ಮನೆಯಂಗಳದಲ್ಲೆ ಶರಬತ್ ಬಳ್ಳಿ : ಬಿಡುವಿನಲ್ಲಿ ಕೃಷಿ ನಡೆಸುವ ದರ್ಜಿ

-ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

ಕೃಷಿ ಕಾರ್‍ಯ ಕೈಗೊಂಡು ಏನಾದರೂ ಫಸಲು ಬೆಳೆಯಬೇಕೆಂಬ ಹಂಬಲ ಹಲವರಿಗೆ ಇರುತ್ತದೆ.ಆದರೆ ಯೋಗ್ಯ ಕೃಷಿ ಬೂಮಿ,ಫಲವತ್ತಾದ ನೆಲ,ನೀರಾವರಿ ಸೌಲಭ್ಯವಿಲ್ಲದ ಕೆಲ ವ್ಯಕ್ತಿಗಳು ಇರುವ ಅಲ್ಪಸ್ವಲ್ಪ ಜಾಗದಲ್ಲೋ,ಮನೆ ಹಿಂಭಾಗದ ಹಿತ್ತಲಿನಲ್ಲೋ,ಮನೆ ಮುಂಭಾಗದ ಅಂಗಳದಲ್ಲೋ ಕೆಲವು ಗಿಡ ಬೆಳೆಸಿ ಫಸಲು ಬೆಳೆಯುತ್ತಾರೆ .ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಮದ ವೆಂಕಟರಮಣ ಮನೆಯಂಗಳದಲ್ಲಿ ಶರಬತ್ ಹಣ್ಣಿನ ಬಳ್ಳಿ ಬೆಳೆದು, ತಂತಿಯ ಚಪ್ಪರ ನಿರ್ಮಿಸಿ ವರ್ಷವಿಡೀ ಹಣ್ಣಿನ ಫಸಲು ಪಡೆಯುತ್ತಿದ್ದಾರೆ.

ವೃತ್ತಿಯಲ್ಲಿ ಟೈಲರ್ ಆಗಿರುವ ಇವರು ಬಿಡುವಿನ ಸಮಯದಲ್ಲಿ ಈ ಬಳ್ಳಿಗೆ ನೀರು ಗೊಬ್ಬರ ಮಣ್ಣು ನೀಡಿ ಚಪ್ಪರದ ಜಾಗ ಸರಿಪಡಿಸಿ ಕೃಷಿ ನಡೆಸುತ್ತಿದ್ದಾರೆ.ಇವರು ಕಾರ್‍ಯ ನಿಮಿತ್ತ ಹುಂಚದ ಹೊಂಡ್ಲಗದ್ದೆ ಗ್ರಾಮದ ಬಂಧುವೊಬ್ಬರ ಮನೆಗೆ ಹೋಗಿದ್ದಾಗ ಈ ಹಣ್ಣಿನ ಬಳ್ಳಿ ಹಾಗೂ ಹಣ್ಣುಗಳ ಬಳಕೆ ಬಗ್ಗೆ ತಿಳಿದರು.ಕ್ರಿಕೆಟ್ ಬಾಲ್ ಗಾತ್ರದ ಈ ಹಣ್ಣುಗಳು ಬಲಿತಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ಒಳ ತಿರುಳು ಬೀಜ ಮತ್ತು ದ್ರವದಿಂದ ಕೂಡಿ ಹುಳಿಯಾಗಿರುತ್ತದೆ.ಇದರಿಂದ ಪಾನಕ ತಯಾರಿಸಬಹುದು.ಇದು ತಂಪುಕಾರಕವಾಗಿದ್ದು ಸ್ವಾದಿಷ್ಟವಾಗಿದೆ.ಮಾಗಿದ ಹಣ್ಣುಗಳನ್ನು ತಂದು ಮನೆಯಂಗಳದ ಮೂಲೆಯಲ್ಲಿ ಬೀಜ ಹಾಕಿ ಸಸಿ ತಯಾರಿಸಿದ ಇವರು ಆಸಕ್ತಿಯಿಂದ ಕೃಷಿ ಕೈಗೊಂಡರು.ಗಿಡಕ್ಕೆ ನೀರು,ಸಗಣಿ ಮತ್ತು ತರಕಾರಿ ಸಿಪ್ಪೆಗಳನ್ನು ಗೊಬ್ಬರವಾಗಿ ಹಾಕಿ ಬೆಳೆಸಿದರು.ಗಿಡ ಎತ್ತರಕ್ಕೆ ಬೆಳೆಯುತ್ತಿದ್ದಂತೆ ಕೋಲುಗಳನ್ನು ಕೊಟ್ಟು ಮನೆಯ ಸೂರಿನ ಮುಂಭಾಗಕ್ಕೆ ಹಬ್ಬಿಸಿದರು.

ಈಗ ಇವರು ಬೆಳೆಸಿದ ಈ ಬಳ್ಳಿ ಎರಡು ವರ್ಷ ಪ್ರಾಯದ್ದಾಗಿದ್ದು ಮನೆಯಂಗಳದ ಖಾಲಿ ಜಾಗದಲ್ಲಿ ೨೫ ಅಡಿ ಉದ್ದ ೧೨ ಅಗಲದ ತಂತಿಯ ಚಪ್ಪರ ನಿರ್ಮಿಸಿ ಹಬ್ಬಿಸಿದ್ದಾರೆ. ಚಪ್ಪರ ತುಂಬಾ ಹೂ,ಮಿಡಿ ಕಾಯಿ ಬಲಿತ ಹಣ್ಣುಗಳು ವರ್ಷವಿಡೀ ತುಂಬಿರುತ್ತದೆ.ಆರಂಭದಲ್ಲಿ ಈ ಹಣ್ಣಿನ ಬಗ್ಗೆ ಹೆಚ್ಚು ಪರಿಚಯವಿಲ್ಲದ ಕಾರಣ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ.ತಂಪುಕಾರಕ ಹಣ್ಣು ಇದಾಗಿದ್ದು ಪಾನಕ ತಯಾರಿಕೆಗೆ ಬಳಕೆಯಾಗುವ ವಿಚಾರ ಪ್ರಚಾರವಾದ ಕಾರಣ ಈಗ ಹಣ್ಣುಗಳು ಒಂದಕ್ಕೆ ರೂ.೨ ರಂತೆ ಮಾರಾಟವಾಗುತಿವೆ.ವಾರಕ್ಕೆ ೮ ರಿಂದ ೧೦ ಹಣ್ಣುಗಳು ಅಂದರೆ ತಿಂಗಳಿಗೆ ಸರಾಸರಿ ೨೫ ರಿಂದ ೩೦ ಹಣ್ಣುಗಳು ಮಾರಾಟವಾಗುತ್ತಿದ್ದು ಹವ್ಯಾಸಕ್ಕಾಗಿ ಬೆಳೆಸಿದ ಈ ಬಳ್ಳಿಯಿಂದ ಅಲ್ಪ ಆದಾಯ ಸಹ ದೊರೆಯುತ್ತಿದೆ.ಈಗ ಇರುವ ತಂತಿಯ ಚಪ್ಪರವನ್ನು ಇನ್ನಷ್ಟು ವಿಸ್ತಾರಗೊಳಿಸಿ ಹೆಚ್ಚು ಹಣ್ಣು ಬೆಳೆಸುವ ಗುರಿ ಇವರದ್ದಾಗಿದೆ. ಸಾಕಷ್ಟು ಕೃಷಿ ಭೂಮಿ ಇಲ್ಲದಿದ್ದರೂ ಸಹ ಆದಾಯ ತರಬಲ್ಲ ಕೃಷಿ ನಡೆಸಬಹುದೆಂದು ತೋರಿಸಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದಾರೆ ಟೈಲರ್ ವೆಂಕಟರಮಣ ಅವರು. ಮಾಹಿತಿಗಾಗಿ ಅವರ ಮೊಬೈಲ್ ಸಂಖ್ಯೆ ೯೯೮೦೩೫೮೨೨೪ ನ್ನು ಸಂಪರ್ಕಿಸಬಹುದಾಗಿದೆ.

-ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

Exit mobile version