ಕನ್ನಡದ ಹಾಟ್ ಹಾಗು ಕ್ಯುಟ್ ನಟಿ ಸಂಜನ “ಗಂಡ ಹೆಂಡತಿ” ಸಂಜನ ಎಂದು ಖ್ಯಾತಿ ಪಡೆದದ್ದು ಇತಿಹಾಸ. ಆದರೆ ಇದೇ ಮಾದಕ ನಟಿ ಸಂಜನ ಈ-ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ನಿಂದಾಗಿ “ಬಿಗ್ ಬಾಸ್ ಸಂಜನ” ಎಂದು ಬಹುಜನಪ್ರಿಯತೆ ಪಡೆದಿರುವುದು ವರ್ತಮಾನ. ಯಾವ ಸಂಜನ ಗಂಡ ಹೆಂಡತಿ ಚಿತ್ರವನ್ನು ಮರೆತು ಮತ್ತೆ ಹೊಸ ಇಮೇಜ್ನತ್ತ ಧಾವಿಸಬೇಕೆಂದುಕೊಂಡಿದ್ದಳೋ ಅದೇ ಸಂಜನ ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲೇ ಕಿಚ್ಚ ಸುದೀಪ್ ಅವರಿಂದ ಮೆಚ್ಚುಗೆ ಸನ್ಮಾನ ಎಲ್ಲವನ್ನೂ ಗಳಿಸಿಕೊಂಡಿದ್ದು ಅದೇ “ಗಂಡ ಹೆಂಡತಿ” ಚಿತ್ರದಿಂದ ಎಂಬುದು ವಿಶೇಷ ! “ಗಂಡ ಹೆಂಡತಿ” ಸಂಜನ ಎಂದು ಖ್ಯಾತಿ ಪಡೆದಿದ್ದೀರಿ…ಈಗ “ಬಿಗ್ ಬಾಸ್ ಸಂಜನ” ಎಂದು ಮತ್ತೊಮ್ಮೆ ಹೊಸ ಹೆಸರಿನಿಂದ ಪ್ರಖ್ಯಾತಿ ಪಡೆಯಲು ನಿಮಗಿದೋ ಸದವಕಾಶ ಎಂದು ಆರಂಭದಲ್ಲಿ ಸಂಜನಾಳನ್ನು ಕುರಿತು ಮಾತನಾಡಿದ ಸುದೀಪ್ ಜೊತೆಗೆ ಮತ್ತೊಂದು ಬಾಂಬ್ ಸಿಡಿಸಿ ಸಂಜನಾಳನ್ನು ಮತ್ತಷ್ಟು ಉಬ್ಬುವಂತೆ ಮಾಡಿದರು ! ಏನದು ಬಾಂಬ್ ಎನ್ನುವಿರಾ? “ಗಂಡ ಹೆಂಡತಿ ಚಿತ್ರದಲ್ಲಿ ನಟಿಸಲು ನನಗೂ ಆಫರ್ ಬಂದಿತ್ತು…ನಾನು ಒಪ್ಪಲಿಲ್ಲ, ಆದರೆ ಚಿತ್ರ ನೋಡಿದ ನಂತರ ನನಗನ್ನಿಸಿತು…ಅಯ್ಯೊ…ನಾನೆಂತಹ ಚಾನ್ಸ್ ಮಿಸ್ ಮಾಡಿಕೊಂಡೆ ” ಎಂದು ಸುದೀಪ್ ರೊಮ್ಯಾಂಟಿಕ್ ಮೂಡಿನಲ್ಲಿ ಹೇಳಿದಾಗ ಸ್ವತಹ ಸಂಜನ ಮುಖದಲ್ಲಿ ಮುಗುಳ್ನಗೆ. ಇಷ್ಟು ಸಾಕು ಸಂಜನಾಳ ಜನಪ್ರಿಯತೆಯನ್ನು ಅಳೆಯಲು.
ಇಂತಿಪ್ಪ ಸಂಜನ ಇದೇ “ಬಿಗ್ ಬಾಸ್” ಕಾರ್ಯಕ್ರಮದಿಂದ ಗೇಟ್ ಪಾಸ್ ಪಡೆದಿರುವುದು ಆಕೆಗಿಂತ ಆಕೆಯ ಅಭಿಮಾನಿಗಳ ಪಾಲಿಗೆ ಈಗ ಕಹಿಸುದ್ದಿಯಾಗಿದೆ. ಹೊರಬಂದ ಒಂದೆರಡು ದಿನ ಸ್ವಲ್ಪ ಬೇಸರಗೊಂಡಂತಿದ್ದ ಸಂಜನ ಯಥಾ ಪ್ರಕಾರ ಹಳೆ ಟ್ರ್ಯಾಕಿಗೆ ಮರಳಿದ್ದಾಳೆ. ಹಾಗೆನ್ನುವುದಕ್ಕಿಂತ ಸಂಜನ ಮೊದಲಿಗಿಂತ ಈಗ ಮತ್ತಷ್ಟು ಹೆಚ್ಚು ಖುಷಿಯಾಗಿದ್ದಾಳೆ ! ಅದು ಹೇಗೆನ್ನುವಿರಾ? ತನಗೆ ಈ ಪರಿ ಅಭಿಮಾನಿಗಳು ಇದ್ದಾರಾ ?! ಎಂದು ಸಂಜನಾಳಿಗೆ ಗೊತ್ತಾಗಿದ್ದೇ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಗೆ ಬಂದ ನಂತರ ! ಕೆಲವು ರಾಜಕೀಯ ಪಕ್ಷಗಳೂ ಸಂಜನಾಳನ್ನು ತಮ್ಮ ತಮ್ಮ ಪಕ್ಷಕ್ಕೆ ಸೇರುವಂತೆ ದುಂಬಾಲು ಬಿದ್ದುರುವುದನ್ನು ನೋಡಿ ಸ್ವತಹ ಆಕೆಯೇ ಕಂಗಾಲಾಗಿದ್ದಾಳೆ. ಆದರೆ ಅದು ತನ್ನ ಕ್ಷೇತ್ರವಲ್ಲ…ವೃತ್ತಿಯೂ ಅಲ್ಲ. ಆ ಬಗ್ಗೆ ತನಗೆ ಒಲವೂ ಇಲ್ಲವೆಂದು ಎಲ್ಲಾ ಆಹ್ವಾನಗಳನ್ನೂ ನಯವಾಗಿ ತಿರಸ್ಕರಿಸಿದ್ದಾಳೆ ಸಂಜನ. ಅಷ್ಟೇ ಅಲ್ಲದೆ ತಾನು ನಟಿಯಾಗಿ ಹಾಗು ಒಬ್ಬ ಒಳ್ಳೆಯ ಕಲಾವಿದೆಯಾಗಿ ಸಾಧಿಸಬೇಕಾದದ್ದೇ ಇನ್ನು ಸಾಕಷ್ಟಿರುವಾಗ ಈಗ ರಾಜಕೀಯಕ್ಕೆ ಹೋಗಿ ಏನು ಮಾಡಲಿ ಎಂದು ಸಂಜನ ಪ್ರಶ್ನಿಸುವಾಗ ಈಕೆಯೊಳಗಿರುವ ನಿಜವಾದ ಕಲಾವಿದೆಯ ಅನಾವರಣವಾಗುತ್ತದೆ.
ಅದೇನೇ ಇರಲಿ….ತನ್ನನ್ನು ಕೋಪಿಷ್ಠೆ ಎಂದು ದೂಷಿಸಿರುವವರ ಬಗ್ಗೆ ಸಂಜನ ಕೋಪಿಸಿಕೊಳ್ಳದೆ ನಯವಾಗಿ ದೂರುತ್ತಾರೆ ! ತನಗೆ ಕೋಪ ಇರುವುದು ನಿಜ…ಆದರೆ ಅದು ಮುಂಗೋಪ. ಅದೂ ಒಂದು ಕಾರಣ ಇದ್ದರೆ ಮಾತ್ರ ಹೊರ ಬರುತ್ತದೆ. “ನನ್ನೊಳಗೆ ನಾನೇನನ್ನೂ ಇಟ್ಟುಕೊಳ್ಳುವುದಿಲ್ಲ. ನೇರಾನೇರ ಹೊರಹಾಕಿಬಿಡುತ್ತೇನೆ. ಹಿಂದಿನಿಂದ ಮಾತನಾಡುವ ಜಾಯಮಾನ ನನ್ನದಲ್ಲ. ಏನಿದ್ದರೂ ಎದುರೇ ಹೇಳಿಬಿಡುತ್ತೇನೆ. ಬಿಗ್ ಬಾಸ್ನಲ್ಲಿ ಆದದ್ದೂ ಅದೇ. ನನ್ನ ಕೋಪಕ್ಕೆ ಕಾರಣವಿತ್ತು. ತಿಲಕ್ ನನ್ನನ್ನು ಅನಗತ್ಯವಾಗಿ ಕೆಣಕಿದ. ಚಲನಚಿತ್ರವೇ ಬೇರೆ ವಾಸ್ತವವೇ ಬೇರೆ. ಅಲ್ಲಿ ನಾವು ಪಾತ್ರಧಾರಿಗಳು ಅಷ್ಟೇ. ಪಾತ್ರ ಏನನ್ನು ಬಯಸುತ್ತದೆಯೋ ಅದನ್ನೆಲ್ಲಾ ಅಲ್ಲಿ ಮಾಡಬೇಕು. ಹಾಗಿರುವಾಗ ಎಂದೋ ನಟಿಸಿ ಮುಗಿದಿರುವ “ಗಂಡ ಹೆಂಡತಿ” ಚಿತ್ರವನ್ನು ನೆನಪಿಸಿ ದುರ್ವರ್ತನೆ ಮಾಡಿದರೆ ಅದನ್ನು ಸಹಿಸಲಾದೀತೆ? ಅದನ್ನು ಮುಲಾಜಿಲ್ಲದೆ ಪ್ರತಿಭಟಿಸಿದೆ ಅಷ್ಟೇ” ಎನ್ನುತ್ತಾಳೆ ಸಂಜನ.
ಆರಂಭವಾಗುವಾಗ-ಆರಂಭವಾದಾಗ
ಬಿಗ್ ಬಾಸ್ “ಆರಂಭವಾಗುವಾಗ” ಅದಕ್ಕೆ ತಾರಾಮೌಲ್ಯವನ್ನು ನೀಡಿದವರಲ್ಲಿ ಅಗ್ರಗಣ್ಯ ನಾಯಕ ಸುದೀಪ್ ಎಂಬುದು ತೀರಾ ಜನಜನಿತ ಸಂಗತಿ. ಆದರೆ ಇದೇ ಬಿಗ್ ಬಾಸ್ “ಆರಂಭವಾದಾಗ” ಇದಕ್ಕೆ ಮತ್ತಷ್ಟು ಮೆರುಗು ನೀಡಿದ ಸ್ಟಾರ್ಗಳಲ್ಲಿ ನಟಿ ಸಂಜನಾ ಮೊದಲಿಗಳು. ಇದೇ ಸಾಲಿಗೆ ಸೇರಿದ ಇನ್ನಿಬ್ಬರೆಂದರೆ ನಟಿ ನಿಖಿತಾ ಹಾಗು ನಾಯಕ ನಟ ವಿಜಯ ರಾಘವೇಂದ್ರ. ಹೀಗಿರುವಾಗ ಅಪಾರ ಕನ್ನಡಿಗರ ಮನೆ-ಮನಗಳಲ್ಲಿ ನೆಲೆಯೂರಿ ಒಳ್ಳೆಯ ಕಲಾವಿದೆ…ತೀರಾ ಸರಳ ಸುಂದರಿ…ಈಕೆ ಮರ್ಡರ್ನ ಮಲ್ಲಿಕಾ ಶರಾವತ್ ರೀತಿಯೇನಲ್ಲ ಎಂದು ಸಂಜನಾಳ ಬಗ್ಗೆ ಅವರ ಹಳೆಯ ಅಭಿಮಾನಿಗಳ ಜೊತೆಗೆ ಸಾಕಷ್ಟು ಹೊಸ ಅಭಿಮಾನಿ ನೋಡುಗರೂ ರೂಪುಗೊಂಡಿರುವಾಗಲೇ ಆಕೆಯನ್ನು ಹೊರಗಿಟ್ಟಿರುವುದು ರಸಭಂಗವಾಗಿದೆಯಂತೆ !
ಸಿನಿಮಾದಲ್ಲಿ ನಟಿಸಿ ಬಿಡುಗಡೆಯಾಗುವ ಮುನ್ನವೇ ತನಗೂ ಆ ಸಿನಿಮಾಕ್ಕೂ ಸಂಬಂಧವಿಲ್ಲದಂತೆ ಪ್ರಮೋಶನ್ನಿಗೂ ಕಾಲಿಡದೆ ಟೆನ್ಷನ್ ಕೊಡುವ ಅದೆಷ್ಟೋ ನಾಯಕಿಯರಿಗೆ ಅಪವಾದವೆಂಬಂತೆ ನಟಿ ಸಂಜನಾ ತನ್ನ ಮಹತ್ವಾಕಾಂಕ್ಷೆಯ “ಮಹಾನದಿ” ಚಿತ್ರಕ್ಕೆ ಇನ್ನಿಲ್ಲದಂತೆ ತಾನೇ ಮುಂದೆ ನಿಂತು ಪ್ರಚಾರ ಆರಂಭಿಸಿ ಕಲಾವಿದರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟು ಕನ್ನಡದ ಇನ್ನಿತರ ನಾಯಕಿಯರಿಗೆಲ್ಲಾ ಮಾದರಿಯಾಗಿದ್ದಾಳೆ. ಈ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಚರ್ಚೆಯಾಗಿದೆ ಕೂಡ. ಇಂತಹ ಪ್ಲಸ್ ಪಾಯಿಂಟ್ ಇರುವ ಸಾಕಷ್ಟು ಶ್ರಮವಹಿಸಿ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿರುವ ಕನ್ನಡದ ಕ್ಯೂಟ್ ನಟಿ ಕಿರುತೆರೆಯ ನೋಡುಗರಿಗೆ ಇಷ್ಟವಾಗುತ್ತಿರುವಾಗಲೇ ಚಾನೆಲ್ನವರಿಗೆ ಅದೇನು ಕಷ್ಟವಾಯಿತು ಗೊತ್ತಿಲ್ಲ. ಇದು ಖಂಡಿತಾ ಸಂಜನಾಳಿಗೆ ಲಾಸ್ ಅಲ್ಲ…ಬಿಗ್ ಬಾಸಿಗೆ ಲಾಸ್ ಎಂದು ಅಲ್ಲಲ್ಲಿ ಗೃಹಿಣಿಯರೂ ಮಾತನಾಡಿಕೊಳ್ಳುತ್ತಿದ್ದಾರೆ. ಕೌಟುಂಬಿಕ ನೋಡುಗರನ್ನು ಇನ್ನಿಲ್ಲದಂತೆ ಸೆಳೆಯುತ್ತಿರುವ ಸಂಜನಾಳನ್ನು “ವೈಲ್ಡ್ ಕಾರ್ಡ್ ಎಂಟ್ರಿ’ ಮೂಲಕ ಮತ್ತೆ ಬಿಗ್ ಬಾಸಿಗೆ ಮರು ಪ್ರವೇಶ ಮಾಡಿಸಬಹುದಾ ಎಂಬುದನ್ನು ಆ ಕಾರ್ಯಕ್ರಮಕ್ಕೆ ಸಂಬಂಧಪಟ್ಟವರೇ ನಿರ್ಧರಿಸಬೇಕು. ಅದೇನೆ ಇರಲಿ ಈ ನಿರ್ಧಾರದ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಭವಿಷ್ಯ ಅಡಗಿರುವುದಂತೂ ನಿಜ….ಏನಂತೀರಿ?
ಕನ್ನಡ ಟೈಮ್ಸ್-೧೫-೪-೨೦೧೩