ನಾಯಕ-ನಾಯಕಿ

ಇವಳೇ ಸಂಜನ…ಅಂತೂ ಇವಳನ್ನು ಒಪ್ಪಿದ್ದಾರೆ ನಮ್ ಜನ..! -ಒಂದು ವಿಶ್ಲೇಷಣೆ

Sanjjanaa.. Sandalwood heart throb – A review.. (4)-ಚಿನ್ಮಯ ಎಂ.ರಾವ್ ಹೊನಗೋಡು

ನವನಟಿಯೊಬ್ಬಳು ತನ್ನ ವೃತ್ತಿರಂಗದ ಮೊದಲ ಚಿತ್ರದಿಂದ ಮೇಲೇಳಲೂ ಬಹುದು, ಮೇಲೇಳಲಾಗದಂತೆ ಕೆಳಗೆ ಬೀಳಲೂ ಬಹುದು, ಇದ್ದಲ್ಲಿಯೇ ಇರಬಹುದು ಅಥವಾ ಚಿತ್ರರಂಗದಲ್ಲೇ ಇರದೆ ಜಾಗ ಖಾಲಿ ಮಾಡುವಂತೆಯೂ ಆಗಬಹುದು. ಅದು ಅವಳು ಆರಿಸಿಕೊಳ್ಳುವ ಆರಂಭದ ಚಿತ್ರದಿಂದ ನಿರ್ಧಾರವಾಗುತ್ತದೆ. ಜೊತೆಗೆ ಅದೃಷ್ಟವೂ ಅವಳ ನಡೆಯನ್ನು ನಿರ್ಧರಿಸುತ್ತದೆ. ಜನ ತನ್ನನ್ನು ಹೇಗೆ ನೋಡಲು ಬಯಸುತ್ತಾರೆ..ಅಥವಾ ಹೇಗೆ ನೋಡಬೇಕು ಎಂಬುದನ್ನು ನಿರ್ಧಸಿಕೊಂಡು ಮೊದಲ ಚಿತ್ರದ ಮೊದಲ ಪಾತ್ರದಲ್ಲಿ ಅಭಿನಯಿಸುವ ನಿರ್ಧಾರವನ್ನು ನಟ-ನಟಿಯರು ತೆಗೆದುಕೊಳ್ಳಬೇಕಾಗುತ್ತದೆ ! ಕೆಲವರು ಆರಂಭದಲ್ಲೇ ತಂತಿಯ ಮೇಲೆ ನಡೆಯುವಂತಹ ರಿಸ್ಕ್ ತೆಗೆದುಕೊಳ್ಳುತ್ತಾರೆ. ಸಂಜನಾಳ ವಿಷಯದಲ್ಲಿ ಆಗಿದ್ದೂ ಇದೇ.. ಎನ್ನಬಹುದು.

ಸಂಜನಾ ಎಂದಾಕ್ಷಣ ಅದೇ “ಗಂಡ-ಹೆಂಡತಿ” ಸಂಜನಾ..ಎನ್ನುವಷ್ಟರ ಮಟ್ಟಿಗೆ ಆಕೆಯ ಹೆಸರಿಗೊಂದು ವಿಶೇಷಣವನ್ನು ಬಾಯಿ ತಪ್ಪಿ ಆಡುವಷ್ಟರ ಮಟ್ಟಿಗೆ ನಾವು ತಪ್ಪಿದ್ದೇವಾ? ಈ ನಮ್ಮ ತಪ್ಪಿಗೆ ಅವಳು ಗಂಡ-ಹೆಂಡತಿ ಚಿತ್ರಕ್ಕಾಗಿ ಮಾಡಿದ ಅಂಥಹಾ ಪಾತ್ರ ತಪ್ಪಾ? ಅಂಥಹಾ ದೃಶ್ಯಗಳಲ್ಲಿ ನಟಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಒಪ್ಪಿದ ಅವಳ ಅಂದಿನ ನಿರ್ಧಾರ ತಪ್ಪಾ? ಹಾಗಾದರೆ ಯಾವುದು ತಪ್ಪು? ಯಾರದ್ದು ತಪ್ಪು?..ಇಲ್ಲಿ ಯಾರದ್ದೂ ತಪ್ಪಿಲ್ಲ. ಪಾತ್ರವನ್ನು ಆ ಒಂದು ಚಿತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಪಾತ್ರದಾಚೆಯೂ ಸಂಜನಾಳನ್ನು ಹಾಗೆಯೇ ನೋಡಬಯಸಿದರೆ ಅದು ನಮ್ಮ ತಪ್ಪು. ಹಿಂದಿಯಲ್ಲಿ ಅದನ್ನೇ ಮಲ್ಲಿಕ್ಕಾ ಶೆರಾವತ್ ನಟಿಸಿದಾಗ ಒಪ್ಪುವ ನಾವು ಕನ್ನಡದಲ್ಲಿ ಸಂಜನಾಳನ್ನು ತಪ್ಪು ಮಾಡಿದ್ದಾಳೆ ಎಂದು ಹಿಂದುಮುಂದಿಲ್ಲದೆ ಹಿಂದೆ ಸರಿಸಿದರೆ ಅದು ನ್ಯಾಯವಾ? ಅವಳನ್ನು ಅದೇ ದೃಷ್ಟಿಯಲ್ಲಿ ನೊಡಿದರೆ ಅದು ನ್ಯಾಯವಾ?
ಅದು ನ್ಯಾಯವಲ್ಲ ಎಂದು ಕ್ರಮೇಣ ಕನ್ನಡ ಚಿತ್ರಜಗತ್ತಿಗೆ ಅರ್ಥವಾಗುತ್ತಿದೆ..ಅರಿವಾಗುತ್ತಿದೆ. ಗಂಡ-ಹೆಂಡತಿಯ ನಂತರ ಸಂಜನಾಳಿಗೆ ಬಹಳ ಅಂತರ ನೀಡಿದ್ದ ಕೆಲವು ಪೂರ್ವಾಗ್ರಹಪೀಡಿತ ಮನಸ್ಸುಗಳು ಅವಳನ್ನು “ಒಂಥರ..” ಪಾತ್ರಗಳಿಗೆ ಮಾತ್ರ ಕರೆಯಬಹುದೆಂದು ಚೌಕಟ್ಟಿಲ್ಲದ ಚಿತ್ರವನ್ನು ಬಿಡಿಸಿ ಆಕೆಯನ್ನು ಚೌಕಟ್ಟಿನಿಂದ ಹೊರಹಾಕಿ ಬಿಟ್ಟಿದ್ದರು. ಪ್ರಾಯಶಹ ಸಂಜನಾ ಅಲ್ಲದೆ ಬೇರೆ ಇನ್ನಾರೋ ಅಂಥಹ ಪಾತ್ರದಲ್ಲಿ ನಟಿಸಿದ್ದರೆ..ಅದೇ ಆಕೆಯ ಕೊನೆಯ ಚಿತ್ರವಾಗಿರುತ್ತಿತ್ತೋ ಏನೋ?! ಆದರೆ ಸಂಜನಾಳ ಒಳಗೆ ನಿಜವಾದ ಅಭಿನೇತ್ರಿ ಇದ್ದ ಕಾರಣ ಆ ಚಿತ್ರವೇ ಆಕೆಗೆ ಕೊನೆಯಾಗಲಿಲ್ಲ. ಬದಲಿಗೆ ಆರಂಭವಾಯಿತು. ಅವಕಾಶಗಳಿಗೆ ಬರವಾಗಲಿಲ್ಲ..ಚಿತ್ರರಂಗ ಆಕೆಯನ್ನು ಬರಮಾಡಿಕೊಂಡಿತು…ಯಾವ ಚಿತ್ರರಂಗ? ಖಂಡಿತಾ ಕನ್ನಡ ಚಿತ್ರರಂಗವಲ್ಲ..ಹಿಂದಿ,ತೆಲುಗು ಚಿತ್ರರಂಗ !

Sanjjanaa.. Sandalwood heart throb – A review.. (12)ಹೌದು..ಗಂಡ-ಹೆಂಡತಿ ಚಿತ್ರದ ನಂತರ ಕನ್ನಡದಲ್ಲಿ ಅನುಮಾನದ ಸನ್ಮಾನ ಸ್ವೀಕರಿಸಿ ತಿರಸ್ಕಾರಕ್ಕೊಳಗಾಗಿದ್ದ ಇದೇ ಸಂಜನಾಳ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು…ಮಣೆ ಹಾಕಿದ್ದು ಮುಂಬೈ ಚಿತ್ರಲೋಕ. ಬಾಲಿವುಡ್ ನಾಯಕ ಜಾನ್ ಅಬ್ರಾಹಮ್ ಜೋಡಿಯಾಗಿ ಫಾಸ್ಟ್‌ಟ್ರ್ಯಾಕ್ ಜಾಹಿರಾತಿನಲ್ಲಿ ಮಿಂಚಿದ ಸಂಜನಾಳನ್ನು ನೋಡಿ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ತಮ್ಮ “ಬುಜ್ಜಿಗಾಡು” ಎಂಬ ಚಿತ್ರದಲ್ಲಿ ಆಕೆಗೆ ಲೀಡ್‌ರೋಲ್ ನೀಡಿದರು ! ಅತ್ಯದ್ಭುತವಾದ ಕ್ಲೈಮ್ಯಾಕ್ಸ್ ಇದ್ದ ಬುಜ್ಜಿಗಾಡು ತೆಲುಗು ಚಿತ್ರರಂಗದಲ್ಲೊಂದು ಹೊಸ ದಾಖಲೆ ಬರೆಯಿತು! ಪರಿಣಾಮವಾಗಿ ಸಂಜನಾ ಸಾಲುಸಾಲಾಗಿ ಆರು ತೆಲುಗು ಚಿತ್ರಗಳಲ್ಲಿ ಮಾರು ಹೋಗುವಂತೆ ನಟಿಸಿದಳು. ಸತ್ಯಮೇವ ಜಯತೆ,ಮುಗ್ಗುರು,ಸಮರ್ಥುಡು..ಹೀಗೆ ನಟಿಸಿದ ಚಿತ್ರಗಳೆಲ್ಲಾ ಯಶಸ್ವಿಯಾಗಿ ಆಂಧ್ರದಲ್ಲಿ ಆಕೆಗೆ ವಿಶೇಷ ಸ್ಥಾನಮಾನ..ಸನ್ಮಾನ ಎಲ್ಲಾ ಲಭಿಸಿತು! ಇತ್ತ ಮಲಯಾಳಮ್‌ನಲ್ಲಿ ಸ್ಟಾರ್ ನಾಯಕರಾದ ಮೋಹನ್‌ಲಾಲ್ ಹಾಗು ಮಮ್ಮುಟ್ಟಿ ಜೊತೆ ನಟಿಸಿ ಕೇರಳದಲ್ಲೂ ಸ್ಟಾರ್ ಪಟ್ಟ ಪಡೆದಳು ! ಪಟ್ಟ ಶ್ರಮಕ್ಕೆ ದಕ್ಷಿಣದ ಚಿತ್ರಲೋಕದಲ್ಲಿ ಪಟ್ಟದರಸಿಯಾದಳು! ಈ ನಡುವೆಯೇ ಕನ್ನಡ ಚಿತ್ರರಂಗದ ಮರೆತ ಮಂದಿಗಳು ಹೊರಗಡೆ ಗೆದ್ದ ಸಂಜನಾಳನ್ನು ವಂದಿಸಿ ತಮ್ಮ ಮುಂದಿನ ಚಿತ್ರಗಳಲ್ಲಿ ಆಕೆಯ ಡೇಟ್ಸ್‌ಗಳನ್ನು ಹೊಂದಿಸಲು ಹೆಣಗಾಡಿದರು! ಮೈಲಾರಿ, ರಂಗಪ್ಪ ಹೋಗಿಬಿಟ್ನಾ? ಹಾಗು ನರಸಿಂಹ ಚಿತ್ರಗಳು ಸಂಜನಾಳಿಗೆ ಹೊಸ ಆಯಾಮವನ್ನು ನೀಡಿತು. ಈಗ ನಿರ್ಮಾಣದ ಹಂತದಲ್ಲಿರುವ ಒಂದು ಕ್ಷಣದಲ್ಲಿ, ಸಾಗರ್, ರೆಬಲ್ ಹಾಗು ಮಹಾನದಿ ಇನ್ನೊಂದು ಮಟ್ಟಕ್ಕೆ ಸಂಜನಾಳನ್ನು ಮೆಲೇರಿಸಲು ತುದಿಗಾಲಲ್ಲಿ ನಿಂತಿವೆ ! ಹೀಗೆ ಊರೂರು ಸುತ್ತಿಕೊಂಡು ಕೀರ್ತಿಯನ್ನು ಹೊತ್ತುಕೊಂಡು ಮತ್ತೆ ತನ್ನೂರಿನ ಸೂರಿನಲ್ಲೇ ಮನಸೂರೆ ಮಾಡುತ್ತಿರುವ ಸಂಜನಾ ಮನಸಾರೆ ಮತಾಡಿದಾಗ ಅವಳೊಬ್ಬ ಪರಿಪೂರ್ಣ ಕಲಾವಿದೆಯಾಗಿ ಬೆಳೆಯಲು ಬಯಸುತ್ತಿದ್ದಾಳಾ? ಎಂದೆನಿಸಿತು !

ಸಂ..ಜನಮನ..
“ಚಿತ್ರರಂಗಕ್ಕೆ ಬಂದು ತೆರೆಯ ಹಿಂದೆ ವಿಷಾದ ಪಡುವಂಥಹ ಘಟನೆಗಳು ನಡೆಯುವ ಬದಲು ತೆರೆಯ ಮೇಲೇ ನನಗೆ ಅಂಥಹ ಸನ್ನಿವೇಶವೊದಗಿ ಬಂತು. ಜೀವನದಲ್ಲಿ ಎಲ್ಲರಿಗೂ ಒಮ್ಮೆಯಾದರೂ ವಿಷಾದ ಪಡುವಂಥಹ ಘಟನೆ ನಡೆದು ಬಿಡುತ್ತದೆ. ಅದು ನನಗೆ ನನ್ನ ಮೊದಲ ಚಿತ್ರದಲ್ಲೇ ನಡೆದಿದೆ ಅಷ್ಟೆ. ಅದಕ್ಕೆ ನಾನು ಖಂಡಿತಾ ವ್ಯಥೆ ಪಟ್ಟು ದುಃಖಿಸುವುದಿಲ್ಲ. ಅಷ್ಟಕ್ಕೂ ಗಂಡ-ಹೆಂಡತಿಯ ನಂತರವೇ ಪುರಿ ಜಗನ್ನಾಥ್ ಅವರಂಥಹ ಮಹಾನ್ ನಿರ್ದೇಶಕರು ನನ್ನೊಳಗಿನ ಅಭಿನಯ ಪ್ರತಿಭೆಯನ್ನು ಗುರುತಿಸಿ ಅವರ ಬುಜ್ಜಿಗಾಡು ಚಿತ್ರಕ್ಕೆ ಆಯ್ದುಕೊಳ್ಳಲಿಲ್ಲವೇ? ಅದು ಯಶಸ್ವಿಯಾಗಿ ತೆಲುಗಿನಲ್ಲಿ ನನಗೆ ಜನಮನ್ನಣೆ ಸಿಗಲಿಲ್ಲವೇ? ಇದಕ್ಕಿಂತ ಇನ್ನೇನು ಬೇಕು?

Sanjjanaa.. Sandalwood heart throb – A review.. (2)ಆದರೆ ನಾನೊಬ್ಬ ಕನ್ನಡತಿಯಾಗಿ ಕನ್ನಡದಲ್ಲಿ ಅತ್ಯುತ್ತಮ ಪಾತ್ರಗಳಲ್ಲಿ ನಟಿಸಿ ಗಂಡ-ಹೆಂಡತಿಯಿಂದ ಹೊರತಾದ ಮತ್ತೊಂದು ಸಂಜನಾ ಆಗಬೇಕು…ಆ ಮುಗ್ಧ ಹುಡುಗಿ ಸಂಜನಾ ನಾನಲ್ಲವೇ ಅಲ್ಲ ಎಂದು ಅದನ್ನೆಲ್ಲಾ ನಾನೀಗ ಮರೆತು ಬಿಟ್ಟಿದ್ದೇನೆ. ಈಗ ನಿಮ್ಮೆದುರಿಗೆ ಬರುತ್ತಿರುವ ಸಂಜನಾ ಹೊಸ ರೂಪ ತಾಳಿದ್ದಾಳೆ ಎಂದು ನಿಮಗನ್ನಿಸುವುದಿಲ್ಲವೇ? ಮೈಲಾರಿ ಚಿತ್ರ ಅದಕ್ಕೊಂದು ಒಳ್ಳೆಯ ಉದಾಹರಣೆಯಲ್ಲವೇ? ಈಗ ರಾಜೇಂದ್ರ ಸಿಂಗ್ ಬಾಬು ಅವರು ಮಾಡುತ್ತಿರುವ ರೇಬಲ್ ಚಿತ್ರದಲ್ಲಿ ಹೆಲ್ಪಿಂಗ್ ನೇಚರ್ ಕ್ಯಾರೆಕ್ಟರ್‌ನಲ್ಲಿ ಇಡೀ ಚಿತ್ರದ ತುಂಬಾ ನಾನಿದ್ದೇನೆ. ಆ ಚಿತ್ರ ಅತ್ಯುತ್ತಮ ಸಂದೇಶವನ್ನೂ ನೀಡುತ್ತಿದೆ. ಅಂತಹ ಅಭಿನಯ ತೋರ್ಪಡಿಸುವ ಪಾತ್ರಗಳು ನನಗೆ ಬೇಕು. ಅದು ಕಲಾತ್ಮಕ ಚಿತ್ರವಾದರೂ ನಾನು ತಯಾರು. ನಿರ್ದೇಶಕರು ನನಗೆ ಆಶಿರ್ವದಿಸಿ ನನ್ನ ಪ್ರತಿಭೆಯನ್ನು ಗೌರವಿಸಬೇಕು. ಅವಾರ್ಡ್ ಬರುವಂಥಹ ಪಾತ್ರಗಳಲ್ಲಿ ನಾನು ನಟಿಸಬೇಕು. ನಾನು ತುಂಬಾ ಎತ್ತರ ಹಾಗು ಬಿಳುಪಾಗಿ ಗ್ಲಾಮರಸ್ ಆಗಿ ಇರುವುದರಿಂದ ಬರೀ ಎನ್.ಆರ್.ಐ ಹುಡುಗಿಯ ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಕೆಲವು ದೊಡ್ಡ ಬ್ಯಾನರ್‌ನ ಒಳ್ಳೆಯ ಚಿತ್ರಗಳಾದ ಕಾರಣ ಅಂಥವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಥಿಯೇಟರ್‌ನಿಂದ ಹೊರ ಬಂದ ನಂತರವೂ ನನ್ನ ಪಾತ್ರ ಜನಮನದಲ್ಲಿ ಉಳಿಯುವಂಥಹ ಪಾತ್ರವಾಗಬೇಕು. ಅದೇ ನನ್ನ ಉದ್ದೇಶ ಎಂದು ಒಂದೇ ಸಮನೆ ತನ್ನ ಮನದಾಳದ ಮಾತುಗಳನ್ನು ಸಂಜನಾ ಹೊರಹಾಕುತ್ತಾ ಹೋದಂತೆ ಅವಳಿಗಿಂತ ಸೌಂದರ್ಯ ಅವಳ ಆಂತರ್ಯ ಎಂದೆನಿಸುತ್ತದೆ.

SANJANA-10ಚಿತ್ರರಂಗಕ್ಕೆ ಯಾವ ಉದ್ದೇಶವನ್ನಿಟ್ಟುಕೊಂಡು ತಾನು ಬಂದಿದ್ದೇನೆ ಎಂದು ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ ಗೊಂದಲವಿಲ್ಲದೆ ಸವಿನಯವಾಗಿ ಸಂಜನಾ ಸ್ಪಷ್ಟಪಡಿಸುವಾಗ ಅವಳ ಒಳಗಿರುವ ನಿಜವಾದ ಕಲಾವಿದೆಯ ದರ್ಶನ.. ಅನಾವರಣ ಇನ್ನೂ ಆಗೇ ಇಲ್ಲ ಎಂದರೆ ಅದೇನು ಅತಿಶಯೋಕ್ತಿಯಾಗಲಾರದು.ಒಟ್ಟಿನಲ್ಲಿ ಜನಮನ ಮೆಚ್ಚುವಂಥಹ ಪಾತ್ರಗಳಲ್ಲಿ ತಾನು ನಟಿಸಬೇಕೆಂಬ ಸಂಜನಾಳ ಮನದಾಶಯ ಆದಷ್ಟು ಬೇಗ ಈಡೇರುವಂತಾಗಲಿ.
ಸಮ್ ಜನರಿಗೆ ಮಾತ್ರ ಪಿಯವಾಗಿದ್ದ ಸಂಜನ ಸಮಸ್ತ ಜನಮಾನಸದಲ್ಲಿ ನೆಲೆಯೂರುವಂತಾಗಲಿ.

-ಚಿನ್ಮಯ ಎಂ.ರಾವ್ ಹೊನಗೋಡು

21-5-2012

Related Articles

Back to top button

Adblock Detected

Please consider supporting us by disabling your ad blocker