ಗುಬ್ಬಚ್ಚಿ-ಗೂಡು..: ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿಯ ದಿನ

– ದೀಪಕ್ ಕೋರಡಿ

‘ಅಜ್ಜಿಯ ಕಥೆಯಲ್ಲಿತ್ತು, ಕಾಗಕ್ಕನ ತಂಗಿಯಾಗಿತ್ತು, ಮುತ್ತಜ್ಜನ ಫೋಟೋ ಹಿಂದೆ ಹುಲ್ಲು ಹಾಸಿ ಮಲಗಿತ್ತು.. ಈ ಒಗಟನ್ನು ಬಿಡಿಸಿ ನೋಡೋಣ’ ಎಂದು ಯಾರನ್ನೇ ಕೇಳಿದರು ಥಟ್ಟನೆ ಬರುವ ಉತ್ತರ – ಗುಬ್ಬಕ್ಕ ಅಲಿಯಾಸ್ ಗುಬ್ಬಚ್ಚಿ. ಈ ಹೆಸರು ಎಲ್ಲೋ ಕೇಳಿದ ಹಾಗಿದೆ ಅನಿಸುತ್ತಿದೆಯೆ. ಯು ಆರ್ ರೈಟ್. ಚಡ್ಡಿ-ಅಂಗಿ ಹಾಕಿ ನಾವೆಲ್ಲಾ ಶಾಲೆಗೆ ಹೋಗೋವಾಗ ಎಲ್ಲೆಡೆಯೂ ನಮ್ಮನ್ನು ಹಿಂಬಾಲಿಸುವಂತೆ ಬರುತ್ತಿದ್ದ ಪುಟ್ಟ-ಮುಗ್ಧ ಹಕ್ಕಿಗಳು ಈ ಗುಬ್ಬಚ್ಚಿಗಳು. ಕಿಟಕಿ ಕಡೆ ನೋಡಬೇಡಿ. ಅವು ಕಾಣ ಸಿಗೋಲ್ಲ. ಹೆಸರೇ ನಮ್ಮಿಂದ ಮರೆಯಾದ ಮೇಲೆ ಅವುಗಳೆಲ್ಲಿ ಇರಲು ಸಾಧ್ಯ ಹೇಳಿ.

ಹೌದು. ನಾನು ಹೇಳ ಬಯಸುತ್ತಿರುವುದು ನಶಿಸುತ್ತಿರುವ ಗುಬ್ಬಚ್ಚಿ ಎಂಬ ಖಗ ಸಂಕುಲದ ಬಗ್ಗೆ. ತುಂಬಾ ಹಳೆಯ ಮಾತಲ್ಲ. ಕೆಲವೇ ಕೆಲವು ವರ್ಷಗಳ ಹಿಂದೆ ಹೇರಳವಾಗಿ-ಹಾಯಾಗಿ ಹಾರಾಡಿಕೊಂಡಿದ್ದ ಈ ಗುಬ್ಬಚ್ಚಿಗಳು ಹಠಾತ್ತನೆ ಮರೆಯಾಗುವುದಕ್ಕೆ ಕಾರಣಗಳು ಹಲವು. ನಾನಿಲ್ಲಿ ಹೇಳ ಬಯಸುವೆ ಕೆಲವು. ಅಂತರ್ಜಾಲದಿಂದ ನಿಮಗಾಗಿ ಕದ್ದು ತಂದವು.
– ಸೀಸ ರಹಿತ ಪೆಟ್ರೋಲ್: ಇದನ್ನು ಉರಿಸಿದಾಗ ಬರುವ ಮೆತೈಲ್ ನೈಟ್ರೈಟ್ ಎಂಬ ಹಾನಿಕಾರಕ ಪದಾರ್ಥ ಕೀಟಗಳನ್ನು ಕೊಲ್ಲುತ್ತದೆ. ಕೀಟಗಳೇ ಗುಬ್ಬಚ್ಚಿಗಳಿಗೆ ಮುಖ್ಯ ಆಹಾರ.
– ಕೀಟನಾಶಕ. ಮನೆಯಂಗಳದ ತೋಟಗಳಲ್ಲಿ ಹರಿದಾಡುವ ಕೀಟಗಳು ಮರಿ ಗುಬ್ಬಚ್ಚಿಗಳಿಗೆ ಮಹತ್ವದ ಆಹಾರವಾಗಿದ್ದು ಕೀಟನಾಶಕಗಳಿಂದ ಈ ಜಂತುಗಳು ವಿಷಜಂತುಗಳಾಗಿ ಅಸುನೀಗುವ ಕಾರಣ ಗುಬ್ಬಚ್ಚಿಯ ಕುಡಿಗಳು ಅವುಗಳನ್ನು ಸೇವಿಸುವುದಿಲ್ಲ ಹಾಗಾಗಿ ಇವುಗಳ ಹಸಿವು ನೀಗುವುದಿಲ್ಲ.
– ಕಡಿಮೆಯಾಗುತ್ತಿರುವ ಹುಲ್ಲುಗಾವಲುಗಳು, ಹಕ್ಕಿಗಳಿಗೆ ಪೂರಕವಾಗಿರದ ಆಧುನಿಕ ಕಟ್ಟಡಗಳು, ಹೀಗೆ ಕಾರಣಗಳ ಮಾಲೆ ಸಾಲು ಸಾಲು.
– ಮೊಬೈಲ್ ಫೋನ್ ತರಂಗಗಳು: ಹೌದು. ಹಿಂದೆ ಹೇಳಿದ ಎಲ್ಲಾ ಕಾರಣಗಳಿಗಿಂತ ಇದು ಬಹು ದೊಡ್ಡ ಕಾರಣ. ಗುಡ್ಡದ ಮೇಲೇರಿ ಇಣುಕಿ ನೋಡಿದಾಗ ಬಣ್ಣ ಬಣ್ಣದ ಹೂ-ಹಣ್ಣುಗಳಿಂದ ಸಿಂಗಾರಗೊಂಡಿರುತ್ತಿದ್ದ ಹೆಮ್ಮರಗಳ ಬದಲು ಅದೇ ಜಾಗದಲ್ಲಿ ಬಣ್ಣ ಬಣ್ಣದ ತರ-ತರಹದ ಮೊಬೈಲ್ ಫೋನಿನ ನೆಟ್‍ವರ್ಕ್ ಟವರ್‍ಗಳು ತಲೆ ಎತ್ತಿ ಕುಣಿಯುತ್ತಿವೆ. ಇವುಗಳಿಂದ ಹೊರಬರುವ ವಿಕಿರಣಗಳು ಎಡೆಬಿಡದೆ ಗುಬ್ಬಚ್ಚಿಗಳ ಶರೀರದೊಳಗೆ ನುಗ್ಗಿ ಅವುಗಳ ಹಾರಡುವ-ಆಹಾರ ಹುಡುಕುವ ಕೌಶಲ್ಯವನ್ನು ಕ್ಷೀಣಿಸುತ್ತದೆ, ಹಾಗೆಯೇ ಅವುಗಳ ಸಂತತಿಯನ್ನೂ ಕೂಡ.

ಮೇಲೆ ಹೇಳಿದ ಕಾರಣಗಳೊಂದಿಗೆ ನಾವು ಎಷ್ಟು ಬೆರೆತು ಹೋಗಿದ್ದೆವೆಂದರೆ ಅವುಗಳಿಂದ ಮುಕ್ತಿ ನಮಗೂ ಇಲ್ಲ ಅವುಗಳಿಗೂ ಇಲ್ಲ. ಆದರೆ ಈ ಕಾರಣಗಳೊಂದಿಗೆ ವಿನಾಕಾರಣ ನಂಟು ಬೆಳೆಸಿಕೊಳ್ಳುವ ನಮ್ಮ ಚಾಳಿಯನ್ನು ಕಡಿಮೆ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು ಎಂದೆನಿಸುತ್ತದೆ. ಅಲ್ವೇ? ಗುಬ್ಬಚ್ಚಿಗಳ ಅಳಿವಿನ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳ ಕೆಲವು ತಾತ್ಪರ್ಯಗಳು ಹೀಗಿವೆ.

– ಮನೆಯೊಳಗೆ / ಹೊರಗೆ ಕುಡಿಕೆಗಳಲ್ಲಿ ಹೊರದೇಶದ ಗಿಡಗಳನ್ನು ಬೆಳಸುವ ಹೊಸ ಪದ್ಧತಿಗಳು ಶುರುವಾಗಿವೆ. ಅದು ತಪ್ಪಲ್ಲ. ಆದರೆ ಪರಿಸರಕ್ಕೆ ಹೆಚ್ಚು ಉಪಯುಕ್ತವಲ್ಲದ ಅವುಗಳನ್ನು ಕೀಟಮುಕ್ತವನ್ನಾಗಿಸಲು ಕೀಟನಾಶಕಗಳನ್ನು ಬಳಸುವುದು ಹಾನಿಕಾರಕ. ಹಾಗೆಯೇ ನಮ್ಮ ಪರಿಸರಕ್ಕೆ ಸುಲಲಿತವಾಗಿ ಒಗ್ಗುವ ಕೆಲವು ಗಿಡಗಳನ್ನೂ ಬೆಳೆಸಿದರೆ ಕೀಟ ಸಂತತಿ ಬೆಳೆದು ಗುಬ್ಬಚ್ಚಿಗಳನ್ನು ಮರಳಿ ಕರೆಯುವ ಸಾಧ್ಯತೆ ಹೆಚ್ಚು. ಈ ಮಾತಿನ ಅರ್ಥ ಕೀಟಗಳನ್ನು ಬೆಳೆಸಿ ಎಂದಲ್ಲ.
– ನವೀಕರಣದ ಹೆಗಲೇರಿ ಮುಗಿಲು ಮುಟ್ಟುವ ತವಕದಲ್ಲಿ ಎತ್ತರೆತ್ತರದ ಕಟ್ಟಡಗಳನ್ನು ಕಟ್ಟುತ್ತಿರುವುದೂ ಒಂದು ಕಾರಣ. ಅಲ್ಲಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಿಕೊಳ್ಳುವಷ್ಟು ಸ್ವಲ್ಪ ಜಾಗಗಳನ್ನು ಮಾಡಿದರೆ ಒಳಿತು. ಅಪಾರ್ಟ್‍ಮೆಂಟ್ ಹೊರತು ಪಡಿಸಿ ಸ್ವಂತ ಮನೆಕಟ್ಟಿಸಿಕೊಳ್ಳುವವರು ಈ ಅನುಕೂಲವನ್ನು ಕಲ್ಪಿಸುವುದು ಇನ್ನೂ ಸುಲಭ. ಆಗಲೇ ಕಟ್ಟಿಕೊಂಡಿರುವವರು ತಾರ್ಸಿಯ ಮೇಲೆ ಕೆಲವು ಕಾಳು-ಕಡ್ಡಿಗಳನ್ನು ಹಕ್ಕಿಗಳಿಗೆಂದೇ ಹಾಕುವ ದೊಡ್ಡ ಮನಸ್ಸು ಮಾಡಿದರೆ ಉಳಿದೆಲ್ಲ ಹಕ್ಕಿಗಳ ಮಧ್ಯೆ ಗುಬ್ಬಚ್ಚಿಗಳನ್ನೂ ನೋಡುವ ಭಾಗ್ಯ ಕಲ್ವಿಸಿಕೊಳ್ಳಬಹುದು.
– ಕೆಲವು ಪರಿಸರವಾದಿಗಳು ಹೇಳುವ ಪ್ರಕಾರ ಉದ್ಯಾನವನಗಳಲ್ಲಿ, ಸಧ್ಯಕ್ಕೆ ಉಳಿದಿರುವ ಮರಗಳಲ್ಲಿ ಸಣ್ಣ ಸಣ್ಣ ಗೂಡುಗಳನ್ನು ಮಾಡಿಟ್ಟರೆ ಇವುಗಳು ಬಂದಲ್ಲಿ ವಾಸಮಾಡುವ ಸಾಧ್ಯತೆ ಇದೆ.

ಹಿಂದೆ ವರುಷದಲ್ಲಿ ಹಲವು ಬಾರಿ ಮನೆಗಳನ್ನು ಶುದ್ಧಗೊಳಿಸುವಾಗ ಕಟ್ಟಿದ ಬಲೆಗಳನ್ನು, ಜಿರಲೆ ಗೂಡುಗಳನ್ನು ಕಿತ್ತೆಸೆಯುತಿದ್ದ ನಾವು ಎಂದೂ ಫೋಟಗಳ ಹಿಂದೆ ಅಡಗಿರುತ್ತಿದ್ದ ಗುಬ್ಬಚ್ಚಿ ಗೂಡುಗಳನ್ನು ಮುಟ್ಟುತ್ತಿರಲಿಲ್ಲ. ನಾವು ಅವುಗಳೊಡನೆ ಅಷ್ಟು ಬೆರೆತು ಹೋಗಿದ್ದೆವು. ಅವುಗಳೂ ನಮ್ಮೊಡನೆ ಬೆರೆತು ನಮ್ಮ ಮನೆಯ ಸದಸ್ಯರಂತಾಗಿರುತ್ತಿದ್ದವು. ನಮ್ಮ ಎಷ್ಟೋ ಹಸಿರು ಭಾವನೆಗಳಿಗೆ ಈಗಲೂ ಉಸಿರು ತುಂಬುವ ಕೆಲಸ ಮಾಡುತ್ತಿವೆ ಈ ಗುಬ್ಬಚ್ಚಿಗಳು. ಬಾಲ್ಯದಲ್ಲಿ ಅವುಗಳನು ಕಥೆಗಳಲ್ಲಿ, ಆಟಗಳಲ್ಲಿ ಕಾಣುತ್ತಿದ್ದ ನಾವು ಅವುಗಳ ಉಳಿವಿಗಾಗಿ ಪ್ರಯತ್ನ ಪಡಲೇ ಬೇಕು. ಪಡದಿರುವವರು, ಮುಂಬರುವ ದಿನಗಳಲ್ಲಿ ತಮ್ಮ ಮಕ್ಕಳೋ ಮೊಮ್ಮಕ್ಕಳಿಗೋ ಅವುಗಳನ್ನು ಬರೀ ಪುಸ್ತಕ/ಟಿ.ವಿ.ಗಳಲ್ಲಿ ತೋರಿಸುವಾಗ, ಅವುಗಳೊಡನೆ ತಾವು ಬೆಸೆದುಕೊಂಡ ಬಾಲ್ಯದ ನಂಟು, ಕಾಳಜಿಯನ್ನು ಬರೀ ಬಾಯಿ ಮಾತಿನಲ್ಲಿ ಭೀಗಿದರೆ ಅರ್ಥವಿಲ್ಲ.

ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿಯ ದಿನವಾಗಿ ಆಚರಿಸಬೇಕೆಂದು ಆಲೋಚಿಸಿ, ಕಳೆದ ಎರಡು ವರ್ಷದಿಂದ ಅದನ್ನು ನಡೆಸಿಕೊಂಡು ಬಂದ ಹಲವರ ಪ್ರಯತ್ನ ಶ್ಲಾಘನೀಯ. ಪ್ರತೀ ವರುಷದ ಮೊದಲ ದಿನ ನಿರ್ಧಾರಗಳನ್ನು ಪಟ್ಟಿ ಮಾಡುವ ಹಲವರು ಈ ವಿಷಯವನ್ನೂ ಸೇರಿಸಿಕೊಂಡು ಪಾಲಿಸಿದರೆ ಪ್ರಯತ್ನ ಸಾಕಾರವಾಗಬಹುದೇನೋ. ಇದನ್ನೆಲ್ಲಾ ಬರೆದು ಮುಗಿಸುವ ಹೊತ್ತಿಗೆ ಕಾಕತಾಳೀಯವೆಂಬಂತೆ ರೇಡಿಯೋದಲ್ಲೊಂದು ಹಾಡು ಹಾರಿ ಬಂತು. ಮುಂಬರುವ ಪರಿಸ್ಥಿತಿಯನ್ನು ಮನಗಂಡು ಬರೆದಂತಿತ್ತು ಡಿ. ಸಿ. ಕುಲ್ಕರ್ಣಿಯವರ “ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು, ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು….”. ಬಿ. ಆರ್. ಛಾಯಾರವರ ಧ್ವನಿಯಲ್ಲಿ, ಸಿ. ಅಶ್ವತ್ಥ್ ರವರ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ ಒಮ್ಮೆ ನನ್ನನ್ನು ಭಾವುಕನನ್ನಾಗಿಸಿತು. ಈ ಅನುಭವ ನಿಮಗೂ ಬೇಕಾದಲ್ಲಿ ಈ ಹಾಡನ್ನೊಮ್ಮೆ ಆಲಿಸಿ.

ಕೊನೆಯದಾಗಿ ಒಂದು ಮಾತು. ಈ ಗುಬ್ಬಚ್ಚಿಯ ಸಂತತಿಯನ್ನು ಉಳಿಸುವುದರಿಂದ ಮನುಕುಲಕ್ಕೆ ಲಾಭವೇನೂ ಇಲ್ಲ. ಇದ್ದರೂ ಕಡಿಮೆ. ಹಾಗಾಗಿ ಲಾಭವಿಲ್ಲದ ಮೇಲೆ ಶ್ರಮ ಪಟ್ಟು ಏನು ಉಪಯೋಗ ಎಂದು ಯೋಚಿಸುವ ಮನುಷ್ಯ ಸಹಜ ಗುಣವನ್ನು ಪಾಲಿಸುವವರು ‘ಆ’ವಿವೇಕಿಗಳ ಗುಂಪಿಗೆ ಸೇರಬಹುದು. ಮಾಡುವ ಎಲ್ಲಾ ಕೆಲಸದಲ್ಲೂ ಲಾಭ ಹುಡುಕ ಬೇಕೋ ಬೇಡವೋ ಚಾಯ್ಸ್ ನಿಮ್ಮದು.

– ದೀಪಕ್ ಕೋರಡಿ

Monday, ‎March ‎12, ‎2012

Exit mobile version