ಶಿವಮೊಗ್ಗ ಜಿಲ್ಲೆ, ಸಾಗರದ ಪ್ರತಿಷ್ಠಿತ ವಿಜಯನಗರ ಬಡಾವಣೆಯ “ ಅಥರ್ವ” ಎಂಬ ಸಾಮಾನ್ಯ ಮನೆಯೊಂದರಲ್ಲಿ ಮನುಕುಲದ ಅಸಾಮಾನ್ಯ ಸಂತ – ದತ್ತಾವತಾರಿ ಭಗವಾನ್ ಶ್ರೀಧರ ಸ್ವಾಮಿಗಳ ಬಗ್ಗೆ ಸದಾ ಅನುಸಂಧಾನ ಮಾಡುತ್ತಲೇ ಇರುವವರು ಜಿ. ಟಿ. ಶ್ರೀಧರ ಶರ್ಮಾಜಿಯವರು. ಸಾಗರದ ಹತ್ತಿರ, ತಾಳಗುಪ್ಪಾ ಹೋಬಳಿ ಸಿರಿವಂತೆ ಸೀಮೆಯ ಮೇಲಿನಗೋಳಗೋಡಿನ ಹೂವಿನಕುಳಿ ಮನೆತನದ ತಿಮ್ಮಯ್ಯ- ಕಮಲಾಕ್ಷಿಯವರ ಎರಡನೆಯ ಪುತ್ರರಾದ ಇವರು 1948 ನೇ ಇಸವಿಯಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹತ್ತಿರದ ಖಂಡಿಕ- ಸಿರಿವಂತೆಗಳಲ್ಲಿ ಪೂರೈಸಿದನಂತರ ತುಮಕೂರು ಜಿಲ್ಲೆ- ಗುಬ್ಬಿಯ ಚಿದಂಬರಾಶ್ರಮದಲ್ಲಿ ಪ್ರೌಢಶಾಲಾ ಶಿಕ್ಷಣದೊಂದಿಗೆ ವೇದ- ಸಂಸ್ಕೃತಗಳನ್ನೂ ಅಭ್ಯಾಸ ಮಾಡಿರುತ್ತಾರೆ . ಅನಂತರ ಇವರು ಸಾಗರಕ್ಕೆ ಮರಳಿ ಆಗಿನ ಕಾಲದ ಪ್ರತಿಷ್ಠಿತ ಕಾಲೇಜು ( ನವ್ಯಕವಿ- ಎಂ .ಗೋಪಾಲಕೃಷ್ಣ ಅಡಿಗರು- ಪ್ರಾಂಶುಪಾಲರು ) ಲಾಲಬಹಾದುರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುತ್ತಾರೆ. ಹಣಕಾಸಿನ ಸಮಸ್ಯೆಯಿಂದಾಗಿ ಅರ್ಹತೆ- ಅವಕಾಶಗಳಿದ್ದೂ ಅಡಿಗರು ಒತ್ತಾಯಿಸಿದರೂ ವಿಜ್ಞಾನಕ್ಕೆ ಬದಲಾಗಿ ಮಾನವಿಕ- ಇಂಗ್ಲಿಷ್- ಕನ್ನಡ- ಇತಿಹಾಸಗಳಲ್ಲಿ ಪದವಿಶಿಕ್ಷಣ ಪಡೆದಿರುತ್ತಾರೆ.
ಅನಂತರ ಚಿಕ್ಕಮಗಳೂರು ಜಿಲ್ಲೆ- ತರಿಕೆರೆ ತಾ ( ಈಗ ಅಜ್ಜಂಪುರವೇ ತಾಲ್ಲೂಕು ಕೇಂದ್ರ ) ಅಜ್ಜಂಪುರದ ಹೆಮ್ಮೆಯ ಕಲಾಸೇವಾಸಂಘ ಪ್ರೌಢಶಾಲೆಯಲ್ಲಿ ಮೊದಲು ಸಹಶಿಕ್ಷಕ- ಕೊನೆಗೆ ಮುಖ್ಯೋಪಾಧ್ಯಾಯರಾಗಿ ಸುಮಾರು ಮೂವತ್ತೈದುವರ್ಷ ಕೆಲಸ ಮಾಡಿರುತ್ತಾರೆ. ತಮಗೆ ಅಜ್ಜಂಪುರ ಎಲ್ಲವನ್ನೂ ‘ ಕಲಿಸಿತು’ ಎಂದು ಸಂತೃಪ್ತಿಯಿಂದ ಒಪ್ಪಿಕೊಳ್ಳುವ ಶರ್ಮಾಜಿಯವರು ಆ ಸಮಯದಲ್ಲಿಯೇ ಸುಮಾರು ಹತ್ತು ವರ್ಷಗಳ ಕಾಲ ಕನ್ನಡದ ಗಟ್ಟಿ ಪತ್ರಿಕೆಗಳಲ್ಲಿ ಒಂದಾದ “ ಪ್ರಜಾವಾಣಿ” ಸುಮಾರು ಹತ್ತುವರ್ಷ ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ಇವರ ಬೋಧನೆಯ ಒಂದು ವಿಶೇಷವೆಂದರೆ ಪಠ್ಯವಸ್ತುವಿಗೆ ಮೀರಿ, ವೇದ-ರಾಮಾಯಣ-ಮಹಾಭಾರತ- ಭಗವದ್ಗೀತೆಗಳೊಂದಿಗೆ ಸಾಹಿತ್ಯ- ಪತ್ರಿಕೋದ್ಯಮಗಳ ಬಗ್ಗೆಯೂ ಏನಾದರೂ ಮಾಹಿತಿ ಕೊಡುತ್ತಲೇ ಇದ್ದರು. ಮಾಸ್ತಿ-ಕುವೆಂಪು- ಬೇಂದ್ರೆ- ಅಡಿಗರೊಂದಿಗೆ ಯಕ್ಷಗಾನದ ಶೇಣಿ- ಸಾಮಗ- ದೇರಾಜೆಯವರ ಬಗ್ಗೆಯೂ ಪ್ರಸ್ತಾಪ ಮಾಡುತ್ತಿದ್ದರು. ಇದರೊಂದಿಗೆ ಜಿಡ್ಡು ಕೃಷ್ಣಮೂರ್ತಿ, ಅನಂತಮೂರ್ತಿ, ವಾಲ್ಮೀಕಿ- ವ್ಯಾಸರ ಬಗ್ಗೆಯೂ ಹೇಳುತ್ತಲೇ ಇದ್ದರು. ಮಕ್ಕಳೊಂದಿಗೆ ‘ ತಾನೂ ಕಲಿತೆ” ಎಂದು ವಿನಮೃರಾಗಿ ಒಪ್ಪಿಕೊಳ್ಳುವ ಶರ್ಮಾಜಿಯವರು ತಾ 31-10-2006 ರಲ್ಲಿ ಸೇವೆಯಿಂದ ನಿವೃತ್ತರಾಗಿ ಕೊನೆಗೆ ಒಂದು ದಿನವೂ ಶಾಲಾಕೆಲಸದಲ್ಲಿ ಮುಂದುವರೆಯದೇ ತಮ್ಮ ಮೆಚ್ಚಿನ ಬರವಣಿಗೆಯಲ್ಲಿ ಪ್ರವೃತ್ತರಾಗಿ ಸೇವೆಯಿಂದ ನಿವೃತ್ತರಾದರು. “ ನಿವೃತ್ತಿಯನಂತರ ಅದೇ ಕೆಲಸ ಮಾಡುವುದೆಂದರೆ ಬೇರೆ ಯುವಕರ ಅನ್ನ ಕಿತ್ತುಕೊಂಡಂತೆ” ಎಂದು ನೇರವಾಗಿ ನುಡಿಯುವ ಇವರು ಅಜ್ಜಂಪುರದಿಂದ ಸಾಗರ ಸೇರಿದರು.
ಶರ್ಮಾಜಿಯವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಸದಾ ಶ್ರೀಧರಾನುಸಂಧಾನದಲ್ಲಿರುವುದು ವಿಶೇಷ. ಇವರ ಬರವಣಿಗೆಯ ಬದ್ಧತೆ, ಸಾಮರ್ಥ್ಯ ಮತ್ತು ಅರ್ಪಣಾಮನೋಭಾವಗಳನ್ನು ಅರಿತಿದ್ದ ಸಾಗರ- ವರದಪುರದ ಶ್ರೀ ಶ್ರೀಧರ ಸೇವಾ ಮಂಡಲದ ಕಾರ್ಯದರ್ಶಿಗಳಾಗಿರುವ ಕೆ.ವಿ. ಶ್ರೀಧರ ರಾವ್ ಅವರು ಆಶ್ರಮದ ಮಾಸಪತ್ರಿಕೆ- ಶ್ರೀಧರ ಸಂದೇಶದ ಸಂಪಾದಕ ಮಂಡಲಿಯಲ್ಲಿರಲು ಶರ್ಮಾಜಿಯವರ ಮನವೊಲಿಸುವಲ್ಲಿ ಸಫಲರಾದರು. ಬರವಣಿಗೆಯನ್ನೇ ತಮ್ಮ ಕಾಯಕವನ್ನಾಗಿ ಸ್ವೀಕರಿಸಿದ್ದ ಶರ್ಮಾಜಿಯವರು ಶ್ರೀಧರ ಸಂದೇಶದಲ್ಲಿ “ ಮರೆಯಲಾರದ ಮಹಾಗುರುಗಳು” ಮತ್ತು “ ಪುಸ್ತಕ ಪರಿಚಯ” ಎಂಬ ಎರಡು ಅಂಕಣಗಳನ್ನು ಪ್ರಾರಂಭಿಸಿದರು. ಮರೆಯಲಾರದ ಮಹಾಗುರುಗಳು ಅಂಕಣವಂತೂ ಇವತ್ತು ಸಂದೇಶದ ಎಲ್ಲ ಓದುಗರ ಮನಗೆದ್ದಿದೆ- ಹಲವರು ಈ ಅಂಕಣವನ್ನೇ ಮೊದಲು ಓದುತ್ತಿದ್ದಾರೆ. ಪುಸ್ತಕ ಪರಿಚಯ ಅಂಕಣದಿಂದ ಹಲವು ಆಧ್ಯಾತ್ಮಿಕ, ಧಾರ್ಮಿಕ ಪುಸ್ತಕಗಳ ಪರಿಚಯ ಓದುಗರಿಗೆ ತಲುಪುತ್ತದೆ.
ಸದಾ ಕ್ರಿಯಾಶೀಲರಾಗಿರುವ ಶರ್ಮಾಜಿಯವರು ಇಲ್ಲಿಗೇ ತೃಪ್ತರಾಗಲಿಲ್ಲ. “ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳೊಂದಿಗೆ ಅವರ ಭಕ್ತರ ಸುಮಧುರ ನೆನಪುಗಳು” ಎಂಬ ಪರಿಕಲ್ಪನೆಯಲ್ಲಿ ಒಂದಲ್ಲ- ಮೂರು ಭಾಗಗಳಲ್ಲಿ ‘ ಶ್ರೀಧರ ಸ್ಮರಣೆ’ ಎಂಬ ಲೇಖನಮಾಲೆಗಳನ್ನು ಬರೆದರು. ಈ ಸ್ಮರಣೆಗಳು ಶರ್ಮಾಜಿಯವರ ಬರವಣಿಗೆಯ ಹೊಸ ಹೆದ್ದಾರಿಯನ್ನೇ ನಿರ್ಮಿಸಿತು. ಈ ಸರಣಿ ಸ್ಮರಣೆಗಳು ಈಗ ರಾಜ್ಯ- ದೇಶಾದ್ಯಂತ ಗುರುಭಕ್ತರನ್ನು ತಲುಪಿವೆ/ ತಲುಪುತ್ತಿವೆ. ಇದಕ್ಕಾಗಿಯೇ ಇವರು ಆಧುನಿಕ ತಂತ್ರಜ್ಞಾನ, ಕಂಪ್ಯೂಟರ್, ವಾಟ್ಸ್ ಅಪ್, ಫೇಸ್ ಬುಕ್ ಮುಂತಾದವುಗಳನ್ನು ಶ್ರದ್ಧಾಸಕ್ತಿಗಳಿಂದ ಕಲಿತರು. ಸಾಮಾಜಿಕ ಜಾಲತಾಣಗಳಲ್ಲಿ ಆಧ್ಯಾತ್ಮಿಕ- ಧಾರ್ಮಿಕ ವಿಷಯಗಳನ್ನು ಸಶಕ್ತವಾಗಿ ಬರೆಯುತ್ತಿರುವ ಬೆರಳೆಣಿಕೆಯಷ್ಟು ಬರಹಗಾರರಲ್ಲಿ ಶರ್ಮಾಜಿಯವರೂ ಒಬ್ಬರು. ಶ್ರೀ ಶ್ರೀಧರಸ್ವಾಮಿಗಳ ಪರಮ ಭಕ್ತರೂ ರಾಜ್ಯದ ಅಪರೂಪದ ವಿದ್ವಾಂಸರೂ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಗಿದ್ದ ಡಾ. ಎಂ. ಎಸ್. ತಿಮ್ಮಪ್ಪನವರ ನಮ್ಮ ಶ್ರೀಧರ ಶರ್ಮಾಜಿಯವರ ಶ್ರೀಧರ ಸ್ಮರಣೆ ಪುಸ್ತಕಗಳನ್ನು ಮೆಚ್ಚಿಕೊಂಡು ಇವರನ್ನು “ ಕನ್ನಡದ ಸ್ವಾಮಿ ಚೇತನಾನಂದರು” ಎಂದು ಹೆಸರಿಸಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ- ವಾಸ್ತವಕ್ಕೆ ಹಿಡಿದ ಶುದ್ಧ ಕನ್ನಡಿಯೇ ಆಗಿದೆ. ರಾಮಕೃಷ್ಣರ ಶಿಷ್ಯರಾದ ಸ್ವಾಮಿ ಚೇತನಾನಂದರು “ ದೇವರೊಡನೆ ಬಾಳಿದವರು” ಎಂದು ಎರಡು ಭಾಗಗಳಲ್ಲಿ ನಲವತ್ತೇಳು ರಾಮಕೃಷ್ಣರ ಶಿಷ್ಯರ ಅನುಭವಗಳನ್ನು ದಾಖಲಿಸಿದರು. ಇದೇರೀತಿ ಶ್ರೀಧರ ಶರ್ಮಾಜಿಯವರು “ ಶ್ರೀಧರ ಸ್ಮರಣೆ” ಎಂಬ ಸರಣಿ ಪುಸ್ತಕಗಳಲ್ಲಿ ಸುಮಾರು ಮೂರುನುರು ಶ್ರೀಧರರ ಶಿಷ್ಯರ ಸುಮಧುರ ನೆನಪುಗಳನ್ನು ಈಗಾಗಲೇ ದಾಖಲಿಸಿದ್ದಾರೆ/ ಮುಂದೂ ದಾಖಲಿಸುವವರಿದ್ದಾರೆ. ನಿಜಾರ್ಥದಲ್ಲಿ –“ ಕನ್ನಡದ ಚೇತನಾನಂದ” ರಾಗಿರುವ ಸಾಗರದ ಶ್ರೀಧರ ಶರ್ಮಾಜಿಯವರು ನಮ್ಮ ಕನ್ನಡ ಟೈಮ್ಸ್ ನೊಂದಿಗಿರುವುದು ನಮ್ಮ ಸೌಭಾಗ್ಯವೆಂದೇ ಭಾವಿಸಿದ್ದೇವೆ. ಶರ್ಮಾಜಿಯವರು ನಮ್ಮ ಪತ್ರಿಕೆಗೆ ನಿಯಮಿತವಾಗಿ ಪ್ರಾರ್ಥನೆ- “ ಶಾಶ್ವತ ಸತ್ಯಗಳು”, ಪುಸ್ತಕ ಪರಿಚಯ, ರಾಜ್ಯದಲ್ಲಿ ಭಗವಾನ್ ಶ್ರೀಧರಸ್ವಾಮಿಗಳು ಓಡಾಡಿ ಆಶೀರ್ವದಿಸಿದ ಅಪರೂಪದ ದೇವಾಲಯಗಳು ಮುಂತಾದ ಲೇಖನಗಳನ್ನು ಬರಯುವವರಿದ್ದಾರೆ. . ಅಂತೆಯೇ ತುಂಬಾ ಬೇಡಿಕೆಯಿರುವ ಶ್ರೀಧರ ಸ್ಮರಣೆ ಭಾಗಗಳ ಸುಮಧುರ ಲೇಖನಗಳನ್ನೂ ಕೂಡ ನಮ್ಮ ಕನ್ನಡ ಟೈಮ್ಸ್ ನಲ್ಲಿ ಪ್ರಕಟಿಸಲಾಗುವುದು.
ಧಾರ್ಮಿಕ, ಆಧ್ಯಾತ್ಮಿಕ ಬರಹಗಳೊಂದಿಗೆ ಲೌಕಿಕ ಬರಹಗಳಲ್ಲಿಯೂ ಸಿದ್ಧಹಸ್ತರಾಗಿರುವ ಶ್ರೀಧರ ಶರ್ಮಾಜಿಯವರ ಬರಹಗಳು ಸಾಮಾಜಿಕ ಜಾಲತಾಣಗಳು- ಯೂಟ್ಯೂಬ್ ಗಳಲ್ಲಿಯೂ ದೊರೆಯುತ್ತವೆ. ಈಗಾಗಲೇ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಸುಮಾರು ನೂರಾರು ಪುಸ್ತಕಗಳು ಬಂದಿವೆ. ಅವುಗಳಲ್ಲಿ ಶರ್ಮಾಜಿಯವರೊಬ್ಬರೆ ಸುಮಾರು ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಬರೆದಿರುವುದು ವಿಶೇಷ. ಇಂಥ ಹಿರಿಯ ಬರಹಗಾರರು ನಮ್ಮ ಸಂಸ್ಥೆ ಮತ್ತು ಕನ್ನಡ ಟೈಮ್ಸ್ ಜೊತೆಗಿರುವುದು ನಮ್ಮ ಉತ್ಸಾಹವನ್ನು ಹತ್ತುಪಟ್ಟು ಹೆಚ್ಚಿಸುತ್ತದೆ. ಮುಂದಿನ ದಿನಗಳಲ್ಲಿ “ ಕನ್ನಡದ ಚೇತನಾನಂದಜಿ ಶ್ರೀಧರ ಶರ್ಮಾಜಿ” ಯವರ ಬರಹಗಳನ್ನು ನೀವು ಓದಲಿದ್ದೀರಿ. ಶ್ರೀಧರರ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನೀವು ಅವರನ್ನೇ ನೇರವಾಗಿ ಸಂಪರ್ಕಿಸಬಹುದು.
ಜಿ. ಟಿ. ಶ್ರೀಧರ ಶರ್ಮಾ, “ ಅಥರ್ವ”
ವಿಜಯನಗರ ಬಡಾವಣೆ, ಸಾಗರ- 577401
ದೂರವಾಣಿ:- 9480473568
