ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

ಕನ್ನಡದಲ್ಲಿ ದಶಕದಿಂದ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಪವನ್ ಒಡೆಯರ್ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಅವರ ನೂತನ ಹಿಂದಿ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ‘ನೋಟರಿ’ ಎಂಟು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಕಾಶ್ ಎಂಟಟೈನ್ಮೆಂಟ್ ಪ್ರೊಡಕ್ಷನ್ ಜೊತೆ ಒಡೆಯರ್ ಮೂವೀಸ್ ಮತ್ತು ಬೌಂಡ್ ಲೆಸ್ ಮೀಡಿಯಾ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ಈ ಚಿತ್ರದಲ್ಲಿ ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕ ನಟನಾಗಿ ನಟಿಸುತ್ತಿದ್ದು, ಈಗಾಗಲೇ ‘ಕಹಾನಿ’, ‘ಪರಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಪರಂಬ್ರತಾ ಚಟ್ಟೋಪಾಧ್ಯಾಯ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ. ನಾಯಕಿಯಾಗಿ ಕ್ರಿಕೆಟರ್ ಹರ್ ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಿನ್ನೆ ವಿಜಯದಶಮಿಯ ಶುಭ ದಿನದಂದು ಸಿನಿಮಾ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಭೋಪಾಲ್ ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ ‘ನೋಟರಿ’ ಸಿನಿಮಾ ಚಿತ್ರೀಕರಣ ನಡೆಯಲಿದೆ.

ಚಿತ್ರದ ನಾಯಕ ಎಂದೂ ಕೂಡ ಸುಳ್ಳು ಹೇಳುವುದಿಲ್ಲ. ಇದು ಅವನ ಜೀವನದ ಸಿದ್ದಾಂತವಾಗಿರುತ್ತೆ. ಆದ್ರೆ ಕೆಲಸ ಮಾಡುವ ಕ್ಷೇತ್ರ ನಿತ್ಯ ಒಂದಿಲ್ಲೊಂದು ಸುಳ್ಳು ಹೇಳುವಂತ ಪರಿಸ್ಥಿತಿಯನ್ನು ತಂದೊಡ್ಡುತ್ತಿರುತ್ತೆ. ಅಂತಹ ಸಂದರ್ಭಗಳು ಎದುರಾದಾಗ ಆತ ಸುಳ್ಳು ಹೇಳದೇ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಲಿದ್ದು, ಇಡೀ ಸಿನಿಮಾ ಹಾಸ್ಯಮಯವಾಗಿರುತ್ತೆ ಎಂದು ‘ನೋಟರಿ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಪವನ್ ಒಡೆಯರ್.

ಪರಂ ಅವರು ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ನನ್ನ ಕಥೆಗೆ ಬಹಳ ಸೂಕ್ತ ವ್ಯಕ್ತಿ ಎನಿಸಿದರು. ಆದ್ರಿಂದಲೇ ಅವರ ಆಯ್ಕೆ ಸೂಕ್ತ ಎನಿಸಿ ಕಥೆ ಹೇಳಿದೆ ಅವರು ಕೂಡ ಕಥೆ ಕೇಳಿ ಇಷ್ಟ ಪಟ್ಟು ನಟಿಸಲು ಒಪ್ಪಿಕೊಂಡ್ರು ಎಂದು ಚಿತ್ರದ ನಾಯಕನ ಆಯ್ಕೆ ಬಗ್ಗೆ ಪವನ್ ಒಡೆಯರ್ ಮಾಹಿತಿ ಹಂಚಿಕೊಂಡಿದ್ದಾರೆ.

‘ನೋಟರಿ’ ಚಿತ್ರಕ್ಕೆ ಕಥೆ ಬರೆದು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಚಿತ್ರಕ್ಕಿದೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ.

Exit mobile version