ನಿಗೂಢ ಯಾನ – ೧

– ದೀಪಕ್ ಕೋರಡಿ

ತುಸು ದೂರದಲ್ಲಿರುವ ಬೆಟ್ಟದ ಮೇಲಿದ್ದ ಪುಟ್ಟ ಗುಡಿಯಲ್ಲಿಂದು ಅಚ್ಚುಕಟ್ಟಾದ ಜಾತ್ರೆ ನಡೆಯುತ್ತಿತ್ತು. ಎಂದೂ ಕಾಣದ ಬಣ್ಣದ ಹೂಗಳು ಗಿರಿಯನ್ನು ಒಂದೆಡೆ ಅಲಂಕರಿಸಿದರೆ ಇನ್ನೊಂದೆಡೆ ಅಲ್ಲಿ ನೆರೆದವರೆಲ್ಲರ ಉಡುಗೆ ತೊಡುಗೆಯಿಂದಾಗಿ, ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತದಂತೆ ತೋರುತ್ತಿತ್ತು ಆ ಬಣ್ಣದ ಬೆಟ್ಟ. ಒಬ್ಬನೆ ಹುಟ್ಟುಹಾಕಿಕೊಂಡು ಹೊರಟಿದ್ದ ದೋಣಿಯ ಅಕ್ಕ-ಪಕ್ಕದಲ್ಲೆಲ್ಲಾ ದಟ್ಟ ಕಾನನದ ಸಾಲು ಸಾಲು. ಸಮುದ್ರದಷ್ಟು ವಿಶಾಲವಾಗಿದ್ದ ನದಿಯ ಉದ್ದಗಲಕ್ಕೂ ಮರದ ರೆಂಬೆ-ಕೊಂಬೆಗಳು ಹರಡಿಕೊಂಡು ಬಗ್ಗಿ ನೀರು ಕುಡಿಯುವಂತೆ ಭಾಸವಾಗುತ್ತಿದ್ದವು. ಹುಟ್ಟು ಹಾಕುವಾಗ ಬರುವ ನೀರಿನ ಸದ್ದು ಬಿಟ್ಟರೆ ಕೇಳಿಸುತ್ತಿದ್ದದ್ದು ಗಾಳಿಯೊಡನೆ ತೇಲಿ ಬಂದ ಆ ಬಣ್ಣದ ಬೆಟ್ಟದಲ್ಲಿ ನಲಿಯುತಿದ್ದ ಮಕ್ಕಳ ಚಿಲಿ-ಪಿಲಿ. ಆದರೆ ನಾನು ಹೊರಟಿದ್ದು ಆ ಬೆಟ್ಟಕ್ಕಲ್ಲ. ಹೊರಟಿರುವುದು ತಿಳಿದಿದೆ ಅಷ್ಟೆ. ಎಲ್ಲಿಗೆಂದು ತೋಚದು.

ಇಂತಹ ಮುದ ಮಿಶ್ರಿತ ವಾತವರಣವನ್ನು ಸವೆಯುತಾ ಹೋಗುತ್ತಿರುವಾಗ ಮಗ್ಗುಲಲ್ಲೇ ಒಂದು ದ್ವೀಪ ಕಂಡಿತು. ದೋಣಿಯನ್ನು ತಿರುಗಿಸಿ ದ್ವೀಪವನ್ನು ತಲುಪಿದಾಗ ಯಾರೋ ಅದೆಂದೋ ಹೂತಿಟ್ಟ ಕಲ್ಲೊಂದು ದ್ವೀಪದಂಚಲ್ಲಿತ್ತು. ‘ಅರೆರೆ’ ಎಂದು ಬರಗಾದೆ. ದೋಣಿಯನ್ನು ಅದರ ಹತ್ತಿರ ಕೊಂಡು ಹೋಗಿ, ಶಿಕ್ಷಿಸಲೆಂಬಂತೆ ದೋಣಿಯನ್ನು ಆ ಕಂಬಕ್ಕೆ ಕಟ್ಟು ಹಾಕಿ ಕೆಳಕ್ಕೆ ಇಳಿದೆ. ಮುಂಜಾವು ಮತ್ತು ಮಧ್ಯಾಹ್ನದ ನಡುವಲ್ಲಿದ್ದ ಆ ದಿನದ ಸೂರ್ಯ ಒಂದು ಬಗೆಯ ನಲಿವನ್ನು ಮನದೊಳಗೆ ಚೆಲ್ಲುತಿದ್ದ. ಹಬ್ಬಿದ ಮರಗಳ ಹೊರತು ಬೇರಾವ ಜೀವಿಯೂ ಇಲ್ಲದಂತೆ ತೋರುತ್ತಿದ್ದ ಆ ದ್ವೀಪದ ಇನ್ನೊಂದು ಅಂಚಿಗೆ ಬಂದೆ. ಈ ಸೂರ್ಯನ ಬೆಳಕಿನಲ್ಲಿ ಆ ಬೆಟ್ಟವನ್ನು ಈ ದ್ವೀಪದಿಂದ ನೋಡಿದಾಗ ಆದ ರೋಮಚನವನ್ನು ನೋಡಲು ನನ್ನ ರೋಮಗಳೂ ಎದ್ದು ನಿಂತವು. ತಡ ಮಾಡದೆ ಇದನ್ನು ನನ್ನ ಕ್ಯಾಮರದಲ್ಲಿ ಹಿಡಿದಿಡುವ ಸಾಹಸಕ್ಕಿಳಿದೆ. ಕ್ಯಾಮರದ ಬ್ಯಾಗನ್ನು ಬದಿಯಲ್ಲಿಟ್ಟು ಕ್ಯಾಮರದೊಳಗೆ ಇಣುಕಿ ಅದರ ಒಳಗಣ್ಣಿಂದ ಆ ಬೆಟ್ಟವನ್ನು ನೋಡಿದೆ. ಒಂದೆರಡು ಬಾರಿ ಕ್ಲಿಕ್ಕಿಸುತ್ತಿರುವಾಗ ಏನೋ ಒಂದು ಬಗೆಯ ಸದ್ದು ಹಗಲಲ್ಲೂ ಕತ್ತಲನ್ನು ಹಿಡಿದಿಟ್ಟ ಆ ದಟ್ಟ ಕಾಡಿನೊಳಗಿಂದ ಬಂತು. ಅದೇನೆಂದು ನೋಡುವ ಹುಚ್ಚು ಪ್ರಯತ್ನಕ್ಕೆ ಹೋಗುವ ಧೈರ್ಯವಾಗಲಿಲ್ಲ. ಆದರೂ ಒಂದು ಬಗೆಯ ಕೌತುಕ ಇನ್ನೊಮ್ಮೆ ಆ ಸದ್ಧು ಬರುವ ತನಕ ನನ್ನನ್ನು ಅಲ್ಲೇ ನಿಲ್ಲುವಂತೆ ಮಾಡಿತು. ಈ ಬರಿಯ ‘ಗರ್ರ್ರ್ರ್ರ್’ ಸದ್ಧು ಸ್ವಲ್ಪ ಜೋರಾಗಿಯೇ ಕೇಳಿಸಿತು. ಹೆದರಿ ಕಂಗೆಟ್ಟು ದಿಕ್ಕಾಪಾಲಾಗಿ ಓಡಿದೆ. ಹುಟ್ಟಿ ಬೆಳದ ಊರಲ್ಲೇ ಒಮ್ಮೊಮ್ಮೆ ದಾರಿ ತಪ್ಪುವಾಗ, ಮೊದಲ ಬಾರಿ ಕಾಲಿಟ್ಟ ಆ ದ್ವೀಪದಲ್ಲಿ ಹೇಗೆ ದಾರಿ ಹುಡುಕುವುದು. ಅದೂ ಆ ಕಾಡಿನಲ್ಲಿ. ಅರ್ಧ ಓಡಿದ್ದರಿಂದ ಇನ್ನರ್ಧ ಭಯದಿಂದ ಬೆವತು ಹೋಗಿದ್ದ ನನಗೆ ತಕ್ಷಣವೆ ಅರಿವಾದದ್ದು ನನ್ನ ಕ್ಯಾಮರ ಬ್ಯಾಗನ್ನು ಅಲ್ಲೇ ಮರೆತೆನೆಂದು. ಅದರಲ್ಲೂ ಮನೆಯ ಕೀಲಿ ಕೈ ಆ ಬ್ಯಾಗಿನೊಳಗೇ ಇರುವುದೆಂದು ಮನಗಾಣುವ ಹೊತ್ತಿಗೆ ಬಹಳ ದೂರ (ಯಾವ ದಿಕ್ಕೆಂದು ತಿಳಿಯದೆ) ಬಂದು ಬಿಟ್ಟಿದ್ದೆ.

ಬೇರೆ ದಾರಿ ಕಾಣದೆ ಭಯವನ್ನು ಮಡಚಿ ಜೇಬಿನಲ್ಲಿಟ್ಟುಕೊಂಡು ಪುನ: ಹಿಂದೆ ಓಡಿದೆ. ಬ್ಯಾಗೇನೋ ಕಂಡಿತು. ಆದರೆ ತುಂಬಾ ಚಿಕ್ಕದಾಗಿ ತೋರುತ್ತಿತ್ತು. ಕಾರಣ ಅದರ ಹಿಂದೆ ನಿಂತ್ತಿದ್ದ ಬೃಹದಾಕಾರದ ಎಂದೂ-ಎಲ್ಲಿಯೂ ನೋಡದ ಕಂದು-ಕಪ್ಪು-ನೀಲಿ ಮಿಶ್ರಿತ ವ್ಯಾಘ್ರ. ಅದು ನನ್ನ ಮುಂದೆ ಬೆನ್ನು ಮಾಡಿ ನಿಂತಿದ್ದ (ನಾನು ಅದರ ಬೆನ್ನ ಹಿಂದೆ ಎಂದು ಹೇಳಿದರೆ ಸೂಕ್ತ) ಕಾರಣ ಮೆಲ್ಲನೆ ಹೋಗಿ ಬ್ಯಾಗನ್ನು ಹಿಡಿದುಕೊಂಡೆ. ತಕ್ಷಣವೇ ಹಿಂದಕ್ಕೆ ತಿರುಗಿದ ಆ ಪ್ರಾಣಿ ನನ್ನನ್ನು ದುರುಗುಟ್ಟಿತು. ಹೃದಯ ಕಿತ್ತು ಬಾಯಿಗೆ ಬಂದತಾದ ಅನುಭವ. ಹೊರಬರಲೆತ್ನಿಸಿದ ಹೃದಯವನ್ನು ನುಂಗಿ ತನ್ನ ಸ್ಥಾನಕ್ಕೆ ಹಿಂದೆ ಕಳಿಸಿ ಅಲ್ಲಿಂದ ಕಾಲ್ಕಿತ್ತೆ (ಬ್ಯಾಗಿನೊಡನೆ). ಮತ್ತದೇ ತಳಮಳ. ಯಾವದಿಕ್ಕಿನೆಡೆ ಓಡುವುದು!! ಯಾವದಿಕ್ಕಾದರೂ ಸರಿ ಓಡುವುದೊಂದೆ ಗುರಿ ಎಂದು ಹೇಳಿಕೊಳ್ಳುತ್ತ ಓಡಿದೆ. ದೋಣಿ ಸಿಗದಿದ್ದರೂ ನೀರಿಗಾದರೂ ಹಾರುವ (ಈಜು ಬರೋಲ್ಲ) ಧೈರ್ಯ ಮಾಡಿ ಓಡಿದೆ. ನನಗೆ ಹಂಗಿಸಲೆಂಬಂತೆ ದಾರಿಯಲ್ಲಿ ಅಡ್ಡವಾಗಿ ಬೆಳೆದ ಮರದ ಬೇರೊಂದು ಕಾಲು ಕೊಟ್ಟು ಬೀಳಿಸಿತು. ಓಡುತ್ತಿರುವವನು ಲಾಂಗ್ ಜಂಪ್ ಮಾಡಬೇಕಾಯಿತು. ಕೆಳಗೆ ಬೀಳುವ ಮುನ್ನ ಕೈಯಿಂದ ಬ್ರೇಕ್ ಹಾಕಿದ ಪರಿಣಾಮ ಕೈ-ಮೊಣಕಾಲುಗಳು ತೆರಚಿ ಹೋದವು. ಬಾಯೋಳಗೆ ಮಣ್ಣು ತುಂಬಿ ದಂತ ಮಂಜನವಾಯಿತು. ಆದರೆ ಭಯ ಈ ನೋವನ್ನು ಹಿಮ್ಮೆಟ್ಟಿದ ಕಾರಣ ಮತ್ತೆ ಎದ್ದು ಓಡಿದೆ. ಇನ್ನೂ ಎರೆಡು ಬಾರಿ ಉರುಳಿ-ಉರುಳಿ ದೋಣಿಯ ಬಳಿ ಬಂದೆ. ಪ್ರತಿ ದಿನವೂ ಪ್ರಾಕ್ಟಿಸ್ ಮಾಡಿ ಪರಿಣಿತಿ ಹೊಂದಿದ ಆ ಕಾಡು ಪ್ರಾಣಿ ನನ್ನ ಹಿಂದಿಂದೆ ಬಂದರೂ ಅದನ್ನು ದಾಟಿ ನಾನು ಮೊದಲು ಮುಟ್ಟಿದೆನಲ್ಲ ಎಂದು ಸಂತೃಪ್ತಿ ಪಟ್ಟರೂ, ಸಂತಸ ಪಡುವ ಸಂದರ್ಭ ಇದಾಗಿರಲಿಲ್ಲ. ಕಲ್ಲು ಕಂಬಕ್ಕೆ ಕಟ್ಟಿ ಹಾಕಿದ್ದ ದೋಣಿಯ ಹಗ್ಗವನ್ನು ಅವಸರವಸರದಲ್ಲಿ ತೆಗೆಯಲು ಪ್ರಯತ್ನಿಸಿದೆ. ಆದರೆ ತೆಗೆಯಲು ಆಗುತ್ತಿಲ್ಲ. ಗಾಬರಿ ತಾರಕಕ್ಕೇರಿತು. ಎಷ್ಟೇ ಕಷ್ಟಪಟ್ಟರೂ ಹಾಕುವಾಗ ಸುಲಭವಾದ, ಸಡಿಲವಾದ ಗಂಟುಳ್ಳ ಆ ಹಗ್ಗವನ್ನು ತೆಗೆಯಲಾಗುತ್ತಿಲ್ಲ. ನೀರಿನಲ್ಲಿ ಮುಳುಗೆದ್ದವನಂತೆ ಬೆವತು ಹೋದಿದ್ದೆ, ಹೆದರಿ. ನನ್ನ ಅಸಹಾಯಕತೆಯನ್ನು ಕೆಲವು ಕ್ಷಣಗಳಿಗೆ ಮಾತ್ರ ನೋಡಿದ ಆ ಪ್ರಾಣಿ ನನ್ನ ಮೇಲೆ ಜಿಗಿಯಲು ತಡ ಮಾಡಲಿಲ್ಲ. ಅಲ್ಲಿಂದಲೇ ಜಿಗಿದು ತನ್ನ ಮುಂಗಾಲುಗಳಿಂದ ನನ್ನ ಭುಜವನ್ನು ಹಿಡಿದುಕೊಂಡಿತು. ಹೆದರಿ ಒಮ್ಮೆಲೆ ಕಣ್ಣರಳಿಸಿದೆ. “ಗಂಟೆ ಎಂಟಾಯಿತು” ಎನ್ನುತ ನನ್ನ ಹೆಂಡತಿ ನನ್ನನ್ನು ಎಬ್ಬಿಸುವ ಪ್ರಯತ್ನದಲ್ಲಿದಳು. ಅಬ್ಬಾ ಬದುಕಿದೆ ಎಂದುಕೊಳ್ಳುತ ಪುನರ್ಜನ್ಮ ಪಡೆದವನಂತೆ ಸಂತಸಗೊಂಡೆ. ಮೈಯ್ಯ ತುಂಬ ತೆರುಚಿದ ಗಾಯಗಳಿರಲಿಲ್ಲ. ತಕ್ಷಣವೆ ಹೋಗಿ ಕಪಾಟಿನಲ್ಲಿ ನೋಡಿದೆ. ಕ್ಯಾಮರ ಮತ್ತು ಬ್ಯಾಗು ಅಲ್ಲೇ ಇತ್ತು. ಆದರೆ ಹಾಕಿಕೊಂಡ ಶರ್ಟು ಮಾತ್ರ ಬೆವರಿನಿಂದ ಒದ್ದೆಯಾಗಿತ್ತು.

– ದೀಪಕ್ ಕೋರಡಿ

10-4-2012

Exit mobile version