ಕಲಾಪ್ರಪಂಚಜಾನಪದ

ಬಣ್ಣ ಬಣ್ಣದ ವೇಷ -ಭೂಷಣ ಧರಿಸಿ ಆಕರ್ಷಕ ಈ ಸುಗ್ಗಿ ಕುಣಿತ

-ಲೇಖನ ಮತ್ತು ಫೋಟೋ-ಎನ್.ಡಿ. ಹೆಗಡೆ

ಬಣ್ಣ ಬಣ್ಣದ ವೇಷ ಸಹಿತ ನೃತ್ಯ ಪ್ರದರ್ಶನ ಹೋಳಿ ಹಬ್ಬ:

ದೇವಾಲಯ ದರ್ಶನ ಮಾಡುತ್ತಾ ಉತ್ತರಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಪ್ರಾಕೃತಿಕ ಸಿರಿ ಸೊಬಗನ್ನು ವೀಕ್ಷಿಸುವ ಉದ್ದೇಶದಿಂದ ೩-೪ ದಿನಗಳ ಹಿಂದೆ ನಾನು ಹೊನ್ನಾವರ ಮತ್ತು ಕುಮಟಾ ತಾಲೂಕಿನ ಕೆಲ ಗ್ರಾಮೀಣ ಪ್ರದೇಶದಲ್ಲಿ ಅಡ್ಡಾಡುತ್ತಿದ್ದೆ. ಆಕರ್ಷಕ ವೇಷ ತೊಟ್ಟು,ಬಣ್ಣ ಬಣ್ಣದ ರಂಗು ರಂಗಿನ ಉಡುಪುಗಳನ್ನು ಧರಿಸಿ ಮನೆ ಮನೆಗೆ ಸಾಗಿ ಜಾನಪದ ನೃತ್ಯ ಪ್ರದರ್ಶಿಸುವ ಸುಗ್ಗಿಮೇಳ ಈ ಸಂದರ್ಭದಲ್ಲಿ ನನ್ನು ಬಲುವಾಗಿ ಆಕರ್ಷಿಸಿತು.

ಕುತೂಹಲಗೊಂಡು ಈ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಈ ಸುಗ್ಗಿ ಕುಣಿತದ ತಂಡದ ಸದಸ್ಯರು ತಲೆಯ ಮೇಲೆ ಥರ್ಮಾಕೋಲ್ ಬೆಂಡ್ ಮತ್ತು ಸೊನರಿ ಪೇಪರ್ ನಿಂದ ತಯಾರಿಸಿದ ಆಕರ್ಷಕ ತುರಾಯಿ,ಕೈಗೆ ಬಣ್ಣದ ಕೋಲು, ಕಾಲಿಗೆ ಇಜಾರ,ಬೆನ್ನಿಗೆ ಇಳಿಬಿಟ್ಟ ಶಾಲು, ಮೈಗೆ ಒಂದೇ ಬಣ್ಣದ ಉದ್ದತೋಳಿನ ಆಕರ್ಷಕ ಅಂಗಿ ಬಳಸುತ್ತಾರೆ.ಈ ಗುಂಪಿನಲ್ಲಿ ಕೋವಿ ಹಿಡಿದು ಮುಖವಾಡ ಧರಿಸಿದ ಓರ್ವ ಪಾತ್ರಧಾರಿ ಇರುತ್ತಾನೆ ಅವನನ್ನು ಮೊಕೋಡಿ ಎನ್ನುತ್ತಾರೆ. ಇವನು ಹಾಸ್ಯಗಾರನಂತೆ ನಕ್ಕು ನಗಿಸುತ್ತಾ ಕುಣಿಯುತ್ತಾನೆ. ಪ್ರತಿ ತಂಡದಲ್ಲಿ ಸ್ತ್ರೀವೇಷ ಸಹ ಇರುತ್ತದೆ. ತಾಳ,ಜಾಗಟೆ,ಡುಮಕಿ(ಗುಮಟೆಪಾಂಗಾ) ಬಾರಿಸುತ್ತಾ ಹಿನ್ನೆಯಲ್ಲಿ ಹಾಡು ಹೇಳುವ ಹಿಮ್ಮೇಳದವರು ಸಹ ಇರುತ್ತಾರೆ. ಸುಗ್ಗಿ ಕುಣಿತದವರ ಸಂಖ್ಯೆಯನ್ನು ಆಧರಿಸಿ ಈ ಹಿಮ್ಮೆಳದವರ ಸಂಖ್ಯೆ ಸಹ ಇರುತ್ತದೆ. ಸುಗ್ಗಿಕುಣಿಯುವವರು ಮತ್ತು ಹಿಮ್ಮೇಳದ ತಂಡದವರು ತಮ್ಮ ಮನೆತನದ ಸಂಪ್ರದಾಯವನ್ನು ಮುಂದುವೆರೆಸಲು ಇದನ್ನು ಮುನ್ನಡೆಸುತ್ತಾರೆ.ಮುಮ್ಮೇಳ ಮತ್ತು ಹಿಮ್ಮೇಳದವರು ವಂಶ ಪರಂಪರೆಯಿಂದ ಈ ಕಲೆಯನ್ನು ಕಲಿತಿರುತ್ತಾರೆ.

SUGGI KUNITA (4)ಕರಾವಳಿ ಪ್ರದೇಶದ ಹೊನ್ನಾವರ, ಭಟ್ಕಳ,ಕುಮಟಾ, ಅಂಕೋಲಾ,ಕಾರವಾರ ,ಬೈಂದೂರು ,ಕುಂದಾಪುರ ತಾಲೂಕುಗಳ ಗ್ರಾಮೀಣ ಜನರು ಬಣ್ಣ ಬಣ್ಣದ ವೇಷಧರಿಸಿ ಮನೆ ಮನೆಗೆ ತೆರಳಿ ಸುಗ್ಗಿ ಜಾನಪದ ನೃತ್ಯ ಪ್ರದರ್ಶಿಸಿ ತಮ್ಮ ಸಂಪ್ರದಾಯ ಮತ್ತು ಶ್ರೀಮಂತ ಸಂಸ್ಕೃತಿಗಳನ್ನು ಪ್ರತಿಬಿಂಬಿಸಿ ಜನರಲ್ಲಿ ಹರ್ಷೋತ್ಸಾಹಗಳನ್ನು ಹರಡುತ್ತಾರೆ.

ಹಾಲಕ್ಕಿ ಜನಾಂಗ, ಗಾಮವೊಕ್ಕಲು ಗೌಡ ಜನಾಂಗ, ದೀವರು,ನಾಡವ ನಾಯಕ ಜನಾಂಗದವರು,ಮೊಕ್ರಿ,ಗಾವುಡ,ಮಡಿವಾಳ ,ಕುಣಬಿ, ಕುಡಬಿ, ಗಾವುಂಡ, ಗೊಂಡ ಮೊದಲಾದ ಜನಾಂಗಗಳ ಜನರು ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣ ಬಣ್ಣದ ವೇಷ -ಭೂಷಣ ಧರಿಸಿ ಸುಗ್ಗಿ ಕುಣಿತ ನಡೆಸುತ್ತಾರೆ.

ಆಯಾ ಕೇರಿ ಅಥವಾ ಊರಿನಲ್ಲಿ ಆ ಜನಾಂಗದ ಕುಟುಂಬಗಳ ಗ್ರಾಮದ ಮುಖಂಡನ ಮನೆಯಲ್ಲಿ ಎಲ್ಲ ಜನರೂ ಸೇರಿ ಬುದ್ದಿವಂತನ ಮನೆಯಲ್ಲಿ ಗಂಡಸರೆಲ್ಲ ಸಭೆ ಸೇರಿ ಸುಗ್ಗಿ ಮೇಳ ಕಟ್ಟುವ ಬಗ್ಗೆ ಚರ್ಚಿಸಿ ನಿರ್ಧರಿಸುತ್ತಾರೆ. ಗ್ರಾಮದಲ್ಲಿ ಆ ಸಂದರ್ಭದಲ್ಲಿ ಯಾರಾದರು ಮರಣಿಸಿ ಸೂತಕ ಬಂದಿದ್ದರೆ ಅಥವಾ ಸಿಡುಬಿನಂತಹ ಸಾಂಕ್ರಾಮಿಕ ರೋಗ ಬಂದಿದ್ದರೆ ಸುಗ್ಗಿ ಕಟ್ಟುವುದು ನಿಷಿದ್ಧ. ಫಾಲ್ಗುಣ ಶುಕ್ಲಪಕ್ಷ ಪಂಚಮಿ ಅಥವಾ ಸಪ್ತಮಿಯಿಂದ ಈ ಹಬ್ಬದಾಚರಣೆಯ ವಿಧಿ ವಿಧಾನಗಳು ಆರಂಭವಾಗುತ್ತದೆ.

SUGGI KUNITA (3)ಗ್ರಾಮದ ಮುಖಂಡನ ಮನೆಯಯಂಗಳದಲ್ಲಿ ಮುಖ್ಯವಾದ ತುಳಸಿಕಟ್ಟೆ ಇರುತ್ತದೆ. ಅಲ್ಲಿ ಸಾಮೂಹಿಕ ಪೂಜೆ ನಡೆಸಿ ಸುಗ್ಗಿ ಕುಣಿತಕ್ಕೆ ಬಳಸುವ ಗೆಜ್ಜೆ, ಅಲಂಕಾರಿಕ ವಸ್ತ್ರ,ಗೊಂಡೆ,ಕಿರೀಟ,ಪಗಡೆ,ತುರಾಯಿ , ಮುಖವಾಡ, ಕೋವಿ, ತಮಟೆ, ಜಾಗಟೆ,ತಾಳ,ಗುಮಟೆಪಾಂಗ ಎಂಬ ಚರ್ಮವಾದ್ಯ ಎಲ್ಲವನ್ನೂ ಪೂಜಿಸುತ್ತಾರೆ. ನಂತರ ಸಪ್ತಮಿಯ ದಿವಸ ಸುಗ್ಗಿ ಕುಣಿತ ಪ್ರದರ್ಶನಕ್ಕೆ ಸಂಚಾರ ಹೊರಡುತ್ತಾರೆ. ಪ್ರತಿ ವರ್ಷ ಹಿರೇ ಸುಗ್ಗಿ ಇರುವುದಿಲ್ಲ. ಹೀರೆಸುಗ್ಗಿ ಎಂದರೆ ಸಕಲ ರೀತಿಯ ವೇಷ ಸಹಿತ ಕುಣಿತವಿರುತ್ತದೆ. ಕಿರಿ ಸುಗ್ಗಿ ಎಂದರೆ ವೇಷ ವಿಲ್ಲದೆ ಕೇವಲ ಸುಗ್ಗಿ ಹಾಡು ಹಾಡುತ್ತಾ ಮನೆ ಮನೆಗೆ ತೆರಳುತ್ತಾರೆ.ಇದಕ್ಕೆ ಬೋಳುಸುಗ್ಗಿ ಎಂದು ಸಹ ಕರೆಯಲಾಗುತ್ತದೆ. ಪ್ರತಿ ೨ ವರ್ಷ, ೩ ವರ್ಷ ಅಥವಾ ೫ ವರ್ಷಕ್ಕೊಮ್ಮೆ ಹಿರೇ ಸುಗ್ಗಿ ಕಟ್ಟುತ್ತಾರೆ. ಹಿರೇ ಸುಗ್ಗಿ ಕಟ್ಟಿ ಕುಣಿಯುವ ಉದ್ದೇಶವಿದ್ದರೆ ಸುಮಾರು ೨೫-೩೦ ದಿನಗಳ ಮೊದಲೇ ಪ್ರತಿ ದಿನ ಸಂಜೆ ತಾಲೀಮು ನಡೆಯುತ್ತದೆ. ಈ ಕುಣಿತದಲ್ಲಿ ಅನುಭವವುಳ್ಳ ಹಿರಿಯರು ತಾಳ,ಕುಣಿತ,ಹಾಡು,ಹೆಜ್ಜೆಗಳ ಬಗ್ಗೆ ತರಬೇತಿ ನೀಡುತ್ತಾರೆ. ಈ ಹೀರೆ ಸುಗ್ಗಿ ಮತ್ತು ಕಿರಿ ಸುಗ್ಗಿಕುಣಿತಗಳಲ್ಲಿ ಬಳಸುವ ಮೃದಂಗದಂತಹ ವಾದ್ಯಕ್ಕೆ ಗುಮಟೆಪಾಂಗಾ ಎನ್ನಲಾಗುತ್ತದೆ. ಬೋಳು ಸುಗ್ಗಿಯ ಸಂದರ್ಭದಲ್ಲಿ ತನ್ನನೆ ,,,, ತಾನೋ,,, ತಾನಾನೋ, ಡುಮಸಾಲ್ಯೋ ಕಾಯ್‌ಬೊಂಡವೋ,,,, ಎಂದು ಹಾಡಿ ನಿಂತಲ್ಲೆ ಕುಣಿಯಲಾಗುತ್ತದೆ. ಈ ಬೋಳು ಸುಗ್ಗಿಕುಣಿತಕ್ಕೆ ಕಾಣಿಕೆಯಾಗಿ ಕುಟುಂಬದ ಮುಖ್ಯಸ್ಥರು ತೆಂಗಿನಕಾಯಿಯನ್ನು ನೀಡುತ್ತಾರೆ.

ಯಕ್ಷಗಾನದ ವೇಷದಂತಹ ಆಕರ್ಷಕ ವೇಷ ತೊಟ್ಟ ಕೆಲ ಗ್ರಾಮದ ಹಾಲಕ್ಕಿಗಳು ಮಾರುದ್ದದ ನವಿಲಗರಿಗಳಿಂದ ಮಾಡಿದ ಸೋಗೆ ಹಿಡಿದು ಶೋ..ಹೋಯ್ಶೋ॒ಬೋಹೋಯ್…,, ಶೋಬೋಹೋಯ್ ಎಂದು ಹಿಂದಕ್ಕೂ ಮುಂದಕ್ಕೂ ಹೆಜ್ಜೆ ಇಟ್ಟು ಬಾಗಿ ನರ್ತಿಸುತ್ತಾರೆ. ಈ ನರ್ತನದ ಹಾಡು ಮತ್ತು ಗುಮಟೆ ಪಾಂಗಾದ ಸದ್ದು ಬಹು ದೂರದವರೆಗೆ ಕೇಳಿಸುತ್ತದೆ.

ಕೋಲಾಟದ ಹಾಡುಗಳು, ಭಜನೆ,ಕೀರ್ತನೆಯ ಸಾಲುಗಳನ್ನು ಬಹುತೇಖವಾಗಿ ಈ ಸುಗ್ಗಿ ಕುಣತಕ್ಕೆ ಬಳಸುತ್ತಾರೆ.ಈ ಬಗೆಯ ಸುಗ್ಗಿ ಕುಣಿತ ಪ್ರದರ್ಶಿಸುವುದರಿಂದ ತಮ್ಮ ಕುಟುಂಬಕ್ಕೆ ಒಳಿತಾಗುತ್ತದೆ ಎಂಬುದು ಈ ಜನಾಂಗಗಳ ಅಚಲ ನಂಬಿಕೆ. ಈ ಸುಗ್ಗಿ ಕುಣಿತ ಪ್ರದರ್ಶನವನ್ನು ಮನೆಯಂಗಳದಲ್ಲಿ ಆಡಿಸಿದರೆ ದುಷ್ಟ ಶಕ್ತಿ ಕ್ಷಯಿಸುತ್ತದೆ. ತೋಟ ಗದ್ದೆಗಳಲ್ಲಿ ಮುಂದಿನ ವರ್ಷ ಫಸಲು ಹೆಚ್ಚಾಗುತ್ತದೆ ಎಂಬುದು ಆಟ ಆಡಿಸುವ ಇತರ ಮೇಲ್ವರ್ಗದ ಜನಾಂಗಗಳ ನಂಬಿಕೆಯಾಗಿದೆ.

ಸುಗ್ಗಿ ಕುಣಿತ ಪ್ರದರ್ಶಿಸುತ್ತಾ ಮನೆ ಮನೆಗೆ ಸಾಗಿ ಆಕರ್ಷಕ ಜಾನಪದ ನೃತ್ಯ ಪ್ರದರ್ಶನ ನಡೆಸುತ್ತಾರೆ. ಕುಣಿತ ವೀಕ್ಷಿಸಿ ಸಂತಸ ಪಟ್ಟ ಕುಟುಂಬದ ಯಜಮಾನ ತೆಂಗಿನ ಕಾಯಿ ಹಾಗೂ ಹಣವನ್ನು ಕಾಣಿಕೆಯಾಗಿ ನೀಡುತ್ತಾನೆ. ಹೀಗೆ ಸಂಗ್ರವಾದ ತೆಂಗಿನ ಕಾಯಿ ಮತ್ತು ಹಣವನ್ನು ಊರ ಮುಖಂಡನ ಮನೆಯಂಗಳದಲ್ಲಿರುವ ತುಳಸಿ ಕಟ್ಟೆಯ ಮೇಲಿಡುತ್ತಾರೆ. ಹೋಳಿ ಹಬ್ಬದ ದಿನ ರಾತ್ರಿ ಕಾಮನ ಬೊಂಬೆಯನ್ನು ಭಸ್ಮಮಾಡಿ ಸಂಭ್ರಮಿಸುತ್ತಾರೆ. ಇದಕ್ಕೆ ಕರಿದೇವರ ಹಬ್ಬ ಎಂದು ಕರೆಯುವುದು ವಾಡಿಕೆ, ಮರುದಿನ ಓಕುಳಿ ನಡೆಸಿ ಸ್ನಾನ ಮಾಡುತ್ತಾರೆ,ಇದಕ್ಕೆ ಕರಿಮೀಯುವುದು ಎನ್ನಲಾಗುತ್ತದೆ.ದೇವರಿಗೆ ಮಹಾಪೂಜೆ ಸಲ್ಲಿಸಿ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಸಿ ಆ ವರ್ಷದ ಸುಗ್ಗಿ ಮೇಳವನ್ನು ಅಂತ್ಯಗೊಳಿಸುತ್ತಾರೆ. ಸಂಗ್ರಹವಾದ ಹಣದ ನಿರ್ಧಿಷ್ಠ ಭಾಗದಿಂದ ಒಣ ಮೆಣಸು, ಹುಣಸೆ ಹುಳಿ,ಬೆಲ್ಲ ಇತ್ಯಾದಿ ವಸ್ತು ಖರೀದಿಸಿ ಸುಗ್ಗಿ ತಂಡದಲ್ಲಿ ಪಾಲ್ಗೊಂಡ ಕುಟುಂಬಗಳಿಗೆ ಸಮನಾಗಿ ಹಂಚಿಕೊಳ್ಳುತ್ತಾರೆ.ತೆಂಗಿನ ಕಾಯಿಯನ್ನೂ ಸಹ ಹೀಗೆ ಹಂಚಿಕೊಳ್ಳುತ್ತಾರೆ.ನಗದು ಹಣ ಹಂಚಿಕೊಳ್ಳುವುದು ನಿಷಿದ್ದ. ಸಂಗ್ರಹವಾದ ಹಣದ ನಿರ್ಧಿಷ್ಟ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಟ್ಟುಕೊಳ್ಳುತ್ತಾರೆ. ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸ, ಬಡ ಕುಟುಂಬದವರ ರೋಗಕ್ಕೆ ಚಿಕಿತ್ಸೆ ವೆಚ್ಚ ಭರಿಸುವುದು ಇತ್ಯಾದಿ ಬಳಸಲಾಗುತ್ತದೆ.

ಹೊನ್ನಾವರ ತಾಲೂಕಿನ ವಂದೂರು, ಬಾಳೆಗದ್ದೆ, ನವಿಲಗೋಣು, ದೊಡ್ಡಹಿತ್ಲು,ಕೊಂಡಾಕುಳಿ,ಧಾರೇಶ್ವರ,ಹಳದಿಪುರ,ಕರ್ಕಿ,ದಿಬ್ಬಣಗಲ್, ಮುಗ್ವಾ ಮುಂತಾದ ಗ್ರಾಮಗಳ ಕೆಲ ಜನಾಂಗದವರು ಯಕ್ಷಗಾನದ ರೀತಿಯಲ್ಲಿ ಕಿರೀಟ,ಪಗಡೆ ಮತ್ತು ಭುಜಕೀರ್ತೀ, ಮುಂದೆಲೆಗಳನ್ನು ಧರಿಸಿ ದೇವರ ಭಜನೆ ಹಾಡುತ್ತಾ ನರ್ತಿಸುತ್ತಾ ಸುಗ್ಗಿ ಕುಣಿತ ಪ್ರದರ್ಶಿಸುತ್ತಾರೆ. ಕುಮಟಾ ತಾಲೂಕಿನ ಮೂರೂರು, ಕಲ್ಲಬ್ಬೆ, ಕರ್ಕಿಮಕ್ಕಿ, ಹೊನ್ನಾವರ ತಾಲೂಕಿನ ನವಿಲಗೋಣು,ಹಳದೀಪುರ, ಸಂಕೊಳ್ಳಿ , ಅಂಕೋಲಾ ತಾಲೂಕಿನ ಬರ್ಗಿ, ಅವರ್ಸಾ ,ಅಚವೆ,ಬೆಟ್ಕುಳಿ,ಭಟ್ಕಳ ತಾಲೂಕಿನ ನೀರಗದ್ದೆ, ತೋಡಿಬ್ಯಾಣ,ಹಲ್ಯಾಣಿ,ಹಾಡುವಳ್ಳಿ ಗ್ರಾಮಗಳ ಕೆಲ ಜನಾಂಗಗಳು ಈ ಬಗೆಯ ಆಕರ್ಷಕ ಸುಗ್ಗಿಕುಣಿತ ಪ್ರದರ್ಶಿಸುತ್ತಾರೆ.

-ಲೇಖನ ಮತ್ತು ಫೋಟೋ-ಎನ್.ಡಿ. ಹೆಗಡೆ

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.