ಸೆನ್ಸಾರ್ ಗೆದ್ದ ‘ಲಿಪ್ ಸ್ಟಿಕ್ ಮರ್ಡರ್’ ಸದ್ಯದಲ್ಲೇ ತೆರೆಗೆ

ಟ್ರೈಲರ್ ನಲ್ಲಿ ಹೊರಬಂತು ಲಿಪ್ ಸ್ಟಿಕ್ ಮರ್ಡರ್ ರಹಸ್ಯ

ಗುರುತು ಪರಿಚಯ ಇಲ್ಲದವರು ಕರೆದಲ್ಲಿಗೆ ಅವರ ಜೊತೆ ಹೋದರೆ ಯಾವರೀತಿ ದೌರ್ಜನ್ಯ, ಆಗಬಹುದು, ತಮ್ಮ ಜೀವಕ್ಕೂ ಕುತ್ತು ಬರಬಹುದು ಎಂಬುದನ್ನು ನಿರ್ದೇಶಕ ರಾಜೇಶ್ ಮೂರ್ತಿ ಅವರು ಲಿಪ್ ಸ್ಟಿಕ್ ಮರ್ಡರ್ ಎಂಬ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಆರ್ಯನ್ ರಾಜ್ ಈ ಚಿತ್ರದ ನಾಯಕ. ಮೂಲತಃ ಉತ್ತರ ಕರ್ನಾಟಕದವರಾದ ಆರ್ಯನ್ ರಾಜ್, ಶಂಕರ್ ನಾಗ್ ಅಪ್ಪಟ ಅಭಿಮಾನಿ. ಈಗಾಗಲೇ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿರುವ ಆರ್ಯನ್ ರಾಜ್ ಮಾಡೆಲಿಂಗ್ ಜಗತ್ತಿನಿಂದ ಅಭಿನಯಕ್ಕೆ ಕಾಲಿಟ್ಟವರು. ೨೦೧೫ರಿಂದ ಮಾಡೆಲಿಂಗ್ ಮಾಡಿಕೊಂಡಿದ್ದ ಆರ್ಯನ್, ಕೆಲ ಆಡ್ ಫಿಲಂಗಳಲ್ಲೂ ಅಭಿನಯಿಸಿದ್ದಾರೆ. ಆಗಲೇ ರಾಜೇಶ್ ಮೂರ್ತಿ ಇವರ ಪ್ರತಿಭೆಯನ್ನು ಗುರ್ತಿಸಿ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದರು. ಆನಂತರ ವಿಷ್ಣು, ಶಿವ, ರಾಮನಾಗಿ ಮೈಥಲಾಜಿಕಲ್ ಸೀರಿಯಲ್ ಗಳಲ್ಲಿ ದೇವರ ಪಾತ್ರಗಳನ್ನೂ ಮಾಡಿದರು. ಇದೀಗ ಸೀರಿಯಲ್ ಕಿಲ್ಲರ್ ಹಿಂದೆಬಿದ್ದು, ಆಕೆ ಯಾರೆಂದು ಪತ್ತೆಹಚ್ಚುವ ಇನ್ ಸ್ಪೆಕ್ಟರ್ ಆಗಿ ತೆರೆಮೇಲೆ ಬರುತ್ತಿದ್ದಾರೆ.

ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ಲಿಪ್ ಸ್ಟಿಕ್ ಮರ್ಡರ್ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಕೂಡ ಹೊರಬಂದಿದ್ದು, ಈ ಮೂಲಕ ಕಥೆಯ ಒಂದಷ್ಟು ಅಂಶಗಳನ್ನು ಬಿಟ್ಟುಕೊಡುವ ಮೂಲಕ ಕುತೂಹಲವನ್ನು ಹುಟ್ಟುಹಾಕಿದೆ. ಅಲ್ಲದೆ ಸೆನ್ಸಾರ್ ಮಂಡಳಿಯಿಂದಲೂ ಯಾವುದೇ ಕಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಆನ್ ಲೈನ್ ಡೇಟಿಂಗ್ ಆಪ್ ಮೂಲಕ ಯುವತಿಯರು, ಯುವಕರನ್ನು ಯಾವರೀತಿ ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.

ಡೇಟಿಂಗ್ ಆಪ್ ಮೂಲಕ ಸಂಪರ್ಕವಾಗುವ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಯಾವರೀತಿ ಕೊಲೆಯಾಗುತ್ತಾರೆ, ಹೆಣ್ಣೊಬ್ಬಳು ಯಾಕೆ ಇಂಥ ಯುವಕರನ್ನು ಟಾರ್ಗೆಟ್ ಮಾಡುತ್ತಾಳೆ ಎನ್ನುವುದಕ್ಕೆ ಕಾರಣವನ್ನೂ ಚಿತ್ರದಲ್ಲಿ ಹೇಳಿದ್ದಾರೆ. ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಇನ್ವೆಸ್ಟಿಗೇಶನ್ ಆಫೀಸರ್ ಪತ್ತೆಹಚ್ಚಿ ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ?, ಇಂಥ ಹಲವಾರು ಸಂದೇಹಗಳಿಗೆ ಉತ್ತರ ಇನ್ಸ್ ಪೆಕ್ಟರ್ ತನಿಖೆಯಿಂದ ಸಿಗುತ್ತದೆ.

ಹೈದರಾಬಾದ್ ಮೂಲದ ಅಲೈಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿತೆ ರಾಜೇಶ್ ಮಿಶ್ರಾ ಈ ಚಿತ್ರದಲ್ಲಿದ್ದಾರೆ. ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಯೋಜನೆ ನಿರ್ಮಾಪಕರಿಗಿದೆ.

Exit mobile version