ವಿಚಾರಲಹರಿ

ಸತ್ಯವಾದ ಲೆಕ್ಕಕ್ಕೆ ರಾಮನ ರೀತಿ ಎಂತಲೂ, ಸುಳ್ಳು ಅಥವಾ ಮೋಸದ ಲೆಕ್ಕಕ್ಕೆ ಕೃಷ್ಣನ ರೀತಿ ಎಂಬರ್ಥದಲ್ಲಿಯೂ ಬಳಸುತ್ತಾರೆ, ಇದು ಸರಿಯೇ?

ರಾಮ ಕೃಷ್ಣರ ನಡುವೆ ಇರುವ ಸಾಮ್ಯತೆಗಳು ಮತ್ತು ಭಿನ್ನತೆ

ಯಾವುದೇ ವ್ಯವಹಾರದಲ್ಲಿ ಸತ್ಯವಾದ ಲೆಕ್ಕಕ್ಕೆ ರಾಮನ ರೀತಿ ಎಂತಲೂ, ನೇರವಲ್ಲದ, ಸುಳ್ಳು ಅಥವಾ ಮೋಸದ ಲೆಕ್ಕಕ್ಕೆ ಕೃಷ್ಣನ ರೀತಿ ಎಂಬರ್ಥದಲ್ಲಿಯೂ ಬಳಸುತ್ತಾರೆ.  ಇದು ಸರಿಯೇ?  ಇದಕ್ಕಾಗಿ ರಾಮ ಕೃಷ್ಣರ ನಡುವೆ ಇರುವ ಸಾಮ್ಯತೆಗಳು ಮತ್ತು ಭಿನ್ನತೆಗಳನ್ನು ಗಮನಿಸೋಣ.

ತ್ರೇತಾಯುಗದಲ್ಲಿ ಭಗವಾನ್ ಮಹಾವಿಷ್ಣುವಿನ ಏಳನೇ ಅವತಾರವೇ ರಾಮಾವತಾರ.  ತ್ರೇತಾಯುಗದಲ್ಲಿ ಧರ್ಮ ಮೂರು ಕಾಲುಗಳ ಮೇಲೆ ನಿಂತಿರುತ್ತದೆ. ಅದರ ಹಿಂದಿನ ಕೃತಯುಗದಂತೆ ಪೂರ್ಣವಾಗಿ ನಾಲ್ಕು ಕಾಲುಗಳನ್ನು ಹೊಂದಿರುವುದಿಲ್ಲ.  ರಾಮ ಸತ್ಯ, ಧರ್ಮಗಳ ಪ್ರತೀಕ. ನೇರವಾದ ನಡೆ ನುಡಿ.  ತ್ರೇತಾಯುಗದ ನಂತರದ ಯುಗವಾದ ದ್ವಾಪರಯುಗದಲ್ಲಿ ಭಗವಾನ್ ಮಹಾವಿಷ್ಣುವಿನ ಎಂಟನೇ ಅವತಾರವೇ ಕೃಷ್ಣಾವತಾರ. ದ್ವಾಪರಯುಗದಲ್ಲಿ ಇನ್ನೂ ಒಂದು ಕಾಲು ಹ್ರಾಸವಾಗಿ ಧರ್ಮವು ಇನ್ನೂ ದುರ್ಬಲವಾಗಿರುತ್ತದೆ.  ಕೃಷ್ಣನ ಅವತಾರವೂ ರಾಮಾವತಾರದಂತೆ ಧರ್ಮ ಸಂಸ್ಥಾಪನೆಗಾಗಿಯೇ.  ಆದರೆ ಇದಕ್ಕಾಗಿ ಕೃಷ್ಣ ನೇರವಾದ ಮಾರ್ಗಗಳ ಜೊತೆಗೆ ತಂತ್ರಗಾರಿಕೆಯನ್ನೂ ಬಳಸುತ್ತಾನೆ.  ಇದು ಮೇಲ್ನೋಟಕ್ಕೆ ನೋಡುಗರಿಗೆ ಕಪಟವೆಂಬಂತೆ ಕಾಣುತ್ತದೆ.  ಆದರೆ ವಿಶ್ಲೇಷಿಸಿ ನೋಡಿದರೆ ಅದುವೇ ಧರ್ಮವೆಂದು ತಿಳಿದುಬರುತ್ತದೆ.

ಕಾಲದೊಂದಿಗೆ ರಾಮನ ಜೀವನ ಸಂದರ್ಭಗಳು ಮತ್ತು ಕೃಷ್ಣನ ಜೀವನ ಸಂದರ್ಭಗಳಲ್ಲಿ ವ್ಯತ್ಯಾಸವಿದೆ.  ರಾಮನ ವ್ಯಕ್ತಿತ್ವವನ್ನು ಕೃಷ್ಣನ ವ್ಯಕ್ತಿತ್ವದೊಂದಿಗೆ ತೂಗಿ ನೋಡಲು ಸಾಧ್ಯವಿಲ್ಲ. ಇಬ್ಬರೂ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಮಾಡಿ ಧರ್ಮ ಸಂಸ್ಥಾಪನೆ ಮಾಡಿದರು ಎಂಬುದೇ ಸಾಮಾನ್ಯ ವಿಚಾರ.  ಒಂದು ದೃಷ್ಟಿಯಲ್ಲಿ ನೋಡಿದರೆ ಕೃಷ್ಣನಿಗೆ ಹುಟ್ಟಿದಾರಭ್ಯ ಅನೇಕ ಸಮಸ್ಯೆಗಳು ಎದುರಾದವು.  ರಾಮನಿಗಿಂತ ಕೊಂಚ ಹೆಚ್ಚೇ ಎನ್ನಬಹುದೇನೋ. ರಾಮನ ಪಿತೃವಾಕ್ಯ ಪರಿಪಾಲನೆ, ಗುರು ಹಿರಿಯರಲ್ಲಿ ಆದರ, ಭ್ರಾತೃಪ್ರೇಮ, ಆಶ್ರಿತವಾತ್ಸಲ್ಯ ಜಗಜ್ಜನಿತವು.  ಕೃಷ್ಣನ ಗೋಕುಲದಲ್ಲಿನ ಬಾಲ ಲೀಲೆಗಳು, ವಿವಿಧ ಸಂಕೀರ್ಣ ರಾಜಕೀಯ ಪರಿಸ್ಥಿತಿಗಳನ್ನು ನೈಪುಣ್ಯದಿಂದ ನಿಭಾಯಿಸುವಿಕೆ ಪ್ರಖ್ಯಾತವಾದವುಗಳು.

ಇವುಗಳನ್ನೆಲ್ಲ ಗಮನಿಸಿದರೂ ರಾಮನ ರೀತಿ-ನೀತಿ ಕೃಷ್ಣನ ರೀತಿ-ನೀತಿ ಎಂಬಲ್ಲಿ ಒಂದು ಬಗೆಯ ವ್ಯತ್ಯಾಸವುಂಟು ಎಂದು ಹೇಳಬಹುದು.  ಆದರೆ ಕೃಷ್ಣನು ಸತ್ಯವಂತನಲ್ಲವೆಂಬುದು ಖಂಡಿತ ಸಲ್ಲ.  ಕೃಷ್ಣನು ಸಂದರ್ಭಾನುಸಾರ ಯಾವುದು ಧರ್ಮ ಎಂಬುದನ್ನು ವಿಶ್ಲೇಷಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾನೆ.

  • ಕೈಶ್ರೀ

12-9-2017

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.