ರಂಗಭೂಮಿ

ಕೋವಿಡ್ ಭಯದಲ್ಲೂ ‘ದ್ವಂದ್ವ’ ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಪ್ರತಿಕ್ರಿಯ ಸಂಪಾದಿಸಿದೆ

ನಿನ್ನೆಯ ದಿನ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಧಾರವಾಡದಲ್ಲಿ ಒಟ್ಟು ಐದು ನಾಟಕಗಳು ಪ್ರದರ್ಶನಗೊಂಡವು. ಅದರಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಸ್ನೇಹಿತರು ಕಲಾ ಸಂಘ (ರಿ) ಅಭಿನಯಿಸಿರುವ ಹೃದಯಸ್ಪರ್ಶಿ ದ್ವಂದ್ವ ನಾಟಕವು ಕರ್ನಾಟಕ ವಿದ್ಯಾವರ್ಧಕ ಸಂಘದ ಪಾ.ಪು ಸಭಾಭವನದಲ್ಲಿ ಪ್ರದರ್ಶನಗೊಂಡು ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಪ್ರತಿಕ್ರಿಯ ಸಂಪಾದಿಸಿದೆ. ನಗರದಲ್ಲಿ ಹಲವು ನಾಟಕಗಳಿದ್ದರೂ ಜನ ದ್ವಂದ್ವ ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ನಾಟಕ ಆಯೋಜಕರ ಶ್ರಮ ಸಾರ್ಥಕವಾಗಿಸಿದೆ. ನಿರುದ್ಯೋಗಿ ಮಗನೊಬ್ಬ ಸರ್ಕಾರಿ ನೌಕರಿಯ ನಿವೃತ್ತ ಅಂಚಿನಲ್ಲಿರುವ ತಂದೆಯನ್ನು ಮುಗಿಸುವ ಹುನ್ನಾರ ನಡೆಸುವಂಥಹ ಹೃದಯವಿದ್ರಾವಕ ಕಥಾಹಂದರ ಇರುವ ಈ ನಾಟಕ ಡಾ. ಶ್ರೀಧರ ಕುಲಕರ್ಣಿ ಅವರ ಸಂಗೀತ, ಕಿಟ್ಟಿ ಗಾಂವಕರ ಅವರ ಬೆಳಕಿನ ವಿನ್ಯಾಸದೊಂದಿಗೆ ಯಶಸ್ವಿ ಪ್ರದರ್ಶನಗೊಂಡಿತು.

ಶಿವಮೂರ್ತಿ ಎಂಬ ತಂದೆ ಪಾತ್ರದಲ್ಲಿ ಕಾಣಿಸಿಕೊಂಡ ಸಿ.ಎಸ್. ಪಾಟೀಲಕುಲಕರ್ಣಿ ಅವರ ಅಮೋಘ ಅಭಿನಯ ಕಂಡು ಜನರೆಲ್ಲರೂ ಕೆಕೇ, ಚಪ್ಪಾಳೆಗಳ ಮೂಲಕ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇನ್ನೂ ವಿಶ್ವನ ಪಾತ್ರದಲ್ಲಿ ನಟಿಸಿದ ಪವನ್ ದೇಶಪಾಂಡೆ ಅವರ ರೋಧನೆಯ ನಟನೆ ಗಮನ ಸೆಳೆಯಿತು. ರತ್ನಾ ಅರ್ಚಕ ಅವರ ನೇಹಾಳ ಪಾತ್ರವೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿತು. ಗೋಪಾಲನಾಗಿ ನಟಿಸಿದ ನಿರ್ದೇಶಕ ವಿಜಿಯೀಂದ್ರ ಅರ್ಚಕ, ಚಂದ್ರುನ ಪಾತ್ರ ಮಾಡಿದ ರಿತ್ವೀಕ್ ಹಿರೇಮಠ ಕೂಡ ಮಿಂಚಿದರು.

ನಾಟಕ ನೋಡಿದ ಪ್ರೇಕ್ಷಕ ಬಂಧಗಳ ಅಭಿಪ್ರಾಯ ಹೀಗಿವೆ.

‘ಇಂದಿನ ಯುವಕರಿಗೆ ಕಡ್ಡಾಯವಾಗಿ ಈ ನಾಟಕವನ್ನು ತೋರಿಸಬೇಕಾಗಿದೆ. ಉತ್ತಮ ಸಂದೇಶ ಹೊಂದಿರುವ ‘ದ್ವಂದ್ವ’ದಂತಹ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ನಾಟಕ ರಚನೆ ಮಾಡಿದ ಸೋಮು ರೆಡ್ಡಿ ಅವರಿಗೆ ಎಷ್ಟೇ ಧನ್ಯವಾದ ಹೇಳಿದರೂ ಕಡಿಮೆ’
ಎಸ್. ಪ್ರಮಿಳಾ ಧಾರವಾಡ

‘ದ್ವಂದ್ವ’ ನಾಟಕ ನಿಜಕ್ಕೂ ನನ್ನ ಕಣ್ಣಲ್ಲಿ ನೀರು ತರಿಸಿತು. ಇಂದಿನ ಯುವಕರು ತಂದೆ-ತಾಯಿಗಳನ್ನ ಹೇಗೆ ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವದನ್ನ ಕಣ್ಣಿಗೆ ಕಟ್ಟುವಂತೆ ಸೋಮು ರೆಡ್ಡಿ ರಚಿಸಿದ್ದಾರೆ. ಅಷ್ಟೇ ಚನ್ನಾಗಿ ಕಲಾವಿದರೆಲ್ಲರೂ ಆಯಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಸುಮಂಗಲಾ ಕೊರವರ, ಧಾರವಾಡ

‘ಮಾನವೀಯ ಮೌಲ್ಯಗಳು ಕುಸಿದು ಹೋಗುತ್ತಿರುವ ಈ ಸಂಧರ್ಭಗಳಲ್ಲಿ ‘ದ್ವಂದ್ವ’ ದಂತಹ ನಾಟಕ ನಮ್ಮ ಸಮಾಜಕ್ಕೆ ಬಹಳ ಅತ್ಯಗತ್ಯ. ಇಂತಹ ನಾಟಕಗಳು ಪ್ರತಿ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳಬೇಕು. ಇಂದಿನ ಯುವ ಜನತೆಗೆ ‘ದ್ವಂದ್ವ’ ನಾಟಕ ಬಹಳ ಅತ್ಯಮೂಲ್ಯವಾದ ಸಂದೇಶ ನೀಡುತ್ತದೆ.
ಎಮ್.ಬಿ. ಮೆಳವಣಿಕೆ
ನಿವೃತ್ತ ಶಿಕ್ಷಕರು, ಹುಬ್ಬಳ್ಳಿ

Back to top button

Adblock Detected

Please consider supporting us by disabling your ad blocker