ಸಂಗೀತ ಸಮಯ

ಮಾಧುರ್ಯ ಪ್ರಧಾನ ಗೀತೆಗಳ ಒಡತಿ-ಸಂಗೀತ ಕ್ಷೇತ್ರದ ಸಾಧಕಿ ಶ್ರೀಮತಿ ಮಂಗಳಾ ರವಿ

ಸಂಧ್ಯಾ ಅಜಯ್ ಕುಮಾರ್

ಅಂದ ಹಾಗೆ ಇವರ ಪರಿಚಯ ಮಾಡಿಕೊಡುವ ಮೂಲಕ ಮತ್ತೊಮ್ಮೆ ಈ ಸಾಧಕಿಗೆ ಅಭಿನಂದನೆಗಳನ್ನು ಸಲ್ಲಿಸುವ ಸುಸಮಯ.”ಸಂಗೀತ ಕ್ಷೇತ್ರ”ಇವರ ಸಾಧನೆಯ ಹಾದಿಗೆ ಮೈಲಿಗಲ್ಲನ್ನು ತಂದುಕೊಟ್ಟಿದೆ. ಆ ದನಿಯನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕಿವಿಕೊಡಬೇಕೆನಿಸುವ, ಮತ್ತೊಮ್ಮೆ ಹಾಡಿಸಿ ಆಸ್ವಾದಿಸಬೇಕೆನ್ನುವ ಆಕೆಯ ಶ್ರೀಮಂತ ಕಂಠಸಿರಿಗೆ ಅನೇಕ ಅಭಿಮಾನಿಗಳ ಅಭಿಮಾನದ ಮಾತುಗಳಿದೆ. ನಾಡಿನ ಕವಿಪುಂಗವರ ಹಾರೈಕೆಗಳಿದೆ.ಹಿರಿಯ ಗಾಯಕರ ಪ್ರೋತ್ಸಾಹ ಜೊತೆಗೆ ಶಹಭಾಸ್‌ಗಿರಿಯೂ ಇದೆ..ಇಷ್ಟೆಲ್ಲ ಮಾತುಗಳ ಸರದಾರಿಣಿ ಶ್ರೀಮತಿ ಮಂಗಳಾರವಿ.

ಗಾಯಕಿಯ ನಾನಾ ವೇದಿಕೆಗಳು….

ಹೆಸರು ಕೇಳಿದಾಕ್ಷಣವೇ ಅನೇಕ ಮಾಧುರ್‍ಯ ಪ್ರಧಾನ ಗೀತೆಗಳು ಕಣ್ಣಮುಂದೆ ಬರುತ್ತದೆ. ಹದಿನೇಳು ವರುಷಗಳಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಂಗಳಾರವಿ, ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದೆ. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸರಿಸುಮಾರು ಸಾವಿರಕ್ಕೂ ಮಿಗಿಲಾದ ಹೆಚ್ಚು ಧ್ವನಿಸಾಂದ್ರಿಕೆಗಳಲ್ಲಿ ಇವರ ಧ್ವನಿ ಕೇಳುಗರಿಗೆ ಚಿರಪರಿಚಿತ. ಎಂಭತ್ತು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಂಗೊಳಿಸಿದರೆ, ಆರ್‍ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಮಿಂಚಿದ್ದಾರೆ. ಹಾಡಿ ರಂಜಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೇ ಮುಂಬೈ,ಮಸ್ಕತ್,ಆಸ್ಟ್ರೇಲಿಯಾ ಹಾಗೂ ಯು.ಎಸ್‌ಗಳಲ್ಲಿನ ವೇದಿಕೆಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಸಂಗೀತ ಕ್ಷೇತ್ರದ ಮಹಾನ್ ಗಾಯಕರೆನಿಸಿರುವ ಪ್ರಸಿದ್ಧರಾದ ಎಸ್.ಪಿ.ಬಿ,ಕೆ.ಜೆ.ಏಸುದಾಸ್,ಡಾ.ಸಿ.ಅಶ್ವಥ್, ಹಾಗೂ ರಾಜು ಅನಂತಸ್ವಾಮಿಯವರೊಟ್ಟಿಗೂ ಕಾರ್‍ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಶ್ರೀಮತಿ ಮಂಗಳಾ ರವಿಯವರದ್ದು. ತಮ್ಮದೇ ಆದ ಎರಡು ಭಾವಗೀತೆಗಳ ಧ್ವನಿಸುರಳಿಗಳನ್ನು ಹೊರತಂದಿದ್ದು, ಕನ್ನಡ ಸಿನಿಮಾ ಕ್ಷೇತ್ರದ ಹೆಸರಾಂತ ಸಂಗೀತ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ ಅನುಭವಗಳನ್ನು ಹೊದಿದ್ದಾರೆ.

ತಮ್ಮ ಕನಸಿನ ಸಂಸ್ಥೆ…ಪ್ರಶಸ್ತಿ ಫಲಕಗಳ ಒಂದಿಷ್ಟು ಮಾಹಿತಿ…
“ಆಲಾಪನಾ”ಎಂಬ ಕಲಾಸಂಸ್ಥೆಯ ಉಪ-ಸಂಸ್ಥಾಪಕಿಯಾಗಿದ್ದು ಅನೇಕ ಸಂಗೀತ ತರಗತಿ ಕಾರ್‍ಯಕ್ರಮ, ಕಾರ್‍ಯಾಗಾರ, ತರಬೇತಿ ಶಿಬಿರ ಹೀಗೆ ಒಂದಿಲ್ಲೊಂದು ಚಟುವಟಿಕೆಗಳನ್ನು ನಡೆಸಿ ಮಕ್ಕಳನ್ನು ಹುರಿದುಂಬಿಸಿ ಸಂಗೀತ ಕ್ಷೇತ್ರದಲ್ಲಿ ಅವರ ವಿದ್ಯಾರ್ಥಿಗಳನ್ನು ಪರಿಚಯಿಸುತ್ತಿರುವ ಮಂಗಳಾರವಿಯವರಿಗೆ, ಸುಗಮ ಸಂಗೀತ ಕ್ಷೇತ್ರದ ಕಾರ್‍ಯಕ್ಷಮತೆಗಾಗಿ “ಉಪಾಸನಾ ಪ್ರಶಸ್ತಿ”, ರಾಧಾಕಲ್ಯಾಣ ಧಾರಾವಾಹಿಯ ಶೀರ್ಷಿಕೆ ಗೀತೆ, ಅತ್ಯಂತ ಜನಪ್ರಿಯತೆ ಪಡೆದುದಕ್ಕಾಗಿ “ಕೆಂಪೇಗೌಡ ಪ್ರಶಸ್ತಿ” “ಕೀಮಾ ಪ್ರಶಸ್ತಿ”ಗಳು ಲಭಿಸಿದೆ.

ಲತಾಜೀ ಹೊಗಳಿಕೆಗೆ ನಾನು ಸದಾ ಋಣಿ….
ಬಹಳಾ ಹೆಮ್ಮೆ ಪಡುವ ಸಂಗತಿ ಅಂದರೆ ವೈಷ್ಣವ ಜನತೋ” ಕನ್ನಡ ಅನುವಾದವನ್ನು “ಗಾಂಧೀ ಸ್ಮೈಲ್”ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಆ ಗೀತೆಯನ್ನು ಲತಾ ಮಂಗೇಶ್ಕರ್ ಅವರು ಹಾಡಬೇಕಿತ್ತು. ಈ ಹಾಡಿನ ಟ್ರಾಕ್ ಕೇಳಿದ ಲತಾಜಿ, “ಟ್ರಾಕ್ ಹಾಡಿರುವ ಗಾಯಕಿಯದ್ದು ಎಂತಹಾ ಸುರೀಲೀ ಆವಾಜ್ !ಇದನ್ನು ಹಾಗೇ ಇಟ್ಟುಕೊಳ್ಳಿ ಅಂದಿದ್ದರಂತೆ. ನಾನು ಪುನ: ಹಾಡುವುದಿಲ್ಲ ಅಂದರಂತೆ. ಸುರೇಶ್ ವಾಡ್ಕರ್ ಅವರು ಇನ್ನೊಂದು ವರ್ಷನ್ ಹಾಡಿದ್ದಾರೆ…ಅವರೂ ಕೂಡಾ ನನ್ನ ದನಿಯನ್ನು, ಹಾಡಿರುವ ಶೈಲಿಯನ್ನು ಮೆಚ್ಚಿಕೊಂಡರು. ಇದಕ್ಕಿಂತಾ ಜೀವನದಲ್ಲಿ ದೊಡ್ಡ ಪ್ರಶಸ್ತಿ ಬೇಕಿಲ್ಲ ಎನ್ನುತ್ತಾರೆ ಮಂಗಳಾ ರವಿ.

ಸಂಗೀತ ನಿರ್ದೇಶಕರ ನೆಚ್ಚಿನ ದನಿ ಮಂಗಳಾರವಿಯವರದ್ದು…
ಈಕೆಯ ಗಾಯನದಲ್ಲಿ ಅದೆಷ್ಟು ಸ್ಪಷ್ಟತೆ ಎಂದರೆ ಪ್ರತೀ ಸ್ವರ, ತಾಳ, ಶೃತಿಯನ್ನು ಕಂಡುಹಿಡಿಯಬಹುದು ಎನ್ನುವುದು ಅನೇಕ ಸಂಗೀತ ನಿರ್ದೇಶಕರ ನಾನ್ನುಡಿ., ಶಾಸ್ತ್ರೀಯ ಸಂಗೀತವನ್ನು ಗುರುಗಳು ಬಿ.ಎಸ್ ಹೇಮಾವತಿ ಮತ್ತು ವಿ.ಎ.ಸುಬ್ಬರಾವ್ ಹಾಗೂ ಆನೂರು ಅನಂತಕೃಷ್ಣಶರ್ಮಾರವರ ಬಳಿ,ಸುಗಮ ಸಂಗೀತವನ್ನು ರಾಜು ಅನಂತಸ್ವಾಮಿಯವರ ಹತ್ತಿರ ಕಲಿತಿರುವ ಮಂಗಳಾ, ಮೂರನೇ ವಯಸ್ಸಿನಲ್ಲೇ ಹಾಡಿ ಬಹುಮಾನ ಗಳಿಸಿದ ಪ್ರತಿಭೆ. ಮಂಗಳಾರವಿ ಮೂಲತ: ಬೆಂಗಳೂರಿನವರಾಗಿದ್ದು, ಏಳನೇ ವಯಸ್ಸಿನಲ್ಲಿ ಹಂಸಲೇಖಾ ಅವರ ನಿರ್ದೇಶನದಲ್ಲಿ “ಬಾಳೊಂದು ಭಾವಗೀತೆ” ಸಿನಿಮಾದಲ್ಲಿ ಎಸ್.ಪಿ.ಬಿ.ಯವರೊಟ್ಟಿಗೆ ಹಾಡಿದ್ದರು. ಮನೆಯಲ್ಲಿ ಸಂಗೀತದ ವಾತಾವರಣ ಇದ್ದಿದ್ದರಿಂದ ರಕ್ತಗತವಾಗಿ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು ಎನ್ನುತ್ತಾರೆ.

ಉದಯೋನ್ಮುಖ ಗಾಯಕರಿಗೆ ಒಂದಿಷ್ಟು ಕಿವಿಮಾತು….
ಮದುವೆಯಾದ ಬಳಿಕವೂ ಸಂಗೀತ ಕ್ಷೇತ್ರಕ್ಕೆ ನಾನು ಚ್ಯುತಿ ತಂದಿಲ್ಲ. ನನ್ನ ಎಲ್ಲಾ ಕೆಲಸಗಳಿಗೆ, ಕಾರ್‍ಯಕ್ರಮಗಳಿಗೆ ಪತಿ ರವಿಯವರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರೂ ಕೂಡಾ ಸಂಗೀತಾಸಕ್ತರು. ನನ್ನದು ವೃತ್ತಿ ಅವರದ್ದು ಪ್ರವೃತ್ತಿ,ಎನ್ನುವ ಮಂಗಳಾರವಿ, ನಮ್ಮ ಸಾಲಿನಲ್ಲಿ ಕಂಡ ಗಾಯಕರನ್ನು ಈಗ ಕಾಣಲು ಸಾಧ್ಯವಿಲ್ಲ. ಈಗಿನ ಪೀಳಿಗೆಯ ಗಾಯಕರಲ್ಲಿ ಶ್ರದ್ಧೆ, ಆಸಕ್ತಿ, ಶಿಸ್ತು, ಎಲ್ಲೋ ಬೆರಳಣಿಕೆ ಅನ್ನಿಸುತ್ತಿದೆ. ಆದ್ರೆ ಅಂತಿಮವಾಗಿ ನಿಲ್ಲುವುದು ಗೆಲ್ಲುವುದು ನಿಜವಾದ ಪ್ರತಿಭೆ ಉಳ್ಳವರು. ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜಗತ್ತನ್ನೇ ಗೆಲ್ಲುತ್ತೇನೆ ಅಂದುಕೊಳ್ಳುವ ಗಾಯಕರಲ್ಲಿ ಕಲಿಕೆ ಕುಂಠಿತವಾಗುತ್ತಿದೆ. ಇದು ದೊಡ್ಡ ದುರಂತ. ಕೊನೆಯಲ್ಲಿ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ….ಆಗಬಹುದು. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ ಎನ್ನುತ್ತಾರೆ. ಹಾಗಾಗಿ ಕಲಿಕೆ ನಿರಂತರ ಎನ್ನುವಂತೆ ಸಂಗೀತಾಭ್ಯಾಸ ಮಾಡುತ್ತಲೇ ಹಾಡುತ್ತಿರುವುದು ಉತ್ತಮ ಎನ್ನುವುದು ಗಾಯಕಿ ಮಂಗಳಾರವಿಯವರ ಮಾತು.

ಸಂಧ್ಯಾ ಅಜಯ್ ಕುಮಾರ್

೨೭-೯-೨೦೧೬

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.