ಬಿಳಿ ಹುತ್ತದ ಒಡಲಲ್ಲಿ ವಿಜೃಂಬಿಸುವ ಶ್ವೇತಾಂಬಿಕಾ ದೇವಿ

ನಮ್ಮ ನಾಡಿನಲ್ಲಿ ಶಕ್ತಿದೇವತೆ ವೈವಿಧ್ಯಮಯ ವೇಷ, ವಿಶಿಷ್ಟ ಪಾಕೃತಿಕ ಸ್ಥಳಗಳಲ್ಲಿ ನೆಲೆ ನಿಂತು ಸದಾ ಭಕ್ತರನ್ನು ಪೊರೆಯುತ್ತಿದ್ದಾಳೆ. ಸುಂದರ ಆಲಯ, ದುರ್ಗಮ ಕಾನನ, ನದೀ ತೀರ, ಹೆಬ್ಬಂಡೆಯ ತುದಿ, ಗುಹಾ ಸುರಂಗಳಲ್ಲಿ ನೆಲೆಯಾಗಿರುವ ತಾಯಿ ಸದಾ ಭಕ್ತ ವತ್ಸಲೆ.ಆಳೆತ್ತರದ ಬಿಳಿಯ ಹುತ್ತದ ಹಿನ್ನೆಲೆಯಲ್ಲಿ ನೆಲೆ ನಿಂತ ಜಗನ್ಮಾತೆ ನಿತ್ಯ ನೂರಾರು ಭಕ್ತರನ್ನು ಸೆಳೆದು ಪೂಜೆ ಸ್ವೀಕರಿಸುತ್ತಾ ನಿಂತ ಕ್ಷೇತ್ರವೇ ಮುಗ್ವಾದ ಶ್ವೇತಾಂಬಿಕಾ ದೇಗುಲ.

ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿರುವ ಈ ದೇಗುಲ ಬಿಳಿಯಮ್ಮನ ದೇಗುಲ ಎಂದೇ ಖ್ಯಾತಿ ಹೊಂದಿದೆ. ಇಲ್ಲಿ ಬೆಳೆಯುವ ಗೆದ್ದಲು ಹುತ್ತ ಶ್ವೇತ ವರ್ಣದ್ದಾಗಿದ್ದು ಹುತ್ತವೇ ದೇವರಾಗಿದೆ. ಒಂದು ಕಡೆ ಝರಿ ಇನ್ನೊಂದು ಕಡೆ ನದಿ ಇರುವ ಈ ದೇಗುಲ ಸುಂದರ ಪರಿಸರದಲ್ಲಿ ಇದ್ದು (ಹಿಂಭಾಗದಲ್ಲಿ ಎತ್ತರದ ಗುಡ್ಡ, ಮುಂಭಾಗದಲ್ಲಿ ಅಡಿಕೆ ತೋಟದ ಹಿನ್ನೆಯಲ್ಲಿ ಈ ದೇಗುಲವಿದ್ದು )ಸದಾ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿರುತ್ತಾರೆ.ಈ ದೇಗುಲ ಪ್ರವೇಶಿಸುತ್ತಿದ್ದಂತೆ ಆಳೆತ್ತರದ ಶ್ವೇತವರ್ಣದ ಹುತ್ತಗಳು ಗಮನ ಸೆಳೆಯುತ್ತವೆ.ಸಾಲು ಸಾಲಾಗಿ ಪೊದರು ಪೊದರಾಗಿ ಪೈಪೋಟಿಯಿಂದ ಬೆಳೆಯುತ್ತಿರುವಂತೆ ಕಾಣುವ ಈ ಹುತ್ತಗಳು ಸಹಸ್ರಾರು ಭಕ್ತರ ಆರಾಧನಾ ಕೇಂದ್ರವಾಗಿ ಭಕ್ತರ ಅಭೀಷ್ಟ ನೆರವೇರಿಸುವ ದೈವೀ ಸ್ಥಳವಾಗಿದೆ.

ಹೊನ್ನಾವರದಿಂದ ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ 7 ಕಿ,ಮೀ.ದೂರ ಕ್ರಮಿಸಿದರೆ ಹುಲಿಯಪ್ಪನ ಕಟ್ಟೆ ಎಂಬ ಸ್ಥಳವಿದೆ. ಅಲ್ಲಿಂದ 3 ಕಿ.ಮೀ.ದೂರಕ್ಕೆ ಚಲಿಸಿದರೆ ಈ ದೇಗುಲ ಸಿಗುತ್ತದೆ.
ನೈಸರ್ಗಿಕವಾಗಿ ಒಡಮೂಡಿದ ಈ ಬಿಳಿಯ ಹುತ್ತಗಳು ಪ್ರತಿ ವರ್ಷ ಬೆಳೆಯುತ್ತಲೇ ಇದೆ. ಈ ದೇಗುಲದ ಇತಿಹಾಸ ಅನಾದಿಯಾಗಿದ್ದು ಬಹು ದೂರದ ಭಕ್ತರನ್ನು ಸೆಳೆದು ಸಂಕಷ್ಟ ನಿವಾರಿಸುತ್ತಿದೆ.

ಸ್ಥಳ ಮಹಿಮೆ: ನಾರದರಿಂದ ಪ್ರತಿಷ್ಠಾಪನೆ :

ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತು. ಶೌನಕಾದಿ ಮುನಿಗಳು ಸೂತಮುನಿಗಳಲ್ಲಿ ಅರಿಕೆ ಮಾಡಿಕೊಂಡು ಈ ಹಿಂದೆ ಗೋಕರ್ಣ ಕ್ಷೇತ್ರದಲ್ಲಿರುವ ದಕ್ಷಿಣ ನಾಸಿಕಾ ಕ್ಷೇತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದಿರಿ. ವಿವರವಾಗಿ ತಿಳಿಸುವಂತೆ ಭಿನ್ನವಿಸುತ್ತಾರೆ. ಆಗ ಸೂತರು ಸಾಕ್ಷಾತ್ ಪರಶಿವನಿಂದ ಪಾರ್ವತಿ ದೇವಿಗೆ ವಿವರಿಸಲ್ಪಟ್ಟ ಕಥೆಯ ಸಾರಾಂಶವನ್ನು ವಿವರಿಸುತ್ತಾರೆ. ದಕ್ಷಿಣ ನಾಸಿಕ ಕ್ಷೇತ್ರವು ಗೋಕರ್ಣ ಕ್ಷೇತ್ರದಿಂದ ಮೂರು ಯೋಜನ ದೂರದಲ್ಲಿ ಶರಾವತಿ ನದಿ ಸನಿಹದ ‘ಮುಗುವೆ’ ಪ್ರದೇಶವಾಗಿದ್ದು ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ ಎಂದು ವಿವರಿಸಿದರು. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ (ಸಾಲಕೋಡು ಹೊಳೆ) ದಂಡೆಯಲ್ಲಿ ಆದಿಶಕ್ತಿಯ ಇರುವಿಕೆಯನ್ನು ಕಂಡು ಧನ್ಯರಾದರು. ಅದಕ್ಕಾಗಿ ಅಲ್ಲಿ ನೈಸರ್ಗಿಕವಾಗಿ ಒಡಮೂಡಿದ ಹುತ್ತದಲ್ಲಿ ಶಾಶ್ವತ ನೆಲೆದೋರುವಂತೆ ಜಗನ್ಮಾತೆಯನ್ನು ಪ್ರಾರ್ಥಿಸಿ ಪ್ರತಿಷ್ಟಾಪಿಸಿ ಪೂಜಿಸಿದರಂತೆ. ಸನಿಹದಲ್ಲೇ ಇರುವ ತೀರ್ಥದಲ್ಲಿ ನಾರದರು ಸ್ನಾನಗೈದು ಈ ತೀರ್ಥ ಸದಾ ಔಷಧಗುಣಹೊಂದಿ ಬುದ್ಧಿ ಮತ್ತು ದೇಹಕ್ಕೆ ಸದಾ ಚೇತನ ತುಂಬುವಂತಾಗಲಿ ಎಂದು ಪ್ರಾರ್ಥಿಸಿದರಂತೆ.

ಇಲ್ಲಿನ ಶ್ವಾತಾಂಬಿಕಾ ದೇವರು ಉತ್ತರ ಮುಖ ಹೊಂದಿದ್ದು ಎಡ ಬಲಗಳಲ್ಲಿ ಪರಿವಾರ ದೇವತೆಗಳಾದ ವೀರಭದ್ರ, ಕೆಂಡವೀರ,ಬಂಡಿಬಕ್ಕ, ದಂಡಿ ದೇವತೆಗಳು ಪರಿವಾರ ದೇವತೆಗಳಾಗಿ ನೆಲೆಯಾಗಿವೆ.ಶ್ವೇತಾಂಬಿಕಾ ದೇವರೂ ಸೇರಿ ಈ ಎಲ್ಲಾ ದೇವರಿಗೂ ತ್ರಿಕಾಲ ಪೂಜೆ ನೈವೇದ್ಯ ವರ್ಷವಿಡೀ ಅನೂಚಾನವಾಗಿ ನಡೆಯುತ್ತಿದೆ.
ಸಂಪತ್ ಪ್ರಾಪ್ತಿ, ಚರ್ಮ ರೋಗ ನಿವಾರಣೆ,ಜಾನುವಾರುಗಳ ಕಾಯಿಲೆ ನಿವರಣೆ, ಸಂತಾನ ಪ್ರಾಪ್ತಿ,ಕಳೆದ ವಸ್ತು ಮರು ಪ್ರಾಪ್ತಿ,ಮದುವೆ, ನೌಕರಿ, ವಿದ್ಯಾಭ್ಯಾಸ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಭಕ್ತರು ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ.

ಈ ದೇಗುಲದಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ಕ್ಷೀರ ಮತ್ತು ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸಹಿತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ನಡೆಯುತ್ತದೆ. ನವರಾತ್ರಿಯಲ್ಲಿ ಹತ್ತು ದಿನಗಳಕಾಲ ವೈಭವದ ಶರನ್ನವರಾತ್ರಿ ಉತ್ಸವ, ಚಂಡಿಕಾ ಯಾಗ, ನಿತ್ಯ ಸಪ್ತಶತಿ ಪಾರಾಯಣ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ರಾತ್ರಿ ವಿವಿಧ ಭಕ್ತರಿಂದ ದಿಪೋತ್ಸವ ನಡೆಯುತ್ತದೆ. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ, ಶಿವರಾತ್ರಿ, ಗಂಗಾಷ್ಟಮಿ, ಎಳೆಯಾಷ್ಟಮಿ,ಚಂಪಾ ಷಷ್ಠಿ ಹಬ್ಬಗಳಂದೂ ಸಹ ವಿಸೇಷ ಪೂಜೆ ನೈವೇದ್ಯ ಸಲ್ಲುತ್ತದೆ. ಕೆಲ ವಿಶೇಷ ದಿನಗಳಲ್ಲಿ ಇಲ್ಲಿನ ಅರ್ಚಕರಿಗೆ ಭಾರ ಬರುವ ಪದ್ಧತಿಯಿದ್ದು ಭಕ್ತರ ಸಮಸ್ಯೆಗಳಿಗೆ ತೀಕ್ಷಣ ಪರಿಹಾರ ಸೂಚನೆಯಾಗುತ್ತದೆ.
ದೇಗುಲ ಸಂಪರ್ಕಕ್ಕೆ ಸಮರ್ಪಕ ರಸ್ತೆ , ಪಾರ್ಕಿಂಗ ವ್ಯವಸ್ಥೆ, ಯಾತ್ರಿ ನಿವಾಸ, ಸುಸಜ್ಜಿತ ಪಾಕಶಾಲೆ, ಪ್ರದಕ್ಷಿಣಾ ಪಥಕ್ಕೆ ಪ್ರಾಕಾರ ವ್ಯವಸ್ಥೆ ಅಗತ್ಯವಿದ್ದು ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

ಫೋಟೋ-ಮತ್ತು ಲೇಖನ -ಎನ್.ಡಿ.ಹೆಗಡೆ ಆನಂದಪುರಂ

13-12-2012

Exit mobile version