ಕವಿಸಮಯ

ಗೋಪಿಕೆಯರ ಜೊತೆ ಇರುವ ಕೃಷ್ಣನ ನೋಡ ಬನ್ನಿರೆ..

( “ಮಥುರಾನಾಥ ಕೃಷ್ಣ” ಎಂಬ ನೃತ್ಯರೂಪಕಕ್ಕೆ ರಚಿಸಿದ ಈ ಗೀತೆ ಶ್ರೀಕೃಷ್ಣ ಮಥುರಾನಗರಿಗೆ ಆಗಮಿಸಿದಾಗ ಸಖಿಯರು ಹೇಗೆ ಸಂಭ್ರಮಿಸಿದರು ಎಂಬುದನ್ನು ಸಾರುತ್ತದೆ)
ಗೋಪಿಕೆಯರ ಜೊತೆ ಇರುವ ಕೃಷ್ಣನ ನೋಡ ಬನ್ನಿರೆ..
ಸಾಲಂಕೃತ ನಮ್ಮ ಕೃಷ್ಣನ ಈಗಲೆ ಕಾಣ ಬನ್ನಿರೆ..
ತುಳಸೀ ಹಾರವ ಕೊರಳಿಗೆ ಹಾಕುವ ಬೇಗ ಬನ್ನಿರೆ-1

ಮುದ್ದು ಕೃಷ್ಣನ ಮೋಹನಾಂಗನ ಹಾಡ ಬನ್ನಿರೆ..
ಕದ್ದು ತಿನ್ನಿವ ಬೆಣ್ಣೆ ಕೃಷ್ಣನ ಕಾಡ ಬನ್ನೀರೆ..
ಸದ್ದು ಮಾಡದೆ ಓಡಿ ಹೋಗುವ ಹಿಡಿಯ ಬನ್ನಿರೆ-2

ಗೀತಪ್ರಿಯ ನಮ್ಮ ಕೃಷ್ಣಗೆ ಈಗಲೆ ಹಾಡ ಕಟ್ಟೀರೆ
ಮೇಘಶ್ಯಾಮನ ಕಂಡು ಕುಣಿಯುವ ಗೆಜ್ಜೆಯ ಕಟ್ಟೀರೆ..
ಲಜ್ಜೆಯ ಬಿಟ್ಟು ಹೆಜ್ಜೆ ಹಾಕುತಾ ನರ್ತನ ಮಾಡಿರೆ-3

ಮನೋರಥದಲಿ ಕುಳಿತ ಮೂರ್ತಿಗೆ ನಮೋ ಎನ್ನಿರೇ..
ಕನಸ ಹಂಚುವ ಮಹಾರಸಿಕನ ಸೇರ ಬನ್ನೀರೆ..
ಭಾವದೂರಲಿ ಕೃಷ್ಣನೊಬ್ಬನೇ ತೇಲ ಬನ್ನೀರೆ-4

ತೂಗುಮಂಚದಿ ಅವನ ಕುಳ್ಳಿರಿಸಿ ತೂಗ ಬನ್ನೀರೆ..
ಪ್ರೇಮದಾಟದಿ ಅವನ ದಾಟುವ ಚೇಷ್ಟೆ ಮಾಡೀರೆ..
ಸಾವಧಾನದಿ ನಗೆಯ ಬೀರುವ ರೂಪ ನೋಡೀರೆ-5

ಚೆಲುವ ಕೃಷ್ಣನ ಒಲವ ಗಳಿಸೋಣ ಹೇಗೆ ಎನ್ನೀರೆ..
ಅವನ ಒಲುಮೆಗೆ ಸುಲಭ ಎನ್ನುವ ದಾರಿ ಕಂಡೀರೆ..
ಅವನ ಪ್ರೇಮವ ಹೇಗೆ ಪಡೆಯೋಣ ಹೇಳ ಬನ್ನೀರೆ-6

ಲತಾ ಮಂಟಪದಿ ಅವನ ಕರೆತಂದು ಹೂವ ಚೆಲ್ಲೀರೆ..
ಸದಾ ಅವನನೇ ಸುತ್ತುವರೆಯುವ ಕೂಡಿ ಬನ್ನೀರೆ..
ನಮ್ಮ ಕೃಷ್ಣನ ಹಾಡಿ ಹೊಗಳುವ ಹಾಡ ಬನ್ನೀರೆ-7

ನಾದಮಹಿಮನ ರಾಗ ರಮಿಸುವ ವೇಣು ತನ್ನೀರೆ..
ವೇಣುಲೋಲನ ವೇಣುವಾದನವ ಕೇಳಿ ತಣಿಯೀರೆ..
ಮೀಟಿ ತಂತಿಯ ಶೃತಿಯ ನೀಡಿ ಒತ್ತಾಸೆಯಾಗೀರೆ-8
ಗೋಪಿಕೆಯರ ಜೊತೆ ಇರುವ ಕೃಷ್ಣನ ನೋಡ ಬನ್ನಿರೆ..
ಕೃಷ್ಣನ ನೋಡ ಬನ್ನಿರೆ..ಕೃಷ್ಣನ ನೋಡ ಬನ್ನಿರೆ..

-ಚಿನ್ಮಯ ಎಂ.ರಾವ್ ಹೊನಗೋಡು

Saturday, ‎January ‎21, ‎2012

***********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.