ಕಿರುತೆರೆ

ಈತ ಕೇಶವ ಚಂದ್ರ…. ಇವರು ಯಾರು ಅಂದ್ರಾ?

-ಚಿನ್ಮಯ ಎಂ.ರಾವ್ ಹೊನಗೋಡು
2-6-2011

ಕನ್ನಡದಲ್ಲಿ ಇತ್ತೀಚೆಗೆ ಧಾರವಾಹಿಗಳದ್ದೇ ಜಮಾನ, ಒಂದೆಡೆ ಚಿತ್ರಮಂದಿರಗಳು ಹೌಸ್‌ಪುಲ್ ಆಗದೆ ಖಾಲಿ ಹೊಡೆಯುತ್ತಿರುವಾಗ ಜಾಲಿಯಾಗಿ ಚಾನೆಲ್‌ಗಳನ್ನು ಬದಲಾಯಿಸುತ್ತಾ ಹತ್ತಾರು ಧಾರವಾಹಿಗಳಲ್ಲಿ ಹೊತ್ತುಕಳೆಯುತ್ತಿದ್ದಾರೆ ಹೌಸ್‌ವೈಫ್‌ಗಳು. ಇತ್ತ ಚಿತ್ರನಿರ್ಮಾಪಕರ ಜೇಬು ತುಂಬುತ್ತಿಲ್ಲ. ಅತ್ತ ಗೃಹಿಣಿಯರು ಧಾರವಾಹಿ ನೊಡುವ ಜಾಬು ಬಿಡುತ್ತಿಲ್ಲ, ಬೆಳ್ಳಿತೆರೆಯ ಚಿನ್ನದಂತಹ ನಟರೆಲ್ಲಾ `ಮನೆ ಬಿಟ್ಟು ಥಿಯೇಟರ್‌ಗೆ ಜನ ಬರುತ್ತಿಲ್ಲವಲ್ಲ ಎಂದು ಗೊಣಗಿ ತಾವೇ ಕಿರುತೆರೆಯ ಮೂಲಕ ಮನೆ ಮನೆ ಬಾಗಿಲು ತಟ್ಟುತ್ತಿದ್ದಾರೆ. ಸಣ್ಣದೊಂದು ಸನ್ನಿವೇಶವನ್ನೂ ವಿಸ್ತಾರವಾಗಿ ವಿಸ್ತರಿಸುವ… ಆದರೂ ಜನ ಅದನ್ನೇ ಮುಗಿಬಿದ್ದು ನೋಡುವಂತೆ ಮಾಡುವ ಈ ಭರಪೂರ ಧಾರವಾಹಿಗಳ ಹಿಂದೆ ಸಂಭಾಷಣೆಕಾರರ ಕೈಚಳಕ ಸಕತ್ತಾಗಿ ಅಡಗಿದೆ ಎಂಬುದೇ ಸ್ವಾರಸ್ಯಕರ ಸಂಗತಿ. ಬನ್ನಿ .. ಇಲ್ಲೊಬ್ಬರಿದ್ದಾರೆ. ಧಾರವಾಹಿಗಳಿಗೆ `ಸೈ ಎನಿಸುವಂತಹ ಸಂಭಾಷಣೆಗಳನ್ನು ಬರೆವ ಇವರ ಸಾಧನೆಗೆ ಒಮ್ಮೆ`ಕೈಮುಗಿದು ಕೃತಾರ್ಥರಾಗೋಣ

ಯಾರಿತ?
ಈತ ಕೇಶವ ಚಂದ್ರ…. ಇವರು ಯಾರು ಅಂದ್ರಾ?

ಪ್ರಸ್ತುತ ಪ್ರಸಾರವಾಗುತ್ತಿರುವ ಕನಕಾ, ಎರಡು ಕನಸು ಹಾಗು ಅಮ್ಮಾ ನಿನಗಾಗಿ ಧಾರಾವಾಹಿಗಳಿಗೆ ಇವರದ್ದೇ ಸಂಭಾಷಣೆ. ಆಚೆ ವರ್ಷ ಪ್ರಸಾರವಾಗುತ್ತಿದ್ದ ಮೆಗಾ ಧಾರಾವಾಹಿಗಳಾಗಿದ್ದ `ರಾಧ ಹಾಗು `ಲಕುಮಿ ಗೆ ಇವರೇ ಸಂಭಾಷಣೆಗಳನ್ನು ಬರೆದಿದ್ದರು. ನೀವು ತುಟಿ ಬಿಚ್ಚದೆ ತುಟಿ ಮೇಲೆ ಕೈಬೇರಳನ್ನು ಇಟ್ಟು ಮೌನವಾಗಿ ಈ ಧಾರವಾಹಿಗಳನ್ನು ನೋಡಿ ಮೆಚ್ಚಲು ಇವರ ಮಾತುಗಳೇ ಕಾರಣ. ಪಾತ್ರಗಳು, ಪಾತ್ರಧಾರಿಗಳು ಧರೆಯಿಂದ ಮೇಲೇರುವುದಕ್ಕೆ ಇವರು ಬರೆವ ಸಂಭಾಷಣೆಗಳೇ ಹೂರಣ. ಹಾಗದರೆ ಬನ್ನಿ ಇವರ ಫ್ಲ್ಯಾಷ್‌ಬ್ಯಾಕ್ ಗೆ ಹೋಗೋಣ…

ಓದಿದ್ದೆ ಒಂದು ಆಗಿದ್ದೆ ಇನ್ನೊಂದು

ಬಿ ಎಸ್ಸಿ ಮುಗಿಸಿದ ಇವರಿಗೆ ಹೊಟ್ಟೆಪಾಡು ಕೆಲಸಕ್ಕೆ ಕರೆದುಬಿಟ್ಟಿತು, ೧೯೯೩ರಲ್ಲಿ ಇಂಜಿನಿಯರ್ ವರ್ಕ್ಸ ಒಂದರಲ್ಲಿ ತಿಂಗಳಿಗೆ ೭೫೦ ರೂ ಸಂಬಳ ಇವರಿಗೆ.ಆದರೆ ಮೊದಲಿನಿಂದಲೂ ಪಾಠಮಾಡುವ ಹುಚ್ಚನ್ನು ಹಚ್ಚಿಕೊಂಡಿದ್ದ ಕೇಶವ ಆ ಕೆಲಸ ಬಿಟ್ಟು ಇನ್ನೂ ಕಡಿಮೆ ಸಂಬಳಕ್ಕೆ ಶಿಕ್ಷಕರಾಗಿ ಸೇರಿಬಿಟ್ಟರು, ಒಂದುವರೆ ವರುಷದಲ್ಲಿ ಕಾರಣಾಂತರದಿಂದ ಆ ಶಾಲೆ ಮುಚ್ಚಿತು. ಕಷ್ಟ ಹೆಚ್ಚಿತು. ನಿರುದ್ಯೋಗ ಗೆಳೆಯನಾಗಿ ಬಿಟ್ಟ. ೬ತಿಂಗಳು ಮದುವೆಮನೆಗಳಲ್ಲಿ ಫೋಟೋಗ್ರಾಫರ್ ಆದರೂ ಇವರ ಇನ್‌ಕಮ್ ಗ್ರಾಫ್ ಏನೂ ಏರಲಿಲ್ಲ. ಸೀಸನ್ ವರ್ಕ. ಬೇರೆ ಟೈಂ ಖಾಲಿ ಕೂರುವ ಕೆಲಸ ಎಂದು ಕೆಲಸ ಬಿಟ್ಟರು. ಮನೆಯಲ್ಲಿ ಹೆಣ್ಣುಮಕ್ಕಳೂ ಕೆಲಸ ಮಾಡುವಾಗ ಇವರಿಗೆ ತನ್ನ ಬಗ್ಗೆ ತನಗೆ ಕೀಳರಿಮೆ. `ವಾಚ್ ಮನ್ ಕೆಲಸ ಆದ್ರೂ ಸರಿ ನಾನು ಮಾಡ್ತೀನಿ… ಮನೆಲ್ಲಿ ಮಾತ್ರ ಖಾಲಿ ಕೂರಲ್ಲ ಎಂದು ಗೆಳೆಯನ ಬಳಿ ಬಂದು ಅತ್ತರು. ಸೈಕಲ್ ತುಳಿದುಕೊಂಡು ಕೊರಿಯರ್ ತಲುಪಿಸುವ ಕೆಲಸ ಮಾಡಬೇಕೆಂದು ಹೊರಟಿದ್ದ ಇಷ್ಟು ಓದಿದ ಇವರಿಗೆ ಬೇಡ ಎಂದು ಅಲ್ಲೆ “ಎಕ್ಸಿಕ್ಯೂಟೀವ್ ಪೋಸ್ಟ್ ಸ್ಥಾಪಿಸಿದರು. ಸ್ವಲ್ಪ ಕಾಲದ ನಂತರ ಮಾರ್ಕೆಟಿಂಗ್ ಕೆಲಸ. ಅತೀ ಓಡಾಟದಿಂದ ಬೆನ್ನಿಗೆ ತೊಂದರೆಯಾಗಿ ಕೇಶವ ವೈದ್ಯರ ಸಲಹೆಯಂತೆ ಮತ್ತೆ ಮನೆ ಸೆರಬೇಕಾಯಿತು

ಆಪ್ತಮಿತ್ರನ ಸಹಾಯ

ಬ್ಯಾಕ್ ಪೆಯಿನ್ ನಿಂದ ಬಳಲಿ ಬೆಂಡಾಗಿದ್ದ ಗೆಳೆಯನನ್ನು ಕಂಡ ಪ್ರವೀಣ ಗೆಳೆಯನನ್ನು ತನ್ನ ಕಂಪ್ಯೂಟರ್ ಕ್ಲಾಸ್ ಗೆ ತಂದು ಬಿಟ್ಟುಕೊಂಡ, ಕಂಪ್ಯೂಟರ್‌ನ ಎಬಿಸಿಡಿ ಗೋತ್ತಿಲ್ಲದ ಕೇಶವ ಚಂದ್ರ ಬೇಸರ ಮಾಡಿಕೋಳ್ಳದೆ ಬೇಸಿಕ್ ಕಲಿತ. ತನ್ನ ಸ್ಥಾನವನ್ನೇ ತ್ಯಾಗಮಾಡಿದ ಪ್ರವೀಣ ಕೇಶವನನ್ನೆ ಅಲ್ಲಿ ಶಿಕ್ಷಕನನ್ನಾಗಿ ಸೇರಿಸಿಬಿಟ್ಟ, ಬೇಸಿಕ್ ಬಿಟ್ಟು ಬೇರೇನು ಗೊತ್ತಿಲ್ಲದ ಕೇಶವ ಪ್ರವೀಣನ ಗೆಳೆಯ ರೇಣು ಮಾಡುವ ಪಾಠವನ್ನು ಕಲಿತು ಅರ್ಧಗಂಟೆ ಅಭ್ಯಾಸಮಾಡಿ ನಂತರದ ಕ್ಲಾಸ್‌ನಲ್ಲಿ ಅದನ್ನೇ ಪಾಠ ಮಾಡುತ್ತಿದ್ದ ಯಾರಾದರೂ ಹೆಚ್ಚಿನದನ್ನು ಕೇಳಿದರೆ ಪಾಠದಲ್ಲಿರುವುದು ಇಷ್ಟೇ ಎಂದು ಬಿಡುತ್ತಿದ್ದ. ಜೊತೆಗೆ ಕನ್ನಡ ಜಾನಪದ ಎಂ ಎ ಪಧವಿಯನ್ನು ಕೂಡ ಗಳಿಸಿಕೊಂಡ.

ಕ್ಲಾಸ್ -ಫೇಮಸ್

ಇಂಗ್ಲೀಷ್‌ನಲ್ಲಿ ಪಾಠಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಚೆನ್ನಾಗಿ ತಲೆತುಂಬುತ್ತಿದ್ದ ಇವರ ಶೈಲಿಗೆ ತರಗತಿ ತುಂಬಿ ತುಳುಕುತಿತ್ತು. ಗೌತಮ್ ಕಾಲೇಜ್ನಲ್ಲಿ ಟೈಪಿಸ್ಟ್ ಆಗಿದ್ದ ಇವರ ವಿದ್ಯಾರ್ಥಿನಿಯೊಬ್ಬಳು ತನ್ನ ಕಾಲೇಜ್‌ನಲ್ಲಿ ಖಾಲಿ ಇದ್ದ ಕನ್ನಡ ಉಪನ್ಯಾಸಕರ ಹುದ್ದೆಗೆ ಇವರನ್ನು ತಂದು ಸೇರಿಸಿಬಿಟ್ಟಳು. ಇವರ ಕ್ಲಾಸ್‌ಗಳು ಎಷ್ಟು ಕ್ಲಾಸ್ ಆಗಿತ್ತೆಂದರೆ ಬೇರೆ ಕ್ಲಾಸಿನ ಹುಡುಗರೂ ಇವರ ಕ್ಲಾಸ್‌ನ್ನು ಲಾಸ್ ಮಾಡಿಕೊಳ್ಳದೆ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಬೇಜವಾಬ್ದಾಯಿಂದಾಗಿ ಪಿ ಯು ಸೆಕ್ಷನ್ ಮುಚ್ಚುವಂತಾಯಿತು, ಮತ್ತೆ ನಿರುದ್ಯೋಗ ಕೇಶವನನ್ನು ಚುಚ್ಚುವಂತಾಯಿತು.

ತೆರೆದು ಕೊಂಡಿತು ಅಕ್ಷರ ಲೋಕ

ಟೂರಿಂಗ್ ಸಿನಿಮಾ ನಡೆಸುತ್ತಿದ್ದ ಕೇಶವ ಅವರ ತಂದೆಗೆ ಫಿಲಂ ಛೇಂಬರ್‌ನಲ್ಲಿ ಸೆಕ್ರೇಟರಿ ಆಗಿದ್ದ ಥಾಮಸ್ ಪರಿಚಯ, ಕೆಲಸವಿಲ್ಲದ ಹುಡುಗ ಕೇಶವ ಗೆಳೆಯನ ಮಗನೆಂದು ಚಲನಚಿತ್ರ ಇತಿಹಾಸ ಪುಸ್ತಕದ ಕೆಲಸಕ್ಕೆ ಕಳಿಸಿದರು. ಅಲ್ಲಿ ಬಿ.ಸುರೇಶ್ ಅವರ ತಾಯಿ ಡಾ.ವಿಜಯಾ ಕೇಶವನಲ್ಲಿ ಕಂಡ ಚಂದ್ರನ ಬೆಳದಿಂಗಳನ್ನು ನೋಡಿ ಪ್ರೀತಿಯ ಕೈತುತ್ತನ್ನು ತಿನ್ನಿಸಿದರು. ನಂತರ ಸಂಪರ್ಕಕ್ಕೆ ಬಂದ ಬಿ.ಸುರೇಶ್, ಕೇಶವನನ್ನು ಮಲ್ಲಿಗೆ ಪತ್ರಿಕೆಗೆ ಅಕ್ಷರದ ಕಂಪನ್ನು ಲೇಪನ ಮಾಡಲು ಕಳಿಸಿದರು.ಎರಡು ವರುಷ ಅಲ್ಲಿ ದುಡಿಮೆ,ಆಗಲೇ ತಂಗಿಯರಿಬ್ಬರ ಮದುವೆಯ ಜೊತೆಗೆ ಕೇಶವನ ಮದುವೆಯನ್ನೊ ಮಾಡಿದ ತಂದೆ ಸಾಲ ಸೋಲ ಮಾಡಿ ಸೋಲನುಭವಿಸಿದರು. ಮೂರುವರೆ ಸಾವಿರ ಸಂಬಳ ಪಡೆಯುತ್ತಿದ್ದ ಕೇಶವ ಸಂಸಾರ ನಡೆಸಲೂ ಆಗದೆ,ಸಾಲ ತೀರಿಸಲಾಗದೆ ವರಿ ಮಾಡಬೇಕಾದ ಸಂಧರ್ಭ ಬಂತು.ಸಾಲಗಾರರ ಕಾಟ,ಹೆಚ್ಚು ಸಂಬಳದ ಕೆಲಸಕ್ಕೆ ಹುಡುಕಾಟ ಇದು ಕೇಶವನ ದಿನಚರಿ,ಮತ್ತೆ ಬಿ.ಸುರೇಶ್ ಅವರನ್ನು ಸಂಪರ್ಕಿಸುವಂತಾಯಿತು.

ಕರೆಯಿತು ನಾಕು ತಂತಿಯ ನಾದ ,ಕೇಶವಚಂದ್ರ ಸಂಭಾಷಣೆಕಾರನಾದ

ಉದಯ ವಾಹಿನಿಗಾಗಿ ತಯಾರಾಗುತ್ತಿದ್ದ ನಾಕುತಂತಿ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಸಹಾಯ ಮಾಡುವಂತೆ ಬಿ.ಸುರೇಶ್ ಕೇಶವಚಂದ್ರ ಅವರಿಗೆ ಅಪ್ಪಣೆ ಮಾಡಿದರು. ೩ ರಿಂದ ೫ ಸಾವಿರ ಸಂಬಳಕ್ಕೆ ಶಿಫ್ಟ್ ಆದ ಕೇಶವನಿಗೆ ಅಷ್ಟೇ ಸಾಕಿತ್ತು ಸಂಸಾರ ಮತ್ತು ಸಾಲವನ್ನು ಸಾಕಲು. ಸೆಟ್‌ನಲ್ಲಿ ನಿರ್ದೇಶಕರೊಬ್ಬರು ಪದೇ ಪದೇ ಕೇಶವ ಅವರಿಗೆ ಅವಮಾನದ ಸನ್ಮಾನವನ್ನು ಮಾಡಿ,ಅಣಕದ ಕಿರೀಟವನ್ನು ತೊಡಿಸುತ್ತಿದ್ದರು.
ಏನ್ರೀ ಮೂಲೇಲ್ ಕೂತ್ಕೊಂಡ್ ಯಾವಾಗ್ಲೂ ಬರಿತೀರಲ್ರೀ….ನೀವೇನು ದೊಡ್ಡ ರೈಟರ್ರಾ? ನೋಡ್ರಪ್ಪಾ ಇವರು ಬಿಸಿ ಬಿಸಿ ದೋಸೆ ಥರಾ ಸೀನ್ ಬರಿತಾರೆ,ನಾವು ಅಲ್ಲಿ ಶೂಟ್ ಮಾಡಬೇಕು, ನೀವ್ ಬಿ.ಸುರೇಶ್ ಇದ್ದಾಗ ಮಾತ್ರ ಬರ್ರೀ,ನಾನಿರೋವಾಗ ಬರ್‌ಬೇಡಿ ಅಂತ ಆ ನಿರ್ದೇಶಕ ಮಹಾಶಯ ಕೇಶವನನ್ನು ಹೊರಗಟ್ಟಿದ್ದರು.
ಆದದ್ದೆಲ್ಲಾ ಒಳ್ಳಯದಕ್ಕೇ ಎಂಬಂತೆ ಬಿ.ಸುರೇಶ್ ತೆಕ್ಕೆಗೆ ಬಂದ ಕೇಶವ ಅವರ ಗರಡಿಯಲ್ಲಿ ಪಳಗಿದರು.ಬಿಸಿ ಬಿಸಿ ದೋಸೆತರ ಸೀನ್ ರೆಡಿ ಮಾಡಿ ಸಂಭಾಷಣೆಯನ್ನು ತಾವೇ ಕುದ್ದಾಗಿ ಸೆಟ್‌ಗೆ ಹೋಗಿ ತಲುಪಿಸಿದಾಗ ಅದೇ ಅವಮಾನ ಮಾಡಿದ ನಿರ್ದೇಶಕ ಕುದ್ದು ಹೋದ, ಸಂಚಿಕೆ ನಿರ್ದೇಶಕನಾಗಿದ್ದ ಆತ ಒನ್ ಫೈನ್ ಡೇ ಧಾರಾವಾಹಿ ಬಿಟ್ಟು ಎದ್ದು ಹೋದ. ಆದರೆ ಅದೇ ನಾಕುತಂತಿಯ ನೂರನೇ ಸಂಚಿಕೆಯಿಂದ ಸಂಭಾಷಣೆ ಬರೆಯಲು ಆರಂಭಿಸಿದ ಕೇಶವ ೭೫೦ನೇ ಸಂಚಿಕೆಯವರೆಗೂ ಮಾತುಗಳ ನಾದವನ್ನು ಹೊಮ್ಮಿಸಿದ,ತಾನೇನು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ.

ಸೃಷ್ಡಿಯಾಯಿತು ಅವಕಾಶ

ಅಷ್ಟರಲ್ಲಾಗಲೇ ಬಿ.ಸುರೇಶ್ ಹಾಗು ಕೇಶವ ನೋಡುಗರಿಗೆ ಗಂಡ-ಹೆಂಡಿರಂತೆ ಭಾಸವಾಗುತ್ತಿದ್ದರು.ಇಬ್ಬರೂ ಸದಾ ಅಂಟಿಕೊಂಡಿರುತ್ತಿದ್ದರು.ಈ ಮಧ್ಯೆ ಜಿಕನ್ನಡದಲ್ಲಿ ರಾಘಣ್ಣ ನಿರ್ಮಾಣದ ಸೃಷ್ಟಿ ಧಾರಾವಾಹಿಯ ಮೂಲಕ ಕೇಶವಚಂದ್ರ ಅವರಿಗೆ ಸ್ವತಂತ್ರ ಸಂಭಾಷಣೆಕಾರರಾಗುವ ಅವಕಾಶ ಸೃಷಿಯಾಯಿತು, ಬಿ.ಸುರೇಶ್ ಅವರನ್ನು ಒಪ್ಪಿಗೆ ಪಡೆದೇ ಅಲ್ಲೂ ಕೆಲಸ ಮಾಡುತ್ತಿದ್ದರು,ಆದರೂ ಅದೇಕೋ ಸಣ್ಣ ಮನಸ್ತಾಪದಿಂದ ಬಿ.ಸುರೇಶ್ ಹಾಗು ಕೇಶವ ಡೈವರ್ಸ ಆದರು, ಅಂತಿಮವಾಗಿ ಥ್ಯಾಂಕ್ಸ್ ಕೊಡಲು ಕೈ ನೀಡಿದ ಕೇಶವ ಅವರಿಗೆ ನಿನಗೆ ಕೈ ನೀಡಲೂ ಇಷ್ಟವಿಲ್ಲಎಂದು ಬಿ.ಸುರೇಶ್ ಮಾತೊಂದ ಬರಸಿಡಿಲಿನಂತೆ ಬೀಸಿಬಿಟ್ಟರು.ವಿದ್ಯೆಯನ್ನು ಧಾರೆ ಎರೆದ ಗುರುವಿಗೆ ಕೇಶವಚಂದ್ರ ತಮ್ಮ ಕಣ್ಣೀರನ್ನೇ ಗುರುಕಾಣಿಕೆಯನ್ನಾಗಿ ಅರ್ಪಸಿ ಹಿಂದಿರುಗಿದರು.

ರಾಧ ಕರೆದಳು

ಆಗ ಜಿಕನ್ನಡದಲ್ಲಿ ೧೪೦ ಸಂಚಿಕೆಗೆ ಮಾತ್ರ ಸೀಮಿತವಾಗಿದ್ದ ಸೃಷ್ಟಿ ಸುಖಾಂತ್ಯ ಕಂಡಿತು.ಅದೇ ವೇಲೆ ಭಾವನ ಬೆಳೆಗರೆ ಈಟಿವಿ ಗೆ ರಾಧಾಳನ್ನು ತಂದು ಕೂರಿಸಿದರು. ಸಂಜೀವ್ ತಗಡೂರ್ ನಿರ್ದೇಶನದ ರಾಧಾ ತನ್ನನ್ನು ಅಕ್ಷರಗಳಲ್ಲಿ ಮಾತನಾಡಿಸುವಂತೆ ಕೇಶವನನ್ನು ಕರೆದು ಬಿಟ್ಟಳು.ರಾಧಾಕೀರ್ತಿವಂತಳಾಗಿ ಸಾವಿರ ಹೆಜ್ಜೆಗಳನ್ನು ಇಟ್ಟಾಗ ಕೇಶವಚಂದ್ರರ ಮೊಬೈಲ್‌ಗೆ ಒಂದು ಅಪರೂಪದ ಮೆಸೇಜ್ ಬಂದು ಕುಳಿತಿತ್ತು. ಸಾವಿರದ ಸರದಾರನಿಗೆ ಶುಭವಾಗಲಿಕಳಿಸಿದ್ದು ಮತ್ತಾರೂ ಅಲ್ಲ, ಅಂದು ಕೇಶವನಿಂದ ಕಣ್ಣೀರಿನ ಗುರುದಕ್ಷಿಣೆ ಪಡೆದಿದ್ದ ಗುರುಗಳಾದ ಬಿ.ಸುರೇಶ್,ಸಂತಸದ ತಂಗಾಳಿ ಬೀಸಿತು ಮತ್ತೆ ಬಿ.ಸುರೇಶ್ ನಿರ್ದೇಶನದ ಪ್ರೀತಿ-ಪ್ರೇಮ ಟೆಲಿ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ ಬರೆದು ಗುರುಗಳ ಪ್ರೀತಿ-ಪ್ರೇಮಕ್ಕೆ ಪಾತ್ರರಾದರು. ಕವಿತಾ ಲಂಕೇಶರ ನೀನೆಡೆವ ಹಾದಿಯಲ್ಲಿಧಾರಾವಾಹಿಗು ಮಾತಿನ ಹಾದಿ ತೋರಿಸಿದ್ದರು.

ಲಕುಮಿಗೆ ಸಂಭಾಷಣೆ ಬರೆಯುತ್ತಿದ್ದಾಗ ಕೇಶವ ಚಂದ್ರ, ಆ ಒಂದೇ ಧಾರವಾಹಿಯಲ್ಲಿ ಹಳ್ಳಿ-ಪೇಟೆ ಭಾಷೆ ಹಾಗು ವಿಭಿನ್ನ ಮನೋಸ್ಥಿತಿ ಹೊಂದಿರುವ ಪಾತ್ರಗಳಿಗೆ ಮಾತುಗಳನ್ನು ಮೆತ್ತುವುದರ ಮೂಲಕ ತಮ್ಮ ವೃತ್ತಿಜೀವನದಲ್ಲಿ ಬಹು ಎತ್ತರಕ್ಕೆ ಏರಿದರು.

ಸಂಭಾಷಣೆಕಾರರೆಂದರೆ ಏಸಿ ರೂಮಿನಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ತಮಗೆ ತೋಚಿದ ಸಾಲುಗಳನ್ನು ಗೀಚಿ ಚಿತ್ರೀಕರಣಕ್ಕೆ ಕಳಿಸುತ್ತಾರೆಂದು ನಾವು ತಿಳಿದುಕೊಂಡಿದ್ದರೆ ಅದು ತಪ್ಪು. ಕೇಶವಚಂದ್ರ ಅಂತವರನ್ನು ಹತ್ತಿರದಿಂದ ನೋಡಿದಾಗಲೇ ನಮಗೆ ಇದೆಲ್ಲಾ ಅರಿವಾಗುವುದು. ವಿಚಿತ್ರ ಅನುಭವ+ವಿಶೇಷ ಅಧ್ಯಯನ+ವಿಶಾಲ ಮನೋಭಾವ ಇವಿಷ್ಟರಿಂದ ಕೇಶವಚಂದ್ರ ತಯಾರಾಗಿದ್ದಾರೆ. ಕೇಶವಚಂದ್ರ ಲೋಕವನ್ನು ಚೆನ್ನಾಗಿ ನೋಡಿದ್ದಾರೆ.ಚೆನ್ನಾಗಿ ನೋಡಿ ಸಂಭಾಷಣೆ ಬರೆಯುತ್ತಿದ್ದಾರೆ.ಹಾಗಾಗಿ ಅವರನ್ನು ಈಗ ಇಡೀ ಲೋಕವೇ ನೋಡುತ್ತಿದೆ. ಅವರ ಕನ್ನಡ ನುಡಿ ಸೇವೆ ಹೀಗೇ ನಡೆಯಲಿ….ಮುನ್ನಡೆಯಲಿ.
**********

ಕಳ್ಳ
ನಾನು ಕದೀತೀನಿ
ನಿಜ ಜೀವನದಿಂದ ಸಂಭಾಷಣೆ ಕದೀತೀನಿ
-ಕೇಶವಚಂದ್ರ

ನಮಗೆ ಇಷ್ಟ ಇರುವ ಕೆಲಸವನ್ನು ಇಷ್ಟು ಹೊತ್ತು ಅಂತ ಲಿಮಿಟ್ ಹಾಕಿ ಕೊಳ್ಳದೆ ಕೆಲಸ ಮಾಡುತ್ತೇವೆ. ಇಷ್ಟ ಇಲ್ಲ ಅಂದಾಗ ಕಾಟಾಚಾರಕ್ಕೆ ಕೆಲಸ-ಕಾಟಾಚಾರಕ್ಕೆ ಕೆಲಸ ಮಾಡಿದ್ರೆ ನಮಗೂ ತೃಪ್ತಿ ಇರಲ್ಲ ಅದರಿಂದ ಯಾರು ನಮ್ಮನ್ನು ಸಂಬಳ ಕೊಟ್ಟು ಇಟ್ಟುಕೊಂಡಿರುತ್ತಾರೋ ಅವರಿಗೂ ಲಾಭ ಆಗಲ್ಲ.ಹೀಗಾಗಿರೋದ್ರಿಂದಲೇ ನಮ್ಮ ದೇಶದಲ್ಲಿ ಹೆಚ್ಚಾಗಿ ಫಲಿತಾಂಶ ಇಲ್ಲ.
– ಕೇಶವಚಂದ್ರ

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.