲವೂ ಈ ಸಿನಿಮಾದಲ್ಲಿ ರಿಯಲೈಜ್ ಆಗುತ್ತೆ. ಇಡೀ ಸಿನಿಮಾವನ್ನು ಮಾತಲ್ಲಿ ಹೇಳೋಕಾಗಲ್ಲ ಅಷ್ಟು ಡೆಪ್ತ್ ಆಗಿದೆ ಈ ಚಿತ್ರದ ಕಾನ್ಸೆಪ್ಟ್. ನನಗೆ ಈ ಚಿತ್ರ ತುಂಬಾ ಸ್ಪೆಶಲ್. ನಾಲ್ಕರಿಂದ ಐದು ಲುಕ್ ನಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ತಂಡ ಈ ಸಿನಿಮಾ ಬಗ್ಗೆ ಒಂದೊಳ್ಳೆ ಕಾನ್ಫಿಡೆಂಟ್ ನಲ್ಲಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು.

ನಟಿ ಐಶಾನಿ ಶೆಟ್ಟಿ ಮಾತನಾಡಿ ಹೊಂದಿಸಿ ಬರೆಯಿರಿ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಈ ಸಿನಿಮಾ ಕಥೆ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈ ಚಿತ್ರದ ಪಾತ್ರಗಳು ಬದುಕಿಗೆ ತುಂಬಾ ಹತ್ತಿರವಾಗುತ್ತೆ. ಮೊದಲ ಸಿನಿಮಾದಲ್ಲೇ ಇಷ್ಟೊಳ್ಳೆ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಸನಿಹ ಪಾತ್ರ ಮಾಡಿದ್ದೇನೆ. ಈ ಪಾತ್ರ ಹಾಗೂ ಈ ಸಿನಿಮಾ ಭಾಗವಾಗಿರೋದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ಫೆಬ್ರವರಿ 10ರಂದು ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಂತಸ ಹಂಚಿಕೊಂಡ್ರು.

ನಟಿ ಅರ್ಚನಾ ಜೋಯೀಸ್ ಮಾತನಾಡಿ ಇಡೀ ತಂಡದ ಪರಿಶ್ರಮ, ನಿರ್ದೇಶಕರ ಪರಿಶ್ರಮ ತೆರೆ ಮೇಲೆ ಬರೋ ಸಮಯ ಬಂದಿದೆ. ಚಿತ್ರದಲ್ಲಿ ಪಲ್ಲವಿ ಪಾತ್ರ ಮಾಡಿದ್ದೇನೆ. ತುಂಬಾ ಪ್ರಬುದ್ಧತೆ ಹೊಂದಿರುವ ಪಾತ್ರ, ಸರಳ ಜೀವಿ, ಸ್ವಾವಲಂಬಿ, ಮಿತಭಾಷಿ, ಬದುಕಿನ ಎಲ್ಲ ದ್ವಂದ್ವಗಳನ್ನು ಸಮಚಿತ್ತದಿಂದ ನೋಡುವ ಪಾತ್ರ ಪಲ್ಲವಿಯದ್ದು. ಸಿನಿಮಾ ನೋಡಿ ಹೋಗುವಾಗ ಪಲ್ಲವಿ ಎಲ್ಲರನ್ನು ಕಾಡುತ್ತಾಳೆ. ಈ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಟ ನವೀನ್ ಶಂಕರ್ ಮಾತನಾಡಿ ಈ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಈ ಚಿತ್ರದ ಆಶಯ. ಸಂಬಂಧಗಳ ಸುತ್ತ, ಸ್ನೇಹದ ಸುತ್ತ, ಬಾಂದವ್ಯದ ಸುತ್ತ ಈ ಸಿನಿಮಾ ಹೇಳ ಹೊರಟ ವಿಷಯ ಬಹಳ ಇಷ್ಟವಾಯ್ತು. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುತ್ತೆ. ನಿರ್ದೇಶಕರು ಈ ಚಿತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಸಾಹಿತ್ಯದ ಅಭಿರುಚಿ ಇದೆ ಅದೆಲ್ಲವೂ ಸಿನಿಮಾವನ್ನು ಚೆಂದಗೊಳಿಸಿದೆ. ರಂಜಿತ್ ಪಾತ್ರ ಮಾಡಿದ್ದೇನೆ. ತುಂಬಾ ಅನುಭವಿ, ಗಟ್ಟಿತನ ಇರುವ ಹುಡುಗನ ಪಾತ್ರ. ಈ ಸಿನಿಮಾ ಭಾಗವಾಗಿರೋದಕ್ಕೆ ಬಹಳ ಖುಷಿ ಇದೆ ಎಂದು ತಿಳಿಸಿದ್ರು.

ನಟಿ ಅರ್ಚನಾ ಕೊಟ್ಟಿಗೆ ಮಾತನಾಡಿ ಮೊದಲ ಸಿನಿಮಾವಾದ್ರು ಕೂಡ ಇಷ್ಟು ಆರ್ಟಿಸ್ಟ್ ಇಟ್ಟುಕೊಂಡು ತುಂಬಾ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ಧನ್ಯವಾದಗಳು ಎಂದು ತಿಳಿಸಿದ್ರು.

ನಟ ಅನಿರುದ್ದ್ ಆಚಾರ್ಯ ಮಾತನಾಡಿ ಹದಿಮೂರು ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೇನೆ. ನಾನು ನಟನಾಗಿ ಏನೇನು ಹುಡುಕುತ್ತಿದ್ದೆನೋ ಅದೆಲ್ಲ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.